ನಾವು ದುಡಿಯುವ ಕ್ಷೇತ್ರಗಳನ್ನು ಎರಡು ವಿಧವಾಗಿ ವಿಂಗಡಿಸುತ್ತೇವೆ. ಒಂದು ಅಪಾಯ ಕಾರಿ ಅಲ್ಲದ ವಲಯ ಎರಡನೆಯದು ಅಪಾಯಕಾರಿ ವಲಯ ಎಂಬುದಾಗಿ. ಅಪಾಯಕಾರಿ ವಲಯವೆಂದರೆ ಕೆಮಿಕಲ್ ಪ್ಯಾಕ್ಟರಿಗಳು, ಸಿಡಿಮದ್ದು ತಯಾರಿಕಾ ಘಟಕಗಳು, ಮಂಡಕ್ಕಿ ಬಟ್ಟಿಗಳು ಮುಂತಾದವುಗಳು ಅಪಾಯಕಾರಿಯಲ್ಲದ ಕ್ಷೇತ್ರವೆಂದರೆ ಹೊಲಗದ್ದೆಗಳು. ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವಂತಹ ಅಪಾಯಕಾರಿ ವಲಯಗಳಲ್ಲಿ ಕೆಲಸ ಮಾಡುವ ಮಕ್ಕಳ ದುರ್ಮರಣ ಹಾಗೂ ವಾಸಿಯಾಗದಂತಹ ಕಾಯಿಲೆಗಳಿಗೆ ತುತ್ತಾಗುವುದು ನಮಗೆಲ್ಲ ತಿಳಿದ ಸಂಗತಿಯೆ ಆಗಿದೆ. ಇದಕ್ಕೆಲ್ಲಾ ಮೂಲ ಕಾರಣ ಬಡತನ, ಹಾಗೂ ಅವಿಭಕ್ತ ಕುಟುಂಬಗಳ ಪರಿಣಾಮ, ತಂದೆ ತಾಯಿಗಳು ಅನಕ್ಷರಸ್ಥರಾಗಿದ್ದು ಅವರ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿಗೆ ಗಮನ ಹರಿಸುವುದಿಲ್ಲ. ದೇಶದಲ್ಲಿ ಅನಕ್ಷರತೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಮಕ್ಕಳು ಬಾಲಕಾರ್ಮಿಕತೆಯಿಂದ ಹೊರಬರಲು ಸಾಧ್ಯವಿಲ್ಲ. “ಸಾಕ್ಷರತೆ ಮಾನವೀಕರಣದ ಸಾಧನ. ಅಕ್ಷರ ಜ್ಞಾನದ ಮೂಲಕ ಮಾನವೀಕರಣಗೊಳಿಸಬೇಕು. ಪ್ರಜ್ಞೆಯ ಹೊಸ ಪ್ರಪಂಚಕ್ಕೆ ಪ್ರವೇಶಿಸಬೇಕು” ಎಂದು ಬ್ರೆಜಿಲ್‌ನ ಸಾಹಿತಿ ಫಾಲೊ ಫೆರೇರೆ ಹೇಳಿದ್ದಾರೆ.

ಅತೀ ಹೆಚ್ಚು ಬಾಲಕರು ಸ್ವತಃ ತಮ್ಮ ತಂದೆ ತಾಯಿಗಳಿಂದ ಶೋಷಣೆಗೆ ಒಳಗಾಗಿವೆ. ತಂದೆ ತನ್ನ ದುರಾಭ್ಯಾಸ ಚಟಗಳನ್ನು ಪೂರೈಸಿಕೊಳ್ಳಲು ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸುವ ಪ್ರವೃತ್ತಿ ಪ್ರತಿಯೊಂದು ಊರುಗಳಲ್ಲಿ ನಡೆದೇ ಇದೆ. ಅಸಹಾಯಕ ಅಂಗವಿಕಲ ತಂದೆತಾಯಿಗಳು ಅನಿವಾರ್ಯವಾಗಿ ಮಕ್ಕಳನ್ನು ದುಡಿಯಲು ಕಳುಹಿಸುತ್ತಾರೆ.

ಸಮಾಜದಲ್ಲಿ ಬಾಲಕಾರ್ಮಿಕರ ಸ್ಥಿತಿಯು ಒಂದು ಮುಖವಾದರೆ, ಇನ್ನೊಂದು ಮುಖವಾಗಿ ಬಾಲ್ಯವಿವಾಹ, ಮಕ್ಕಳ ಮೇಲೆ ಅತ್ಯಾಚಾರ, ದೇವದಾಸಿ ಪದ್ಧತಿ ಇವು ಸಮಾಜವನ್ನು ಕಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ದೇವದಾಸಿ ಪದ್ಧತಿಯು ಅಲ್ಪಪ್ರಮಾಣದಲ್ಲಿ ನಿಗೂಢ ವಾಗಿ ಈಗಲೂ ಮುಂದುವರೆಯುತ್ತಿದೆ.

ಬಾಲಕಾರ್ಮಿಕರು ಸೃಷ್ಟಿಯಾಗಲು ಮೂರು ಕಾರಣಗಳನ್ನು ನಾವು ನೋಡಬಹುದಾಗಿದೆ.

೧. ಪೋಷಕರು ೨. ಸರ್ಕಾರ ೩. ಸಂಘ ಸಂಸ್ಥೆಗಳು.

ಮೊದಲನೆಯ ಕಾರಣವನ್ನು ನಾವು ಪರಿಶೀಲಿಸಿದರೆ ತಂದೆ ತಾಯಿಗಳು ತಮ್ಮ ಬಡತನಕ್ಕೆ ಮತ್ತು ಜೀವನದ ಹೊಣೆಯನ್ನು ಸರಿದೂಗಿಸಲು ಮಕ್ಕಳನ್ನು ಕೆಲಸಕ್ಕೆ, ಜೀತಕ್ಕೆ ಇಡುತ್ತಾರೆ. ಅಲ್ಪ ಕೂಲಿಯು ಸಂಸಾರವನ್ನು ನೀಗಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಣಕ್ಕಿಂತ ಹಸಿವು ಅಲ್ಲಿ ಪ್ರಧಾನವಾಗುತ್ತದೆ.

ಎರಡನೆಯದಾಗಿ ಸಂಘ ಸಂಸ್ಥೆಗಳು ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬ ಗಾದೆಯಂತೆ ನಡೆದುಕೊಳ್ಳುತ್ತವೆ. ಮಕ್ಕಳ ಅಭಿವೃದ್ದಿಗಾಗಿ ವಿದೇಶದಿಂದ ಸಂಘಸಂಸ್ಥೆಗಳಿಗೆ ಹಣದ ಹೊಳೆಯೇ ಹರಿಯುತ್ತದೆ. ಆದರೆ ಎನ್.ಜಿ.ಓ.ಗಳು ಹಣದ ವ್ಯಾಮೋಹಕ್ಕೆ ಬಿದ್ದು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಕ್ಕಳ ಶ್ರೇಯೋಭಿವೃದ್ದಿಗಾಗಿ ಟಿ.ಡಿ.ಎಚ್. ಡ್ರೇಡೇಸ್ ಹೋಂ ತುಂಬಾ ಸಹಾಯ ಮಾಡುತ್ತವೆ. ಆದರೆ ಇದು ಸಮರ್ಪಕವಾಗಿ ಬಳಕೆ ಯಾಗುತ್ತಿಲ್ಲ.

ಗಣಿಗಾರಿಕೆ ಮತ್ತು ಬಾಲಕಾರ್ಮಿಕರು

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿಯೇ ನಾಯಕ ಸಮುದಾಯವು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ನಾಯಕ ಸಮುದಾಯದಿಂದಲೇ ಪ್ರತಿಯೊಂದು ಕ್ಷೇತ್ರವು ಕಾರ್ಯೋನ್ಮುಖವಾಗಿದೆ. ಕೈಗಾರಿಕಾ ಘಟಕ ದಲ್ಲಾಗಲಿ, ಕೃಷಿ ಕ್ಷೇತ್ರದಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ಬಹುಪಾಲು ನಾಯಕ ಸಮುದಾಯದವರೇ ಇದ್ದಾರೆ. ಹಾಗೆಯೇ ಸಮಾಜಸೇವೆಯಲ್ಲಿ ಜಾಗೃತ ನಾಯಕ ಬಳಗ ದವರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಕುಂದುಕೊರತೆಗಳಿಗೆ ಅನ್ಯಾಯಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ನಿಷ್ಠುರವಾಗಿ ಪ್ರತಿಭಟಿಸುತ್ತಾರೆ.

ನಾಯಕ ಸಮುದಾಯವು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಸಹಭಾಗಿಗಳಾಗಿದ್ದಾರೆ. ಕೃಷಿಯೇ ಅವರ ಮೂಲ ಆದಾಯವಾಗಿದೆ. ಇಂತಹ ಸಮುದಾಯವು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅಷ್ಟೇ ಅಲ್ಲದೇ ಇಂದಿನ ಬಹುಪಾಲು ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಇಂದಿನ ಆಧುನಿಕ ಯುಗದಲ್ಲಿಯೂ ಸಹ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾ ರೆಂದರೆ, ಅದು ಮಾನವ ಕುಲಕ್ಕೆ ಅವಮಾನಕರ ಸಂಗತಿಯಾಗಿದೆ. ಸರ್ಕಾರವು ಅಕ್ಷರ ಅಭಿಯಾನದ ಮುಖಾಂತರ ಪ್ರತಿಯೊಂದು ಮಕ್ಕಳು ಕನಿಷ್ಟ ವಿದ್ಯಾರ್ಹತೆಯನ್ನು ಹೊಂದ ಬೇಕು ಎಂದು ಕಾನೂನನ್ನು ಜಾರಿ ಮಾಡಿದ್ದರು ಅದು ಯಶಸ್ವಿಯಾಗಿಲ್ಲ. ಇದಕ್ಕೆ ಮೂಲ ಕಾರಣ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನಲ್ಲಿ ನಡೆಯುವ ಗಣಿಗಾರಿಕೆ. ಇದು ಬಹಳಷ್ಟು ಮಕ್ಕಳನ್ನು ಶಾರೀರಿಕವಾಗಿ ಮತ್ತು ಶೈಕ್ಷಣಿಕವಾಗಿ ಭೂಗತ ಮಾಡಿದೆ. ಹೊಸಪೇಟೆ ತಾಲ್ಲೂಕು ಮತ್ತು ಸಂಡೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ ತಾಲ್ಲೂಕುಗಳಿಂದ ಶೇಕಡ ೩೦ಭಾಗ ನಾಯಕ ಸಮುದಾಯದವರು ವಲಸೆ ಬಂದು ಗಣಿಗಾರಿಕೆಯಲ್ಲಿ ಕೆಲಸಮಾಡು ತ್ತಿದ್ದಾರೆ. ಇವರ ಜೊತೆಯಲ್ಲಿ ಮಕ್ಕಳನ್ನೂ ಸಹ ಕರೆತಂದಿದ್ದಾರೆ. ಈ ಎಲ್ಲಾ ಮಕ್ಕಳು ಶಾಲೆಯನ್ನು ಬಿಟ್ಟು ಗಣಿಗಳಲ್ಲಿ ಹ್ಯಾಂಡ್ ಕಟಿಂಗ್, ಡಿಗ್ಗಿಂಗ್, ಜರಡಿ ಹಿಡಿಯುವುದು, ಬಿದ್ದ ಕಲ್ಲುಗಳನ್ನು ಆಯುವುದು ಹೀಗೆ ಅಪಾಯದ ವಲಯಗಳಲ್ಲಿ ಕೆಲಸವನ್ನು ಮಾಡುತ್ತಿ ದ್ದಾರೆ. ಈ ಮಕ್ಕಳು ದಿನಾಲೂ ಉಸಿರಾಡುವುದು ದೂಳನ್ನು, ಉಸಿರುಬಿಡುವುದು ದೂಳನ್ನು. ಹೀಗಾಗಿ ಕೆಲವು ಮಕ್ಕಳಲ್ಲಿ ಭಯಾನಕ ಕಾಯಿಲೆಗಳಾದಂತಹ, ಅಸ್ತಮಾ, ಕಿಡ್ನಿತೊಂದರೆ, ಕಣ್ಣಿನ ತೊಂದರೆ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಬಳ್ಳಾರಿಯ ವೈದ್ಯತಜ್ಞರು ಹೇಳುವ ಪ್ರಕಾರ ಶೆೀಕಡ ೩೦ರಷ್ಟು ಮಕ್ಕಳು ಇಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ.

ಮಕ್ಕಳಿಂದ ಸಿಗುವ ಅಲ್ಪಸ್ವಲ್ಪ ಬಿಡಿಗಾಸು ತಂದೆ ತಾಯಿಗಳಿಗೆ ಸ್ವಲ್ಪಮಟ್ಟಿಗೆ ನೆರವಾಗು ತ್ತದೆ. ಕೆಲವು ಮಕ್ಕಳು ತಮಗೆ ಸಿಗುವ ಹಣದಿಂದ ದುಶ್ಚಟಗಳ ದಾಸರಾಗಿದ್ದಾರೆ. ತಂದೆ ತಾಯಿಗಳು ಧೂಳಿನಿಂದ ಹಾಗೂ ಕೆಲಸದಿಂದ ತುಂಬಾ ದಣಿಯುವುದರಿಂದ ಅವರು ಬೆಳಗಿ ನಿಂದಲೇ ಸಾರಾಯಿ ಕುಡಿಯುತ್ತಾ ಕೆಲಸ ಮಾಡುತ್ತಿರುತ್ತಾರೆ. ಒಬ್ಬ ಮನುಷ್ಯ ಕನಿಷ್ಟವೆಂದರೂ ೪ ರಿಂದ ೫ ಪಾಕೆಟ್ ಸಾರಾಯಿ ಕುಡಿಯುತ್ತಾನೆ. ತಾವು ಕೆಲಸ ಮಾಡುವ ಸ್ಥಳಕ್ಕೆ ಸಾರಾಯಿ ಪಾಕೆಟ್‌ಗಳು ಬಂದು ಸೇರುತ್ತವೆ. ಇವರು ದುಡಿದ ೭೫ ಭಾಗವನ್ನು ಇಲ್ಲೇ ಖರ್ಚುಮಾಡು ತ್ತಾರೆ. ಉಳಿದ ಅಲ್ಪಸ್ವಲ್ಪ ಹಣವನ್ನು ಊರಿಗೆ ಕೊಂಡೊಯ್ಯುತ್ತಾರೆಂದು ಗಣಿ ಮಾಲಿಕರೇ ಹೇಳುತ್ತಾರೆ.

ಮೊದಲು ಮಾನ್ಯತೆ ಪಡೆದು ಗಣಿಗಾರಿಕೆಯನ್ನು ನಡೆಸುತ್ತಿದ್ದ ಸಮಯದಲ್ಲಿ ವಲಸೆ ಬರುವವರ ಪ್ರಮಾಣ ಕಡಿಮೆ ಇತ್ತು. ಆದರೆ ಮೂರುವರ್ಷಗಳ ಹಿಂದೆ ಹೊರರಾಷ್ಟ್ರಗಳ ಜೊತೆ ಮಾಡಿಕೊಂಡ ಅದಿರಿನ ಮಾರಾಟದ ಒಪ್ಪಂದದಿಂದಾಗಿ ಮಾನ್ಯತೆಯನ್ನು ಪಡೆಯದೇ ಗಣಿಗಾರಿಕೆಯನ್ನು ಶುರುಮಾಡಿದ್ದರು. ಇದರ ಪರಿಣಾಮವಾಗಿ ಕಾರ್ಮಿಕರ ಅಭಾವವು ಹೆಚ್ಚಾಯಿತು. ಇದರಿಂದಾಗಿ ಗಣಿಮಾಲೀಕರು ಕೂಲಿಯ ಪ್ರಮಾಣವನ್ನು ಹೆಚ್ಚಿಸಿದರು. ಇದರಿಂದ ಸುತ್ತಮುತ್ತಲಿನ ಜಿಲ್ಲೆಗಳಿಂದ ಭೂರಹಿತ ಕುಟುಂಬಗಳು ಮತ್ತು ಸಣ್ಣ ಹಿಡುವಳಿ ದಾರರು ವಲಸೆ ಬಂದು ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಬೀಡುಬಿಟ್ಟರು.

ಮೊದಲೆ ಹೇಳುವಂತೆ ಇವರು ಹೆಚ್ಚಾಗಿ ನಾಯಕ ಸಮುದಾಯದವರೇ ಆಗಿದ್ದಾರೆ. ಈ ಕುಟುಂಬಗಳಲ್ಲಿರುವ ಮಕ್ಕಳು ಶಾಲೆಯಲ್ಲಿ ಅಕ್ಷರ ಕಲಿಯಬೇಕಾದ ಸಮಯದಲ್ಲಿ ಕಲ್ಲುಕುಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಇವರ ದುಡಿಮೆಯಿಂದ ಬಂಡವಾಳಶಾಹಿ ಗಳು ಇನ್ನೂ ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಆದರೆ ಈ ಕಾರ್ಮಿಕರು ಮಕ್ಕಳ ಕಡೆ ತಿರುಗಿಯೂ ನೋಡುತ್ತಿಲ್ಲ. ಕನ್ನಡ ವಿ.ವಿ.ಯಪ್ರಾಧ್ಯಾಪಕರಾದ ಡಾ.ಟಿ.ಆರ್.ಚಂದ್ರ ಶೇಖರ ಅವರು ಹೇಳುವಂತೆ ಈ ಶ್ರೀಮಂತವರ್ಗ ತಿನ್ನವ ಅನ್ನ ಹೇಗೆ ಬಂತು ಎಂದು ಕನಿಷ್ಠ ಯೋಚನೆ ಮಾಡದೆ ಬರೀ ಹಣದ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ಬಂಡವಾಳಶಾಹಿಗಳ ವಿರುದ್ಧ ಧ್ವನಿಎತ್ತಿದ್ದಾರೆ.

ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ನಾವು ಸರ್ವೆ ಮಾಡಿದಾಗ ನಾಯಕ ಕುಟುಂಬಗಳನ್ನು ಹೊರೆತುಪಡಿಸಿ ಬಹುಪಾಲು ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಯಿಂದ ವಂಚಿತರ ನ್ನಾಗಿಸಿಲ್ಲ. ಈ ರೀತಿ ಕುಟುಂಬಗಳು ವಲಸೆ ಬರಲು ಮುಖ್ಯ ಕಾರಣಗಳನ್ನು ಹುಡುಕಿದಾಗ ಕೆಲವು ಸತ್ಯಗಳು ನಮಗೆ ಗೋಚರವಾಗುತ್ತವೆ.

೧. ಮೊದಲನೆಯದಾಗಿ ಹೇಳುವುದಾದರೆ ಭೂಮಿ ಇಲ್ಲದೇ ಇರುವುದು.

೨. ಹಳ್ಳಿಗಳಲ್ಲಿ ಕೊಡುವ ಕೂಲಿ ಅಲ್ಪಪ್ರಮಾಣದ್ದಾಗಿರುತ್ತದೆ.

೩. ಬೆಳೆಗೆ ತಕ್ಕ ಬೆಲೆ ಸಿಗದೇ ಇರುವುದು.

೪. ಸಾಲಗಾರರ ಕಾಟ.

೫. ಸಕಾಲಕ್ಕೆ ಮಳೆ ಬಾರದೇ ಇರುವುದು.

ಹೀಗೆ ಅನೇಕ ಕುಟುಂಬಗಳು ವಲಸೆ ಬರಲು ಕಾರಣೀಭೂತವಾಗಿವೆ. ಹೀಗೆ ಬಂದಂತ ಕುಟುಂಬಗಳಿಗೆ ತುರ್ತಾಗಿ ಆಸ್ಪತ್ರೆಗಳಿಲ್ಲ. ಏನಾದರೂ ಅಪಘಾತ ಸಂಭವಿಸಿದರೆ ಕಾಡಿನಿಂದ ನಾಡಿಗೆ ಅವರನ್ನು ತರುವುದರಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಗಣಿಮಾಲೀಕರಾಗಲಿ ಸರ್ಕಾರದವರಾಗಲಿ ಅದರ ಕಡೆ ಗಮನ ಹರಿಸಿಲ್ಲ. ಈ ಕುಟುಂಬಗಳು ನಾಲ್ಕು ತಿಂಗಳಿಗೊಮ್ಮೆ ಅಥವಾ ಆರುತಿಂಗಳಿಗೊಮ್ಮೆ ತಮ್ಮ ಊರಿಗೆ ಹೋಗಿ ಬರುತ್ತವೆ. ಅಥವಾ ತಿರಿಗಿಬಾರದನೇ ಇರಬಹುದು. ಅಷ್ಟರಲ್ಲಿ ಮಕ್ಕಳು ಕಲಿತ ಅಕ್ಷರ ಜ್ಞಾನವನ್ನು ಮರೆಯುತ್ತಾರೆ. ಈ ರೀತಿ ಶಾಲೆ ಬಿಟ್ಟ ಮಕ್ಕಳು ಪುನಃ ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಅಲ್ಲಿಗೆ ವಿದ್ಯಾಭ್ಯಾಸವೆಂಬ ಬದುಕು ಕೊನೆಗೊಂಡಂ ತಾಗುತ್ತದೆ. ಪ್ರತಿಯೊಂದು ಗಣಿಕ್ಷೇತ್ರದಲ್ಲಿ ನಾಯಕ ಸಮುದಾಯವಲ್ಲದೇ ಇನ್ನುಳಿದ ಸಮುದಾಯದವರ ಮಕ್ಕಳ ಕಥೆಯೂ ಇದೇ ಆಗಿದೆ. ಇಲ್ಲಿನ ಲೇಬರ್ ಇನ್‌ಸ್ಪೆಕ್ಟರ್‌ಗಳು, ಸಿ.ಡಿ.ಪಿ.ಓ.ಮುಂತಾದ ಅಧಿಕಾರಿಗಳು ಕಂಡುಕಾಣದಂತೆ ಕುಳಿತಿದ್ದಾರೆ.

ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಣಿಗಾರಿಕೆಯ ಹಗರಣದ ಪರಿಣಾಮವಾಗಿ ಇಲ್ಲಿನ ಪ್ರತಿಯೊಂದು ಚಟುವಟಿಕೆಯು ರಾಷ್ಟ್ರಮಟ್ಟದಲ್ಲಿ ಪ್ರಚಾರವಾಗಿ ಕೆಲವು ಅಧಿಕಾರಿ ಗಳು ಎಚ್ಚೆತ್ತು ಸ್ವಲ್ಪಮಟ್ಟಿಗೆ ಸುಧಾರಣೆ ಮಾಡಿದರು. ಆದರೂ ಅದು ತಾತ್ಕಾಲಿಕವಾಗಿದೆ. ಕೆಲವು ಕಡೆ ನಡೆಸಿದ ದಾಳಿಗಳಿಂದ ಕ್ರಷರ್‌ಗಳು ಸೀಜ್ ಆಗಿವೆ. ಅವುಗಳ ಅಕ್ಕಪಕ್ಕದಲ್ಲಿ ಮತ್ತೆ ಮುಂದುವರೆದಿವೆ. ಕೆಲವು ಸಾಮಾಜಿಕ ಸೇವಾ ಸಂಸ್ಥೆಗಳಾದ ಡಾನ್‌ಬಾಸ್ಕೋ, ಸೀಡ್ಸ್, ಅಭಿವೃದ್ದಿ ಸಂಸ್ಥೆಗಳು ಗಣಿಗಾರಿಕೆಯ ಸ್ಥಳಗಳಲ್ಲಿ ಟೆಂಟ್ ಶಾಲೆಗಳನ್ನು ತೆರೆದಿವೆ. ಅಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ ಇವು ಕೆಲವೇ ಮಕ್ಕಳಿಗೆ ಮಾತ್ರ ಉಪಯೋಗಕರವಾಗಿವೆ. ಶೇ. ೮೦ರಷ್ಟು ಭಾಗ ಮಕ್ಕಳು ಈ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರದವರು ಸಹ ಕೆಲವು ಕಡೆಗಳಲ್ಲಿ ಟೆಂಟ್ ಶಾಲೆಗಳನ್ನು ತೆರೆದು, ಸ್ವಲ್ಪಮಟ್ಟಿಗೆ ಮಕ್ಕಳಿಗೆ ಶಿಕ್ಷಣ ಸಿಗುವಂತ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಕೇವಲ ಅನೌಪಚಾರಿಕವಾಗಿದೆ.

ಕೆಲವು ವರ್ಷಗಳ ಹಿಂದೆ ಕಾರ್ಮಿಕ ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿಕೊಟ್ಟು ಅಲ್ಲಿನ ಮಕ್ಕಳ ಕಷ್ಟವನ್ನು ಕಣ್ಣಾರೆ ಕಂಡು ಕೆಲವು ಅಧಿಕಾರಿಗಳನ್ನು ಮತ್ತು ಗಣಿಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಅದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ವಿಫಲರಾದರು. ಹೀಗೆಯೇ ಇದು ಮುಂದುವರೆದರೆ ಇಲ್ಲಿ ಬಂಡವಾಳಶಾಹಿಗಳು ಹೆಚ್ಚು ಹೆಚ್ಚು ಶ್ರೀಮಂತ ರಾಗುತ್ತಾರೆ. ಕೂಲಿಕಾರ್ಮಿಕರು ಕಾರ್ಮಿಕರಾಗಿಯೆ ಉಳಿಯುತ್ತಾರೆ. ಮಕ್ಕಳು ಅನಕ್ಷರಸ್ಥರಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ.ಮೊದಲು ಸಮುದಾಯವನ್ನು ಒಂದುಕಡೆ ಸೇರಿಸಿ, ಮಕ್ಕಳ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡು ವುದು. ಕಾನೂನಿನಲ್ಲಿ ಮಕ್ಕಳಿಗೆ ತಮ್ಮದೇ ಆದಂತಹ ಹಕ್ಕುಬಾಧ್ಯತೆಗಳಿವೆ. ಅಮೇರಿಕಾವನ್ನು ಹೊರತುಪಡಿಸಿ ವಿಶ್ವದ ಎಲ್ಲಾ ರಾಷ್ಟ್ರಗಳು ಮಕ್ಕಳ ಹಕ್ಕು ಮತ್ತು ಅಭಿವೃದ್ದಿಯ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಮಕ್ಕಳ ಹಕ್ಕುಗಳನ್ನು ನಾವುಗಳು ಕಿತ್ತುಕೊಂಡು ಅವರನ್ನು ಬೇರೆಯವರ ಮನೆಯಲ್ಲಿ ಜೀತಕ್ಕೆ, ಬೇರೆ ಸ್ಥಳಗಳಿಗೆ ಸಾಗಾಣಿಕೆ ಮಾಡುವುದಾಗಲಿ, ಬಾಲ್ಯ ವಿವಾಹ ಪದ್ಧತಿ…ಹೀಗೆ ಅಮಾನವೀಯ ಕೃತ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಘಟನೆಗಳು ಪ್ರತಿಹಳ್ಳಿಗಳಲ್ಲಿ ಮತ್ತು ಪ್ರತಿ ಪಟ್ಟಣಗಳಲ್ಲಿ ನಡೆಯುತ್ತಿರುತ್ತವೆ. ಸರ್ಕಾರವು ಮಕ್ಕಳ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಎಲ್ಲರಿಗೂ ತಲುಪುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವುಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯನ್ನು ಜಾರಿಮಾಡಿದ್ದರೂ ಅವುಗಳು ಸ್ವಲ್ಪಮಟ್ಟಿಗೆ ಮಕ್ಕಳಿಗೆ ಅನುಕೂಲವಾಗುತ್ತಿದ್ದವೇನೋ. ಅಷ್ಟೇ ಅಲ್ಲ, ಪ್ರತಿ ಹಳ್ಳಿಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬೀದಿನಾಟಕ ಮುಖಾಂತರವಾಗಲಿ, ಭಿತ್ತಿಪತ್ರಗಳ ಮುಖಾಂತರವಾಗಲಿ ಜನರಿಗೆ ಮನಮುಟ್ಟುವಂತೆ ವ್ಯವಸ್ಥೆಯನ್ನು ಮಾಡಬೇಕು. ಮೈನಿಂಗ್ ನಡೆಯುವ ಸ್ಥಳಗಳಲ್ಲಿ ಶಾಶ್ವತವಾದಂತ ಶಾಲೆಗಳನ್ನು ತೆರೆದು ಅವರಿಗೆ ಉಚಿತವಾಗಿ ಶಿಕ್ಷಣದ ಸಾಮಗ್ರಿಗಳು ಹಾಗೂ ಬಟ್ಟೆ, ಊಟದ ವ್ಯವಸ್ಥೆಮಾಡಿ ಅಲ್ಲಿ ನುರಿತ ಶಿಕ್ಷಕರನ್ನು ನೇಮಕಮಾಡಬೇಕು. ಹಾಗೆ ಗಣಿಮಾಲೀಕರು ಸಹ ಮಕ್ಕಳನ್ನು ಶಾಲೆಗೆ ಕಳಿಸಲು ಪ್ರೋನೀಡಬೇಕು. ಮಕ್ಕಳನ್ನು ಗಣಿಮಾಲೀಕರು ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಅಲ್ಪಕೂಲಿಯನ್ನು ಕೊಟ್ಟು ದುಡಿಸಿಕೊಳ್ಳುತ್ತಾರೆ. ಅಂತವರ ವಿರುದ್ಧ ಕ್ರೂರವಾದ ಶಿಕ್ಷೆಯನ್ನು ಜಾರಿಮಾಡಿ ಅಂತಹ ಗಣಿಗಾರಿಕೆಯನ್ನು ಸೀಜ್ ಮಾಡಬೇಕು.

ಪ್ರತಿ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕಾವಲು ಪಡೆಯನ್ನು ರಚಿಸಬೇಕು. ಈ ಕಾವಲು ಪಡೆಯುವ ಮಕ್ಕಳನ್ನು ಮಾರಾಟಮಾಡುವುದನ್ನು, ಮಕ್ಕಳನ್ನು ಸಾಗಾಣಿಕೆ ಮಾಡುವು ದನ್ನು, ಬಾಲ್ಯವಿವಾಹ ಪದ್ಧತಿಯನ್ನು, ದೇವದಾಸಿ ಪದ್ಧತಿಯನ್ನು ತಡೆಯಬೇಕು. ಈ ಪಡೆಯಲ್ಲಿ ಎ.ಪಿ.ಎಂ.ಸಿ. ಕಮಿಟಿಯ ಸದಸ್ಯರು ಊರಿನ ಮುಖ್ಯಸ್ಥರು, ಗ್ರಾಮಪಂಚಾಯತಿ ಸದಸ್ಯರು, ಅಂಗನವಾಡಿ ಶಿಕ್ಷಕರು, ಯುವಕ ಸಂಘದವರು ಇರಬೇಕು. ಈ ರೀತಿಯ ಕಾವಲು ಪಡೆ ಸಹಾ ಮಕ್ಕಳ ಬಗ್ಗೆ ಜಾಗೃತಿಯನ್ನು ವಹಿಸಬೇಕು. ಹೀಗೆ ಆದರೆ ಮಾತ್ರ ಮಕ್ಕಳ ಹಕ್ಕುಗಳು ಮಕ್ಕಳಿಗೆ ಸಿಗಲು ಸಾಧ್ಯವಾಗುತ್ತದೆ.

-ರವಿ ಕೋಲಾರ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: