ಮನುಷ್ಯ – ಪ್ರಕೃತಿ

ಮನುಷ್ಯ ಬುದ್ಧಿವಂತ, ವಿವೇಕವಿದೆ ಬುದ್ಧಿ ಕಲಿತು ಈ ಪ್ರಪಂಚವನ್ನೇ ತನ್ನದಾಗಿಸಿಕೊಂಡಿದ್ದಾನೆ. ಅತೀ ಕಡಿಮೆ ಅವಧಿಯಲ್ಲಿ ಪ್ರಪಂಚವನ್ನು ಸುತ್ತಬಲ್ಲ, ವೈಜ್ಙಾನಿಕ ಪ್ರಗತಿ, ಯಂತ್ರಗಳ ಆವಿಷ್ಕಾರ, ವಿದ್ಯತ್, ಮೊಬೈಲ್, ಕಂಪ್ಯೂಟರ್, ಔಷಧಿ, ಆರೋಗ್ಯ, ಸುಖ-ಸಾಧನಗಳು ಹೀಗೆ ತನಗೆ ಬೇಕಾದ ಎಲ್ಲಾ ರಂಗಗಳಲ್ಲೂ ಪ್ರಗತಿ ಸಾಧಿಸಿದ ಜೀವಕೋಟಿಗಳಲ್ಲಿ ಅಪ್ರತಿಮನೆನಿಸಿದ ಶಹಬ್ಬಾಶ್ ಗಿರಿ ಮನುಷ್ಯನಿಗೆ ಸಲ್ಲುತ್ತದೆ.

ಆಲೋಚನಾ ಸಾಮರ್ಥ್ಯವಿದೆ, ಎಲ್ಲಾ ಜೀವಕೋಟಿಗಳಮೇಲೆ, ಸ್ಥಿರ – ಚರ ವಸ್ತುಗಳ ಮೇಲೆ, ಪ್ರಕೃತಿ, ಭೂಮಿ ಮಾತ್ರವಲ್ಲ ಚಂದ್ರ – ಮಂಗಳ ಮುಂತಾದ ಗ್ರಹಗಳ ಮೇಲೂ ಹತೋಟಿಯನ್ನು ಸಾಧಿಸಲು ಹೊರಟ ಮನುಷ್ಯ ತಾನೇ ಬುದ್ಧಿವಂತನೆಂದು ಸ್ವಯಂತ್ಥಾಪಿತ ತಿಳುವಳಿಕೆಯೋಂದಿಗೆ ಈ ಪ್ರಕೃತಿಯ ಸಮತೋಲನದ ಅಡಿಗಲ್ಲನ್ನೇ ಅಲುಗಾಡಿಸಲು ಹೊರಟಿದ್ದಾನೆಂದರೆ ತಪ್ಪಾಗಲಿಕ್ಕಿಲ್ಲ. ಪರಿಸರ ನಾಶವಾಗುತ್ತಿರುವುದು ಮನುಷ್ಯನಿಂದಲ್ಲದೆ ಇತರ ಯಾವುದೇ ಪ್ರಾಣಿಗಳಿಂದಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಗಿಡ ಮರಗಳ ನಾಶ, ನೀರು, ಗಾಳಿ ಹಾಗೂ ಪರಿಸರವನ್ನು ಮನುಷ್ಯ ಇಂದು ಹಾಳುಗೆಡಹುತ್ತಿದ್ದಾನೆ. ಇಂದಿನ ಈ ಪರಿಕಲ್ಪನೆ ಪಾಶ್ಚಾತ್ಯರದ್ದು. ಅವರ ಕಲ್ಪನೆಯಂತೆ ಈ ಭೂಮಿ, ಪ್ರಕೃತಿ ಮನುಷ್ಯನ ಭೋಗಕ್ಕಾಗಿ ಮಾತ್ರ ಮೀಸಲು. ಭಾರತೀಯ ಪರಿಕಲ್ಪನೆಯಂತೆ ಪ್ರಕೃತಿಯಲ್ಲಿ ಹುಟ್ಟಿದ ಸಕಲ ಜೀವರಾಶಿಗಳೂ ಸಮಾನ, ಈ ವಿಶ್ವದಲ್ಲಿ ಹುಟ್ಟಿದ ಗಿಡ-ಮರಗಳಿರಲಿ, ಸಣ್ಣ-ಪುಟ್ಟ, ಹಿರಿದು-ಕಿರಿದು ಎಂಬ ಬೇಧವಿಲ್ಲದೆ ಎಲ್ಲಾ ಜೀವಿಗಳಿಗೂ ಈ ಪ್ರಕೃತಿಯಲ್ಲಿ ಸ್ವಚ್ಛಂದವಾಗಿ ಜೀವಿಸುವ ಹಕ್ಕಿರುತ್ತದೆ.

ಋಷಿ-ಮುನಿಗಳ ಕಾಲದಿಂದಲೂ ಮಾತ್ರವಲ್ಲ, ಇತ್ತೀಚಿನ ಕಾಲದವರೆಗೂ “ಎಲ್ಲರೂ ಎಲ್ಲವೂ ಸಮಾನ” ಈ ತತ್ವದ ಮೇಲೆಯೇ ನಮ್ಮ ಭಾರತೀಯ ಜೀವನ ಪದ್ಧತಿ ನಡೆಯುತ್ತಿತ್ತು. ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಬೌದ್ಧಿಕ ದಿವಾಳಿತನದತ್ತ ೀ ಭಾರತೀಯತೆ ವಾಲಿ ಬಿದ್ದು ನರಳುತ್ತಿದೆ. ನಮ್ಮತನ ಇಂದು ನಗೆಪಾಟಲಿಗೀಡಾಗುವ ದುರ್ಗತಿ ಬಂದಿದೆ…. ನೋಡಿ …ಸ್ವಲ್ಪ ಯೋಚಿಸಿ..

ತಾನೊಬ್ಬನೇ ಬುದ್ಧಿವಂತ ಎಂದು ಕೊಂಡು, ಇತರೆಲ್ಲ ಜೀವಿಗಳ ಮೇಲೆ ಹತೋಟಿಗಿಳಿದಿದೆ ಈ ಮಾನವ ಪ್ರಾಣಿ. (ಪ್ರಾಣಿ ಎಂಬ ಸತ್ಯವನ್ನು ಒಪ್ಪಲೂ ಆತ ತಯಾರಿಲ್ಲ) ಪ್ರಕೃತಿಯ ಮೇಲೆ ಆಕ್ರಮಣ, ಅತಿಕ್ರಮಣದಿಂದ ಪ್ರಕೃತಿ ತನ್ನ ಸಮತೋಲನ ವನ್ನೇ ಕಳೆದುಕೊಳ್ಳುವಂತಾಗಿದೆ. ಕಾಲಕಾಲಕ್ಕೆ ಬರುತ್ತದ್ದ ಮಳೆ ಇಂದು ಎಂದೋ ಸುರಿದು, ಅತಿವೃಷ್ಟಿ ಅನಾವೃಷ್ಟಿ ಬರಗಾಲಕ್ಕೆ ಕಾರಣವಾಗಿದೆ. ಸಹಜವಾಗಿ ಬೆಳೆದ ಕಾಡು ಮರಗಳನ್ನು ಕಡಿದು, ತನ್ನ ುಪಯೋಗಕ್ಕೆ ಅಲ್ಪಾಯುಸ್ಸಿನ, ಪ್ರಕೃತಿಯ ಸಮತೋಲನ ತಪ್ಪಿಸುವ, ಮರಗಳು ಬೆಳೆಸಲ್ಪಟ್ಟು ಅವುಗಳ ಸೋಂಕಿನಿಂದ ಮನುಷ್ಯನೇ ನರಳುವಂತಾಗುತ್ತಿದೆ.

ಅಣು-ರೇಣು, ತೃಣ-ಕಾಷ್ಠ ಗಳಲ್ಲಿ ದೇವತ್ವವನ್ನು ಕಾಣುವ, ಪೂಜಿಸುವ ಮಾನಸಿಕತೆ ನಮ್ಮದು. ತುಳಸಿ, ಎಕ್ಕೆ, ಬಿಲ್ವಪತ್ರೆ, ಗರಿಕೆ, ದರ್ಬೆ ಮುಂತಾದವುಗಳಲ್ಲಿ ಹೂ, ಗಂಧ, ಗೋವು, ಮುಂತಾದ ಪ್ರಾಣಿಗಳಲ್ಲಿ ದೇವತ್ವವನ್ನು ಕಾಣುತ್ತೇವೆ. ಮೀನು, ಆಮೆ, ವರಾಹ, ಸಿಂಹ ಮುಂತಾದ ಪ್ರಾಣಿಗಳ ರೂಪದಲ್ಲೂ ದೇವರನ್ನು ಕಂಡಿದ್ದೇವೆ. ಆನೆ, ಕುದುರೆ, ಕೋತಿಗಳು, ಶಂಖದಂತಹ ಜೀವಿಗಳಲ್ಲೂ ದೇವರನ್ನು ಕಂಡಿರುವಂತಹ ಉದಾತ್ತ ಸಂಸ್ಕೃತಿ ನಮ್ಮದು. ನದಿಗಳೆಲ್ಲ ನಮಗೆ ಪವಿತ್ರ ಈ ಭೂಮಿಯ ಮಣ್ಣಿನ ಕಣ-ಕಣವೂ, ನೀರಿನ ಹನಿ-ಹನಿಯೂ ನಮಗೆ ಪವಿತ್ರ. ಆದ್ದರಿಂದಲೇ ನಾವು ಈ ಪ್ರಕೃತಿಯನ್ನು ಪ್ರೀತಿಸಿ, ಪೂಜಿಸಿ, ಬೆಳೆಸಿ ಉಳಿಸಿದ್ದೇವೆ. ಇಲ್ಲಿಯವರೆಗೆ ನಾವೂ ಉಳಿದಿದ್ದೇವೆ.

ಪ್ರಕೃತಿಯಲ್ಲಿರುವ ಪಂಚಭೂತಗಳಾದ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಗಳಿಂದಲೇ ಜೀವರಾಶಿಗಳ ಸೃಷ್ಟಿಯಾಗುತ್ತದೆ. ಸೃಷ್ಟಿಯಲ್ಲಿ ಒಂದಾಗಿ ಬೆಳೆದು ಪುನಃ ಬೇರ್ಪಟ್ಟು ಪ್ರಕೃತಿಯಲ್ಲಿ ಲೀನವಾದರೆ ಅದು “ಲಯ” ವೆನಿಸುತ್ತದೆ. ಬೀಜವೊಂದನ್ನು ಮೊಳಕೆ ಬರಿಸಲು ನೀರಿನಲ್ಲಿ ನೆನೆಸಿ, ಶಾಖ ಕೊಡಬೇಕು. ಮೊಳೆತ ಬೀಜವು ಗಿಡವಾಗಿ ಬೆಳೆದು, ಮರವಾಗಿ ಫಲ ಕೊಡಬೇಕಾದರೆ ಅದನ್ನು ಮಣ್ಣಿನಲ್ಲಿ ಬಿತ್ತಬೇಕು. ಗಾಳಿಯ ವೃದು ಸ್ಪರ್ಷದೊಂದಿಗೆ, ಆಕಾಶದ ಚಪ್ಪರದ ಅಡಿಯಲ್ಲಿ ಅದನ್ನು ಜೋಪಾನವಾಗಿ ಬೆಳೆಸಬೇಕು. ಪಂಚಭೂತಗಳ ಯಾವುದಾದರೊಂದು ಅಂಶವು ಅದಕ್ಕೆ ಲಭಿಸದಿದ್ದಲ್ಲಿ, ಅಥವಾ ಕೊರತೆಯಾದಲ್ಲಿ ಆ ಬೀಜವು ಮೊಳಕೆಯೊಡೆಯದು, ಮೊಳಕೆಯೊಡೆದರೂ ಗಿಡವಾಗದು, ಗಿಡವಾದರೂ ಫಲಕೊಡದು ಇದಂತೂ ಖಚಿತ.

“ಯಾವುದೇ ಒಂದು ವಸ್ತುವಿನ ರೂಪ ಬದಲಾಗಬಹುದೇ ವಿನಃ ಅದು ನಾಶವಾಗಲಾರದು” ಇದು ವಸ್ತು ಸ್ಥಿತಿ ನಿಯಮ. ಅದೇ ರೀತಿ “ಶಕ್ತಿಯನ್ನು ಪರಿವರ್ತಿಸಬಹುದೇ ಹೊರತು ನಾಶಮಾಡಲು ಸಾಧ್ಯವಿಲ್ಲ. ಹೀಗೆ ವೈಜ್ಙಾನಿಕ ತತ್ವಗಳೊಂದಿಗೆ ಹಾಸುಹೊಕ್ಕಾಗಿರುವ ನಮ್ಮ ಸಂಸ್ಕೃತಿಯು ನಮಗೆ ಪರಕೀಯವೆನಿಸುತ್ತಿದೆ. ನಾಗರೀಕತೆಯ ಸೋಗಿನಲ್ಲಿ ನಮ್ಮ ಪ್ರಾಚೀನ ವಿಚಾರ ಧಾರೆಗಳು ಅಧಃಪತನದ ದಾರಿ ಹಿಡಿದು ಮನುಷ್ಯ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಸಿದ್ಧಾಂತದ ಪ್ರತಿಪಾದಕನಾಗಿದ್ದಾನೆ.

ನಿಜವಾಗಿ ನೋಡಿದರೆ ಮನುಷ್ಯ ಅತ್ಯಂತ ದುರ್ಬಲ ಪ್ರಾಣಿ. ದನವೊಂದು ಕರುಹಾಕಿದಾಗ, ದನ ಅದನ್ನು ನೆಕ್ಕುತ್ತದೆ. ಹತ್ತು ಹದಿನೈದು ನಿಮಿಷಗಳಲ್ಲಿ ಕರು ಎದ್ದು ನಿಲ್ಲುತ್ತದೆ. ತಾಯಿಯ ಹಾಲನ್ನು ಕುಡಿದು ಬಾಲವೆತ್ತಿ ಛಂಗನೆ ನೆಗೆದು ಓಡಲು ಪ್ರಾರಂಭಿಸಿದರೆ ಅದನ್ನು ಹಿಡಿಯುವುದೇ ದೊಡ್ಡ ಸಾಹಸ. ಆದರೆ ಮನುಷ್ಯ ಹುಟ್ಟಿ ಬೆಳದು ನಿಂತು ನಡೆಯಬೇಕಾದರೆ ಒಂದು ವರ್ಷವೇ ಹಿಡಿಯುತ್ತದೆ. ಮನುಷ್ಯ ಆನೆಯನ್ನು ಹಿಡಿದು ಪಳಗಿಸಿದ್ದೇನೆ ಎಂದು ಬೀಗುತ್ತಾನೆ.. ಆದರೆ ಅದು ಅದರ ಸೌಜನ್ಯ ದಿಂದಷ್ಟೇ ಮನುಷ್ಯನಿಗೆ ವಿಧೇಯವಾಗಿರುತ್ತದೆ. ಅದು ಮನಸ್ಸು ಮಾಡಿದರೆ ಮನಷ್ಯ ಅದಕ್ಕೆ ಯಾವ ಲೆಕ್ಕ… ಪ್ರಾಣಿಗಳು ಮೋಜಿಗಾಗಿ ಎಂದೂ ಬೇಟೆಯಾಡುವುದಿಲ್ಲ. ಹಸಿವನ್ನು ಇಂಗಿಸಲು ಮಾತ್ರ ಮಾಂಸಾಹಾರಿಗಳು ಬೇಟೆಯಾಡುತ್ತವೆ. ಆದರೆ ಮನುಷ್ಯ ಮೋಜಿಗಾಗಿ, ಬಾಯಿಚಪಲಕ್ಕಾಗಿ ಯೂ ಬೇಟೆಯಾಡುತ್ತಾ,, ಇಂದಿಗೆ, ನಾಳೆಗೆ, ನಾಡಿದ್ದಿಗೆ, ಮಕ್ಕಳಿಗೆ, ಮರಿಮಕ್ಕಳಿಗೆ…ಹೀಗೆ ಜನ್ಮ-ಜನ್ಮಾಂತರಕ್ಕೂ ಸಾಕಾಗುವಷ್ಟು ಸೇರಿಸಿಡುವ ಸ್ವರ್ಥ ಮನೋಭಾವ ಉಳ್ಳವನಾಗಿದ್ದಾನೆ..ಆ ಪ್ರಾಣಿಗಳಾದರೋ ಹೊಟ್ಟೆ ತುಂಬಿದಮೇಲೆ ಯಾವುದೇಪ್ರಾಣಿಗೆ ತೊಂದರೆ ಮಾಡವು. ಹೊಟ್ಟೆ ತುಂಬಿದ ಮೇಲೆಯೂ ತಿನ್ನುವ ಪ್ರಾಣಿ ಈ ಜಗತ್ತನಲ್ಲಿದ್ದರೆ ಅದು ಮನುಷ್ಯ ಮಾತ್ರ…

ಆನೆ ಶುದ್ಧ ಸಸ್ಯಾಹಾರಿ. ಸಸ್ಯಾಹಾರ ಸಿಗದೆ ಇದ್ದರೆ ಉಪವಾಸ ಸಾಯುತ್ತದೆಯೇ ಹೊರತು ಮಾಂಸಾಹಾರವನ್ನು ಅದೆಂದೂ ಸೇವಿಸದು. ಸಸ್ಯಾಹಾರಿ ಜೀವನಕ್ಕೆ ಸರಿಹೊಂದುವ ಅಂಗರಚನೆ ಹೊಂದಿರುವ ಮನುಷ್ಯ ತಿನ್ನದ ವಸ್ತುವಿಲ್ಲ. ಪ್ರಾಣಿಸಂಕುಲವನ್ನೇ ಜಾಲಾಡಿದ್ದಾನೆ. ರುಚಿ ನೋಡಿದರೆ ಮನುಷ್ಯ ಸಂಕುಲವನ್ನೇ ತಿನ್ನವನೇನೋ ಅನ್ನಿಸುತ್ತದೆ…

ಈ ಎಲ್ಲಾ ವಿಚಾರಗಳನ್ನು ಅವಲೋಕಿಸಿದಾಗ, ಮನುಸ್ಯನಲ್ಲಿರಬೇಕಾದ ಮನುಷ್ಯತ್ವ, ಪ್ರಾಣಿದಯೆ ಇವು ಮನುಷ್ಯನೊಬ್ಬನಲ್ಲಿ ಬಿಟ್ಟು ಉಳಿದೆಲ್ಲಾ ಪ್ರಾಣಿಗಳಲ್ಲಿ ಇರುವಂತಿದೆ. ಗೋವುಗಳು ಕೊಡುವ ಗೋಮೂತ್ರ, ಗೋಮಯ, ಹಾಲು, ಮೊಸರು, ತುಪ್ಪಗಳು ಪಂಚಗವ್ಯ-ಪಂಚಾಮೃತಗಳಾಗಿ ಮಾನವನಿಗೆ ಪ್ರಕೃತಿಗೆ ಜೀವನಾಧಾರಗಳಾಗಿವೆ. ಔಷಧಗಳಾಗಿವೆ. ಗೊಬ್ಬರ, ಆನೆಯ ದಂತ, ಚಮರೀ ಮೃಗದ ಬಾಲದ ಜವರಿ, ಹೀಗೆ ಪ್ರತಿಯೊಂದು ಪ್ರಾಣಿ ಜೀವಿತದಲ್ಲಾಗಲೀ, ಸತ್ತ ಮೇಲಾಗಲೀ ಇತರರಿಗೆ ಉಪಕಾರಿಯೇ ಸರಿ. ಆದರೆ ಮನುಷ್ಯ ಮಾತ್ರ ನಿರುಪಯುಕ್ತನೇ ಅಲ್ಲವೇ..? ದಾಸರು ಹೇಳಿದಂತಹ “ಮಾನವ ಜನ್ಮ ದೊಡ್ಡದು” ಎಂದಾಗಬೇಕಾದರೆ ಮನುಷ್ಯತ್ವವನ್ನು ರೂಢಿಸಿಕೊಂಡು ನಿಜ ಮನುಷ್ಯನಾಗಿ, ಪ್ರಕೃತಿಯೊಂದಿಗೆ ಭಾವನಾತ್ಮಕ ಸಂಬಂಧ ವಿರಿಸಿಕೊಂಡು, ಪ್ರಕೃತಿಯ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸ ಬೇಕು. ಭಾರತೀಯ ಪರಿಕಲ್ಪನೆಯ, ಚಿಂತನೆಯ ಭಾರತೀಯನಾಗಲು ಆಗ ಮಾತ್ರ ಸಾಧ್ಯವಾಗಬಹುದು….
Mohanchandra Panjigar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: