ನಿನ್ನಲ್ಲಿರುವ ಸತ್ವವಾದರೂ ಯಾವುದು? ಬರೀ ಅಮೂರ್ತವಾದ ಜಾತಿಯೇ?

ರಾಜಕಾರಣದ ಹಿಂದಿರುವ ಬಹು ಮುಖ್ಯವಾದ ಕಾರಣವಾಗಿ ಜಾತಿ ಕೆಲಸ ಮಾಡುತ್ತಿದೆ. ಜಾತಿ ಬಿಟ್ಟರೆ ಕೆಟ್ಟೇನು ಎನ್ನುವ ಹಾಗೆ ರಾಜಕೀಯ ನಾಯಕರುಗಳು ತನ್ನ ಹಿಂದೆ ತನ್ನ ಜಾತಿಯ ಜನರಿದ್ದಾರೆ ಎನ್ನುವ ಜೊತೆಗೆ ಇತರೆ ಜಾತಿಯವರೂ ತನಗೆ ಬೆಂಬಲವಿದ್ದಾರೆ ಎಂದು ಹೇಳುವ ಮೂಲಕವೇ ಟಿಕೆಟ್ ಗಿಟ್ಟಿಸುವ ಸಂದರ್ಭದಲ್ಲಿ ತಾತ್ವಿಕ ಬದ್ಧತೆಯನ್ನಿಟ್ಟುಕೊಂಡು ರಾಜಕಾರಣ ಮಾಡುವವರನ್ನು ಅದಾಗಲೇ ಮಣ್ಣು ಕೊಟ್ಟಾಗಿದೆ. ಜಾತಿಯ ವಾಸನೆ ಈಗೀಗ ತೀರಾ ದಟ್ಟವಾಗತೊಡಗಿದೆ. ಸಾರ್ವಜನಿಕ ವಲಯದ ಮೂಲೆ ಮೂಲೆಯನ್ನೂ ಸ್ಪರ್ಷಿಸಿದ ಈ ಜಾತಿ ಎಲ್ಲಾ ಕಡೆ ತನ್ನ ಸರ್ವವ್ಯಾಪಕತೆಯನ್ನು ಮೆರೆಯುವ ಮೂಲಕ ಸಮರ್ಥರಿಗೂ ಅನ್ಯಾಯವಾಗುವ ಕೆಲಸವನ್ನು ಮಾಡುತ್ತಲೇ ಮುನ್ನಡೆದಿದೆ.

ಇತ್ತೀಚಿನ ದಿನಗಳಲ್ಲಿ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ, ತನ್ನ ಜಾತಿಯವರನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಕೂಗು ಮತ್ತೆ ಮತ್ತೆ ಕೇಳಿಬರುತ್ತಿದೆ. ಈ ದೇಶದಲ್ಲಿ ಮೂರುಸಾವಿರಕ್ಕಿಂತಲೂ ಹೆಚ್ಚು ಜಾತಿ ಉಪಜಾತಿಗಳಿವೆ. ಪ್ರತಿಯೊಂದು ಜಾತಿಯೂ ತನ್ನದೇಯಾದ ಒಂದು ಪುಟ್ಟ ಪ್ರಪಂಚವನ್ನು ಸ್ಥಾಪಿಸಿಕೊಂಡು ನಡುಗಡ್ಡೆಗಳ ಹಾಗೆ ಗೋಚರವಾಗುವ ಜೊತೆಗೆ, ರಾಷ್ಟ್ರೀಯ ಐಕ್ಯತೆಯಲ್ಲೂ ಪರೋಕ್ಷವಾಗಿ ಗಂಡಾಂತರಕಾರಿಯಾಗುವ ಕೆಲಸವನ್ನು ಮಾಡುತ್ತಿವೆ. ಈ ಸಾವಿರಾರು ಸಂಖ್ಯೆಯಲ್ಲಿರುವ ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗಲು ಶುರು ಮಾಡಿದರೆ ನಿಜವಾಗಿಯೂ ಅನ್ಯಾಯವಾಗಿ ಕೂಗದೇ ಇರುವವರನ್ನು ಕೇಳುವವರು ಯಾರು? ಒಂದು ರಾಷ್ಟ್ರದ ಮಾನವ ಸಂಪನ್ಮೂಲದ ಶಕ್ತಿ ಸಾಮರ್ಥ್ಯಗಳು ನಿರ್ಣಯವಾಗಬೇಕಾದುದು ಹೀಗೆ ಆಯಾ ಜಾತಿಯವರು ತನ್ನ ಜಾತಿಯನ್ನು ಮುಂದಿಟ್ಟುಕೊಂಡು ಮಾಡುವ ಶಿಫಾರಸುಗಳ ಮೂಲಕವಲ್ಲ. ಬದಲಾಗಿ ಯೋಗ್ಯ ವ್ಯಕ್ತಿಗೆ ಯೋಗ್ಯ ಸ್ಥಾನ ಎನ್ನುವ ಮೂಲಕ. ನಾನು [ಅ] ಎನ್ನುವ ಜಾತಿಗೆ ಸಂಬಂಧಿಸಿದವನು ಹಾಗಾಗಿಯೇ ನನಗೆ ಈ ಸ್ಥಾನಮಾನಗಳು ಸಿಗಬೇಕು. ನಾನು [ಬ] ಎನ್ನುವ ಜಾತಿಗೆ ಸಂಬಂಧಿಸಿದವ, ಮತ್ತೊಬ್ಬ [ಸಿ] ಅನ್ನುವ ಜಾತಿಗೆ ಸಂಬಂಧಿಸಿದವ, ಇದು ಹಾಗೇ ಮುಂದುವರೆಯುತ್ತದೆ. ಇದು ನಿನ್ನ ಜಾತಿಯನ್ನು ಮುಂದೆ ಮಾಡಿಕೊಂಡು ಕೇಳುವ ಹಕ್ಕಾಯಿತು. ಅಷ್ಟಕ್ಕೂ ನಿನ್ನಲ್ಲಿರುವ ಸತ್ವವಾದರೂ ಯಾವುದು? ಬರೀ ಅಮೂರ್ತವಾದ ಜಾತಿಯೇ? ಹೀಗೆ ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗಲು ಆರಂಭಿಸಿದರೆ ಆ ಅನ್ಯಾಯ ಪದಕ್ಕೆ ಅರ್ಥವೇ ಇರುವುದಿಲ್ಲ.

ಚಾರಿತ್ರಿಕವಾಗಿ ಸಾವಿರಾರು ವರ್ಷಗಳ ಕಾಲ ಶೋಷಣೆಯನ್ನು ಅನುಭವಿಸಿದ ದಮನಿತ ಜಾತಿಗಳು ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೇಳುವಲ್ಲಿ ಒಂದು ತಥ್ಯವಿದೆ. ಸಾವಿರಾರು ವರ್ಷಗಳಿಂದಲೂ ಎಲ್ಲ ಬಗೆಯ ಗೌರವಾರ್ಹ ಅಂತಸ್ತು ಮತ್ತು ಸೌಲಭ್ಯಗಳನ್ನು ಅನುಭಸಿಯೂ ತನ್ನ ಜಾತಿಗೂ ಅನ್ಯಾಯವಾಗಿದೆ ಎಂದು ಕೂಗುವಲ್ಲಿ ತುಂಬಾ ವ್ಯತ್ಯಾಸಗಳಿವೆ. ಹಾಗೆಂದು ಜಾತಿಯನ್ನಿಟ್ಟುಕೊಂಡು ಸಾಮರ್ಥ್ಯವನ್ನು ಸರಿದೂಗಿಸಿಕೊಳ್ಳುವ ಕ್ರಮ ಯಾವ ಕಾಲಕ್ಕೂ ಸರಿಯಲ್ಲ. ಯಾಕೆಂದರೆ ಯಾವ ಕಾಲಕ್ಕೂ ಖರೆ ಖರೆ ಸಮರ್ಥರಾದವರಿಗೆ ಅನ್ಯಾಯವಾಗಬಾರದು. ಅದು ಜಾತಿ, ಭಾಷೆ, ಜನಾಂಗ ಯಾವುದರ ಮೂಲಕವಾದರೂ ಇರಬಹುದು. ಒಂದು ರಾಷ್ಟ್ರದ ಮಾನವ ಸಂಪನ್ಮೂಲ ಅದು ಹೊಂದಿರುವ ತನ್ನ ಅಂತ:ಸತ್ವದ ಮೂಲಕ ಪ್ರಜ್ವಲಿಸಬೇಕೇ ಹೊರತು ಯಾರೋ ಒಬ್ಬ ಜಾತಿ ಪ್ರತಿನಿಧಿಯ ಹಂಬಲದಿಂದಾಗಲೀ, ಹುನ್ನಾರದಿಂದಾಗಲೀ ಅಲ್ಲ. ಯಾವುದೇ ಜಾತಿಗೆ ಸಂಬಂಧಿಸಿರಲಿ ಅವನಲ್ಲಿ ಸತ್ವ ಮತ್ತು ಶಕ್ತಿ ಇದೆ ಎಂದರೆ ಅದನ್ನು ನಾವು ಯಾವುದೇ ಜಾತಿಗೆ ಸಂಬಂಧ ಪಟ್ಟವರಾದರೂ ಗೌರವಿಸಲೇಬೇಕು. ಗುಣಕ್ಕೆ ಮತ್ಸರವಿಲ್ಲ ಎಂದವರು ನೀವೇ ಅಲ್ಲವೇ? ಹೀಗಾಗಿ ಗುಣಗೌರವ ಅನಿವಾರ್ಯ. ತಮ್ಮ ತಮ್ಮ ಜಾತಿಯ ತೌಡನ್ನೇ ಗಟ್ಟಿ ಕಾಳು ಎಂದು ಬಿಂಬಿಸುವ ಅನೀತಿಯನ್ನು ಯಾರೂ ಮಾಡಬಾರದು. ಎಲ್ಲರೂ ತನ್ನ ಜಾತಿಯವರಿಗೆ ಮಾತ್ರ ಅನ್ಯಾಯವಾಗಿದೆ ಎನ್ನುವುದನ್ನು ನೋಡಿದರೆ ಎಲ್ಲ ಜಾತಿಗಳು ಸಾಮರ್ಥ್ಯವನ್ನು, ಸಮರ್ಥರನ್ನು ಪೋಷಿಸುವ, ಪೊರೆಯುವ ಪರಿಪಾಠವನ್ನು ಮರೆತಂತಿದೆ. ಪ್ರತಿನಿತ್ಯ ಈ ಹಾಳಾದ ಜಾತಿಪದ್ಧತಿಯಿಂದ ಅನೇಕ ಪ್ರತಿಭಾವಂತರಿಗೆ, ಸಮರ್ಥರಿಗೆ ಅನ್ಯಾಯವಾಗುವುದಿದೆ. ಈ ಬಗೆಯ ಅನ್ಯಾಯ ಮಾತ್ರ ಜಾತ್ಯಾತೀತವಾದುದು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ. ಪ್ರತಿಯೊಬ್ಬರೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಯೋಚಿಸುವ ಬದಲಾಗಿ ಆತ ಯಾವುದೇ ಜಾತಿಯವನಾದರೂ ಆತ ಸಮರ್ಥನಿದ್ದಾನೆ, ಅವನಿಗೆ ಅನ್ಯಾಯವಾಗಬಾರದು ಎಂದು ಯೋಚಿಸುವಂತಾಗಬೇಕು.

-ಕೆ ರವಿಕುಮಾರ್ ಕೋಲಾರ್ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: