ಹರೆಯದವರಲ್ಲಿ ಕಂಡು ಬರುವ ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳು

-ಕೆ ರವಿಕುಮಾರ್ ಕೋಲಾರ್
ಆತಂಕ ಮನೋರೋಗಗಳು

ವೇದಿಕೆ ಭಯ: ಅನೇಕ ಹರೆಯದವರಿಗೆ ವೇದಿಕೆಗೆ ಹೋಗುವುದೆಂದರೆ ಭಯ. ಚೆನ್ನಾಗಿ ಮಾತಾಡಲು ಬಂದರೂ, ಚೆನ್ನಾಗಿ ಸುಶ್ರಾವ್ಯವಾಗಿ ಹಾಡಲು ಬಂದರೂ, ತನ್ನಲ್ಲಿರುವ ಕಲೆಯನ್ನು ಪ್ರಕಟಿಸಲು ಶಕ್ತನಾದರೂ, ಹುಡುಗ/ಹುಡುಗಿ ಆತಂಕಕ್ಕೆ ಒಳಗಾಗುತ್ತಾರೆ. ವೇದಿಕೆ ಮೇಲೆ ಹೋಗಿ ಬಾಯಿ ಒಣಗಿ, ಕೈಕಾಲು ನಡುಗಿ, ಮಾತಾಡಲಾಗದೇ ಅಥವಾ ತಮ್ಮ ಕಲಾನೈಪುಣ್ಯತೆಯನ್ನು ಪ್ರದರ್ಶಿಸಲಾಗದೇ ಅಥವಾ ಅನೇಕ ತಪ್ಪುಗಳನ್ನು ಮಾಡಿ ನೋವನ್ನು ನಿರಾಶೆಯನ್ನು ಅನುಭವಿಸುತ್ತಾರೆ. ಒಮ್ಮೆ ಈ ರೀತಿ ಆಯಿತೆಂದರೆ, ಪ್ರತಿ ಸಲ ವೇದಿಕೆಗೆ ಹೋಗುವಾಗ, ಭಯ ದ್ವಿಗುಣವಾಗುತ್ತದೆ. ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ, ವೇದಿಕೆ ಭಯವನ್ನು ನಿವಾರಿಸಲು ಹೀಗೆ ಮಾಡಿ.

ಸರಿಯಾದ ಪೂರ್ವ ಸಿದ್ಧತೆ ಮಾಡಿ, ಏನು ಮಾತಾಡಬೇಕು, ಏನು ಹಾಡಬೇಕು ಇತ್ಯಾದಿ. ನಿಮ್ಮ ಕೆಲವು ಸ್ನೇಹಿತರು/ಮನೆಯವರ ಮುಂದೆ ಮಾತನಾಡಿ/ ಹಾಡಿ, ಪ್ರಾಕ್ಟೀಸ್ ಮಾಡಿ. ‘ನಾನು ಸರಿಯಾಗಿ ಸಿದ್ಧತೆ ಮಾಡಿದ್ದೇನೆ, ನನ್ನ ನಿರ್ವಹಣೆ-ಪರ್‌ಫಾರ್ಮ್‌ಮೆನ್ಸ್ ಚೆನ್ನಾಗೇ ಇರುತ್ತದೆ, ಎಂದು ಹೇಳಿಕೊಳ್ಳಿ. ‘ನಾನು ಚೆನ್ನಾಗಿ ಮಾತನಾಡಲಾರೆ ಹಾಡಲಾರೆ. ತಪ್ಪುಗಳಾಗುತ್ತವೆ. ಸಭಿಕರು ನಗುತ್ತಾರೆ. ನಾನು ಅಪಹಾಸ್ಯ/ಅವಮಾನಕ್ಕೆ ಈಡಾಗುತ್ತೇನೆ ಎಂಬ ನಕಾರಾತ್ಮಕ ಆಲೋಚನೆಗಳಿಗೆ ಮನಸ್ಸಿನಲ್ಲಿ ಎಡೆ ಕೊಡಬೇಡಿ. ವೇದಿಕೆಗೆ ಹೋಗುವ ಮೊದಲು, ನೀವು ಕುಳಿತಲ್ಲೇ ಪ್ರಾಣಾಯಾಮ ಮಾಡಿ-ಕಣ್ಣು ಮುಚ್ಚಿ, ಆರಾಮವಾಗಿ ಮೈ ಸಡಿಲ ಬಿಡಿ, ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳಿ ಹಾಗೇ ನಿಧಾನವಾಗಿ ಉಸಿರನ್ನು ಬಿಡಿ. ವೇದಿಕೆಯ ಮೇಲೆ ಹೋದಾಗ, ಸಭಿಕರನ್ನೆಲ್ಲಾ ನೋಡಬೇಡಿ. ಕೆಲವೇ ಸಭಿಕರನ್ನು/ ನಿಮ್ಮ ಪರಿಚಿತರನ್ನು, ಆಯ್ಕೆ ಮಾಡಿಕೊಂಡು ಅವರತ್ತ ನೋಡುತ್ತಾ ಮಾತನಾಡಿ/ಹಾಡಿ.

ಹೀಗೆ ಪ್ರಾಕ್ಟೀಸ್ ಮಾಡುತ್ತಾ ಇದ್ದರೆ ಭಯ ತಗ್ಗುತ್ತದೆ. ಸ್ಪರ್ಧೆಯಾದರೆ, ಫಲಿತಾಂಶದ ಬಗ್ಗೆ ಚಿಂತೆ ಮಾಡಬೇಡಿ. ‘ಐ ವಿಲ್ ಟ್ರೈ ಬೆಸ್ಟ್, ರಿಸಲ್ಟ್ ವಿಲ್ ಬಿ ಗುಡ್ ಎನ್ನುವ ಧೋರಣೆ ಬೆಳೆಸಿಕೊಳ್ಳಿ. (ನಾನು ಉತ್ತಮವಾಗಿಯೇ ಮಾತಾಡುತ್ತೇನೆ. ಪೂರ್ಣ ಪ್ರಯತ್ನ ನನ್ನದು. ಫಲಿತಾಂಶ ಒಳ್ಳೆಯದೇ ಆಗಿರುತ್ತದೆ)

ಸಾಮಾಜಿಕ ಭಯಗಳು

ಕೆಲವು ವಿದ್ಯಾರ್ಥಿಗಳಿಗೆ, ಹರೆಯದವರಿಗೆ ಇತರರೊಡನೆ ಮಾತನಾಡಲು ವ್ಯವಹರಿಸಲು ಭಯ. ಸಭೆ ಸಮಾರಂಭಗಳಿಗೆ ಹೋಗಲು ಹೆದರಿಕೆ. ಇತರರು ನೋಡುತ್ತಿದ್ದಾರೆ. ತನ್ನನ್ನು ಗಮನಿಸುತ್ತಿದ್ದಾರೆ ಎಂದರೆ, ಅವರಿಗೆ ಊಟ ಮಾಡಲೂ ಆಗುವುದಿಲ್ಲ. ಮಾತನಾಡಲೂ ಆಗುವುದಿಲ್ಲ, ಕೈಕಾಲು ನಡುಗುತ್ತದೆ. ಎಷ್ಟು ಬೇಗ ಅಲ್ಲಿಂದ ಹೊರಹೋದರೆ ಸಾಕು ಎನಿಸಿಬಿಡುತ್ತದೆ. ಆದರೆ ಮನಸ್ಸಿನೊಳಗೆ ಜನರೊಂದಿಗೆ ಬೆರೆಯಬೇಕು. ಆಕರ್ಷಕವಾಗಿ ಮಾತನಾಡಬೇಕು. ಜನರ ಮೆಚ್ಚುಗೆ ಪಡೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಆತಂಕ ಭಯ ಅವರನ್ನು ಕಟ್ಟಿಹಾಕುತ್ತದೆ. ಹೀಗಾಗಿ, ಸಭೆ, ಸಮಾರಂಭಕ್ಕೆ ಹೋಗದೇ ತಪ್ಪಿಸಿಕೊಳ್ಳುತ್ತಾರೆ. ಹೋದರೂ ಒಂದು ಮೂಲೆಯಲ್ಲಿ ಕೂರುತ್ತಾರೆ. ಊಟಮಾಡದೇ, ವೇದಿಕೆಗೆ ಹೋಗಿ, ಸಂಬಂಧಪಟ್ಟವರಿಗೆ ಶುಭಾಶಯವನ್ನು ಹೇಳದೇ ವಾಪಸ್ಸಾಗುತ್ತಾರೆ. ಯಾರಾದರೂ ಪ್ರಶ್ನೆ ಕೇಳಿದರೆ, ತಬ್ಬಿಬ್ಬಾಗಿ ಉತ್ತರ ಗೊತ್ತಿದ್ದರೂ, ಹೇಳಲಾರರು. ತೊದಲುತ್ತಾರೆ. ಅಥವಾ ಅಸಂಬದ್ಧವಾಗಿ ಉತ್ತರಿಸಿ ನಗೆಗೀಡಾಗುತ್ತಾರೆ. ಮನೆಗೆ ಬಂಧುಮಿತ್ರರು ಬಂದರೆ ಅವರೊಂದಿಗೆ ಕುಶಲ ಸಂಭಾಷಣೆಯನ್ನು ಮಾಡಲಾಗದೇ ರೂಮು ಸೇರುತ್ತಾರೆ. ಮುಖೇಡಿಗಳಾಗುತ್ತಾರೆ, ತಾವೂ ಮುಜುಗರ ಪಟ್ಟು, ಮನೆಯವರಿಗೂ ಮುಜುಗರವನ್ನುಂಟುಮಾಡುತ್ತಾರೆ.

‘ಯಾರಾದರೂ ಬಂದರೆ ಸಾಕು, ಓಡಿ ಹೋಗಿ ರೂಮಿನಲ್ಲಿ ಕೂಡುತ್ತಾಳೆ. ಹೊರಗೆ ಬಾರೇ, ಆಂಟಿ ಹೇಗಿದ್ದೀರಿ ಎಂದು ಮಾತನಾಡಿಸು. ಕಾಫಿ ತೆಗೆದುಕೊಂಡು ಹೋಗಿ ಕೊಡು ಎಂದರೆ ‘ಹೋಗಮ್ಮ ನನ್ನ ಕೈಲಿ ಆಗೋದಲ್ಲ, ನೀನೇ ಕೊಡು, ಎಂದು ತಲೆತಗ್ಗಿಸಿಕೂರುತ್ತಾಳೆ. ಹೀಗಾದರೆ ಹೇಗೆ? ಬಂದವರು ಈ ಹುಡುಗಿಗೆ ಎಷ್ಟು ಜಂಭ, ಅಹಂಕಾರ, ಮನೆಗೆ ಬಂದವರನ್ನು ಮಾತಾಡಿಸುವ ಸೌಜನ್ಯತೆ ಇಲ್ಲ ಎಂದುಕೊಂಡರೆ ಹೇಗೆ? ನಾಳೆ ಇವಳನ್ನು ಯಾರು ಮದುವೆಯಾಗುತ್ತಾರೆ, ಎಂದರು ವಿಶಾಲಾಕ್ಷಿ.

‘ಬೆಲೆ ಎಷ್ಟು, ಕಡಿಮೆ ಬೆಲೆಗೆ ಕೊಡುತ್ತೀರಾ ಎಂದು ಕೇಳಲು ಸಂಕೋಚ. ಕ್ಯೂನಲ್ಲಿ ನಿಂತಾಗ ಯಾರಾದರೂ ಮಧ್ಯೆ ಸೇರಿಕೊಂದರೆ, ಬೇಡ ಹಾಗೆ ಮಾಡಬೇಡಿ ಎಂದು ಹೇಳಲಾರೆ. ಸಾಮಾನಿನ ಚೀಟಿಯನ್ನು ಅಂಗಡಿಯವರಿಗೆ ಕೊಟ್ಟು, ಅವನು ಕೊಟ್ಟದ್ದನ್ನು ತೆಗೆದುಕೊಂಡು ಬರುತ್ತೇನೆ, ಈರುಳ್ಳಿ ಗಡ್ಡೆ ಕೊಳೆತಿದೆ, ಬೇರೆ ಹಾಕಿ ಎಂದೂ ಹೇಳಲಾರೆ. ಭಯದಿಂದ ಬಾಯಿ ಕಟ್ಟಿಹೋಗುತ್ತದೆ. ಎಷ್ಟು ಧೈರ್ಯ ತಂದುಕೊಂಡು, ಸ್ಪಷ್ಟವಾಗಿ ಮಾತಾಡಬೇಕು. ನನಗೆ ಇಂಥದು ಬೇಕು, ಇಂಥದು ಬೇಡ ಎಂದು ಹೇಳಬೇಕು ಎಂದುಕೊಂಡರೂ ಆಗುವುದಿಲ್ಲ ಸಾರ್ ಎಂದ ರಮಾಕಾಂತ.

‘ಕಣ್ಣಲ್ಲಿ, ಕಣ್ಣಿಟ್ಟು, ಮುಖ ನೋಡುತ್ತಾ ಮಾತನಾಡಲಾರೆ ಸರ್. ತಲೆ ತಗ್ಗಿಸಿ ಬಿಡುತ್ತೇನೆ. ಹೃದಯ ಬಾಯಿಗೆ ಬಂದಂತಾಗುತ್ತದೆ. ಎದೆ ಢವಗುಟ್ಟುತ್ತದೆ. ನನ್ನನ್ನು ಮಾತನಾಡಿಸಿದ ವ್ಯಕ್ತಿ, ದೊಡ್ಡ ಅಧಿಕಾರಿ, ತಿಳುವಳಿಕೆಯುಳ್ಳವರು ಅಥವಾ ಮುಖಗಂಟಿಕ್ಕಿರುವವರಾದರಂತೂ ಮುಗಿದೇ ಹೋಯಿತು. ನನ್ನ ಬಾಯಿಗೆ ಬೀಗ ಬೀಳುತ್ತದೆ. ಇದಕ್ಕೆ ಪರಿಹಾರವಿಲ್ಲವೇ ಎಂದಳು ಸಂಜನಾ.

ಈ ಸಾಮಾಜಿಕ ಭಯ (Social Anxiety/phobia) ಕ್ಕೆ ಕಾರಣಗಳಿವು.

  • ಕೀಳರಿಮೆ: ನಾನು ಚೆನ್ನಾಗಿಲ್ಲ, ನನ್ನ ಬುದ್ಧಿ ಕಡಿಮೆ, ನಾನು ಚೆನ್ನಾಗಿ ಮಾತನಾಡಲಾರೆ, ಬಾಯಿ ಬಿಟ್ಟರೆ, ತಪ್ಪು ಮಾತುಗಳು ಬರುತ್ತದೆ. ಇತ್ಯಾದಿ ನಕಾರಾತ್ಮಕ ಯೋಚನೆಗಳು.
  • ಇತರರಿಂದ ತಿರಸ್ಕಾರದ/ಹೀನಾಯದ ನಿರೀಕ್ಷೆ: ಎದುರಿಗಿರುವ ವ್ಯಕ್ತಿ ನನ್ನನ್ನು ಮೆಚ್ಚುವುದಿಲ್ಲ. ತಿರಸ್ಕರಿಸಬಹುದು. ನನ್ನ ಕೊರತೆ, ಹುಳುಕು, ತಪ್ಪುಗಳನ್ನು ಕಂಡು ನಗಾಡುತ್ತಾನೆ/ಳೆ. ಅಪಹಾಸ್ಯ ಮಾಡಿ ಅವಮಾನ ಮಾಡುತ್ತಾನೆ/ಮಾಡುತ್ತಾಳೆ.
  • ಹಿಂದಿನ ನೋವಿನ ಅನುಭವಗಳು: ಹಿಂದೆ ಜನರೊಂದಿಗೆ ಮಾತನಾಡಲು ವ್ಯವಹರಿಸಿದಾಗ ಆದ ನೋವು/ಅವಮಾನ/ವಿಫಲತೆಗಳು.
  • ಭಾಷಾ ಸಾಮರ್ಥ್ಯ/ತಿಳುವಳಿಕೆ ಕಡಿಮೆ ಇರುವುದು. ಬಾಲ್ಯದಲ್ಲಿ ಜನರೊಂದಿಗೆ ವ್ಯವಹರಿಸುವ ತರಬೇತಿ ಇಲ್ಲದಿರುವುದು

ಈ ಸಾಮಾಜಿಕ ಭಯಕ್ಕೆ ಚಿಕಿತ್ಸೆ

ಸರಳವಾಗಿ ಸ್ಪಷ್ಟವಾಗಿ ಮಾತನಾಡುವ ಅಭ್ಯಾಸ ಮಾಡುವುದು. ಮೊದಲು ಕನ್ನಡಿಯ ಮುಂದೆ ಆನಂತರ ಪರಿಚಿತ ವ್ಯಕ್ತಿಗಳ ಜೊತೆ ಜ್ಞಾನ ತಿಳುವಳಿಕೆ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ವಿವಿಧ ವಿಷಯಗಳ ಬಗ್ಗೆ ಸಂಭಾಷಣೆ ನಡೆಸುವ ಕೌಶಲವನ್ನು ಪಡೆಯುವುದು. ನಾನು ಎಲ್ಲರನ್ನೂ ಮೆಚ್ಚಿಸಬೇಕಿಲ್ಲ, ನನಗೆ ಗೊತ್ತಿದ್ದಷ್ಟನ್ನು ಹೇಳುತ್ತೇನೆ. ಇತರರು ನನ್ನಿಂದ ಹೆಚ್ಚು ನಿರೀಕ್ಷೆ ಮಾಡಿದರೆ, ನಾನು ಏನು ಮಾಡಲು ಸಾಧ್ಯವಿಲ್ಲ. ನನ್ನನ್ನು ಕೆಲವರಾದರೂ ಮೆಚ್ಚುತ್ತಾರೆ ಅಷ್ಟು ಸಾಕು ಎಂಬ ಧೋರಣೆ ಇಟ್ಟುಕೊಳ್ಳುವುದು. ಎಲ್ಲರೂ ಸಮಾನರೇ, ನನ್ನೆದುರು ಇರುವ ವ್ಯಕ್ತಿ ದೊಡ್ಡವರಿರಬಹುದು, ಜ್ಞಾನಿ ಇರಬಹುದು. ಅಧಿಕಾರದಲ್ಲಿರಬಹುದು, ಅವರೂ ಮನುಷ್ಯರೇ, ಅವರಲ್ಲೂ ಕೆಲವು ಕುಂದು ಕೊರತೆಗಳು ಇರುತ್ತವೆ. ನಾನು ಚಿಕ್ಕವನಿರಬಹುದು. ನನ್ನಲ್ಲಿ ಅಧಿಕಾರ ಇಲ್ಲದಿರಬಹುದು, ಆದರೆ ನನ್ನ ಅನಿಸಿಕೆ, ಅಭಿಪ್ರಾಯ, ಬೇಕು, ಬೇಡಗಳನ್ನು ಹೇಳುವ ಹಕ್ಕು ನನಗಿದೆ ಎಂದು ಹೇಳಿಕೊಳ್ಳುವುದು. ‘ಹೇಳಬೇಕಾದ್ದನ್ನು ವಿನಯ, ಗೌರವ, ಪ್ರೀತಿಯಿಂದ ಹೇಳುತ್ತೇನೆ. ಯಾರಿಗೂ ಅಗೌರವ, ಅವಮಾನ ಮಾಡುವ ಉದ್ದೇಶವಿಲ್ಲ ಆದ್ದರಿಂದ ನಾನು ಹೆದರುವ ಅಗತ್ಯವಿಲ್ಲ ಎಂದುಕೊಳ್ಳಿ. ಅಗತ್ಯಬಿದ್ದರೆ ಮನಶಾಸ್ತ್ರಜ್ಞರು ಅಥವಾ ಮನೋವೈದ್ಯರನ್ನು ಕಾಣಿ. ಆತಂಕವನ್ನು ತಗ್ಗಿಸುವ ಔಷಧಿ ಇದೆ , ನಡವಳಿಕೆ ಚಿಕಿತ್ಸೆ ಇದೆ.

ನಿರ್ದಿಷ್ಟ, ಅತಿ ಭಯಗಳು (phobia)

ಕೆಲವರಿಗೆ ಕೆಲವು ವಸ್ತುಗಳನ್ನು ಕಂಡರೆ ಅಥವಾ ಕೆಲವು ಸನ್ನಿವೇಶ, ಸಂದರ್ಭಗಳನ್ನು ಕಂಡರೆ ವಿಪರೀತ ಭಯ. ಆ ವಸ್ತು / ಸನ್ನಿವೇಶದಿಂದ ದೂರವಿರಲು ಪ್ರಯತ್ನಿಸುತ್ತಾರೆ. ಆ ವಸ್ತು/ ಸನ್ನಿವೇಶವೂ ನಿರಪಾಯಕಾರಿ ಎಂದು ಎಲ್ಲರೂ ಹೇಳಿದರೂ ಅವರಿಗೆ ಅವು ಭಯಕಾರಿಯಾಗಿ ತೋರುವುದೇ ಫೋಬಿಯಾ ಆತಂಕ ರೋಗದ ಮುಖ್ಯ ಲಕ್ಷಣ. ಫೋಬಿಯಾವನ್ನುಂಟು ಮಾಡುವ ಸಾಮಾನ್ಯ ಅಂಶಗಳೆಂದರೆ

ನಾಯಿ, ಬೆಕ್ಕು, ಜಿರಳೆ, ಇಲಿ, ಜೇಡದಂತಹ ಪ್ರಾಣಿ/ಕೀಟಗಳು, ಸೇತುವೆ, ಸುರಂಗ, ಗುಹೆ, ಟೆಲಿಫೋನ್ ಬೂತ್/ಲಿಫ್ಟ್‌ನಂತಹ ಚಿಕ್ಕ ಜಾಗಗಳು, ಕತ್ತಲೆ/ಒಂಟಿತನ, ಜನರ ಗುಂಪು, ರಕ್ತ, ಸೂಜಿ, ಆಪರೇಶನ್ ಥೇಟರ್, ಸ್ಕ್ಯಾನಿಂಗ್ ಅಥವಾ ಎಂ.ಆರ್.ಐ, ವಿಶೇಷ ತಪಾಸಣೆ ಯಂತ್ರಗಳು, ಆಸ್ಪತ್ರೆ, ವೈದ್ಯರು, ತುಂಬಾ ಜನಸಂದಣಿ ಇರುವ ಬಸ್/ಟ್ರೇನ್, ಎತ್ತರದ ಜಾಗಗಳು, ನೀರು, ಬೆಂಕಿ ಇತ್ಯಾದಿ.

ಅತಿ ಭಯ ಇರುವ ವಸ್ತು/ಸನ್ನಿವೇಶಕ್ಕೆ ಒಗ್ಗಿಕೊಳ್ಳುವುದು. ನನಗೇನೂ ಆಗುವುದಿಲ್ಲ ಎಂದು ಹೇಳಿಕೊಳ್ಳುವುದರಿಂದ ಭಯ ತಗ್ಗುತ್ತದೆ. ಮನೋ ವೈದ್ಯಕೀಯ ನೆರವೂ ಬೇಕಾಗುತ್ತದೆ.

ಗೀಳು ಮನೋರೋಗ

ಯಾವುದೇ ಅರ್ಥವಿಲ್ಲದ ಅಸಂಬದ್ಧ, ಕೊಳಕು ಅಥವಾ ಹೊಲಸು ಅಥವಾ ಭಯವನ್ನು/ಜುಗುಪ್ಸೆಯನ್ನುಂಟು ಮಾಡುವ ವಿಚಾರ, ಆಲೋಚನೆ, ಚಿತ್ರಗಳು ಬೇಡ, ಬೇಡ ಎಂದರೂ ಮನಸ್ಸಿನೊಳಕ್ಕೆ ಬರುವುದು. ದೇವರನ್ನು ಪೂಜಿಸುವಾಗ, ಕೆಟ್ಟ ಆಲೋಚನೆಗಳು ಬರುವುದು, ಯಾವುದೇ ಗಂಡಸು, ಹೆಂಗಸನ್ನು ನೋಡಿದಾಗ ಕೆಟ್ಟ, ಲೈಂಗಿಕ ಆಲೋಚನೆಗಳು ಬರುವುದು. ಕತ್ತಿ, ಚಾಕು, ಸೂಜಿ, ಹರಿತವಾದ ಆಯುಧಗಳನ್ನು ಕಂಡಾಗ, ತನಗೆ, ಇತರರಿಗೆ ಹಿಂಸೆಯನ್ನುಂಟುಮಾಡಬೇಕು ಎನಿಸಿವುದು. ಚಲಿಸುವ ವಾಹನದಿಂದ ಜಿಗಿಯಬೇಕು ಅಥವಾ ಇತರರನ್ನು ನೂಕಬೇಕು ಎನ್ನಿಸುವುದು. ಇತರರಿಗೆ ಬೈದು, ಹೊಡೆಯಬೇಕು, ಅವಮಾನ ಮಾಡಬೇಕು ಎಂಬ ಆಲೋಚನೆಗಳು ಇತ್ಯಾದಿ.

ಪದೇ-ಪದೇ ಕೈ ತೊಳೆಯಬೇಕು. ಸ್ನಾನ ಮಾಡಬೇಕು, ಮನೆಯ ಗೋಡೆ, ನೆಲವನ್ನು ಒರೆಸಬೇಕು. ಧೂಳು, ಹೊಲಸು, ಕೊಳಕಿದೆ ಅದನ್ನು ಹೆಚ್ಚು ನೀರು ಬಳಸಿ, ತೊಳೆದು ತೆಗೆಯಬೇಕು. ಗೋಡೆಯನ್ನು, ಬಾಗಿಲನ್ನು ಹತ್ತು ಸಲ ಮುಟ್ಟಬೇಕು. ಇಲ್ಲದಿದ್ದರೆ ಅದು ಬಿದ್ದು ಹೋಗುತ್ತದೆ ಎನಿಸುವುದು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದು ಕ್ರಮದಲ್ಲಿ ಇಡುವುದು, ಸ್ವಲ್ಪ ಕೂದಲೆಳೆಯಷ್ಟು ವ್ಯತ್ಯಾಸವಾದರೂ ಮತ್ತೆ ಸರಿಪಡಿಸುವುದು.

‘ಬೋಲ್ಟ್ ಹಾಕಿದ್ದೇನೋ ಇಲ್ಲವೊ, ನಲ್ಲಿಯನ್ನು ನಿಲ್ಲಿಸಿದೆನೋ ಇಲ್ಲವೋ, ಹಣವನ್ನು ಸರಿಯಾಗಿ ಎಣಿಸಿದೆನೋ ಇಲ್ಲವೋ, ಬೀಗವನ್ನು ಸರಿಯಾಗಿ ಹಾಕಿದೆನೋ ಇಲ್ಲವೋ, ಎಂದು ಹಲವಾರು ಸಲ ಚೆಕ್ ಮಾಡುವುದು.

ಮಾಡುವುದೋ, ಬೇಡವೋ, ಹೋಗುವುದೋ, ಹೋಗಬಾರದೋ, ಈ ಹೊತ್ತೇ ಶುರುಮಾಡುವುದೋ, ನಾಳೆ ಶುರುಮಾಡುವುದೋ, ತಂದೆ ತಾಯಿಗೆ ಹೇಳುವುದೋ, ಬೇಡವೋ ಹೀಗೆ ದ್ವಂದ್ವ/ಗೊಂದಲಗಳಿಂದ ಏನೂ ಮಾಡದೆ ನಿಷ್ಕ್ರಿಯನಾಗಿರುವುದು.

ಇವೆಲ್ಲ ಗೀಳು ಮನೋರೋಗದ ಲಕ್ಷಣಗಳು. ಈ ರೋಗಲಕ್ಷಣಗಳಿಂದ ವ್ಯಕ್ತಿ ಸಾಕಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸುವುದಲ್ಲದೆ, ಇತರರರಿಗೂ ಸಾಕಷ್ಟು ಹಿಂಸೆ, ತೊಂದರೆಯನ್ನು ಕೊಡುತ್ತಾನೆ/ಳೆ. ಸ್ನಾನದ ಮನೆ/ಟಾಯ್ಲೆಟ್ಟಿಗೆ ಹೋದರೆ ಇರುವ ನೀರನ್ನೆಲ್ಲಾ ಖರ್ಚು ಮಾಡಿ, ಈಚೆಗೆ ಬರದೇ ತೊಂದರೆ. ನಾನು ಹೋಗಲಾ, ನಾನು ಮಾಡಿದ್ದು ಸರೀನಾ, ಎಂದು ಹತ್ತಾರು ಸಲ ಮನೆಯವರನ್ನು ಕೇಳುತ್ತಾ ತಲೆ ಚಿಟ್ಟು ಹಿಡಿಸುವುದು. ಶಾಲೆಗೆ ಹೋಗದೇ, ಅಧ್ಯಯನ ಮಾಡದೇ ಸುಮ್ಮನೆ ಕೂರುವುದರಿಂದ ತಂದೆ, ತಾಯಿ, ಮನೆಯವರು ಚಿಂತೆಗೆ ಒಳಗಾಗುತ್ತಾರೆ.

ಮಿದುಳಿನ ನರಕೋಶಗಳಲ್ಲಿ ಸೆರೋಟೊನಿನ್ ಎನ್ನುವ ರಾಸಾಯನಿಕ ವಸ್ತು ಕಡಿಮೆಯಾಗುವುದೇ ಈ ಗೀಳು ಮನೋರೋಗಕ್ಕೆ ಕಾರಣ. ಸೆರೋಟೊನಿನ್‌ನ್ನು ಹೆಚ್ಚಿಸುವ ಔಷಧಿಗಳಾದ ಫ್ಲೂಯಾಕ್ಸೆಟಿನ್, ಸರ್ಟ್ರಾಲಿನ್, ಎಸ್ಸಿಟಾಲೋಪಾಂ, ಕ್ಲೋಮಿಪ್ರಮಿನ್ ಅನ್ನು ಕೊಡುವುದರಿಂದ ಗೀಳು ಮನೋರೋಗ ಹತೋಟಿಗೆ ಬರುತ್ತದೆ. ಔಷಧಿ ಚಿಕಿತ್ಸೆ ದೀರ್ಘಕಾಲ ನಡೆಯಬೇಕು. ಗೀಳು ಮನೋರೋಗ ಹತೋಟಿಗೆ ಬರುವಂತಹ ಕಾಯಿಲೆ.

ಪ್ಯಾನಿಕ್ ಡಿಸಾರ್ಡರ್: ಅತಿ ಭಯ/ಹಠಾತ್ ಭಯದ ಕಾಯಿಲೆ. ಇಲ್ಲಿ ತೀವ್ರ ಭಯ ಥಟ್ಟನೆ ವ್ಯಕ್ತಿಯನ್ನು ಕಾಡತೊಡಗುತ್ತದೆ. ಇದ್ದಕ್ಕಿದ್ದಂತೆ ವ್ಯಕ್ತಿಗೆ ತನಗೇನೋ ತೊಂದರೆ ಆಗಲಿದೆ. ತನಗೆ ಹೃದಯಾಘಾತ ಆಗಲಿದೆ. ತಾನು ಪ್ರಜ್ಞೆ ತಪ್ಪಿ ಬೀಳಬಹುದು. ತನಗೆ ಹುಚ್ಚು ಹಿಡಿಯಬಹುದು. ಪ್ರಾಣಾಪಾಯ ಆಗಬಹುದೆಂಬ ಭಯ ಬಂದು, ವ್ಯಕ್ತಿ ಸಂಪೂರ್ಣವಾಗಿ ಹತಾಶನಾಗುತ್ತಾನೆ. ಭಯದ ತೀವ್ರತೆಯಿಂದ ಚಡಪಡಿಸುತ್ತಾನೆ. ಭಯದ ಲಕ್ಷಣಗಳು ೨೦ ರಿಂದ ೩೦ ನಿಮಿಷಗಳ ಕಾಲ ಇರಬಹುದು. ಆಗ ವ್ಯಕ್ತಿ ಸಹಾಯವನ್ನು ಯಾಚಿಸುತ್ತಾನೆ. ಅವನ ಸ್ಥಿತಿ ಚಿಂತಾಜನಕವಾಗುತ್ತದೆ. ಇದು ಪುನರಾವರ್ತನೆಗೊಳ್ಳುತ್ತದೆ. ಅಟ್ಯಾಕ್ ಇದ್ದಕ್ಕಿದ್ದಂತೆ ಬರಬಹುದು ಅಥವಾ ಕೆಲವು ನಿರ್ದಿಷ್ಟ ಜಾಗ, ನಿರ್ದಿಷ್ಟ ಸಂದರ್ಭದಲ್ಲಿ ಬರಬಹುದು. ಪ್ಯಾನಿಕ್ ಡಿಸಾರ್ಡರ್‌ಗೆ ಔಷಧೀಯ ಚಿಕಿತ್ಸೆ ಇದೆ. ಇಮಿಪ್ರಮಿನ್ ಮಾತ್ರೆ, ಪ್ಯಾರಾಕ್ಸಿಟಿನ್ ಮಾತ್ರೆ ಇತ್ಯಾದಿ.

ಖಿನ್ನತೆ ಕಾಯಿಲೆ( Depressive disorder)
ಶೇಕಡಾ ೧೫ ರಷ್ಟು ಹರೆಯದವರು ಖಿನ್ನತೆ ಖಾಯಿಲೆಯಿಂದ ಬಳಲುತ್ತಾರೆ. ಯಾವುದೇ ಕಷ್ಟ, ನಷ್ಟ, ಸೋಲು, ನೋವು ಅವಮಾನ ಕೊರತೆ ನ್ಯೂನತೆಗಳಿಂದ ಖಿನ್ನತೆಯುಂಟಾಗುವುದು. ಅಥವಾ ಯಾವುದೇ ಕಾರಣವಿಲ್ಲದೆ, ಖಿನ್ನತೆ ಕಾಣಿಸಿಕೊಳ್ಳಬಹುದು. ಇದನ್ನು ಒಳ ಜನ್ಯ ಖಿನ್ನತೆ ಎನ್ನುತ್ತಾರೆ. ಖಿನ್ನತೆಯಲ್ಲಿ ಮಿದುಳಿನ ನರಕೋಶಗಳಲ್ಲಿ ಡೊಪಮಿನ್, ಸೆರೋಟೊನಿನ್‌ನಂತಹ ರಾಸಾಯನಿಕ ನರವಾಹಕಗಳ ಪ್ರಮಾಣ ತಗ್ಗಿರುತ್ತದೆ. ಹುಡುಗರಿಗೆ ಹೋಲಿಸಿದರೆ ಹುಡುಗಿಯರಲ್ಲಿ ಡಿಪ್ರೆಶನ್ ಹೆಚ್ಚು. ಖಿನ್ನತೆಯ ಖಾಯಿಲೆಯ ಸಾಮಾನ್ಯ ಲಕ್ಷಣಗಳಿವು. ಇವು ಎರಡು ವಾರಗಳಿಗಿಂತ ಹೆಚ್ಚು ಕಾಲ ವ್ಯಕ್ತಿಯಲ್ಲಿರುತ್ತದೆ.

ಯಾವಾಗಲೂ ಬೇಸರ, ದುಃಖದ ಭಾವನೆ, ಇದರಿಂದಾಗಿ ಅಳುಬರುವುದು. ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ, ಉದಾಸೀನತೆ ಹಿಂದೆ ಸಂತೋಷ, ಉತ್ಸಾಹಗಳನ್ನು ನೀಡುತ್ತಿದ್ದ ಚಟುವಟಿಕೆಗಳಿಂದ ಕೂಡ ಈಗ ಸಂತೋಷವಿಲ್ಲ. ಸಂಭ್ರಮವಿಲ್ಲ. ಅಸಹಾಯಕ ಹಾಗೂ ನಿರಾಶಾಭಾವನೆ. ನಾನು ಅಪ್ರಯೋಜಕ, ಯಾವ ಕೆಲಸವೂ ನನ್ನಿಂದಾಗದು, ಇನ್ನೊಬ್ಬರಿಗೆ ಮನೆಯವರಿಗೆ, ಸಮಾಜಕ್ಕೆ ನಾನು ಹೊರೆ ಎಂಬ ಆಲೋಚನೆ, ತಪ್ಪಿತಸ್ಥ ಭಾವನೆಗಳು, ನಗು-ನಲಿವು, ಯಶಸ್ಸು, ಒಳ್ಳೆಯ ದಿನಗಳು ಇನ್ನೆಂದಿಗೂ ಬರುವುದಿಲ್ಲ ಎನಿಸುವುದು. ನಿದ್ರಾ ತೊಂದರೆಗಳು ಅಥವಾ ಹೆಚ್ಚು ನಿದ್ರೆ. ಹಸಿವು ಕಡಿಮೆಯಾಗುವುದು ಬಾಯಿ ರುಚಿ ಇಲ್ಲದಿರುವುದು. ತೂಕ ಕಡಿಮೆಯಾಗುವುದು.ದೇಹದ ಚಲನ-ವಲನಗಳು ನಿಧಾನವಾಗುವುದು. ಮನಸ್ಸಿನ ಆಲೋಚನೆ, ನಿರ್ಧಾರ ಮಾಡುವ ಪ್ರಕ್ರಿಯೆಗಳೂ ನಿಧಾನವಾಗಿ, ವ್ಯಕ್ತಿ ಮಂಕಾಗುವುದು. ಅಸ್ಪಷ್ಟ ಆದರೆ ತೀವ್ರವಾದ ಶಾರೀರಿಕ ನೋವುಗಳು, ಸುಸ್ತು, ನಿಶ್ಯಕ್ತಿ ಕಾಣಿಸಿಕೊಳ್ಳುವುದು, ಸಾಯುವ ಇಚ್ಚೆ, ಆತ್ಮಹತ್ಯೆಯ ಆಲೋಚನೆ, ಪ್ರಯತ್ನ. ಓದು, ಅಧ್ಯಯನದಲ್ಲಿ ಹಿಂದೆ ಬೀಳುವುದು, ತರಗತಿಗಳಿಗೆ ಕ್ರಮವಾಗಿ ಹೋಗದಿರುವುದು, ಮೊದಲಿನಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು.

ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವುದು ಅಥವಾ ಫೇಲಾಗುವುದು. ಖಿನ್ನತೆ ತೀವ್ರವಾದಾಗ, ವ್ಯಕ್ತಿ ಮನೆಯಲ್ಲೇ ಉಳಿಯಬಹುದು. ಶರೀರದ ಬೇಕು ಬೇಡಗಳನ್ನು ನಿರ್ಲಕ್ಷಿಸಬಹುದು.

ಅನುಮಾನ, ಸಂಶಯ, ಸಿಟ್ಟನ್ನು ಪ್ರದರ್ಶಿಸಬಹುದು.

ಖಿನ್ನತೆ ಕಾಯಿಲೆಯನ್ನು ಅಂತಿಮವಾಗಿ ನಿರ್ಣಯಿಸುವವರು ವೈದ್ಯರು. ಮೇಲೆ ಕಾಣಿಸಿದ ಲಕ್ಷಣಗಳಲ್ಲಿ ಮೂರಕ್ಕಿಂತ ಹೆಚ್ಚಿನ ಲಕ್ಷಣಗಳು ಯಾರಲ್ಲಾದರೂ ಇದ್ದರೆ ಅವರು ವೈದ್ಯರನ್ನು ಅಥವಾ ಮನೋವೈದ್ಯರನ್ನು ಕಾಣಬೇಕು.

ಖಿನ್ನತೆಗೆ ಚಿಕಿತ್ಸೆ ಯಾವುದು?

೧. ಔಷಧಿಗಳು: ಇಮಿಪ್ರಮಿನ್, ಅಮಿಟ್ರಿಫ್ಟಲಿನ್, ಡಾತಿಪಿನ್, ಎಸ್ಸಿಟಲೋಪ್ರಾಂ, ಪ್ಲೂಯಾಕ್ಸೆಟೀನ್, ಸಾರ್ಟ್ರಾಲೀನ್‌ಗಳು ಈಗ ಲಭ್ಯವಿದೆ. ಇವೆಲ್ಲ ಮಿದುಳಿನ ಮೇಲೆ ಪರಿಣಾಮ ಬೀರಿ, ಡೊಪಮಿನ್ ಮತ್ತು ಸೆರೋಟೊನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇವು ನಿದ್ರಾಮಾತ್ರೆಗಳಲ್ಲ. ಅಭ್ಯಾಸವನ್ನುಂಟುಮಾಡುವುದಿಲ್ಲ. ಸುರಕ್ಷಿತವಾದ ಔಷಧಿಗಳು ಎಂಬುದನ್ನು ಗಮನಿಸಿ, ಕೆಲವು ಅಡ್ಡ ಪರಿಣಾಮಗಳಾಗಬಹುದು. ಬಾಯಿ ಒಣಗುವುದು, ಮಲಬದ್ಧತೆ, ಕಣ್ಣು ಮಂಜಾಗುವುದು, ತಲೆಸುತ್ತು, ನಿದ್ರೆ ಹೆಚ್ಚುವುದು, ತೂಕಡಿಕೆ, ಮೂತ್ರ ಬಂದ್ ಆಗುವುದು, ಇತ್ಯಾದಿ, ಅದನ್ನು ವೈದ್ಯರಿಗೆ ತಿಳಿಸಿ.

ಔಷಧಿಗಳು ಕೆಲಸ ಮಾಡಿ, ಖಿನ್ನತೆಯ ಲಕ್ಷಣಗಳು ಕಡಿಮೆಯಾಗಲು, ಎರಡು ಮೂರು ವಾರಗಳು ಬೇಕಾಗಬಹುದು ಸಹನೆ ಇರಲಿ.

ಔಷಧಿಗಳನ್ನು ಕನಿಷ್ಟ ೩ ತಿಂಗಳು ಸೇವಿಸಬೇಕು. ಎಷ್ಟು ಕಾಲ ಸೇವಿಸಬೇಕೆಂಬುದನ್ನು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಔಷಧಿ ಸೇವಿಸಬೇಕಾಗಿ ಬರಬಹುದು.

ಈ ಔಷಧ ಸೇವಿಸುವಾಗ ಇತರ ಕಾಯಿಲೆಗಳು ಬಂದರೆ ಬೇರೆ ಔಷಧಿ ಸೇವಿಸಲು ಅಡ್ಡಿ ಇಲ್ಲ ಆದರೆ, ವೈದ್ಯರ ಉಸ್ತುವಾರಿ ಅಗತ್ಯ.

೨. ಆಪ್ತ ಸಲಹೆ ಸಮಾಧಾನ: ರೋಗಿಯೊಂದಿಗೆ ಸ್ನೇಹ ಪೂರ‍್ವಕವಾಗಿ ಮಾತನಾಡಿ, ಆತನ ಕಷ್ಟ ಸುಖ ಸಮಸ್ಯೆಗಳನ್ನು ವಿಚಾರಿಸಿ, ಆಪ್ತ ಸಲಹೆ ಸಮಾಧಾನ ನೀಡುವುದು. ಒಂದು ಮೌಲಿಕವಾದ ಚಿಕಿತ್ಸಾ ವಿಧಾನ. ಇದನ್ನು ವಾರಕ್ಕೆ ಎರಡು ಮೂರು ಸಲ-ಪ್ರತಿ ಸಲ ೩೦ ರಿಂದ ೪೦ ನಿಮಿಷಗಳ ಕಾಲ ಮಾಡಬೇಕಾಗುತ್ತದೆ. ವ್ಯಕ್ತಿಯ ಮನಸ್ಸನ್ನಾವರಿಸಿರುವ ನಕಾರಾತ್ಮಕ ಆಲೋಚನೆಗಳು, ತೀರ್ಮಾನಗಳನ್ನು ತೆಗೆದು, ಸಕಾರಾತ್ಮಕ ಹಾಗೂ ಉತ್ತೇಜನಾತ್ಮಕ ಆಲೋಚನೆಗಳು-ತೀರ್ಮಾನಗಳು ಬರುವಂತೆ ಮಾಡಬೇಕು. ಕಷ್ಟ, ನಷ್ಟಗಳನ್ನು ನಿಭಾಯಿಸಲು, ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡಬೇಕು.

೩. ಬೌದ್ಧಿಕ ಚಿಕಿತ್ಸೆ: ನಿರಾಶಾಜನಕ ಆಲೋಚನೆಗಳನ್ನು ನಿವಾರಿಸಿ, ಆಶಾಜನಕ ಆಲೋಚನೆಗಳನ್ನು ಮಾಡುವಂತೆ, ವ್ಯಕ್ತಿಗೆ ತರಬೇತಿ ನೀಡಲಾಗುವುದು. ಹಿಂದಿನ ಅಥವಾ ಪ್ರಸಕ್ತ ನೋವು, ಕಹಿ ಘಟನೆಗಳನ್ನು ನೆನೆಸಿಕೊಳ್ಳದೆ, ಸಂತೋಷ, ಹಿತಕರವಾದ ಘಟನೆಗಳನ್ನು ಮೆಲುಕು ಹಾಕುವಂತೆ ಪ್ರೇರೇಪಿಸುವುದು. ಯಾವುದೇ ವಿಷಯ, ಘಟನೆ, ವಸ್ತು, ವ್ಯಕ್ತಿಯ ಬಗ್ಗೆ ಆಲೋಚಿಸುವಾಗ ಒಳ್ಳೆಯದನ್ನು ಗುರುತಿಸುವುದು, ನಾಳೆ ಒಳ್ಳೆಯದಾಗುತ್ತದೆ, ನಾಳೆ ನನ್ನ ಸಮಸ್ಯೆ ಬಗೆಹರಿಯುತ್ತದೆ, ಜನ ನನಗೆ ಆಸರೆಯಾಗಿ ನಿಲ್ಲುತ್ತಾರೆ ಎಂಬಿತ್ಯಾದಿ ಸಕಾರಾತ್ಮಕ ಧೋರಣೆಯನ್ನು ಬೆಳೆಸುವುದು ಈ ಚಿಕಿತ್ಸೆಯ ಪ್ರಮುಖ ಅಂಶ.

ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ, ನೃತ್ಯ, ಚಿತ್ರಕಲೆಯನ್ನು ಬಳಸಿ ನೀಡುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.

Adjustment disorders: ಹೊಂದಾಣಿಕೆಯ ಅಸ್ವಸ್ಥತೆಗಳು

ಯಾವುದೇ ಹೊಸ ಸನ್ನಿವೇಶ, ಸಂದರ್ಭ, ಸ್ಥಳ, ಜನ, ಸಮಸ್ಯೆ, ಜವಾಬ್ದಾರಿಗೆ ಹೊಂದಿಕೊಳ್ಳಲು ಕಷ್ಟವಾದಾಗ, ಈ ಅಸ್ವಸ್ಥತೆ ಕಂಡುಬರುತ್ತದೆ. ಆತಂಕ, ಭಯ, ಬೇಸರ, ದುಃಖಗಳು, ಸಿಟ್ಟು, ಕೋಪಗಳು, ಆಹಾರ ನಿದ್ರೆಯ ವ್ಯತ್ಯಯ, ದೈನಂದಿನ ಕೆಲಸ, ಚಟುವಟಿಕೆ ಮಾಡಲಾಗದಿರುವುದು. ತಲೆನೋವು, ದೈಹಿಕ ನೋವುಗಳು, ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಕೆಲವೇ ದಿನಗಳಿಂದ ಹಿಡಿದು ಒಂದೆರೆಡು ತಿಂಗಳು ಇರಬಹುದು. ಮನೋಚಿಕಿತ್ಸೆ, ವಾತಾವರಣದ ಬದಲಾವಣೆ, ಅಲ್ಪ ಪ್ರಮಾಣದಲ್ಲಿ ಖಿನ್ನತೆ ನಿರೋಧಕಗಳು ಶಮನ ಕಾರಿ ಮಾತ್ರೆಗಳನ್ನು ನೀಡಲಾಗುತ್ತದೆ. ವ್ಯಕ್ತಿ, ಸನ್ನಿವೇಶ, ಪರಿಸರಕ್ಕೆ ಹೊಂದಿಕೊಳ್ಳಲು ಸಂಬಂಧಪಟ್ಟವರಲ್ಲಿ ಸಹಾಯ ಮಾಡಬೇಕು. ಓದುವ ಶಾಲೆಯನ್ನು ಬದಲಿಸಿದಾಗ, ಮನೆ ಬಿಟ್ಟು ಹಾಸ್ಟೆಲ್ ಸೇರಿದಾಗ, ಹೊಂದಾಣಿಕೆಯ ಅಸ್ವಸ್ಥತೆ ಸಾಮಾನ್ಯ.

ಸೊಮ್ಯಾಟೋಫಾರಂ ಡಿಸಾರ್ಡರ್ Somatoform Disorders:

ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳು, ದೇಹದಲ್ಲಿ ಏನೂ ಕಾಯಿಲೆ ಇಲ್ಲದಿದ್ದರೂ ಕಾಣಿಸಿಕೊಳ್ಳುತ್ತವೆ. ವೈದ್ಯರಿಗೆ ಗೊಂದಲವನ್ನುಂಟುಮಾಡುತ್ತವೆ. ಮೇಲ್ನೋಟಕ್ಕೆ ಶಾರೀರಕ ಕಾಯಿಲೆಯಂತೆ ಕಂಡರೂ, ಶರೀರದಲ್ಲಿ ಯಾವ ನ್ಯೂನತೆ/ಕೊರತೆ ಇರುವುದಿಲ್ಲ. ಲಕ್ಷಣಗಳು ಬಹಳ ನಾಟಕೀಯವಾಗಿ ಎಲ್ಲರ ಗಮನವನ್ನು ಸೆಳೆಯುವಂತೆ ಪ್ರಕಟಗೊಳ್ಳುತ್ತವೆ. ಮನೆಯವರಿಗೆ ಇದು ಗಂಭೀರ ಸ್ಥಿತಿ ಎನ್ನುವ(ಹುಸಿ) ಆತಂಕವನ್ನು ಸೃಷ್ಟಿಸುತ್ತವೆ.
ಪ್ರಜ್ಞೆ ತಪ್ಪಿ ಬೀಳುವುದು.
ಫಿಟ್ಸ್ ಬಂದಂತೆ ಕೈಕಾಲು ಅದುರುವುದು.
ಕೈ ಕಾಲುಗಳು ಪಾರ್ಶ್ವವಾಯು ಬಡಿದಂತೆ ನಿಷ್ಕ್ರಿಯವಾಗುವುದು.
ಇದ್ದಕ್ಕಿದ್ದಂತೆ ಮಾತು ನಿಂತುಹೋಗುವುದು, ಕಣ್ಣು ಕಾಣದಂತೆ ಆಗುವುದು.
ವಿಚಿತ್ರ ಮಾತು, ವರ್ತನೆಯನ್ನು ತೋರುವುದು.
ಮೈಮೇಲೆ ದೇವರು, ದೆವ್ವ ಬಂದಂತೆ ಆಡುವುದು.
ನಿರ್ದಿಷ್ಟ ಅವಧಿಯ ಘಟನೆಗಳ ನೆನಪೇ ಇಲ್ಲದಿರುವುದು.
ಭ್ರಮಾಧೀನ ಸ್ಥಿತಿಯಲ್ಲಿ ಮನೆಬಿಟ್ಟು, ಅಲೆದಾಡುವುದು, ತನ್ನ ಗುರುತು, ಪರಿಚಯವನ್ನು ಮರೆಯುವುದು, ಪರಿಚಿತರನ್ನು ಗುರುತಿಸಲು ವಿಫಲವಾಗುವುದು

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: