ಅಪ್ಪನ ದಿನದ ವಿಶೇಷ

-ನಟರಾಜು ಸೀಗೆಕೋಟೆ ಮರಿಯಪ್ಪ

ನನ್ನ ಅಪ್ಪ, ಅಮ್ಮ, ತಮ್ಮ, ತಂಗಿ ಮತ್ತು ನನ್ನ ಮನೆ ಅಂದರೆ ನನಗೆ ಯಾವಾಗಲೂ ಒಂದು ವಿಶೇಷ ಪ್ರೀತಿ. ಅದರಲ್ಲೂ ನಮ್ಮಪ್ಪ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ನಾನು ಹುಟ್ಟಿದಾಗ ನಮ್ಮಪ್ಪ ಬೆಳಿಗ್ಗೆ ಎದ್ದು ಪ್ರತಿದಿನ ಹದಿಮೂರು ಮೈಲಿ ಸೈಕಲ್ ತುಳಿದು ನಮ್ಮ ಮುತ್ತಜ್ಜಿ ಊರಿನಿಂದ ಪೇಟೆಗೆ ಬಂದು ರೇಷ್ಮೆ ಗೂಡಿನ ಆ ಫ್ಯಾಕ್ಟರಿಯಲ್ಲಿ ರೇಷ್ಮೆ ಗೂಡು ಬೇಯಿಸುವ ಒಲೆಗಾಗಿ ಸೌದೆ ಒಡೆದು, ಬೆಂದ ರೇಷ್ಮೆ ಗೂಡುಗಳಿಂದ ಎಳೆಗಳನ್ನು ತೆಗೆಯುವಾಗ ಕರೆಂಟ್ ಇಲ್ಲದಿದ್ದರೆ ರಾಟೆ ತಿರುವಿ, ಮತ್ತೆ ಹದಿಮೂರು ಮೈಲಿ ಸೈಕಲ್ ತುಳಿದು ನನ್ನ ಮುತ್ತಜ್ಜಿ ಊರಿಗೆ ವಾಪಸಾಗ್ತಾ ಇತ್ತು, ಆಗ ನಮ್ಮಪ್ಪನಲ್ಲಿದ್ದುದು ನನ್ನಪ್ಪನ ಮೊದಲ ಮಗನಾದ ನನ್ನ ಬಗ್ಗೆ ಗಾಢವಾದ ಪ್ರೀತಿ. ನನ್ನವ್ವ ಬಾಣಂತನ ಮುಗಿಸಿ ನಮ್ಮ ಮುತ್ತಜ್ಜಿ ಊರಿನಿಂದ ನಮ್ಮೂರಿಗೆ ವಾಪಸ್ಸು ಬಂದಾಗ, ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು ಸಿಗರೇಟು ಸೇದುತ್ತಾ ನನ್ನನ್ನು ಕಷ್ಟಪಟ್ಟು ಬೆಳೆಸುತ್ತಾ ನಮ್ಮಪ್ಪ ಖುಷಿಯಾಗಿದ್ದ ವಯಸ್ಸದು. ಬಹುಶಃ ನಮ್ಮಪ್ಪನ ಚುರುಕುತನ ನೋಡಿ ಊರಲ್ಲಿ ಯಾರೋ ಮುಖಂಡರೊಬ್ಬರು ನಮ್ಮಪ್ಪನಿಗೆ ಹತ್ತಿರದ ಮೀನುಗಾರಿಕೆ ಕೇಂದ್ರವೊಂದರಲ್ಲಿ ತರಬೇತಿ ಕೊಡಿಸಿ, ನಮ್ಮೂರಿನ ಕೆರೆಯಲ್ಲಿ ಮೀನು ಮರಿ ಬಿಡಿಸಿ, ಮೀನು ಸಾಕಲು ಸಹಾಯ ಮಾಡಿದ್ದರು.

ಚಿಕ್ಕ ಹುಡುಗನಾಗಿದ್ದಾಗ ಪುಟ್ಟ ಪುಟ್ಟ ಮೀನು ಮರಿಗಳನ್ನು ಎಲ್ಲಿಂದಲೋ ಬಂದಿದ್ದ ಪ್ಯಾಂಟು ಶರ್ಟು ತೊಟ್ಟಿದ್ದ ಜನ ನೀರು ತುಂಬಿದ ಪ್ಲಾಸ್ಟಿಕ್ ಪೊಟ್ಟಣಗಳಿಂದ ನಮ್ಮೂರಿನ ಕೆರೆಗೆ ಬಿಡುವಾಗ ನಾನು ದೊಡ್ಡವರ ಮಧ್ಯೆ ನಿಂತು ಆ ಮೀನಿನ ಮರಿಗಳನ್ನು ನೋಡ್ತಾ ಖುಷಿಪಟ್ಟಿದ್ದೆ. ಒಂದೆರಡು ವರ್ಷಗಳ ನಂತರ ಆ ಮೀನಿನ ಮರಿಗಳೆಲ್ಲಾ ದೊಡ್ಡ ದೊಡ್ಡ ಮೀನುಗಳಾಗಿ ನಮ್ಮಪ್ಪ ಮೀನು ಹಿಡಿಯುವವರನ್ನು ಯಾವುದೋ ಊರಿನಿಂದ ಕರೆತಂದು ರಾತ್ರಿ ವೇಳೆ ತೆಪ್ಪಗಳಲ್ಲಿ ಬಲೆ ಹಾಕ್ತಾ ಮೀನು ಹಿಡಿಸುತ್ತಿದ್ದರೆ, ನನಗೆ ಆ ಮೀನು ಹಿಡಿಯುವವರು ಕೊಟ್ಟ ಬೆಣ್ಣೆ ಹಚ್ಚಿದ ಆ ಬ್ರೆಡ್ ಅನ್ನು ತಿನ್ನುತ್ತಾ ರಾತ್ರಿಯಲ್ಲಿ ಆ ಕೆರೆಯನ್ನು ನೋಡ್ತಾ ಕುಳಿತಿರುತ್ತಿದ್ದೆ. ಬಹುಶಃ ನನ್ನ ಜೀವನದಲ್ಲಿ ತಿಂದ ಅತಿ ರುಚಿಯಾದ ಬ್ರೆಡ್ ಮತ್ತು ಬಟರ್ ಆದಾಗಿತ್ತು ಅನಿಸುತ್ತೆ. ಬೆಳಿಗ್ಗೆ ನಮ್ಮ ಪೇಟೆಯ ಟಾಕೀಸ್ ಒಂದರ ಎದುರು, ಮೀನು ಮಾರಲು ಮೀನು ಗುಡ್ಡೆ ಹಾಕಿಕೊಂಡು ನಮ್ಮಪ್ಪ ಕುಳಿತಿದ್ದರೆ, ನಾನು ನಮ್ಮಪ್ಪನ ಜೊತೆ ಕುಳಿತು ಪುಟ್ಟ ಕೈಗಳಿಂದ ಮೀನುಗಳ ಮುಟ್ಟಿ ಮುಟ್ಟಿ ಖುಷಿಗೊಳ್ತಾ ಇದ್ದೆ.

ಹೀಗೆ ನಮ್ಮ ಜೀವನ ಖುಷಿಯಿಂದ ನಡೆಯುತ್ತಿದ್ದಾಗ ಒಂದು ದಿನ ನಮ್ಮ ಅಪ್ಪ ಕೆಲಸದ ನಿಮಿತ್ತ ಯಾವುದೋ ಊರಿಗೆ ಹೋಗಿತ್ತು. ನಾನು ನಮ್ಮೂರಿನಲ್ಲೇ ಸ್ಕೂಲಿಗೆ ಹೋಗಿದ್ದೆ. ಮಧ್ಯಾಹ್ನ ಬೆಲ್ ಹೊಡೆದು ಊಟಕ್ಕೆ ಬಿಟ್ಟಾಗ ನಮ್ಮೂರಿನ ಕೆರೆಯಲ್ಲಿ ಸುತ್ತಮುತ್ತಲಿನ ಮೂರ್ನಾಲ್ಕು ಊರಿನ ಜನ ನಮ್ಮ ಅಪ್ಪ ಬಿಟ್ಟಿದ್ದ ಮೀನುಗಳನ್ನು ತಮಗೆ ಹೇಗೆ ಸಾಧ್ಯವೋ ಹಾಗೆ ಹಿಡಿಯುತ್ತಿದ್ದರು. ನಾನು ಆ ದೃಶ್ಯ ಕಂಡು ಒಂದು ಕ್ಷಣ ದಂಗಾಗಿಬಿಟ್ಟಿದ್ದೆ. ಕೆರೆ ತುಂಬ ಜನ. ಆ ಜನರಲ್ಲಿ ನನ್ನ ಅಪ್ಪನ ಅಣ್ಣ ತಮ್ಮಂದಿರು ಸಂಬಂಧಿಕರು ಇದ್ದರು ಎನ್ನುವುದು ಅಚ್ಚರಿಯ ಸಂಗತಿ. ವಿಷಯ ತಿಳಿದ ನಮ್ಮಪ್ಪ ಪೋಲಿಸರ ಜೊತೆ ಬಂದರೂ ಯಾರನ್ನು ಅರೆಸ್ಟ್ ಮಾಡಿದರೋ ಚಿಕ್ಕ ಹುಡುಗನಾಗಿದ್ದ ನನಗಂತೂ ತಿಳಿಯಲಿಲ್ಲ. ಪೊಲೀಸ್, ಕೋರ್ಟ್, ಕಚೇರಿ ಅಂತ ನಮ್ಮಪ್ಪ ಇಡೀ ಊರಿನ ಮೇಲೆ ಕಾನೂನು ಸಮರಕ್ಕೆ ಇಳಿದಿತ್ತು. ಮೂರ್ನಾಲ್ಕು ವರ್ಷಗಳ ಮೇಲೆ ಕೋರ್ಟ್ ನಲ್ಲಿ ತೀರ್ಪು ನಮ್ಮ ಕಡೆಗಾದರೂ ಯಾಕೋ ಮೀನಿನ ಮರಿಗಳಿಗಾಗಿ, ಕೋರ್ಟು ಕಛೇರಿಗಾಗಿ ನಮ್ಮಪ್ಪ ಮಾಡಿದ್ದ ಸಾಲ ಮತ್ತೊಮ್ಮೆ ಕೆರೆಗೆ ಕೈ ಹಾಕದ ಹಾಗೆ ಮಾಡಿತ್ತು, ಆಗ ಊರಿನ ಸಹವಾಸವೇ ಬೇಡ ಅಂತ ಮಕ್ಕಳನ್ನು ಓದಿಸಬೇಕು ಅಂತ ನಮ್ಮನ್ನೆಲ್ಲಾ ನಮ್ಮಪ್ಪ ಪಕ್ಕದ ಪೇಟೆಗೆ ಕರೆದೊಯ್ದಿತ್ತು. ಅಂತಹ ಕಷ್ಟ ಪಟ್ಟ ನಮ್ಮಪ್ಪ ಆ ಕೆರೆ ವಿಷಯದಲ್ಲಿ ಸಾಲ ಮಾಡಿ, ಊರು ಬಿಟ್ಟು ಪ್ಯಾಟೆ ಸೇರಿ, ಮತ್ತೆ ಆ ಫ್ಯಾಕ್ಟರಿಯಲ್ಲಿ ಅದೇ ಸೌದೆ ಒಡೆಯುವ, ರಾಟೆ ತಿರುಗಿಸುವ ಕೆಲಸ ಮಾಡುವಾಗ ನಾನು ಅದೇ ಫ್ಯಾಕ್ಟರಿಯಲ್ಲಿ ರಜಾ ದಿನಗಳಲ್ಲಿ ರೇಷ್ಮೆ ನೂಲು ಖಾಲಿಯಾದ ಗೂಡುಗಳನ್ನು ಆ ನೀರಿನ ಬೇಸನ್ ನಿಂದ ಆಯ್ದು ಪಕ್ಕಕ್ಕಿಡುವ ಸಹಾಯಕನಾಗಿ ದಿನಕ್ಕೆ 7 ರೂಪಾಯಿ ಸಂಪಾದನೆ ಮಾಡಿ ಸಂಜೆ ಅಪ್ಪನ ಜೊತೆ ನಾಲ್ಕಾಣೆ ವಡೆಯನ್ನು ತಿಂದರೆ ಅದರ ಮಜಾನೆ ಬೇರೆ ಇರುತ್ತಿತ್ತು. ತಾನು ಮನೆಯಿಂದ ತಂದ ಮುದ್ದೆ ಉಪ್ಪುಸಾರು ತಿಂದು ನನಗೆ ಅಂತ ಆಗಾಗ ಬೆಳಿಗ್ಗೆ ತಿಂಡಿಗೆಂದು ಒಂದೂವರೆ ರೂಪಾಯಿಗೆ ನಮ್ಮಪ್ಪ ಕೊಡಿಸುತ್ತಿದ್ದ ರುಚಿಯಾದ ಚಿತ್ರಾನ್ನ ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತೆ.

ಯಾಕೋ ಬೇರೆಯವರ ಹತ್ತಿರ ಕೆಲಸ ಮಾಡೋದು ಬೇಡ ಅಂತ ನಮ್ಮಪ್ಪ ಅಲ್ಲಿ ಇಲ್ಲಿ ಸಾಲ ಮಾಡಿ ಪುಟ್ಟ ಅಂಗಡಿ ಹಾಕಿ ವ್ಯಾಪಾರ ಶುರು ಮಾಡಿ, ಪಕ್ಕದಲ್ಲೇ ಇದ್ದ ಮರ ಕುಯ್ಯುವ ಮಿಲ್ಲಿನಿಂದ ಸೌದೆ ತುಂಡುಗಳನ್ನು ತಂದು ಸೌದೆ ಮಂಡಿ ಅಂತ ಮಾಡಲು ಹೋಗಿ ಲಾಭ ಮಾಡಲಾಗದೆ ಕೈ ಸುಟ್ಟುಕೊಂಡು, ನಂತರ ನಿತ್ಯ ಹತ್ತಿರದ ಕಾಡಿಗೆ ತನ್ನ ಸೈಕಲ್ ನಲ್ಲಿ ಹೋಗಿ ಸಣ್ಣ ಸಣ್ಣ ಸೌದೆ ಕಡಿದು ತಂದು ಕಂತೆಗೆ 5 ರೂಪಾಯಿಯಂತೆ ಸೌದೆ ಮಾರುತ್ತಿತ್ತು. ಆಗ ನಾನು ಸಹ ರಜಾ ದಿನಗಳಲ್ಲಿ ಗಾರೆ ಕೆಲಸ ಮಾಡ್ತ ನಮ್ಮಪ್ಪನಂತೆಯೇ ನಾನು ಕಷ್ಟಜೀವಿಯಾಗಬೇಕು ಅಂತ ಬಯಸ್ತ ಇದ್ದೆ. ನಾಲ್ಕು ಮಕ್ಕಳ ಓದು ಹಾಗೂ ಪೇಟೆಯಲ್ಲಿಯ ಜೀವನ ನಮ್ಮಪ್ಪನಿಂದ ಮತ್ತಷ್ಟು ಶ್ರಮದ ದುಡಿತವನ್ನು ಕೇಳಿದಾಗ, ಒಂದು ಚುನಾವಣೆಯ ಸಮಯದಲ್ಲಿ ಪೇಟೆಯ ಪ್ರತಿ ಬೀದಿಗಳಲ್ಲಿ ಯಥೇಚ್ಚವಾಗಿ ಎಣ್ಣೆ ಬಾಟಲುಗಳನ್ನು ಪ್ರತಿ ರಾಜಕೀಯ ಪಕ್ಷದವರೂ ಮನೆಮನೆಗೂ ಸಪ್ಲೈ ಮಾಡೋದನ್ನ ನಮ್ಮಪ್ಪ ನೋಡಿತ್ತು. ನನಗಿನ್ನೂ ನೆನಪಿದೆ, ಎಲೆಕ್ಷನ್ ಮುಗಿದ ಮಾರನೆಯ ಒಂದು ದಿನ ನಮ್ಮಪ್ಪ ತನ್ನ ಸೈಕಲ್ ನ ಹಿಂದಿನ ಚಕ್ರದ ಎರಡೂ ಬದಿಗೂ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಒಂದು ಸಣ್ಣ ಹಾರನ್ ಮಾಡುತ್ತಾ ನಾವಿದ್ದ ಒಂದೆರಡು ಬೀದಿಗಳನ್ನು ಒಂದು ಸುತ್ತು ಬಂದಾಗ ಅಂಗಡಿಯ ಒಳಗೆ ಕುಳಿತಿದ್ದ ನಾನು ತುಂಬಿದ ಎರಡು ಚೀಲದ ಬಾಟಲ್ ಗಳನ್ನು ಪ್ಲಾಸ್ಟಿಕ್ ಚೀಲಗಳಿಂದ ಇಳಿಸಿ ಬಾಟಲ್ ಗಳನ್ನು ಖುಷಿಯಿಂದ ಎಣಿಸುತ್ತ ಕುಳಿತ್ತಿದ್ದೆ. ಸಂಜೆಯ ಹೊತ್ತಿಗೆ ನಮ್ಮ ಪೆಟ್ಟಿ ಅಂಗಡಿಯ ತುಂಬಾ ಬಾಟಲ್ ಗಳು ತುಂಬಿ ಮೂಟೆಗಳಾಗಿದ್ದವು. ಎಲ್ಲ ಬಾಟಲ್ ಗಳನ್ನು ಮಾರಿದಾಗ ನಮ್ಮಪ್ಪನಲ್ಲಿ ಒಬ್ಬ ಒಳ್ಳೆಯ ವ್ಯಾಪಾರಿ ಹುಟ್ಟಿಕೊಂಡಿದ್ದ.

ಆ ದಿನಗಳಲ್ಲಿ ಬರೀ ಒಂದು ಕೋಮಿನವರಿಗಷ್ಟೇ ಮೀಸಲಾಗಿದ್ದ ಖಾಲಿ ಬಾಟಲ್, ಹಳೇ ಪೇಪರ್, ಹಳೆ ಕಬ್ಬಿಣ ಹಾಗೂ ಪ್ಲಾಸ್ಟಿಕ್ ಅನ್ನು ಕೊಳ್ಳುವ ವ್ಯಾಪಾರ ನಮ್ಮಪ್ಪನಲ್ಲಿ ಹಣ ಹಾಗೂ ಸಂತಸವನ್ನು ತಂದಿತ್ತು. ಚಾಕಲೇಟ್ ನ ಒಂದು ಪಾಕೆಟ್ ಖರೀದಿಸಿ ಸೈಕಲ್ ನ ಹಿಂಭಾಗಕ್ಕೆ ತೊಟ್ಟಿಲು ಕಟ್ಟಿಕೊಂಡು, ಹ್ಯಾಂಡಲ್ ಬಳಿ ತನ್ನ ಕಾಸಿನ ಚೀಲ ಕಟ್ಟಿ ಹಾರನ್ ಬಾರಿಸಿಕೊಂಡು ನಮ್ಮಪ್ಪ ಹೊರಟಿತೆಂದರೆ ಮತ್ತೆ ಬರುತ್ತಿದುದು ಊಟದ ಸಮಯಕ್ಕೆ. ಆಡೋ ಮಕ್ಕಳಿಗೆ ಕಾಸಿನ ಬದಲು ಚಾಕಲೇಟ್ ನೀಡಿ ಬಾಟಲ್ ಕೊಳ್ಳುತ್ತಿದ್ದ ನಮ್ಮಪ್ಪ ಎಷ್ಟೇ ಹೊಟ್ಟೆ ಹಸಿದರೂ, ಕೈಯಲ್ಲಿ ದುಡ್ಡಿದ್ದರೂ ಹೊರಗೆ ಊಟ ಮಾಡುತ್ತಿರಲಿಲ್ಲ, ಕುಡಿದು ತೂರಾಡುತ್ತಿರಲಿಲ್ಲ. ರಾತ್ರಿ ನಮ್ಮಪ್ಪ ಮನೆಗೆ ಬಂದರೆ ತೊಟ್ಟಿಲ ತುಂಬ ಇರುವ ಹಳೆ ಪುಸ್ತಕಗಳಲ್ಲಿ ಪಠ್ಯಪುಸ್ತಕ, ಮ್ಯಾಗಜೀನ್, ಹಳೆ ನೋಟ್ ಬುಕ್ ಎಲ್ಲ ಇರುತ್ತಿದ್ದವು. ಆಗ ಒಂದು ಕನ್ನಡ ವಾರಪತ್ರಿಕೆಯ ಮಧ್ಯ ಪುಟದಲ್ಲಿ ಬರುತ್ತಿದ್ದ ಕವಿ ಹಾಗೂ ಲೇಖಕರ ಪರಿಚಯದ ಪುಟಗಳನ್ನು ನಾನು ಕತ್ತರಿಸಿ ನನ್ನ ಬಳಿ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದೆ. ಯಾಕೋ ಕನ್ನಡದ ಲೇಖಕರೆಂದರೆ ನನಗಾಗ ಬಹಳ ಪ್ರೀತಿ. ಕನ್ನಡದ ಲೇಖಕರ ಪರಿಚಯ ಹಾಗೂ ಪೋಟೋ ಇರುತ್ತಿದ್ದ ಆ ಲೇಖನಗಳು ನನಗೆ ತುಂಬಾ ಖುಷಿ ನೀಡ್ತಾ ಇದ್ದವು. ಆ ಹಳೆ ಪುಸ್ತಕಗಳ ಮಧ್ಯೆ ಒಂದು ದಿನ ನಾನು ಹೊಚ್ಚ ಹೊಸ ಎರಡನೆಯ ಪಿಯುಸಿಯ ಕೆಮಿಸ್ಟಿ ಬುಕ್ ಕಂಡಾಗ ನನಗೆ ತುಂಬಾ ಖುಷಿಯಾಗಿತ್ತು. ದೇವರಿದ್ದಾನೆ, ನಾವು ಬಯಸಿದ್ದನ್ನು ಅವನು ನೀಡುತ್ತಾನೆ ಅಂತ ಅವತ್ತು ನನಗೆ ಅನ್ನಿಸಿತ್ತು. ನಾನು ಎಂತಹ ಗೆಳೆಯರ ನಡುವೆ ಇದ್ದರೂ ನಮ್ಮಪ್ಪನನ್ನು ರಸ್ತೆಯಲ್ಲಿ ನೋಡಿದರೆ ಓಡೋಗಿ ಮಾತನಾಡಿಸುತ್ತಿದ್ದೆ. ಆಗ ಆಕಸ್ಮಾತ್ ಅಲ್ಲಿ ತನಗೆ ಪರಿಚಯವಿರುವವರು ಯಾರಾದರು ನಮ್ಮ ಅಪ್ಪನ ಬಳಿ ನಿಂತಿದ್ದರೆ ‘ನಮ್ ದೊಡ್ಡ ಮಗ’ ಅಂತ ಖುಷಿಯಿಂದ ಹೇಳಿಕೊಳ್ತಾ “ನಡೀ ಮಗ ಮನೆಗೆ” ಅಂತ ನಮ್ಮಪ್ಪ ಪ್ರೀತಿಯಿಂದ ನನಗೆ ಚಾಕೋಲೇಟ್ ಕೊಟ್ಟು ಕಳಿಸ್ತಾ ಇತ್ತು. ದೊಡ್ಡ ಕ್ಯಾಡ್ ಬರೀಸ್ ಕಂಪನಿಯ ಚಾಕೋಲೇಟ್ ನ ರುಚಿಯೂ ಆ ಎಂಟಾಣೆ ಚಾಕೋಲೇಟ್ ನ ರುಚಿ ಮುಂದೆ ನಿಲ್ ನೋಡಿ…

(ನಾಳೆ ಜೂನ್ 17 ವಿಶ್ವ ಅಪ್ಪನ ದಿನ.. ಆ ವಿಶೇಷ ದಿನಕ್ಕಾಗಿ ಈ ಲೇಖನ ನಿಮಗಾಗಿ ನೀಡಿರುವೆ.. ಈ ಲೇಖನ ಕರವೇ ನಲ್ನುಡಿಯಲ್ಲಿ ಪ್ರಕಟವಾಗಿದೆ..)

ನಿಮ್ಮ ಪ್ರೀತಿಯ
ನಟರಾಜು

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: