ನಮ್ಮನ್ನು ಸಲಹಿದ ಪರಿಣಾಮವಾಗಿ.. ಪರಿಸರ ಇಂದು ಬೆತ್ತಲಾಗಿದೆ

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ೧೦೭೨ರಿಂದ ಪ್ರತಿವರ್ಷ ಜೂನ್ ೫ ರಂದು ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಸಂಘಟಿಸುತ್ತಾ ಬಂದಿದೆ. ಇತ್ಯಾತ್ಮಕ ಪರಿಸರಕ್ಕಾಗಿ ವಿಶ್ವಸಂಸ್ಥೆ ವಿಶ್ವಾದ್ಯಂತ ನಡೆಸುವ ಸಂಭ್ರಮಾಚರಣೆ.

ಭೂಮಿಯ ಸುಮಾರು ಮೂರನೇ ಒಂದು ಭಾಗದಷ್ಟು ಜಾಗದಲ್ಲಿ ಅರಣ್ಯಗಳಿವೆ. ಅರಣ್ಯಗಳು ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾ ನಮ್ಮ ಪರಿಸರ ಮತ್ತು ಭೂಮಿಯನ್ನು ಜೀವಂತವಾಗಿರಿಸಿವೆ. ಇಂಗಾಲದ ಡೈ ಆಕ್ಸೈಡ್ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಮೂಲಕ ವಾತಾವರಣದಲ್ಲಿನ ಬದಲಾವಣೆಗಳ ವಿರುದ್ಧದ ಹೋರಾಟದಲ್ಲಿ ನಮಗೆ ಸಹಾಯಕವಾಗಿವೆ. ಬೆಲೆಕಟ್ಟಲಾಗದ ಪರಿಸರ, ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿವೆ. ಆದರೂ ನಮ್ಮ ಬದುಕಿಗೆ, ಉಸಿರಿಗೆ ಅನಿವಾರ್ಯವಾದ ಕಾಡನ್ನು ನಾಶ ಮಾಡುತ್ತಿದ್ದೇವೆ.

ಈ ಬಾರಿ ವಿಶ್ವ ಪರಿಸರ ದಿನದ ಥೀಮ್ ಅರಣ್ಯ. ನಿಸರ್ಗ ನಿಮ್ಮ ಸೇವೆಗಾಗಿ ಜೀವನದ ಗುಣಮಟ್ಟ, ಅರಣ್ಯದ ಆರೋಗ್ಯ, ಅರಣ್ಯದ ಪರಿಸರ ವ್ಯವಸ್ಥೆಗಳ ನಡುವಿನ ಸೂಕ್ಷ್ಮ ಸಂಬಂಧಗಳ ಬಗ್ಗೆ ಒತ್ತು ನೀಡುತ್ತದೆ. ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಭಾರತ ಹಸಿರು ಆರ್ಥಿಕತೆಯತ್ತ ಮುಖ ಮಾಡಿದೆ

ನಮ್ಮ ಮುಡಿಲಲ್ಲಿ ಪರಿಸರ:
ನಮ್ಮನ್ನು ಸಲಹಿದ ಪರಿಸರದ ಬಗ್ಗೆ ನಮಗೂ ಕಾಳಜಿ ಇರಬೇಕಲ್ಲವೆ. ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳುಮಾಡುತ್ತಿದ್ದೇವೆ.ಹಿತ-ಮಿತವಾಗಿಬಳಸುವುದನ್ನು ನಾವು ಕಲಿಯಬೇಕಿದೆ. ಸಂಪನ್ಮೂಲಗಳನ್ನು ಬಳಸುವಾಗಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳಿತು.
* ನೀರನ್ನು ಅವಶ್ಯಕತೆಗನುಗುಣವಾಗಿ ಬಳಸಿ.
* ಮಳೆ ನೀರನ್ನು ಸಾಧ್ಯವಾದಷ್ಟು ಬಳಸಿ ಹಾಗು ಅಂತರ್ಜಲದ ವೃದ್ಧಿಗೆ ಯೋಜನೆಗಳನ್ನು ರೂಪಿಸಿ.
*ನೀರಿನ ಮೊಲಗಳಾದ ಕೆರೆ,ಬಾವಿ,ಕೊಳ ಹಾಗು ನದಿಗಳ ಮಾಲಿನ್ಯವನ್ನು ತಡೆಯಿರಿ.

*ವಿಧ್ಯುಚ್ಚಕ್ತಿಯನ್ನು ಮಿತವಾಗಿ ಬಳಸಿ,ಇತರೆ ಮೂಲಗಳಿಂದ ವಿಧ್ಯುಚ್ಚಕ್ತಿಯನ್ನು ತಯಾರಿಸಿ,ಬಳಸುವ ವಿಧಾನಗಳನ್ನು ರೂಡಿಸಿಕೊಳ್ಳಿ.
* ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ಚೆಲ್ಲಬೇಡಿ.
* ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ.
* ಮರ-ಗಿಡಗಳನ್ನು ಹೆಚ್ಚಾಗಿ ಬೆಳಸಿ.
* ಕಸವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿ.
* ಬೈಸಿಕಲ್ ಅಥವಾ ನಡೆಯುವ ಹವ್ಯಾಸದಿಂದ ಆರೋಗ್ಯವೂ ವೃದ್ಧಿಸುತ್ತದೆ ಹಾಗು ಪರಿಸರ ಮಾಲಿನ್ಯವೂ ತಪ್ಪುತ್ತದೆ.
* ವಾರದಲ್ಲಿ ಒಂದು ದಿನವಾದರೂ ಸಾರ್ವಜನಿಕ ವಾಹನ ಬಳಸಿ.
* ಜವಾಬ್ದಾರಿಯುತ ನಾಗರೀಕರಾಗಿ ನಿಮ್ಮ ಹಕ್ಕು ಹಾಗು ಜವಾಬ್ದಾರಿಯನ್ನು ಅರಿತುಕೊಳ್ಳಿ.
* ಹಸಿರೇ ಉಸಿರು ಎಂಬ ತತ್ವದಲ್ಲಿ ನಂಬಿಕೆಯಿಡಿ.
* ಜನ ಸಾಮಾನ್ಯರಲ್ಲಿಪರಿಸರದ ಕಾಳಜಿಯ ಬಗ್ಗೆಅರಿವು ಮೂಡಿಸಿ.

ಇಲ್ಲಿ ಎಲ್ಲವೂ ಬದಲಾಗಿದೆ. ಎಲ್ಲೆಲ್ಲೂ ರಸ್ತೆ, ಕಟ್ಟಡಗಳು, ಪೇಟೆ, ವಾಹನ ದಟ್ಟಣೆ -ಒಂದೇ ಎರಡೇ. ಊರನ್ನು ಪರಿಚಯಿಸುವ ಪಾರಂಪರಿಕ ಗುರುತು, ಸಂಕೇತಗಳು ಸಂಪೂರ್ಣ ಮಾಯವಾಗಿವೆ. ಎಲ್ಲ ಪಟ್ಟಣಗಳೂ ಒಂದೇ ವಿಧ. ಊರಲ್ಲಿದ್ದ ಶಾಲೆ, ದೇಗುಲ, ಚರ್ಚ್, ಮಸೀದಿ, ಇವುಗಳ ಬಳಿ ಇರುತ್ತಿದ್ದ ವಿಶ್ರಾಂತಿ ಕಲ್ಲುಗಳು, ಆಲದ ಮರ, ಅಶ್ವತ್ಥ ಕಟ್ಟೆ, ಸಾಲುಸಾಲಾಗಿದ್ದ ಮಾವು, ಹಲಸು, ಧೂಪದ ಮರಗಳು ಹಾಗೂ ಹಲವು ನೈಸರ್ಗಿಕ ಸಂಕೇತಗಳಾದ ಉಬ್ಬು ತಗ್ಗುಗಳು, ಹಳ್ಳ ದಿನ್ನೆಗಳು, ತೋಡು ಇವೆಲ್ಲ ಜೆಸಿಬಿ ಹೊಡೆತಕ್ಕೆ ಸಿಕ್ಕಿ ಸಪಾಟಾಗಿವೆ, ನೆಲಸಮ ಆಗಿವೆ. ನೂರಾರು ವರ್ಷಗಳ ಹಿಂದೆ ಹೇಗಿದ್ದವೋ ಹಾಗೇ ಇದ್ದವು. ಭೂಮಿ, ನೆಲ ಇದ್ದಂತೆಯೇ ಜನ ಮನೆ ಕಟ್ಟಿದ್ದರು, ತೋಟ, ಹೊಲ ಗದ್ದೆಗಳೆಲ್ಲವನ್ನೂ ಮಾಡಿದ್ದರು. ಪರ್ವತ ವಿಹಾರಕೇಂದ್ರಗಳಿಗೆ ಸಾವಿರಾರು ಜನರು ಹೋಗಿ ಬರುತ್ತಿದ್ದರು. ಏಕೆ? ಏಕೆಂದರೆ ಅವು ಕೊಡುತ್ತಿದ್ದ ಸುಖಕ್ಕಾಗಿ, ನೆಮ್ಮದಿಗಾಗಿ. ಇದು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ -ಭೂ ಪ್ರದೇಶ ಹೇಗಿತ್ತೋ ಹಾಗೆಯೇ ಇರಿಸಿ ಜನರು ಜೀವಿಸಿದ್ದರು. ಭೂಪ್ರದೇಶವನ್ನು ಸಮ ತಟ್ಟು ಮಾಡಲಿಲ್ಲ. ಅವರು ಭೂಪ್ರದೇಶದ ನೈಸರ್ಗಿಕತೆಯನ್ನು ಉಳಿಸಿಕೊಂಡೇ ತಾವು ಬದುಕಿದರು. ನಮ್ಮ ಸಮೀಪದಲ್ಲೇ ಪದವು ಪ್ರದೇಶಗಳಲ್ಲೂ ಮನೆ, ಮಠ, ತೋಟ, ಕಾಡು, ಚಿಕ್ಕ ಹೊಲಗಳಿದ್ದವು. ಅವುಗಳಿಗೆ ಸ್ವಾಭಾವಿಕವಾಗಿಯೇ ನೀರಿನ ಪೂರೈಕೆಯಾಗುತ್ತಿತ್ತು. ಗುಡ್ಡದ ತುದಿಯ ಬಾವಿಯಲ್ಲೂ ಬೇಸಿಗೆಯಲ್ಲಿ ನೀರಿರುತ್ತಿತ್ತು. ಅಡಿಕೆ, ತೆಂಗು, ನೇರಳೆ, ಮಾವಿನ ಮರಗಳಿದ್ದವು. ಜನರು ಕಷ್ಟವೋ ಸುಖವೋ ಅದಕ್ಕೆ ಹೊಂದಿಕೊಂಡಿದ್ದರು. ಆದರೆ ಈಗ ಆ ಮನಃಸ್ಥಿತಿ ಯಾಕಿಲ್ಲವೆಂಬುದೇ ನಿಗೂಢ! ಕಾಲೇಜು, ಕಚೇರಿ, ವಸತಿ ಸಮುಚ್ಚಯಗಳಿಗೆ ನೆಲ”ಸಮ’ ಮಾಡಲೇಬೇಕೆ, ನಮ್ಮ ಸುತ್ತಮುತ್ತಲಿನ ಅಜ್ಜ, ಮುತ್ತಜ್ಜನ ಕಾಲದಿಂದಲೂ ಇದ್ದ ಮಾವು, ಹಲಸು, ಹೆಬ್ಬಲಸು, ರೆಂಜ, ಸುರಗಿ, ಧೂಪ, ಅಶ್ವತ್ಥ ವೃಕ್ಷಗಳು ಅವು ಎಲ್ಲೇ ಇರಲಿ, ಇರಗೊಡುತ್ತಿದ್ದರು ನಮ್ಮ ಹಿರಿಯರು. ಹೆದ್ದಾರಿ ಪಕ್ಕದಲ್ಲಿ, ಶಾಲಾ ಕಾಲೇಜು, ಕಚೇರಿಗಳ ವಠಾರಗಳಲ್ಲಿ ಇರುತ್ತಿದ್ದ ಮರಗಳು ಈಗೆಲ್ಲಿ? ನಾವು ಅವುಗಳಿಗೆ ಕೊಟ್ಟ ಹೆಸರು “ಹೆರಿಟೇಜ್ ಟ್ರೀಸ್'(ಪಾರಂಪರಿಕ ವೃಕ್ಷ ಗಳು). ಇವು ಕೇವಲ ಮರಗಳಲ್ಲ. ನೂರಾರು ಜಾತಿಯ ಕೀಟಗಳು, ಹುಳ ಹುಪ್ಪಟೆಗಳು, ಪಕ್ಷಿಗಳು, ಪ್ರಾಣಿಗಳಿಗೆಲ್ಲ ಆಶ್ರಯ ತಾಣಗಳು. ಉಡುಪಿಗೆ ಸಮೀಪದ ನೀಲಾವರ ಗುಡ್ಡದಲ್ಲೊಂದು ಎತ್ತರದ ಮರ- ಹೆಬ್ಬಲಸು/ ಧೂಪ ಇರಬೇಕು- ಐದಾರು ಕಿ. ಮೀ. ದೂರದ ಕುಂಜಾಲಿಗೆ ಕಾಣಿಸುತ್ತಿತ್ತು. ಅದೀಗ ರೈಲು ಮಾರ್ಗಕ್ಕೆ ಎಡೆಮಾಡಿ ಕೊಟ್ಟಿದೆ. ಇಂಥ ನೂರಾರು ಮರಗಳು ಐದಾರು ವರ್ಷಗಳಿಂದೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ಹೇಳಹೆಸರಿಲ್ಲದಂತೆ ಮಾಯ ವಾಗಿವೆ. ಇವನ್ನು ಮತ್ತೆ ಸೃಜಿಸುವವರು ಯಾರು? “ಕಡಿದವನು ನಾನಲ್ಲ, ಮತ್ತೆ ನೆಡುವುದಕ್ಕೆ ನಾನು ಜವಾಬ್ದಾರನಲ್ಲ’ ಎಂಬ ಧೋರಣೆ ಪ್ರತಿಯೊಬ್ಬನದೂ. ಹೀಗೇ ಮುಂದುವರಿದರೆ ಮುಂದಿನ ಮಕ್ಕಳು ಅಪರೂಪದ ಮರಗಳನ್ನು ಬಿಡಿ, ಸಾಮಾನ್ಯ ಪ್ರಭೇದಗಳಾದ ಧೂಪ, ಹೆಬ್ಬಲಸು, ಕಾಟುಮಾವು, ರಂಜೆ, ಸುರಗಿ, ಆಲ, ಅಶ್ವತ್ಥ ಮುಂತಾದ ಮರಗಳನ್ನು ಗುರುತಿಸುವುದನ್ನು ಬಿಟ್ಟು, ಕಾಣಲೂ ಸಾಧ್ಯವಾಗಲಾರದು. ಆಗ ನಮ್ಮ ಸಂಸ್ಕೃತಿ, ನಾಗರಿಕತೆಗಳ ಬಗ್ಗೆ ಏನೆನ್ನಬೇಕು? ಪರಿಸರ ವರದಿ ಸಂಹಿತೆ ತಾರ್ಕಿಕ ಹಾಗೂ ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಲ್ಲಿ ತಳಮಟ್ಟದ ದಾಖಲೆಯಾಗಿ ಸಹಕರಿಸುವ ಭಾರತದ ಪಾರಿಸರಿಕ ಸನ್ನಿವೇಶದ ಪುನರವಲೋಕನ ನಡೆಸುವುದು ಭಾರತದ ಪರಿಸರ ವರದಿ ಸಂಹಿತೆಯ ಮುಖ್ಯ ಉದ್ದೇಶವಾಗಿದೆ. ಎಸ್ಒಇ ವರದಿಯು ನೀತಿ ಸೂಚನಾವಳಿಗಳನ್ನು ನೀಡಲು, ಹಾಗೂ ಮುಂಬರುವ ದಶಕಗಳಿಗಾಗಿ ಪರಿಸರದ ಸ್ಥಿತಿಗತಿ ಹಾಗೂ ಪಾರಿಸರಿಕ ಒಲವುಗಳ ವಿಶ್ಲೇಷಣೆಯ ಆಧಾರದ ಮೇಲೆ ಸಂಪನ್ಮೂಲ ಕ್ರೋಢೀಕರಣಕ್ಕೆ ಕಾರ್ಯತಂತ್ರಗಳನ್ನು ಒದಗಿಸಲು, ಮತ್ತು ರಾಷ್ಟ್ರೀಯ ಪಾರಿಸರಿಕ ಕ್ರಿಯಾ ಯೋಜನೆ ರಚನೆಗೆ ನಿಯಮಾವಳಿಗಳನ್ನು ಒದಗಿಸಲು ಉದ್ದೇಶಿತವಾಗಿದೆ.

ಭಾರತೀಯ ಪರಿಸರ ವರದಿ ಸಂಹಿತೆಯು ಪರಿಸರದ ಸ್ಥಿತಿಗತಿ ಹಾಗೂ ಒಲವುಗಳನ್ನು ಒಳಗೊಳ್ಳುತ್ತದೆ (ನೆಲ, ಜಲ, ಗಾಳಿ, ಜೀವ ವೈವಿಧ್ಯ) ಮತ್ತು ಐದು ಮುಖ್ಯ ಸಂಗತಿಗಳಾದ ಹವಾಗುಣ ಬದಲಾವಣೆ, ಆಹಾರ ಭದ್ರತೆ, ಜಲ ಭದ್ರತೆ, ಶಕ್ತಿ ಭದ್ರತೆ ಹಾಗೂ ನಗರೀಕರಣದ ನಿರ್ವಹಣೆಗಳನ್ನು ಒಳಗೊಳ್ಳುತ್ತದೆ.

ಈ ವರದಿಯು ಭಾರತದ ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳು, ಪಾರಿಸರಿಕ ಬದಲಾವಣೆಗಳ ಹಿಂದಿನ ಒತ್ತಡ ಮತ್ತು ಈ ಬದಲಾವಣೆಗಳೊಂದಿಗೆ ಬೆಸೆದುಕೊಂಡಿರುವ ಪರಿಣಾಮಗಳ ಪ್ರಚಲಿತ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಆದ್ಯತೆಯ ಮೇರೆಗೆ ವಿವಿಧ ಒಳನೊಟಗಳನ್ನು ಒದಗಿಸುತ್ತದೆ. ವರದಿಯು ಪರಿಸರದ ಹೆಚ್ಚಿನ ವಿನಾಶವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಚಲಿತ ಹಾಗೂ ಉದ್ದೇಶಿತ ನೀತಿ ಉಪಕ್ರಮಗಳು ಅಥವಾ ಕಾರ್ಯಕ್ರಮಗಳ ಮೇಲೆಯೂ ಬೆಳಕು ಚೆಲ್ಲುತ್ತದೆ ಮತ್ತು ಕೆಲವು ನಿಯಮಗಳ ಆಯ್ಕೆಯನ್ನು ಕೂಡ ಸಲಹೆ ಮಾಡುತ್ತದೆ.

ಪ್ಲಾಸ್ಟಿಕ್ ಚೀಲಗಳು- ಒಂದು ಪಾರಿಸರಿಕ ಅಪಾಯ
ಪ್ಲಾಸ್ಟಿಕ್ ಚೀಲಗಳಿಂದ ಮುಖ್ಯವಾಗಿ ತೊಂದರೆ ಉಂಟಾಗುವುದು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪದಿಂದ. ಅವೈಜ್ಞಾನಿಕವಾಗಿ ಸೇರಿಸಲ್ಪಟ್ಟ ರಾಸಾಯನಿಕಗಳು ಪರಿಸರಕ್ಕೆ ಧಕ್ಕೆಯನ್ನು ತಂದೊಡ್ಡುತ್ತವೆ. ತೆರೆದ ಮೋರಿಗಳಲ್ಲಿ ತ್ಯಾಜ್ಯದ ಹರಿವಿಗೆ ಅಡ್ಡಿಯುಂಟು ಮಾಡುವುದು, ಅಂತರ್ಜಲ ಕಲುಷಿತಗೊಳಿಸುವುದೇ ಮೊದಲಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ಪ್ಲಾಸ್ಟಿಕ್ ಎಂದರೇನು?

ಪ್ಲಾಸ್ಟಿಕ್ ಒಂದು ಪಾಲಿಮರ್ ಆಗಿದೆ. ಪಾಲಿಮರ್ಗಳು ಪುನರಾವರ್ತಿತ ಮಾನೋಮರ್ ಘಟಕಗಳನ್ನು ಹೊಂದಿರುತ್ತವೆ. ಪ್ಲಾಸ್ಟಿಕ್ ಚೀಲಗಳಲ್ಲಿ, ಈ ಪುನರಾವರ್ತಿತ ಘಟಕಗಳು ಇಥೈಲೀನ್ದಾಗಿರುತ್ತದೆ. ಪಾಲಿಥೈಲೀನ್ ಅನ್ನು ಪಡೆಯಲು ಇಥೈಲೀನ್ ಮಾಲಿಕ್ಯೂಲ್ಗಳನ್ನು ಪಾಲಿಮರೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪ್ರತಿ ಇಂಗಾಲದ ಪರಮಾಣುವಿಗೆ ಎರಡು ಜಲಜನಕದ ಪರಮಾಣುಗಳು ಬೆಸೆದುಕೊಂಡಿರುವ ಉದ್ದನೆಯ ಇಂಗಾಲದ ಪರಮಾಣು ಸರಪಳಿಯು ರೂಪುಗೊಳ್ಳುತ್ತದೆ.

ಪ್ಲಾಸ್ಟಿಕ್ ಚೀಲಗಳು ಯಾವುದರಿಂದ ಮಾಡಲ್ಪಟ್ಟಿರುತ್ತವೆ?
ಪ್ಲಾಸ್ಟಿಕ್ ಚೀಲಗಳು ಪಾಲಿಮರ್-ಪಾಲಿಥೈಲೀನ್ಗಳ ಮೂರು ಮೂಲ ಬಗೆಗಳಾದ ಉನ್ನತ ಸಾಂದ್ರತೆಯ ಪಾಲಿಥೈಲೀನ್ (HDPE), ಕಡಿಮೆ ಸಾಂದ್ರತೆಯ ಪಾಲಿಥೈಲೀನ್ (LDPE), ಅಥವಾ ಅತ್ಯಂತ ಕಡಿಮೆ ಸಾಂದ್ರತೆಯ ಪಾಲಿಥೈಲೀನ್ (LLDPE) ಇವುಗಳಲ್ಲೊಂದರಿಂದ ಮಾಡಲ್ಪಟ್ಟಿರುತ್ತವೆ. ನಾವು ಸಾಮಾನು ತರುವ ಪ್ಲಾಸ್ಟಿಕ್ ಚೀಲಗಳು ಸಾಮಾನ್ಯವಾಗಿ HDPE ಯವಾಗಿರುತ್ತವೆ. ದೋಭಿಗಳು ನೀಡುವ ಚೀಲಗಳು LDPE ಯವಾಗಿರುತ್ತವೆ. ಈ ವಸ್ತುಗಳ ನಡುವಿನ ವ್ಯತ್ಯಾಸವು ಪಾಲಿಮರ್ ಸರಪಳಿಯ ಕವಲುಗಳ ಕೋನಗಳನ್ನು ಆಧರಿಸಿರುತ್ತದೆ. HDPE ಮತ್ತು LLDPE ಗಳು ನೇರ-ಕವಲಿಲ್ಲದ ಸರಪಳಿಗಳಿಂದ ಸಂಯೋಜನೆಗೊಂಡಿರುತ್ತವೆ ಮತ್ತು LLDPE ಗಳು ಕವಲುಗಳಿಂದ ಕೂಡಿರುತ್ತವೆ.

ಪ್ಲಾಸ್ಟಿಕ್ಗಳು ಆರೋಗ್ಯಕ್ಕೆ ಮಾರಕವೇ?
ಮೂಲತಃ ಪ್ಲಾಸ್ಟಿಕ್ಗಳು ವಿಷಕಾರಿಗಳಾಗಲೀ ಅಪಾಯಕಾರಿಗಳಾಗಲೀ ಅಲ್ಲ. ಆದರೆ ಪ್ಲಾಸ್ಟಿಕ್ ಚೀಲಗಳನ್ನು ಜೈವಿಕ ಮತ್ತು ಅಜೈವಿಕ ವಸ್ತುಗಳಾದ ಕಲರಂಟ್ಗಳು ಮತ್ತು ಪಿಗ್ಮೆಂಟ್ಗಳು, ಪ್ಲಾಸ್ಟಿಸೈಜ್ಂತಗಳು, ಆಂಟಿ ಒಕ್ಸಿಡೆಂಟ್ಗಳು, ಸ್ಟೆಬಲೈಜ್ಟಿಗಳು ಮತ್ತು ಲೋಹಗಳನ್ನು ಬಳಸಿ ತಯಾರಿಸಲಾಗುತ್ತದೆ. ಕಲರಂಟ್ ಮತ್ತು ಪಿಗ್ಮೆಂಟ್ಗಳು ಕೈಗಾರಿಕೆಗಳಲ್ಲಿ ಬಳಸುವ ವಸ್ತುಗಳಾಗಿದ್ದು, ಪ್ಲಾಸ್ಟಿಕ್ ಕೈಚೀಲಗಳಿಗೆ ಗಾಢ ಬಣ್ಣವನ್ನು ಒದಗಿಸಲು ಬಳಸಲ್ಪಡುತ್ತವೆ. ಇವುಗಳಲ್ಲಿ ಕೆಲವು ರಾಸಾಯನಿಕವಾಗಿ ವರ್ತಿಸುತ್ತವೆ ಮತ್ತು ಅವುಗಳಲ್ಲಿ ಇರಿಸಲಾದ ಆಹಾರವನ್ನು ಕಲುಷಿತಗೊಳಿಸುತ್ತವೆ. ಪಿಗ್ಮೆಂಟ್ಗಳಲ್ಲಿ ಇರುವ ಕ್ಯಾಡ್ಮಿಯಮ್ನಂತಹ ಭಾರದ ಲೋಹಗಳು ಕೂಡ ಹೊರಹೊಮ್ಮಿ ಆರೋಗ್ಯಕ್ಕೆ ಅಪಾಯ ತಂದೊಡ್ಡಬಲ್ಲವು. ಪ್ಲಾಸ್ಟಿಸೈಜರ್ಗಳು ಜೈವಿಕ ಸಂಯುಕ್ತ ರಾಸಾಯನಿಕ ವಸ್ತುಗಳಾಗಿದ್ದು, ಅತಿ ಕಡಿಮೆ ಚಲನ ಸ್ವಭಾವದವಾಗಿರುತ್ತವೆ. ಇವು ಆಹಾರ ಕಣಗಳಲ್ಲಿ ಸೇರಿ ಅದನ್ನು ಕಲುಷಿತಗೊಳಿಸಬಲ್ಲವು. ಪ್ಲಾಸ್ಟಿಸೈಜರ್ಗಳು ಕೂಡ ವಿಷಕಾರಕಗಳೇ. ಆಂಟಿ ಒಕ್ಸಿಡೆಂಟ್ಗಳು ಮತ್ತು ಸ್ಟೆಬಲೈಸರ್ಗಳು ಅಜೈವಿಕ ಹಾಗೂ ಜೈವಿಕ ರಾಸಾಯನಿಕಗಳಾಗಿದ್ದು, ತಯಾರಿಕಾ ಪ್ರಕ್ರಿಯೆಯಲ್ಲಿ ಶಾಖದಿಂದ ಕರಗದಂತೆ ರಕ್ಷಿಸುತ್ತವೆ. ಪ್ಲಾಸ್ಟಿಕ್ ಚೀಲಗಳ ತಯಾರಿಕೆಯಲ್ಲಿ ಬಳಸಲಾಗುವ ಕ್ಯಾಡ್ಮಿಯಮ್ ಹಾಗೂ ಲೆಡ್(ಸತು)ನಂತಹ ವಿಷಕಾರಿ ಲೋಹಗಳು ಕೂಡ ಕರಗಿ ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುವವು. ಕಡಿಮೆ ಪ್ರಮಾಣದಲ್ಲಿ ಕ್ಯಾಡ್ಮಿಯಮ್ ಅನ್ನು ಸೇವಿಸುವುದರಿಂದ ವಾಂತಿ ಉಂಟಾಗುತ್ತದೆ ಮತ್ತು ಹೃದಯ ಹಿಗ್ಗುವ ಅಪಾಯವಿರುತ್ತದೆ. ದೀರ್ಘ ಕಾಲದವರೆಗೆ ಲೆಡ್ (ಸತು) ಲೋಹಕ್ಕೆ ತೆರೆದುಕೊಳ್ಳುವುದರಿಂದ ಮೆದುಳಿನ ಅಂಗಾಂಶಗಳ ಸವೆತ ಉಂಟಾಗುತ್ತದೆ.

ಪ್ಲಾಸ್ಟಿಕ್ ಕೈಚೀಲಗಳಿಂದ ಉಂಟಾಗುವ ಸಮಸ್ಯೆಗಳು
ಪ್ಲಾಸ್ಟಿಕ್ ಚೀಲಗಳನ್ನು ಸೂಕ್ತವಾದ ರೀತಿಯಲ್ಲಿ ವಿಸರ್ಜಿಸದೆ ಹೋದರೆ, ಅದು ಚರಂಡಿಗಳೊಳಗೆ ಸೇರಿ, ಕೊಳಚೆಯ ಹರಿವಿಗೆ ತಡೆಯೊಡ್ಡುವ ಮೂಲಕ ನಿಂತ ನೀರಿನ ಕಾಯಿಲೆಗಳೇ ಮೊದಲಾದ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಪುನರ್ಬಳಕೆಯ /ಬಣ್ಣ ಲೇಪಿತ ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕಗಳನ್ನು ಹೊಂದಿರಬಹುದಾಗಿದ್ದು, ಮಣ್ಣನ್ನು ಮತ್ತು ಅಂತರ್ಜಲವನ್ನು ಕಲ್ಮಷಗೊಳಿಸುತ್ತವೆ. ಪುನರುತ್ಪಾದನೆಗೆ ಸರಿಯಾದ ಪರಿಕರಗಳು ಇಲ್ಲದೆ ಹೋದಲ್ಲಿ, ಈ ಪ್ರಕ್ರಿಯೆಯ ಸಂದರ್ಭದಲ್ಲಿ ವಿಷಕಾರಿ ಅನಿಲಗಳು ಹೊರಹೊಮ್ಮಿ ವಾತಾವರಣವು ಕಲುಷಿತಗೊಳ್ಳುವ ಸಾಧ್ಯತೆಗಳಿರುತ್ತದೆ. ಆಹಾರಗಳಿರುವ ಪ್ಲಾಸ್ಟಿಕ್ ಚೀಲ ಅಥವಾ ಇತರ ತ್ಯಾಜ್ಯಗಳಲ್ಲಿನ ಇತರ ವಸ್ತುಗಳೊಂದಿಗೆ ಸೇರಿಕೊಂಡಿರುವ ಪ್ಲಾಸ್ಟಿಕ್ ಅನ್ನು ಪಶುಗಳು ಸೇವಿಸುವುದರಿಂದ ತೀವ್ರತರ ದುಷ್ಪರಿಣಾಮಗಳುಂಟಾಗುತ್ತವೆ. ಪ್ಲಾಸ್ಟಿಕ್ಗಳು ಕೊಳೆಯುವುದಿಲ್ಲವಾದ್ದರಿಂದ, ಎಲ್ಲೆಂದರಲ್ಲಿ ಹಾಕಿದಾಗ, ಅವು ಮಣ್ಣಿನಲ್ಲಿ ಹುದುಗಿ, ನೀರು ಭೂಮಿಯೊಳಕ್ಕಿಳಿದು ಅಂತರ್ಜಲ ಮರುಪೂರಣಗೊಳ್ಳುವಿಕೆಗೆ ತಡೆಯೊಡ್ಡುತ್ತವೆ. ಪ್ಲಾಸ್ಟಿಕ್ನ ಗುಣಮಟ್ಟ ಉತ್ತಮಗೊಳಿಸಲು ಕೆಲವು ರಾಸಾಯನಿಕಗಳನ್ನು, ಅಗ್ನಿನಿರೋಧಕಗಳನ್ನು ಹಾಗೂ ಮತ್ತಿತರ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಇವು ಆರೋಗ್ಯದ ಮೇಲೆ ಪರಿಣಾಮ ಬೀರುವಂಥ ವಸ್ತುಗಳಾಗಿವೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಕಾರ್ಯತಂತ್ರಗಳು
ತೆಳು ಪ್ಲಾಸ್ಟಿಕ್ ಚೀಲಗಳು ಅಗ್ಗವಾಗಿದ್ದು, ಅವುಗಳ ತ್ಯಾಜ್ಯ ನಿರ್ವಹಣೆ ಬಹಳ ಕಷ್ಟದ್ದಾಗಿರುತ್ತದೆ. ಪ್ಲಾಸ್ಟಿಕ್ ಚೀಲಗಳ ದಪ್ಪದಲ್ಲಿ ಹೆಚ್ಚಳವಾದರೆ, ಅವುಗಳ ಬೆಲೆಯೂ ಹೆಚ್ಚುತ್ತದೆ, ಬಳಕೆಯ ಮೆಲೆ ನಿಯಂತ್ರಣವೂ ಇರುತ್ತದೆ. ಪ್ಲಾಸ್ಟಿಕ್ ಉತ್ಪಾದಕ ಸಂಘ ಹಾಗೂ ಚಿಂದಿ ಆಯುವವರು ಕೂಡ ತ್ಯಾಜ್ಯ ಸಂಗ್ರಹ ಮತ್ತು ಅವುಗಳ ನಿರ್ವಹಣಾ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.

ಪ್ಲಾಸ್ಟಿಕ್ ಚೀಲಗಳು ಮತ್ತು ನೀರಿನ ಬಾಟಲಿಗಳ ತ್ಯಾಜ್ಯ ನಿರ್ವಹಣೆ ಪುರಸಭೆಯ ನೈರ್ಮಲ್ಯ ಪ್ರಕ್ರಿಯೆಗೊಂದು ಸವಾಲು. ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಸಿಕ್ಕಿಮ್ ಮೊದಲಾದ ರಾಜ್ಯಗಳ ಪರ್ವತ ಪ್ರಾಂತ್ಯಗಳ ಪ್ರವಾಸೀತಾಣಗಳಲ್ಲಿ ಪ್ಲಾಸ್ಟಿಕ್ ಚೀಲ/ಬಾಟಲಿಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ, ಅಲ್ಲಿನ ರಾಜ್ಯ ಸರ್ಕಾರವು ಹಿಮಾಚಲಪ್ರದೇಶ ಕೊಳೆಯದಿರುವ ತ್ಯಾಜ್ಯ (ನಿಯಂತ್ರಣ) ಕಾಯ್ದೆ,1995 ರ ಅಡಿಯಲ್ಲಿ, ರಾಜ್ಯಾದ್ಯಂತ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದೆ. ಇದು 15.08.2009 ರಿಂದ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಪ್ಲಾಸ್ಟಿಕ್ನಿಂದ ಉಂಟಾಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ಅಧ್ಯಯನ ಸಮಿತಿ ಹಾಗೂ ಕ್ರಿಯಾ ಮಂಡಳಿಗಳ ಸಲಹೆಗಳನ್ನು ಪಡೆದು ನಿಯಮಗಳನ್ನು ರೂಪಿಸಿದೆ.

ಪ್ಲಾಸ್ಟಿಕ್ ಚೀಲ ಹಾಗೂ ಪಾತ್ರೆಗಳ ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪರಿಸರು ಮತ್ತು ಅರಣ್ಯ ಇಲಾಖಾ ಸಚಿವಾಲಯವು 1999 ರಲ್ಲಿ ಪುನರ್ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯ ನಿಯಮಗಳನ್ನು ಜಾರಿಗೆ ತಂದಿತು ಮತ್ತು 2003 ರಲ್ಲಿ ಪರಿಸರ (ರಕ್ಷಣಾ)ಕಾಯ್ದೆ, 1986ರ ಅಡಿಯಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿತು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), 10 ವಿಧದ ಕೊಳೆಯಬಲ್ಲ ಪ್ಲಾಸ್ಟಿಕ್ ಬಗೆಗಳನ್ನು ಗುರುತಿಸಿ ಮಾನ್ಯ ಮಾಡಿದೆ.

ಪ್ಲಾಸ್ಟಿಕ್ಗೆ ಪರ್ಯಾಯ
ನಾರಿನ ಅಥವಾ ಬಟ್ಟೆಯ ಚೀಲಗಳು ಪ್ಲಾಸ್ಟಿಕ್ ಕೈಚೀಲಗಳಿಗೆ ಪರ್ಯಾಯವಾಗಬಲ್ಲವು. ಪೇಪರ್ ಬ್ಯಾಗ್ಗಳನ್ನು ಜನಪ್ರಿಯಗೊಳಿಸುವುದರಿಂದ ಕೂಡ ಪ್ಲಾಸ್ಟಿಕ್ ಬಳಕೆಯಲ್ಲಿ ಕಡಿತವನ್ನು ತರಬಹುದು. ಆದರೆ ಇದಕ್ಕೆ ಮರಗಳನ್ನು ಬಳಸಬೇಕಾಗುವುದರಿಂದ ಈ ಉಪಾಯ ಕೂಡ ಸೀಮಿತವಾದುದಾಗಿದೆ. ಜೈವಿಕವಾಗಿ ಕೊಳೆಯಬಲ್ಲಂತಹ ಪ್ಲಾಸ್ಟಿಕ್ ಚೀಲಗಳನ್ನೇ ಬಳಸುವುದು ಹಾಗೂ ಜೈವಿಕವಾಗಿ ಕೊಳೆಯಬಲ್ಲ ಪ್ಲಾಸ್ಟಿಕ್ ಬಗೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ನಮ್ಮೆದುರಿನ ಅತ್ಯುತ್ತಮ ಉಪಾಯಗಳು.
–  ಕೆ ರವಿಕುಮಾರ್ ಕೋಲಾರ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: