ನಾಲ್ಕು ಜನರ ಮನಸ್ಸಲ್ಲಿ ಉಳಿಯುವಂತಹ ವ್ಯಕ್ತಿ ನೀವಾಗಿರಿ

ಅಭಿಮಾನಿಗಳಿಂದ ಪ್ರೀತಿಯಿಂದ ಅಪ್ಪಾಜಿ ಎಂದು ಕರೆಸಿಕೊಳ್ಳುತ್ತಿದ್ದ ರಾಜ್ ನಟನೆ ಮಾತ್ರವಲ್ಲದೆ ತಮ್ಮ ಸರಳ ಬದುಕಿನಿಂದಲೂ ಹೆಸರಾದವರು. ಮಗುವಿನಂತ ಮುಗ್ದತೆ, ನಿರ್ಮಲವಾದ ಮನಸ್ಸು, ಅಭಿಮಾನಿಗಳನ್ನು ದೇವರೆಂದು ಕರೆಯುವ ಆತ್ಮೀಯತೆ ಇವೆಲ್ಲ ಅವರ ಹೆಸರಿನೊಂದಿಗೆ ಅಂಟಿಕೊಂಡು ಬಂದಿವೆ.

ನುಡಿದಂತೆ ನಡೆಯುತ್ತಿದ್ದ ಈ ಬಂಗಾರದ ಮನುಷ್ಯನಿಗೆ ತೆರೆಯ ಮೇಲಿನ ಅಭಿನಯ, ಬದುಕು ಎರಡೂ ಒಂದೇ ಆಗಿತ್ತು. ಅಷ್ಟರ ಮಟ್ಟಿಗಿನ ಸಹಜ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳ ಕಾಲ ವಿಜೃಂಭಿಸಿದವರು. ಯೋಗದ ನಾನಾ ಪಟ್ಟುಗಳ ಮೂಲಕ ದೇಹವನ್ನು ಹುರಿಗೊಳಿಸಿಕೊಂಡು, ವಯಸ್ಸು ಎಪ್ಪತ್ತಾದರೂ ನಾಯಕರಾಗೇ ಮಿಂಚಿದವರು. ಮಾಂಸ ಅಂದರೆ ಬಿಡದೆ ಚಪ್ಪರಿಸುತ್ತಿದ್ದ ಅಣ್ಣಾವ್ರು, ಅಯ್ಯಪ್ಪನ ಪರಮ ಭಕ್ತರೂ ಹೌದು. ವರ್ಷಕ್ಕೊಮ್ಮೆ ತಪ್ಪದೇ ಶಬರಿಮಲೆ ಏರುತ್ತಿದ್ದ ಅವರು ಎಂದೂ ಸಿಗರೇಟು ಮುಟ್ಟಲಿಲ್ಲ, ಮದ್ಯ ಕುಡಿಯಲಿಲ್ಲ. ಸಹನಟ, ನಟಿಯರ ಜೊತೆ ಅವರ ಔದಾರ್ಯದ ವರ್ತನೆಯನ್ನು ಈಗಲೂ ಸ್ಮರಿಸುವವರುಂಟು.

ಈಗ ತಮಿಳುನಾಡಿನಲ್ಲಿರುವ ಗಾಜನೂರಿನಲ್ಲಿ 1928 ರ ಏಪ್ರಿಲ್ 24 ರಂದು ಜನಿಸಿದ ಮುತ್ತುರಾಜ್, 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ರಾಜ್‌ಕುಮಾರ್ ಆಗಿ ಹೆಸರು ಬದಲಿಸಿಕೊಂಡರು. ಅಲ್ಲಿಂದ ಕೇವಲ ಕನ್ನಡ ಚಿತ್ರರಂಗಕ್ಕಷ್ಟೆ ತಮ್ಮನ್ನು ಮುಡುಪಾಗಿಟ್ಟ ಅವರು ಇದುವರೆಗೆ ಅಭಿನಯಿಸಿರುವ ಚಿತ್ರಗಳ ಸಂಖ್ಯೆ ಬರೋಬ್ಬರಿ 206.

ಆಡುಮುಟ್ಟಿದ ಸೊಪ್ಪಿಲ್ಲ ಎನ್ನುವಂತೆ ರಾಜ್ ಮಾಡದ ಪಾತ್ರವೇ ಇಲ್ಲ ಅಂತ ಅಭಿಮಾನಿಗಳು ಹೊಗಳೋದು ಉತ್ಪ್ರೇಕ್ಷೆ ಏನಲ್ಲ. ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಣ್ಣಪ್ಪನಾಗಿ, ಬಬ್ರುವಾಹನ ಚಿತ್ರದಲ್ಲಿ ಅರ್ಜುನ ಬಬ್ರುವಾಹನ ಇಬ್ಬರೂ ಆಗಿ, ಭಕ್ತ ಪ್ರಹ್ಲಾದದಲ್ಲಿ ಎದೆ ನಡುಗಿಸುವ ದರ್ಪದ ಹಿರಣ್ಯ ಕಶ್ಯಪನಾಗಿ, ಸತ್ಯ ಹರಿಶ್ಚಂದ್ರದಲ್ಲಿ ಕೋಲು ಹಿಡಿದು ಮಸಣ ಕಾಯುವ ಹರಿಶ್ಚಂದ್ರನಾಗಿ, ಭಕ್ತಿಗೆ ಹೆಸರಾದ ಭಕ್ತ ಕುಂಬಾರನಾಗಿ, ಮುಂತಾದ ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ ಅಣ್ಣಾವ್ರಿಗೆ ಅವರೇ ಸಾಟಿ. ಇನ್ನೊಂದೆಡೆ ಕವಿರತ್ನ ಕಾಳಿದಾಸ, ಮಯೂರ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವರಾಯ ಚಿತ್ರದಂತಹ ಐತಿಹಾಸಿಕ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಸಾಮಾಜಿಕ ಪಾತ್ರಗಳಲ್ಲಂತೂ ಅವರ ಅಭಿನಯದ ಬಗ್ಗೆ ಮರು ಮಾತೇ ಇಲ್ಲ. ಮೇಯರ್ ಮುತ್ತಣ್ಣ, ಸಂಪತ್ತಿಗೆ ಸವಾಲ್, ಶಂಕರ್ ಗುರು, ತ್ರಿಮೂರ್ತಿಯಿಂದಿಡಿದು ಆಕಸ್ಮಿಕ, ಜೀವನಚೈತ್ರ ಚಿತ್ರಗಳ ತನಕ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿದವರು. ಕನ್ನಡದ ಸಾರ್ವಕಾಲಿಕ ದಾಖಲೆಯ ಚಿತ್ರಗಳಲ್ಲಿ ಒಂದಾದ ದೇವತಾ ಮನುಷ್ಯ ರಾಜ್ ಅಭಿನಯದ ಇನ್ನೂರನೇ ಚಿತ್ರ.

ಹೈಸ್ಕೂಲು ಮೆಟ್ಟಿಲನ್ನೂ ಹತ್ತದ ರಾಜ್ ಕನ್ನಡದಲ್ಲಿ ಬಾಂಡ್ ಮಾದರಿಯ ಸಿನಿಮಾಗಳಿಗೆ ನಾಯಕರಾದವರು. ಗೋವಾದಲ್ಲಿ ಸಿಐಡಿ 999, ಆಪರೇಶನ್ ಡೈಮಂಡ್ ರಾಕೆಟ್ ಚಿತ್ರಗಳು ಕನ್ನಡ ಚಿತ್ರರಂಗದ ಮೈಲುಗಲ್ಲಾಗಲೂ ಇವರ ಅಭಿನಯದ ಪಾಲು ಅಪಾರ.
ಇನ್ನೊಂದೆಡೆ ತಮ್ಮ ಕೋಗಿಲೆಯಂಥ ಕಂಠದಿಂದಲೂ ಖ್ಯಾತಿಯಾದ ಗಾನ ಗಂಧರ್ವ, ತಮ್ಮದೇ ಚಿತ್ರ ಸಂಪತ್ತಿಗೆ ಸವಾಲ್ ಮೂಲಕ ಗಾಯನ ಕ್ಷೇತ್ರಕ್ಕೂ ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡವರು. ‘ಯಾರೇ ಕೂಗಾಡಲಿ, ಊರೇ ಹೋರಾಡಲಿ..’ ಹಾಡು ಅವರ ಕಂಠದಿಂದ ಹೊರಬಂದ ಮೊದಲ ಗೀತೆ. ಜೀವನ ಚೈತ್ರ ಚಿತ್ರದ ‘ನಾದಮಯ ಈ ಲೋಕವೆಲ್ಲ’ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡವರು. ಬಳಿಕ ಹತ್ತಾರು ಚಿತ್ರಗಳಿಗೆ ಹಾಡಿದಲ್ಲದೆ, ಅನೇಕ ಭಕ್ತಿಗೀತೆಗಳ ಕ್ಯಾಸೆಟ್‌ಗಳನ್ನೂ ಹೊರತಂದರು.

ಪ್ರೈಮರಿ ಸ್ಕೂಲ್ ಮೆಟ್ಟಿಲು ಹತ್ತಲಷ್ಟೆ ಸಾಧ್ಯವಾಗಿದ್ದ ರಾಜ್ , ತಮ್ಮ ಚಿತ್ರಗಳಲ್ಲಿ ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಿದ್ದುದ್ದು, ಅಷ್ಟೇ ಏಕೆ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕ್ಲಿಷ್ಟವಾದ ಸಂಸ್ಕೃತ ಶ್ಲೋಕಗಳನ್ನು ಶುಶ್ರಾವ್ಯವಾಗಿ ಹಾಡಿ ಸೈ ಎನಿಸಿಕೊಂಡದ್ದು ವಿಸ್ಮಯವೇ ಸರಿ.
ಗೋಕಾಕ್ ಚಳುವಳಿ ಸಂದರ್ಭ ಕನ್ನಡ ನಾಡು ನುಡಿಗಾಗಿ ಹೆಗಲು ಕೊಟ್ಟು ನಿಂತ ಅಪ್ಪಾಜಿ ಸಮಾಜಸೇವೆಗೂ ತಮ್ಮನ್ನು ತೆರದುಕೊಂಡವರು. ಇಂತಿಪ್ಪ ರಾಜಣ್ಣರಿಗೆ ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ರಾಜ್, ಡಾ.ರಾಜ್ ಆದರು. ಅತ್ಯುತ್ತಮ ಅಭಿನಯಕ್ಕಾಗಿ ಹತ್ತು ಬಾರಿ ಫಿಲ್ಮಂಫೇರ್ ಪ್ರಶಸ್ತಿ ಪಡೆಯುವ ಮೂಲಕ ಭಾರತ ಚಿತ್ರರಂಗದಲ್ಲಿಯೇ ಅತಿಹೆಚ್ಚು ಬಾರಿ ಈ ಪ್ರಶಸ್ತಿ ಗಿಟ್ಟಿಸಿದ ಎರಡನೇ ನಟರಾಗಿದ್ದರು. ಕರ್ನಾಟಕ ರತ್ನ, ಪದ್ಮ ಭೂಷಣ ಪ್ರಶಸ್ತಿಗಳ ಜೊತೆಗೆ, ಭಾರತೀಯ ಚಿತ್ರರಂಗದ ಪರಮೋಚ್ಛ

ಪ್ರಶಸ್ತಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗರು.
ರಾಜ್ ತಮ್ಮ ಕಡೆಯ ಚಿತ್ರ ಶಬ್ದವೇಧಿಯಲ್ಲಿ ಅಭಿನಯಿಸುವ ಹೊತ್ತಿಗಾಗಲೇ ಅವರ ವಯಸ್ಸು ಎಪ್ಪತ್ತು ದಾಟಿತ್ತು. ಬಳಿಕ ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿ ಕಾಡಿನಲ್ಲಿ ಅಲೆದದ್ದು, ಆಮೇಲೆ ಆರೋಗ್ಯ ಹದಗೆಟ್ಟಿದ್ದು ಎಲ್ಲದರ ನಡುವೆ 2006 ರ ಏಪ್ರಿಲ್ 12 ರಂದು ವಿಧಿವಶರಾದಾಗ ಅಣ್ಣಾವ್ರಿಗೆ 77 ವರ್ಷ ವಯಸ್ಸು. ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ 6 ವರ್ಷವಾಗಿದೆ. ನಾವೆಲ್ಲ ಸೇರಿ ಅಣ್ಣಾವ್ರು ಮತ್ತೆ ಹುಟ್ಟಿಬರಲಿ ಎಂಬ ಭಾವನೆಯಿಂದ ಸ್ಮರಿಸೋಣ….. – ನಿಮ್ಮ ಹರೀಶ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: