ನಿಜ ಭಾರತದ ನೋವುಗಳು – ಕೆ ರವಿಕುಮಾರ್

ಜಾಗತೀಕರಣ ಕುರಿತಂತೆ ಬರಗೂರು ರಾಮಚಂದ್ರಪ್ಪ ಹೇಳಿರುವ ಜಾಗತೀಕರಣವೆಂಬುದು ಶಬ್ದವಿಲ್ಲದ ನಿಶ್ಯಬ್ಧ ಯುದ್ಧ ಎಂಬ ಮಾತು ನನಗೆ ಪದೇ, ಪದೇ ನೆನಪಿಗೆ ಬರುತ್ತದೆ. ಮುಕ್ತಮಾರುಕಟ್ಟೆಯ ನೆಪದಲ್ಲಿ ನಮ್ಮ ದೇಶದೊಳಕ್ಕೆ ನುಸುಳಿರುವ ಬಹುರಾಷ್ಟ್ರೀಯ ಕಂಪನಿಗಳು ಔಷದ ರಂಗದಲ್ಲಿ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲ ಜನಸಾಮಾನ್ಯರಿಗೆ ಇಂದಿಗೂ ಅರ್ಥವಾಗದ ಸಂಗತಿ.

Prescription Symbolಭಾರತದ ಬಗ್ಗೆ, ಇಲ್ಲಿನ ಬಡತನ, ಅಜ್ಞಾನದ ಬಗ್ಗೆ, ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ, ಇಲ್ಲಿನ ಬಡವರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ಜೀವರಕ್ಷಕ ಔಷಧಗಳನ್ನು ತಯಾರು ಮಾಡುತ್ತಿರುವುದು ಭಾರತದಲ್ಲಿ ಮಾತ್ರ. ಇದು ಈ ದೇಶದ ಹೆಗ್ಗಳಿಕೆ. ಇಲ್ಲಿ 15 ರೂಪಾಯಿಗೆ ಸಿಗುವ ಮಾತ್ರೆ ನೆರೆಯ ಪಾಕಿಸ್ತಾನದಲ್ಲಿ 45 ರೂಪಾಯಿ. ಅಂದರೆ, ಮೂರು ಪಟ್ಟು ಅಧಿಕ. ಇನ್ನು ಯುರೋಪಿನಲ್ಲಿ ನೂರು ಪಟ್ಟು ಅಧಿಕ.

ಹಾಗಾಗಿ ನೆರೆಯ ಅರಬ್ ರಾಷ್ಟ್ರಗಳಿಂದ, ಪಾಕಿಸ್ತಾನದಿಂದ, ಇರಾಕ್, ಇರಾನ್‌ನಿಂದ ರೋಗಿಗಳು ಚಿಕಿತ್ಸೆಗಾಗಿ ಕೇರಳಕ್ಕೆ, ಯುರೋಪ್ ರಾಷ್ಟಗಳಿಂದ ಮುಂಬೈ, ದೆಹಲಿಗೆ ರೋಗಿಗಳು ಬರುತ್ತಿದ್ದಾರೆ. ನಮ್ಮ ನೆರೆಯ ಚಿಕ್ಕ ರಾಜ್ಯವಾದ ಕೇರಳದಲ್ಲಿ 500 ಕ್ಕೂ ಹೆಚ್ಚು ಸುಸಜ್ಜಿತ ಆಸ್ಪತ್ರೆಗಳಿವೆ. ಈ ಕಾರಣಕ್ಕಾಗಿ ಹೆಲ್ತ್ ಟೂರಿಸಂ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಏಜೆಂಟರು ಹುಟ್ಟಿಕೊಂಡು ಭಾರತಕ್ಕೆ ರೋಗಿಗಳನ್ನು ಕರೆತರುತ್ತಿದ್ದಾರೆ.

ಭಾರತದ ವೈದ್ಯಲೋಕದ ಹಾಗೂ ಔಷದ ವಲಯದ ಇಂತಹ ಅವಕಾಶಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಕಲ್ಲು ಹಾಕಿದ್ದು ಔಷಧ ರಂಗದಲ್ಲಿ ಏಕಸ್ವಾಮ್ಯತೆ ಸಾಧಿಸಲು ಹೆಜ್ಜೆ ಇಟ್ಟಿವೆ. ಇದಕ್ಕೆ ಕಾರಣವಾದದ್ದು 2004 ರಲ್ಲಿ ನಡೆದ ಒಂದು ಘಟನೆ.

ದುಬಾರಿ ವೆಚ್ಚದ ಚಿಕಿತ್ಸೆಯ ಕಾರಣ ಏಡ್ಸ್ ರೋಗಿಗಳು ತೃತೀಯ ಜಗತ್ತಿನ ರಾಷ್ಟ್ರಗಳೂ ಸೇರಿದಂತೆ, ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಸಾಯುತ್ತಿರುವುದನ್ನು ಮನಗಂಡ ವಿಶ್ವ ವ್ಯಾಪಾರ ಸಂಘಟನೆ(W.T.O.) 2004 ರಲ್ಲಿ ತುರ್ತು ಸಭೆ ನಡೆಸಿ ಪೇಟೆಂಟ್ ಸ್ವಾಮ್ಯ ಕುರಿತಂತೆ ಇರುವ ಹಕ್ಕು ಮತ್ತು ಮಾನದಂಡಗಳನ್ನು ಸಡಿಲಿಸಿ, ತುರ್ತು ಸಂದರ್ಭದಲ್ಲಿ ಯಾವುದೇ ರಾಷ್ಟ್ರ ಪೇಟೆಂಟ್ ಹಂಗಿಲ್ಲದೆ ಔಷಧಗಳನ್ನು ತಯಾರಿಸಬಹುದು, ಜೊತೆಗೆ ಔಷದ ತಯಾರಿಕೆಗೆ ಸೌಕರ್ಯಗಳಿಲ್ಲದ ರಾಷ್ಟ್ರಗಳಿಗೆ ಸರಬರಾಜು ಮಾಡಬಹುದು ಎಂದು ಆದೇಶ ಹೊರಡಿಸಿತು.

ಅಲ್ಲಿಯವರೆಗೆ ಒಂದು ತಿಂಗಳಿಗಾಗುವ ಏಡ್ಸ್ ಔಷಧಿಯ ಕಿಟ್ ಒಂದನ್ನು 1 ಲಕ್ಷದ 20 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕಂಪನಿಗಳಿಗೆ ಪೆಟ್ಟು ನೀಡಿದ ಭಾರತ ಕೇವಲ 8 ಸಾವಿರ ರೂಪಾಯಿಗೆ ಔಷಧ ಕಿಟ್ ಒದಗಿಸಲು ಪ್ರಾರಂಭಿಸಿತು. ವಿಶ್ವ ಸಂಸ್ಥೆಯ ಸಹಾಯ ನಿಧಿ, ಬಿಲ್ ಗೇಟ್ಸ್‌ನ ಫೌಂಡೇಷನ್ ಮುಂತಾದ ಸಂಸ್ಥೆಗಳು ಸಬ್ಸಿಡಿ ರೂಪದಲ್ಲಿ ಈ ಕಿಟ್‌ಗಳನ್ನು ಹಂಚಿದ್ದರಿಂದ ಬಡ ಏಡ್ಸ್ ರೋಗಿಗಳು ಚೇತರಿಸಿಕೊಳ್ಳಲು ಸಾಧ್ಯವಾಯಿತು.

ಇದರಿಂದ ವಿಚಲಿತಗೊಂಡ ಬಹುರಾಷ್ಟ್ರೀಯ ಕಂಪನಿಗಳು ಈಗ ಅಗ್ಗದ ಔಷಧ ತಯಾರು ಮಾಡುವ ಭಾರತಕ್ಕೆ ಲಗ್ಗೆ ಇಟ್ಟಿವೆ. ಮುಕ್ತ ಮಾರುಕಟ್ಟೆಯ ಈ ದಿನಗಳಲ್ಲಿ ನಮ್ಮ ಕೇಂದ್ರ ಸರಕಾರ ತೆಗೆದುಕೊಂಡ ಮೂರ್ಖತನದ ನಿರ್ಧಾರದಿಂದಾಗಿ ಬಡವರು ಅಗ್ಗದ ಜೀವ ರಕ್ಷಕ ಔಷಧಗಳಿಂದ ವಂಚಿತರಾಗಬೇಕಾಗಿದೆ.

ದೇಶದ ಹಲವು ಉದ್ಯಮ ವಲಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದ ಬಗ್ಗೆ ಮಿತಿ ಹೇರಿರುವ ಕೇಂದ್ರ ಸರಕಾರ ಔಷಧ ರಂಗದಲ್ಲಿ ಶೇ.100 ರಷ್ಟು ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಅಗ್ಗದ ದರದಲ್ಲಿ ಔಷಧ ತಯಾರು ಮಾಡುವ ಎಲ್ಲ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. 2006 ರಿಂದ 2010 ರವರೆಗೆ ದೇಶದ ಬಹುತೇಕ ಕಂಪನಿಗಳು ವಿದೇಶಿ ಕಂಪನಿಗಳ ಪಾಲಾಗಿವೆ.

ದೇಶದ ಪ್ರಸಿದ್ಧ ಕಂಪನಿಗಳಾದ ಮ್ಯಾಟ್ರಿಕ್ ಲ್ಯಾಬ್ ಮೈಲಾನ್ ಕಂಪನಿಗೆ, ಡಾಬರ್ ಫಾರ್ಮ ಪ್ರೆಸ್ನಿಯಸ್ ಕಬಿ ಕಂಪನಿಗೆ, ರ್‍ಯಾನ್‌ಬಾಕ್ಸಿ ಲ್ಯಾಬ್ ಡೈಚಿ ಸ್ಯಾಂಕಿಯೊ ಕಂಪನಿಗೆ, ಶಾಂತಾ ಬಯೋಟೆಕ್ ಸ್ಯಾನೊಪಿ ಅವಂತಿಸ್ ಕಂಪನಿಗೆ, ಆರ್ಚಿಡ್ ಕೆಮಿಕಲ್ಸ್ ಹಾರ್ಸ್‌ಸಿರ ಕಂಪನಿಗೆ, ಪಿರಮಾಲ್ ಹೆಲ್ತ್‌ಕೇರ್ ಸಂಸ್ಥೆ ಅಬೋಟ್ ಕಂಪನಿಗೆ ಮಾರಾಟವಾಗಿವೆ. ಇದರ ಪರಿಣಾಮ ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಔಷಧಿಗಳ ದರ ಶೇ.25 ರಿಂದ ಶೆ.40ರವರೆಗೆ ದುಭಾರಿಯಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಂತೆ ಜನಸಾಮಾನ್ಯರಿಗೆ ಔಷಧಗಳ ಬೆಲೆ ಏರಿಕೆ ತಕ್ಷಣ ಗೋಚರಿಸುವುದಿಲ್ಲ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಬಡವರ ಸುಲಿಗೆಗೆ ಸದ್ದಾಗದಂತೆ ಮುಂದಾಗಿವೆ.

-ಕೆ ರವಿಕುಮಾರ್ ಕೋಲಾರ್ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: