ಎಂ ಕೆ ಇಂದಿರ

ಎಂ ಕೆ ಇಂದಿರ ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ. ಎಂ.ಕೆ.ಇಂದಿರಾ ಅವರ ಗೆಜ್ಜೆ ಪೂಜೆ ಫಣಿಯಮ್ಮ ಮತ್ತು ಪೂರ್ವಾಪರ ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ ಪ್ರೇಮಾ ಕಾರಂತ್. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. ಎಲ್. ವಿ.ಶಾರದಾ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು.

ಜೀವನ
ಕನ್ನಡಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಹಳ್ಳಿಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೊಯಿಸಳ, ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು …….ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ “ತುಂಗಭದ್ರ”.”ತುಂಗಭದ್ರೆ”ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ “ಗೆಜ್ಜೆಪೂಜೆ”, “ಸದಾನಂದ”, “ನವರತ್ನ”…..ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. “ಬಿಂದು” ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ” ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.”ನಮನ”

ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ ಪಡೆದ ಕಾದಂಬರಿಗಳು

ಸದಾನಂದ
ನವರತ್ನ
ಫಣಿಯಮ್ಮ

ಚಲನಚಿತ್ರವಾಗಿರುವ ಕಾದಂಬರಿಗಳು
ಗೆಜ್ಜೆಪೂಜೆ
ಮುಸುಕು
ಪೂರ್ವಾಪರ
ಗಿರಿಬಾಲೆ
ಹೂಬಾಣ
ಫಣಿಯಮ್ಮ

ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆಯಿತು. ಜೊತೆಗೆ ಈ ಕೃತಿಯನ್ನು ತೇಜಸ್ವಿನಿ ನಿರಂಜನ ಆಂಗ್ಲಭಾಷೆಗ್ಗೆ ಅನುವಾದ ಮಾಡಿದಾರೆ.

ಕಥಾಸಂಕಲನಗಳು
ಅಂಬರದ ಅಪ್ಸರೆ
ನವರತ್ನ
ಪ್ರಶಸ್ತಿ/ಪುರಸ್ಕಾರ
ಸಾವಿತ್ರಮ್ಮ ದೇಜಗೌ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
‘ಸುರಗಿ’ ಅಭಿನಂದನಾ ಗ್ರಂಥ ಸಮರ್ಪಣೆ

ಮಲೆನಾಡ ಜೀವನದ ದಟ್ಟ ಅನುಭವ ಮತ್ತು ತಮ್ಮ ಜೀವನಾನುಭವಗಳನ್ನೇ ಮೂಲದ್ರವ್ಯವಾಗಿಸಿಕೊಂಡು ಬದುಕಿನ ವೈರುಧ್ಯಗಳಾದ ಬಾಲ್ಯವಿವಾಹ, ವೇಶ್ಯಾಪದ್ಧತಿ, ವಿಧವಾ ವಿವಾಹ ಸಮಸ್ಯೆ ಮುಂತಾದ ಸಾಮಾಜಿಕ ಅನಿಷ್ಟಗಳ ಬಗ್ಗೆ ನಿರ್ಭಿಡೆಯಾಗಿ ಬರೆದು ಓದುಗರ ಮನಸೂರೆಗೊಂಡ ಎಂ.ಕೆ. ಇಂದಿರಾರವರು ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ ತಾ. ೫.೧.೧೯೧೭ ರಂದು. ತಂದೆ ಸೂರ್ಯನಾರಾಯಣರಾಯರು, ತಾಯಿ ಬನಶಂಕರಮ್ಮ. ಓದಿದ್ದು ಮಿಡ್ಲ್ ಸ್ಕೂಲ್‌ ಎರಡನೆಯ ತರಗತಿಯವರೆಗಾದರೂ ರಚಿಸಿದ ಕೃತಿಗಳು ಒಟ್ಟು ೬೫. ೪೮ ಕಾದಂಬರಿಗಳು, ೧೫ ಕಥಾ ಸಂಕಲನಗಳು (ಒಂದು ಹಾಸ್ಯಲೇಖನ ಸಂಕಲನವೂ ಸೇರಿ), ಒಂದು ಚಲನಚಿತ್ರ ಪ್ರಪಂಚ ಮತ್ತು ಒಂದು ಪ್ರವಾಸ ಸಾಹಿತ್ಯ.

ಮಿಡ್ಲ್‌ ಎರಡನೆಯ ತರಗತಿಯವರೆಗೆ ಓದಿದ್ದ ಇಂದಿರಾ ರವರ ಸಾಹಿತ್ಯವನ್ನು ಓದಿ ಪಿಎಚ್‌.ಡಿ ಪದವಿ ಪಡೆದ ಮಂದಾಕಿನಿ ಪುರೋಹಿತರವರು ಸಿದ್ಧಪಡಿಸಿದ ಮಹಾ ಪ್ರಬಂಧ “ಎಂ.ಕೆ. ಇಂದಿರಾ ರವರ ಕಾದಂಬರಿಗಳು”. ಪಿಎಚ್‌.ಡಿ. ಪದವಿ ಪಡೆದ ನಂತರ ಈ ಪ್ರಬಂಧವೇ ಹಲವಾರು ಮಾರ್ಪಾಡು ಹೊಂದಿ ಪ್ರಕಟಗೊಂಡಿದ್ದು ‘ಎಂ.ಕೆ. ಇಂದಿರಾ – ಸಮಗ್ರ ಅಧ್ಯಯನ’ ಎಂಬ ಹೆಸರಿನಿಂದ. ಇದು ಬಿಡುಗಡೆಯಾದದ್ದೂ ಒಂದು ವಿಶೇಷ ಸಂದರ್ಭದಲ್ಲಿ. ಎಂ.ಕೆ. ಇಂದಿರಾ ರವರಿಗೆ ೭೫ ವರ್ಷ ತುಂಬಿದಾಗ, ಅರ್ಪಿಸಿದ ‘ಸುರಗಿ’ ಅಭಿನಂದನ ಗ್ರಂಥದ ಜೊತೆಗೆ ವಿಶ್ವವಿದ್ಯಾಲಯದ ಮೆಟ್ಟಿಲೇ ಹತ್ತದ ಇಂದಿರಾರವರ ಕಾದಂಬರಿ ‘ತುಂಗಭದ್ರ’ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ., ಬಿ.ಎಸ್ಸಿ., ಬಿ.ಕಾಂ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.

ಇಷ್ಟೆಲ್ಲಾ ಸಾಧನೆ ಮಾಡಿದ ಇಂದಿರಾರವರು ಹನ್ನರಡನೆಯ ವಯಸ್ಸಿಗೆ ಮದುವೆಯಾಗಿ ಹದಿನೇಳನೆಯ ವಯಸ್ಸಿಗೆ ಪತಿಗೃಹಸೇರಿ, ಹದಿನೆಂಟನೆಯ ವಯಸ್ಸಿಗೆ ಮೊದಲ ಮಗುವಿನ ತಾಯಿಯಾಗಿ, ಒಟ್ಟು ಎಂಟು ಮಕ್ಕಳಿಗೆ ಜನ್ಮ ನೀಡಿದರೂ ಉಳಿದದ್ದು ಮೂರು ಗಂಡು, ಒಂದು ಹೆಣ್ಣು ಮಾತ್ರ. ತುಂಬು ಸಂಸಾರದಲ್ಲಿ ಗಂಡ, ಮಕ್ಕಳು, ಸಂಸಾರ ಎಂಬ ಜಂಜಾಟದಲ್ಲಿ ಮುಳುಗಿದ ಈ ಮಹಿಳೆ ಇಷ್ಟು ಕೃತಿ ರಚಿಸಿದರೆಂದರೆ ಯಾರಿಗಾದರೂ ಆಶ್ಚರ್ಯವಾದೀತು. ಮೊದಲ ಕಾದಂಬರಿ ಪ್ರಕಟವಾದದ್ದು ಮೊಮ್ಮಗಳು ಹುಟ್ಟಿದ ನಂತರ. ಇಷ್ಟು ವಿಳಂಬವಾಗಿ ಬರವಣಿಗೆ ಪ್ರಾರಂಭಿಸಿ ಬಹು ಬೇಗ ಪ್ರಸಿದ್ಧಿ ಪಡೆದ ಇಂದಿರಾರವರನ್ನು ಬಿಟ್ಟರೆ ಕನ್ನಡ ಸಾಹಿತ್ಯದಲ್ಲಿ ಮತ್ತೊಬ್ಬ ಮಹಿಳಾ ಸಾಹಿತಿ ಕಾಣಸಿಗುವುದಿಲ್ಲ. ಮೊದಲ ಕಾದಂಬರಿಯ ಪ್ರಕಟಣೆಯದೇ ಒಂದು ದೊಡ್ಡಕಥೆ. ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿಯವರಿಗೆ ರಾಮ್ಸಾಮಿ-ಎಚ್‌.ಕೆ. ರಂಗನಾಥ್‌ ಮೂಲಕ ತುಂಗ-ಭದ್ರ ಕಾದಂಬರಿ ತಲುಪಿತು. ಜೋಶಿಯವರು ಕಾದಂಬರಿಯ ಬಗ್ಗೆ ಸಲಹೆ ನೀಡಲು ಕೆ.ಡಿ. ಕಲುರ್ತಕೋಟಯವರಿಗೆ ಕೊಟ್ಟರು. ಕುರ್ತಕೋಟಿಯವರು ಕಾರ್ಯನಿಮಿತ್ತ ಮುಂಬಯಿಗೆ ಹೊರಟಾಗ ಕಾದಂಬರಿ ಓದಲು ತೆಗೆದುಕೊಂಡು ಹೋಗಿದ್ದು, ರೈಲಿನಲ್ಲಿ ಹಣದ ಲೆದರ್ ಬ್ಯಾಗ್‌ ಸಮೇತ ಹಸ್ತ ಪ್ರತಿಯನ್ನು ಕಳೆದುಕೊಂಡಿದ್ದರು. ಇದು ಲೇಖಕಿಗೆ ತಿಳಿದಾಗ ಎಂಥ ಆಘಾತವಾಗಿರಬೇಡ! ಲೇಖಕಿ ಯೋಚಿಸುತ್ತಾ ಕೂರಲಿಲ್ಲ, ದುಃಖಿಸಲ್ಲಿಲ್ಲ. ಕೇವಲ ಹನ್ನೆರಡು ದಿವಸದಲ್ಲಿ ಹಿಂದೆ ಬರೆದಿದ್ದ ಕಾದಂಬರಿಯ ಯಥಾವತ್‌ ಪ್ರತಿ ಬರೆದು ಎಲ್ಲರನ್ನೂ ಬೆರಗಾಗಿಸಿದರು. ಮೊದಲ ಕಾದಂಬರಿ ತುಂಗಭದ್ರ ಪ್ರಕಟವಾದುದು ೧೯೬೩ ರಲ್ಲಿ.

ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುವ ಎಂ.ಕೆ. ಮಂಜುನಾಥ್‌ ಇವರ ಎರಡನೆಯ ಮಗ. ಇವರನ್ನೊಳಗೊಂಡಂತೆ ರಾಮ್ಸಾಮಿ, ಎಚ್‌.ಕೆ. ರಂಗನಾಥ್‌, ಎಚ್‌.ಎಸ್‌. ಪಾರ್ವತಿ, ಪ್ರಜಾವಾಣಿಯಲ್ಲಿ ಸಂಪಾದಕರಾಗಿದ್ದ ಟಿ.ಎಸ್‌. ರಾಮಚಂದ್ರರಾವ್‌, ಕವಿ ಎಸ್‌.ವಿ. ಪರಮೇಶ್ವರಭಟ್ಟರು, ಕೆ.ಎಸ್‌. ನರಸಿಂಹಸ್ವಾಮಿ ಮುಂತಾದ ಸಾಹಿತ್ಯ ದಿಗ್ಗಜರೆಲ್ಲರೂ ಇವರ ಸಂಬಂಧಿಗಳೇ! ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳಂತೆ. ಅದೇ ರೀತಿ ಎಂ.ಕೆ. ಇಂದಿರಾ ರವರ ಸಾಹಿತ್ಯ ಪ್ರತಿಭೆಯ ಯಶಸ್ಸಿನ ಹಿಂದೆ ಪತಿ ಕೃಷ್ಣರಾವ್ ಸತತವಾಗಿ ಪ್ರೋತ್ಸಾಹಿಸಿದರು. ಗೆಜ್ಜೆಪೂಜೆ, ಫಣಿಯಮ್ಮ, ಸದಾನಂದ, ಹೂಬಾಣ ಕಾದಂಬರಿಗಳು ಚಲನ ಚಿತ್ರಗಳಾಗಿ ಪ್ರಸಿದ್ಧಿ ಪಡೆದವು. ಗೆಜ್ಜೆಪೂಜೆ, ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ರಾಷ್ಟ್ರಪ್ರಶಸ್ತಿಗಳಿಸಿದರೆ, ಫಣಿಯಮ್ಮ ಕಾದಂಬರಿಯು ಪ್ರೇಮಾಕಾರಂತರ ನಿರ್ದೇಶನದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿ ಇಂಗ್ಲೆಂಡ್‌, ಪ್ಯಾರಿಸ್‌, ಜರ್ಮನಿ, ಇಟಲಿ, ಫ್ರಾನ್ಸ್‌ , ಪೋಲೆಂಡ್‌, ಪೋರ್ಚುಗೀಸ್‌, ಜಪಾನ್‌, ಹವಾಯ್‌, ಅಮೆರಿಕದ ಹಲವಾರು ಭಾಗಗಳಲ್ಲಿ ಪ್ರದರ್ಶನಗೊಂಡು ಪ್ರಪಂಚವನ್ನೇ ಸುತ್ತಿಬಂದ ಚಲನಚಿತ್ರ. ‘ತುಂಗಭದ್ರ’ ಕಾದಂಬರಿಯು ತೆಲುಗು ಭಾಷೆಗೂ, ‘ಗೆಜ್ಜೆಪೂಜೆ’ ತೆಲುಗು, ಗುಜರಾತಿ ಭಾಷೆಗೂ, ‘ಫಣಿಯಮ್ಮ’ ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಗೂ ಅನುವಾದಗೊಂಡಿವೆ. ಏಷ್ಯನ್‌ ಟ್ರಾವಲ್ಸ್ ಮಾಲೀಕರಾದ ಸಾಹಿತಿ ಎಚ್.ವಿ. ನಾರಾಯಣ್‌ರವರ ಒತ್ತಾಯದ ಮೇರೆಗೆ ದಕ್ಷಿಣ ಭಾರತ ಪ್ರವಾಸ ಕೈಗೊಂಡು ರಚಿಸಿದ ಕೃತಿ ‘ಅನುಭವ ಕುಂಜ’ ಆರನೆಯ ವಯಸ್ಸಿನಿಂದ ಅರವತ್ತೆಂಟನೆಯ ವಯಸ್ಸಿನವರೆಗೆ ತಾವು ನೋಡಿದ ೩೦೦೦ ಚಲನ ಚಿತ್ರಗಳ ವಿವಿಧ ಅಂಶಗಳಾದ ನಾಯಕ-ನಾಯಕಿ, ನಿರ್ದೇಶನ, ಕೇಶಾಲಂಕಾರ, ನೃತ್ಯ, ಕ್ಯಾಬರೆ, ದುಃಖ, ಮಾನಭಂಗ, ಸಾವು, ಪವಾಡ ಮುಂತಾದವುಗಳ ಬಗ್ಗೆ ಹಾಸ್ಯ ಲೇಪದ ಲೇವಡಿಯ ಕೃತಿ ‘ಚಿತ್ರಭಾರತ’.

ಇಷ್ಟು ಬರೆದಿದ್ದು ಹಾಸ್ಯ ಕೃತಿ ರಚಿಸದಿದ್ದರೆ ಹೇಗೆ? ‘ವಾತಾಪಿ ಜೀರ್ಣೋಭವ’, ‘ಸ್ಥೂಲ ಪುರಾಣ’, ‘ದೀಪಾವಳಿ ಮತ್ತು ಮೀಸೆ’, ‘ಸಣ್ಣಯ್ಯನ ದೊಡ್ಡಗೊರಕೆ’ ಮುಂತಾದ ೧೬ ಲೇಖನಗಳ ಸಂಗ್ರಹ ‘ನಗಬೇಕು’ ಓದೇ ಅನುಭವಿಸಬೇಕು.

ಮಲೆನಾಡ ಜೀವನದ ದಟ್ಟ ಅನುಭವಗಳನ್ನು ತಮ್ಮ ಕೃತಿಯಲ್ಲಿ ಪಡಿ ಮೂಡಿಸಿದ ವಿಶಿಷ್ಟ ಲೇಖಕಿ ಎಂ.ಕೆ. ಇಂದಿರಾರವರು ತೀರಿಕೊಂಡದ್ದು ಮಾರ್ಚ್ ೧೫ ರ ೧೯೯೪ ರಲ್ಲಿ.

-ಕುಮಾರ್ ರಾವ್

Advertisements

2 responses

    1. eradaneya claass odidaru estondu hesaru galisiddare idella avaru patta shrama mechhabekadadde

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: