ಅಂಬೇಡ್ಕರ್

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಜನಿಸಿದ ಅಂಬೇಡ್ಕರರು, 1908 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ, ಅಸ್ಪೃಶ್ಯವಾಗಿದ್ದ ಅವರ ಸಮಾಜದಲ್ಲಿ ಮೊದಲನೆಯವರು ಎಂಬ ಹೆಗ್ಗಳಿಕೆಯನ್ನು ಸಂಪಾದಿಸಿದರು. ಅವರ ಓದು ಕೇವಲ ಇಲ್ಲಿಗೆ ಸೀಮಿತವಾಗಲಿಲ್ಲ. ನಾಲ್ಕು ವರ್ಷಗಳ ನಂತರ ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥ ಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಅವರು ಬಿ.ಎ. ಪದವಿ ಸಂಪಾದಿಸಿದರು. ನಂತರ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿ ನಂತರ ಪಿಎಚ…್.ಡಿ ಪದವಿಯನ್ನು ಸಹ ಗಳಿಸಿದ್ದು ಅವರ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಇದಷ್ಟೇ ಅಲ್ಲ 1952 ರವರೆಗೆ ದೇಶ ವಿದೇಶಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಲ್ಲದೇ, ಹಲವು ಪದವಿಗಳನ್ನು ಗಳಿಸಿದ್ದು ಅಂಬೇಡ್ಕರ್‌ರ ಮಹಾನ್ ಸಾಧನೆಯೆಂದೇ ಹೇಳಬೇಕು.

ಭಾರತಕ್ಕೆ ಮರಳಿದ ಅಂಬೇಡ್ಕರ್ ಮುಂಬಯಿನಲ್ಲಿ ಬೋಧನಾ ವೃತ್ತಿಯನ್ನು ಆರಂಭಿಸಿದರು. ಈ ಜೊತೆಗೆ ವಕೀಲಿ ವೃತ್ತಿ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್‌ನ ಸದಸ್ಯತ್ವದ ಕಾರ್ಯ ಜೊತೆಗೆ ವೃತ್ತ ಪತ್ರಿಕೆಗಳನ್ನು ಸಹ ಅವರು ಆರಂಭಿಸಿದರು. ಲಂಡನಿನಲ್ಲಿ ಭಾರತದ ಭವಿಷ್ಯದ ಸಂವಿಧಾನದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಏರ್ಪಡಿಸಲಾಗಿದ್ದ ಮೂರು ದಿನಗಳ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಅಂಬೇಡ್ಕರ್, ಮಹತ್ವಪೂರ್ಣ ಸಲಹೆಗಳನ್ನು ನೀಡಿದರು. ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ಮತ್ತು ಅವರ ಜೀವನ ಮಟ್ಟ ಸುಧಾರಿಸಲು ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡುವ ಉದ್ದೇಶದಿಂದ “ಬಹಿಷ್ಕೃತ ಹಿತಕಾರಣೀ ಸಭಾ” ಎಂಬ ಕಲ್ಯಾಣ ಸಂಸ್ಥೆಯನ್ನು ಸಹ ಹುಟ್ಟು ಹಾಕುವಲ್ಲಿ ಅಂಬೇಡ್ಕರ್ ಅವರು ಮಹತ್ವಪೂರ್ಣವಾದ ಪಾತ್ರವನ್ನು ವಹಿಸಿದರು.

ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರ್ ಅವರು ಮಾಡಿದ ಅಹಿಂಸಾತ್ಮಕ ಹೋರಾಟಗಳು ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಪ್ರತ್ಯೇಕ ಚುನಾವಣಾ ಕ್ಷೇತ್ರ, ಹೀಗೇ ಇನ್ನೂ ಹತ್ತು ಹಲವು ಸೌಲಭ್ಯಗಳ ಕುರಿತಂತೆ ದಲಿತರ ಪರವಾಗಿ ಅಹಿಂಸಾತ್ಮಕ ಆಂದೋಲನಗಳ ನೇತೃತ್ವವನ್ನು ಅವರು ವಹಿಸಿದ್ದರು. ಅವರ ಈ ಹೋರಾಟದ ಪರಿಣಾಮ ಆಗ ಅವರು ಮಹಾತ್ಮಾ ಗಾಂಧಿ ಹಾಗೂ ಪ್ರಭಾವಿ ಕಾಂಗ್ರೆಸ್‌ನ ದ್ವೇಷವನ್ನು ಕಟ್ಟುಕೊಳ್ಳಬೇಕಾಗಿ ಬಂದರೂ, ಎದೆಗುಂದದೇ ಹೋರಾಟ ನಡೆಸಿದ್ದು ಅಂಬೇಡ್ಕರ್ ಅವರ ಮನಸ್ಥೈರ್ಯಕ್ಕೆ ಸಾಕ್ಷಿ.

ತಮ್ಮದೇ ಆದ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿ 1935ರ ಪ್ರಾಂತೀಯ ಚುನಾವಣೆಯಲ್ಲಿ ಜಯಶೀಲರಾದರು. ರಕ್ಷಣಾ ಸಲಹಾ ಸಮಿತಿಯ ಸದಸ್ಯ, ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ಕಾರ್ಮಿಕ ಸದಸ್ಯರಾಗಿದ್ದು ಅವರ ರಾಜಕೀಯ ಜೀವನದ ಕೆಲವು ಮಹತ್ವಪೂರ್ಣ ಘಟನಾವಳಿಗಳು. ಇವಲ್ಲಕ್ಕಿಂತ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ನಾವು ನೆನಪಿಸಿಕೊಳ್ಳಬೇಕಾಗಿರುವುದು ನಮ್ಮ ಸಂವಿಧಾನದ ರಚನಾಕಾರರಾಗಿ. 1947 ರಲ್ಲಿ ಭಾರತ ಸ್ವತಂತ್ರವಾದಾಗ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನವಿತ್ತರು. ಕೆಲ ವಾರಗಳ ನಂತರ ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿದಾಗ, ಆ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು. ಇಂತಹ ಹೊಣೆಗಾರಿಕೆಯ, ಬೃಹತ್ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ ಸಂಪೂರ್ಣ ಹೆಗ್ಗಳಿಕೆ ಅಂಬೇಡ್ಕರರಿಗೆ ಸಲ್ಲಬೇಕು. ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿರುವ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ಹಾಗೂ ಅಂಬೇಡ್ಕರರ ಕೊಡುಗೆಯನ್ನು ಇಂದಿಗೂ ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ.

ಅನಾರೋಗ್ಯವಿದ್ದಾಗ್ಯೂ, 1948ರ ಆರಂಭದಲ್ಲಿ ಸಂವಿಧಾನ ರಚನೆಯ ಮಹತ್ವಪೂರ್ಣ ಜವಾಬ್ದಾರಿಯನ್ನು ಬಹುತೇಕ ಒಬ್ಬಂಟಿಯಾಗಿ ಮಾಡಿದ ಅಂಬೇಡ್ಕರರು, ಅದೇ ವರ್ಷದ ಕೊನೆಯಲ್ಲಿ ಪೂರ್ಣಗೊಳಿಸಿ, ಸಂಸತ್ತಿನಲ್ಲಿ ಮಂಡಿಸಿದರು. ಕೆಲವೇ ಕೆಲವು ತಿದ್ದುಪಡಿಯೊಂದಿಗೆ ಸಂಸತ್ತಿನ ಪೂರ್ಣ ಅಂಗೀಕಾರವನ್ನು ಇದು ಪಡೆಯಿತು. ಸಂವಿಧಾನ ರಚನೆಯಂತಹ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿದ ಅಂಬೇಡ್ಕರ್ ಅವರ ಹೆಸರು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ.

“ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ” ಎಂದು ಘೋಷಿಸಿ, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಅವರ ಜೀವನದ ಮತ್ತೊಂದು ಮಹತ್ವಪೂರ್ಣ ಘಟ್ಟ. ಅಸ್ಪೃಶ್ಯರಿಗೆ ಇಲ್ಲಿ ಏಳಿಗೆಯಿಲ್ಲ ಎನ್ನುವ ಮನೋಭಾವವನ್ನು ಹೊಂದಿದ್ದ ಅಂಬೇಡ್ಕರ್ ಅವರು ಬೌದ್ಧ ಧರ್ಮವೇ ಅತ್ಯಂತ ಸೂಕ್ತ ಎಂದು ನಿರ್ಣಯಿಸಿದ್ದರು. ದೇಶ ವಿದೇಶಗಳಲ್ಲಿ ನಡೆದ ಅನೇಕ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದ ಅಂಬೇಡ್ಕರ್, ಅನೇಕ ಕೃತಿಗಳನ್ನು ಸಹ ರಚಿಸಿದ್ದಾರೆ. 1956 ರಲ್ಲಿ ನಾಗಪುರದಲ್ಲಿ ತಾವೂ ಬೌದ್ಧ ಧರ್ಮ ಸ್ವೀಕರಿಸಿದ್ದೇ ಅಲ್ಲದೇ ತಮ್ಮ ಕರೆಗೆ ಓಗೊಟ್ಟು ಬಂದಿದ್ದ ಸುಮಾರು ಮೂರುವರೆ ಲಕ್ಷ ಜನರಿಗೆ ಬೌದ್ಧ ಧರ್ಮದ ದೀಕ್ಷೆ ಕೊಟ್ಟಿದ್ದು ಅವರ ಜೀವನದ ಪ್ರಮುಖ ಘಟನಾವಳಿಗಳಲ್ಲಿ ಒಂದು. ಬಹುಶಃ ಭಾರತದಲ್ಲಿ ಸಾಮ್ರಾಟ ಅಶೋಕನ ನಂತರ ಬೌದ್ಧ ಧರ್ಮದ ಪ್ರಚಾರವನ್ನು ಮಾಡಿದ್ದು ಅಂಬೇಡ್ಕರ್ ಅವರೇ ಎಂಬುದು ಗಮನಿಸಬೇಕಾದ ಅಂಶಗಳಲ್ಲೊಂದು. 1956 ರ ಡಿಸೆಂಬರ್ 6 ರಂದು ಅಂಬೇಡ್ಕರ್ ಅವರು ನಿಧನರಾದರು. ಭಾರತದ ಮಹಾನ್ ಚೇತನವೊಂದು ಅಂದು ಕಣ್ಮರೆಯಾಯಿತು.

ಭಾರತದ ಸಂವಿಧಾನದ ರಚನಾಕಾರರಾಗಿ ಅಲ್ಲದೆ, ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರರು ಮಾಡಿದ ಅಹಿಂಸಾತ್ಮಕ ಹೋರಾಟಗಳು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಅವರ ಪರವಾಗಿನ ಧ್ವನಿಯಾಗಿ ನಿಂತಿದ್ದು ಅವರ ಸಾಧನೆಯ ಮೈಲಿಗಲ್ಲು. ಡಾ. ಅಂಬೇಡ್ಕರ ಅವರು ಹೇಳಿದ ಒಂದು ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. ಇದು ಗ್ರೀಕ್ ಪುರಾಣದಲ್ಲಿ ಬರುವ ಕತೆ.
ಡಿಮೇಟರ್ ಹೆಸರಿನ ದೇವತೆಯೊಬ್ಬಾಕೆ ಮನುಷ್ಯರೂಪ ಧರಿಸಿ ಭೂಮಿಗೆ ಬಂದಳು. ಆಕೆಯನ್ನು ಅಲ್ಲಿಯ ರಾಣಿಯೊಬ್ಬಳು ದಾಸಿಯನ್ನಾಗಿ ಇಟ್ಟುಕೊಂಡು ತನ್ನ ಬಾಲಕ ಮಗನ ಉಸ್ತುವಾರಿ ನೋಡಿಕೊಂಡಿರಲು ಹೇಳಿದಳು. ರಾಣಿಯ ಆ ಮಗನನ್ನು ‘ದೇವ’ನನ್ನಾಗಿಸಬೇಕು ಎಂಬ ಹಂಬಲ ಆ ದೇವತೆಗೆ ಉಂಟಾಯಿತು. ಹೀಗಾಗಿ ಆಕೆ ದಿನವೂ ರಾತ್ರಿ ಎಲ್ಲರೂ ಮಲಗಿಕೊಂಡ ಮೇಲೆ ಎಲ್ಲ ಬಾಗಿಲು-ಕಿಟಕಿಗಳನ್ನು ಮುಚ್ಚುತ್ತಿದ್ದಳು. ತೊಟ್ಟಿಲಲ್ಲಿ ಮಲಗಿದ ಮಗುವನ್ನು ಹೊರತೆಗೆದು, ಅದರ ಮೈಮೇಲಿನ ಬಟ್ಟೆಗಳನ್ನೆಲ್ಲ ಬಿಚ್ಚಿ ಹಾಕಿ ಬಿಸಿ ಬೂದಿಯ ಮೇಲೆ ಒಂದಿಷ್ಟು ಕಾಲ ಆ ಮಗುವನ್ನು ಮಲಗಿಸುತ್ತಿದ್ದಳು ! ಕ್ರಮೇಣ ಬೆಂಕಿಯ ಬಿಸಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಆ ಮಗುವಿಗೆ ಬಂತು. ಅದರ ಬಲ ವೃದ್ಧಿಸತೊಡಗಿತು. ಆ ಮಗುವಿನಲ್ಲಿ ಅತ್ಯಂತ ತೇಜಸ್ವಿಯಾದ ದೈವೀ ಅಂಶ ವಿಕಸಿತವಾಗತೊಡಗಿತ್ತು. ಆದರೆ ಒಂದು ರಾತ್ರಿ ಆ ಮಗುವಿನ ತಾಯಿ ರಾಣಿ ಅಚಾನಕ್ಕಾಗಿ ಆ ಕೋಣೆಯನ್ನು ಹೊಕ್ಕಳು. ಅಲ್ಲಿ ನಡೆಯುತ್ತಿದ್ದುದ್ದನ್ನೆಲ್ಲ ಕಣ್ಣಾರೆ ಕಂಡ ಆಕೆ ತುಂಬ ನೊಂದುಕೊಂಡಳು. ಆಕೆ ತಕ್ಷಣ ತನ್ನ ಮಗುವನ್ನು ಒಲೆಯ ಮೇಲಿನಿಂದ ಎತ್ತಿ ಎದೆಗವಚಿಕೊಂಡಳು. ಆ ರಾಣಿಗೆ ಆಕೆಯ ಮಗುವೇನೋ ದೊರೆಯಿತು. ಆದರೆ ಸಾಮರ್ಥ್ಯಶಾಲಿ ದೇವನಾಗಬೇಕಿದ್ದ ದೇವನನ್ನೇ ಆಕೆ ಕಳೆದುಕೊಂಡಳು ….. !
ಈ ಕತೆಯ ತಾತ್ಪರ್ಯ ಇಷ್ಟೆ ; ಕುಲುಮೆಯಲ್ಲಿ ಕಾಯದೆ ದೇವತನ ಬರುವುದಿಲ್ಲ. ಬೆಂಕಿ, ಮನುಷ್ಯನನ್ನು ಶುದ್ಧಿಗೊಳಿಸುತ್ತದೆ ಮತ್ತು ಮನುಷ್ಯನಲ್ಲಿ ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಅಸ್ಪೃಶ್ಯ ಎನಿಸಿಕೊಂಡಿರುವವರು ಕಡುಕಷ್ಟ ಮತ್ತು ತ್ಯಾಗದ ಅಗ್ನಿದಿವ್ಯ ಸಹಿಸದೇ ಉದ್ಧಾರವಾಗಲಾರರು. ನೀವು ನಿಮ್ಮನ್ನು ಅಸ್ಪೃಶ್ಯ, ಕೀಳು ಎಂದುಕೊಳ್ಳಬೇಡಿ. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ. ‘ಮಗನಾಗಬೇಕು ತೇಜ ; ಮೂರು ಲೋಕದಲ್ಲೂ ಇರಬೇಕು ಆತನದೇ ಧ್ವಜ’ ಎಂಬ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು ಇನ್ನುಮುಂದೆ ನಮ್ಮ ಮಕ್ಕಳನ್ನು ಬೆಳೆಸಬೇಕು. ಅದರಲ್ಲೇ ನಮ್ಮ ಉದ್ಧಾರವಿದೆ. ಇಷ್ಟು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ”

– Ravi Kolar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: