ನಟಸಾರ್ವಭೌಮ ಡಾ. ರಾಜ್‌ಕುಮಾರ್

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ – ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗು ಹ೦ಪಿ ವಿಶ್ವವಿದ್ಯಾಲಯದಿ೦ದ ನಾಡೋಜ ಪದವಿಯನ್ನು ಪಡೇದಿದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು.ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ.ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಎಂದರೆ ೧೯೩೦-೧೯೫೦ ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು. ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ವಹಿಸುತ್ತಿದ್ದರು.

ಡಾ.ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ : “ಇಂತಹ ಸಾಧನೆ ನಿನ್ನಿಂದ ಸಾಧ್ಯ” ಎಂದು ಪುಟ್ಟಸ್ವಾಮಯ್ಯನವರು ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು. “ನನ್ನ ತಂದೆ ರಂಗದ ಮೇಲೆ ಹುರಿಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು” ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲು ಪ್ರಿಯ. “ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ” ಎಂದು ಹೇಳಿದ್ದಾರೆ.

ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ “ಕೃಷ್ಣಲೀಲಾ” ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ “ಅಂಬರೀಷ” ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು. ಅನಂತರ “ಕುರುಕ್ಷೇತ್ರ” ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್‌ಕುಮಾರ್‌ಗೆ ಇದು ರಂಗತಾಲೀಮು.

೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ “ಭೂ ಕೈಲಾಸ” ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.ಚಿತ್ರರಂಗದ ಬದುಕು

ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು.

೨೦೦ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು.

೧೯೬೦ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆಕಂಡವು.

೧೯೬೬ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‌ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರಬದುಕಿನಲ್ಲಿ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.

೧೯೬೮ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿಯಲ್ಲಿ ‘ಪ್ರಕಾಶ್’ ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯) ಅಭಿನಯಿಸಿದರು. ಈ ಸರಣಿಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಹಾಗು ಆಪರೇಷನ್ ಡೈಮಂಡ್ ರ್ಯಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.

ರಾಜ್‌ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ(ನಟಸಾರ್ವಭೌಮ) ಕೂಡ ತಯಾರಾಯಿತು. ಈ ಚಿತ್ರವು ರಾಜ್‌ಕುಮಾರ್ ಅವರ ಹಿಂದಿನ ನೂರು ಚಿತ್ರಗಳ ತುಣುಕು ದೃಶ್ಯಗಳನ್ನು ಜೊತೆಗೂಡಿಸಿ ತಯಾರಿಸುವ ಯೋಜನೆಯೊಂದಿಗೆ ಪ್ರಾರಂಭವಾದರೂ, ಸ್ಥಳಾವಕಾಶದ ಕೊರತೆಯಿಂದ ಕೆಲವು ಚಿತ್ರಗಳ ತುಣುಕುಗಳನ್ನು ಕೈಬಿಡಲಾಗಿದೆ.

೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಲಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.

ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು.

ರಾಜ್‌ಕುಮಾರ್ ಅವರ ನೂರೈವತ್ತನೇ ಚಿತ್ರ, ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.

೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ. ಇದೇ ವರ್ಷ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು.

೧೯೭೫ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.

೧೯೭೭ರಲ್ಲಿ ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ, ಡಾ.ರಾಜ್ ಶಹನಾಯಿ ವಾದಕರಾಗಿ ಅಭಿನಯಿಸಿದರು. ಈ ಚಿತ್ರಕ್ಕೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ನುಡಿಸಿದವರು ಭಾರತದ ಪ್ರಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ ಡಾ.ರಾಜ್ ಅಭಿನಯಿಸಿದ್ದಾರೆ.

೧೯೮೦ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆಕಂಡವು. ಇದೇ ಅವಧಿಯಲ್ಲಿ ಡಾ.ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್ ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ.ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ.ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ.

೧೯೮೩ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ.ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ.ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ.

ಡಾ.ರಾಜ್ ಅವರ ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿಯವರು ಡಾ.ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ.

ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ.ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು. ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್ ಅಭಿನಯಿಸಿದರು.

ಡಾ.ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ ೨೦೦೦ರಲ್ಲಿ ತೆರೆಕಂಡ ಶಬ್ದವೇದಿ. ಭಕ್ತ ಅಂಬರೀಶ ಎಂಬ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲವನ್ನು ರಾಜ್ ಹಲವಾರು ಬಾರಿ ವ್ಯಕ್ತಪಡಿಸಿದ್ದರಾದರೂ
ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ಬೆಳ್ಳಿತೆರೆಯ ಮೇಲೆ ಡಾ.ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‌ಕುಮಾರ್ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ.

ಸುಮಾರು ೨೦೬ ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿರುವ ರಾಜ್ ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ,ಅವೆಂದರೆ “ಅಣ್ಣ ತಂಗಿ”,”ಮುರಿಯದ ಮನೆ”,”ವಾಸಲ್ಯ”,”ಮನಸಾಕ್ಷಿ”,”ಬಾಳ ಬಂದನ”,”ನನ್ನ ತಮ್ಮ”,”ಭಾಗ್ಯವಂತರು”,”ಅಪೂರ್ವ ಸಂಗಮ” ಮುಂತಾದವುಗಳು,ಅಲ್ಲಿಯೂ ಅವರು ಮೂಲ ನಟರನ್ನು ಅನುಕರಿಸದೆ ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ,”ನಮನ ”  – ರವಿ ಕೋಲಾರ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: