ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ರನ್ ವೇನಲ್ಲಿ ವೇಗವಾಗಿ ಓಡುತ್ತಿದ್ದ ವಿಮಾನ ಒಮ್ಮೆ ಉಯ್ಯಾಲೆಯಲ್ಲಿ ತೂಗಿದಂತೆ ತೂಗಿ ಅಂಡಮಾನಿನ ನೆಲ ಬಿಟ್ಟು ಮೇಲೆದ್ದಿತು. ವಿಮಾನದ ಕಿಟಕಿಯಿಂದ ಇಣುಕಿ ನೋಡಿದೆ. ಅಂಡಮಾನ್ ಕೊನೆಯ ಬಾರಿಗೆ ಕಣ್ಣಿಗೆ ಬಿತ್ತು. ಹಸಿರು ನೀಲಿ ಬಣ್ಣದ ಸಮುದ್ರ ಅಂಡಮಾನಿನ ಹವಳದ ದಂಡೆಗಳ ತೀರದ ಮೇಲೆ ಉರುಳುತ್ತಾ ಇತ್ತು. ಮೇಲೆಮೇಲೇರುತ್ತಿದ್ದ ವಿಮಾನ ನಮ್ಮನ್ನು ಕುರ್ಚಿಗಳತ್ತ ಒತ್ತುತ್ತಾ ಇತ್ತು. ಇನ್ನು ಕೆಲವೇ ಹೊತ್ತಿನಲ್ಲಿ ನಾವಿಳಿಯುವ ಮದ್ರಾಸನ್ನು ನೆನಸುತ್ತಾ ವಿಮಾನದ ತೊಟ್ಟಿಲು ಕುರ್ಚಿಯ ಮೇಲೆ ಹಾಗೆ ಒರಗಿದೆ, ಅಂಡಮಾನಿನ ಪ್ರವಾಸದ ಅನುಭವಗಳೆಲ್ಲಾ ಸ್ಮೃತಿಪಡಲದಿಂದ ಮರೆಯಾಗತೊಡಗಿತು.

 ಹೇಗಿತ್ತು ಅಂಡಮಾನ್? ಎಂದು ಯಾರಾದರೂ ಕೇಳಿದರೆ ಪರ್ವಾಗಿಲ್ಲ, ಚೆನ್ನಾಗಿತ್ತು ಎಂದು ದೇಶಾವರಿ ಉತ್ತರ ಕೊಟ್ಟು ಸುಮ್ಮನಾಗಬೇಕಿತ್ತು. ಅದರ ಬಗ್ಗೆ ಬರೆಯಬೇಕೆಂದಾಗಲೀ ಅಥವಾ ಅದರ ಅನುಭವವನ್ನು ಇತರರಿಗೆ ಕೊರೆಯಬೇಕೆಂದಾಗಲೀ ಅನ್ನಿಸಲಿಲ್ಲ. ನಿಜಕ್ಕೂ ನನ್ನ ಪ್ರವಾಸಗಳಿಗೆ ಒಂದು ಉದ್ದೇಶವೇ ಇರುವುದಿಲ್ಲ. ಎಲ್ಲಿಗೆ ಹೋಗಿ ಏನನ್ನು ನೋಡಿ ಏನಾಗಬೇಕಾಗಿದೆ ಎಂದೇ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಅದರಲ್ಲೂ ಪ್ರವಾಸಿಕೇಂದ್ರಗಳಿಗೆ ಹೋಗುವುದೆಂದರಂತೂ ನನಗೆ ಎಲ್ಲಿಲ್ಲದ ಬೇಸರ.

 ಕ್ಯಾಲೆಂಡೆರುಗಳಲ್ಲಿ, ಸಿನೆಮಾಗಳಲ್ಲಿ ಆಗಲೇ ಪ್ರಕಾಶನಗೊಂಡು ಕ್ಲೀಷೆಗಳಾಗಿರುವ ಪ್ರವಾಸಿ ಪ್ರಸಿದ್ಧಕ್ಷೇತ್ರಗಳನ್ನು ನೋಡಲು ನನಗೆ ಕೊಂಚವೂ ಉತ್ಸಾಹವಿಲ್ಲ. ಹಾಗಾಗಿ ತಾಜಮಹಲ್, ಕುತುಬ್ ಮಿನಾರು, ಆಗ್ರಾ ಇಲ್ಲಿಗೆಲ್ಲಾ ಹೋದಾಗ ಬೇಸರದಿಂದ ನಾನು ಗೆಳೆಯರಿಗೆ ದಯವಿಟ್ಟು ನೀವೇ ಒಳಗೆ ಹೋಗಿ ನೋಡಿಬನ್ನಿ, ನಾನು ಹೊರಗೇ ಕುಳಿತಿರುತ್ತೇನೆ ಎಂದು ಉಲಿದಿದ್ದೆ. ಯಾರಿಗೆ ತಾವಿರುವಲ್ಲೇ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ. ಆದ್ದರಿಂದ ನನಗೆ ನಾನು ಅಂಡಮಾನಿಗೆ ಹೋದುದಕ್ಕೂ ಹೋಗದಿದ್ದುದಕ್ಕೂ ಹೆಚ್ಚು ವ್ಯತ್ಯಾಸ ಕಾಣಲಿಲ್ಲ.

 ವಿಮಾನದಲ್ಲಿ ನನ್ನ ಪಕ್ಕ ರಾಜೇಶ್ವರಿ ಕುಳಿತಿದ್ದಳು. ಹಿಂದೆಮುಂದೆ ಅಕ್ಕ ಪಕ್ಕ ಚಂದ್ರು, ಮಲ್ಲಿಕ್, ಬಸವರಾಜು, ಶಾಂತ, ನಿರ್ಮಲಾ, ರಾಮದಾಸ್ ಇತ್ಯಾದಿ ಇಡೀ ಕರ್ನಾಟಕದ ಟೀಮು ಕುಳಿತಿದ್ದರು. ಕಿಟಕಿಯಿಂದ ಇಣುಕಿದರೆ ಕೆಳಗೂ ನೀಲಿ, ಮೇಲೂ ನೀಲಿ, ಮಧ್ಯೆ ನಿಂತಹಾಗೆ ಹಾರುತ್ತಿರುವ ವಿಮಾನ. ವಾಯುಯಾನದ ಬಗ್ಗೆ ಬಹುಶಃ ಏನೇನೋ ಕಲ್ಪನೆಗಳನ್ನು ಕಟ್ಟಿಕೊಂಡಿದ್ದ ಇವರಿಗೆಲ್ಲಾ ವಿಮಾನದ ಈ ನಿಶ್ಚಲಯಾನ ನಿರಾಶೆಯನ್ನುಂಟುಮಾಡಿದ್ದಿರಬೇಕು.

 ಅಂಡಮಾನಿಗೆ ಹೋದಾಗ ಹಡಗಿನಲ್ಲಿ ಹೋಗಿದ್ದೆವು. ಆಗಿದ್ದ ಲವಲವಿಕೆ ಚಟುವಟಿಕೆಗಳು ವಿಮಾನದೊಳಗೆ ಕಾಣಲಿಲ್ಲ. ವಿಮಾನದಲ್ಲ ಅರ್ಧಕ್ಕರ್ಧ ಕುರ್ಚಿಗಳು ಖಾಲಿ ಬಿದ್ದಿದ್ದವು. ಅಂಡಮಾನಿನ ವಿಮಾನ ನಿಲ್ದಾಣದ ರನ್ ವೇ ತೀರಾ ಚಿಕ್ಕದಿದ್ದುದರಿಂದ ವಿಮಾನಕ್ಕೆ ಪೂರ್ತಿ ಭಾರ ಹಾಕಿದರೆ ಅದು ರನ್ ವೇ ಬಿಟ್ಟು ಮೇಲೆ ಹಾರಲು ಸಾಧ್ಯವಿಲ್ಲವೆಂದೇ ಅದಕ್ಕೆ ಅರ್ಧಕ್ಕಿಂತ ಹೆಚ್ಚಿಗೆ ತೂಕ ಹಾಕುತ್ತಿರಲಿಲ್ಲ.

ವಿಮಾನ ಅಪಹರಣಕಾರರ ಪಿಡುಗಿನ ದೆಸೆಯಿಂದ ಈಗ ವಿಮಾನಯಾನ ತೀರ ಕ್ಲಿಷ್ಟಗೊಳ್ಳತೊಡಗಿದೆ. ವಿಮಾನಯಾನದ ಪೂರ್ವಭಾವಿ ತಪಾಸಣೆ ಹೆಚ್ಚು ಕಡಿಮೆ ಮಿಲಿಟರಿ ಆಪರೇಷನ್ನಿನಂತಿರುತ್ತದೆ. ಪ್ರತಿಯೊಬ್ಬರ ಸಾಮಾನು ಸರಂಜಾಮುಗಳನ್ನೂ ಉಡುಪುಗಳನ್ನೂ ಸವಿವರ ತನಿಖೆ ನಡೆಸುತ್ತಾರೆ. ನಾವು ಒಯ್ದಿದ್ದ ಮೀನು ಹಿಡಿಯುವ ರಾಡು ರೀಲುಗಳನ್ನಂತೂ ವಿಪರೀತ ಗುಮಾನಿಯಿಂದ ವಿದ್ವಂಸಕ ಅಸ್ತ್ರಗಳಂತೆ ಪರಿಗಣಿಸಿ ಪರಿಶೀಲಿಸಿದ್ದರು.ವಿಮಾನ ಹೆಚ್ಚು ಕಡಿಮೆ ನಿಶ್ಯಬ್ದವಾಗಿ ಹಾರುತ್ತಿತ್ತು. ವಿಮಾನದ ಹೊರಗೆ ಕಿವಿಗಡಚಿಕ್ಕುವಂತೆ ಕೇಳುವ ಎಂಜಿನ್ನುಗಳ ಶಬ್ದ ವಿಮಾನದ ಒಳಗೆ ಯಾಕೆ ಚೂರೂ ಕೇಳುವುದೇ ಇಲ್ಲ ಎಂದು ಆಶ್ಚರ್ಯವಾಯಿತು. ಕಿಟಕಿಯಿಂದ ಮತ್ತೊಮ್ಮೆ ಹೊರಕ್ಕೆ ನೋಡಿದೆ. ವಿಮಾನದ ರೆಕ್ಕೆ ಕಾಣುತ್ತಿತ್ತು. ಕೆಳಗೆಲ್ಲೋ ಪಾತಾಳದಲ್ಲಿ ಒಂದೊಂದು ಬಿಳಿಯ ಮೋಡ ತೇಲುತ್ತಿದ್ದವು. ಊರುಬಿಟ್ಟು ಸುಮಾರು ಇಪ್ಪತ್ತು ದಿನಗಳು ಕಳೆದಿದ್ದವು. ಇಪ್ಪತ್ತು ದಿನಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಿಲೋಮೀಟರು ಅಲೆದಾಡಿದ್ದೆವು.ನಾವು ಅಂಡಮಾನಿಗೆ ಹೋಗಲಿದ್ದೇವೆಂದು ಒಂದು ವರ್ಷದ ಹಿಂದೆಯೇ ತುತ್ತೂರಿ ಊದಿ ಎಲ್ಲರೂ ಅನೇಕ ದಿನಗಳಿಂದ “ಇದೇನ್ರಯ್ಯ ಇನ್ನೂ ಇಲ್ಲೇ ಇದ್ದೀರಿ? ಅಂಡಮಾನಿಗೆ ಹೋಗಿ ಬಂದ್ರೋ ಏನು ಕತೆ?” ಎಮದು ಕೇಳತೊಡಗಿದ್ದರು. ಇನ್ನು ಅವರಿಗೆ ಸಮಾಧಾನಕರ ಉತ್ತರ ಕೊಡಬಹುದೆಂದೆನಿಸಿತ್ತು.ಅಂಡಮಾನಿಗೆ ಹೋಗಿಬಂದವರು ಬಹಳ ಕಡಿಮೆ ಮಂದಿ ಭಾರತದಲ್ಲಿರಬಹುದು. ಏಕೆಂದರೆ ಅಲ್ಲಿ ಯಾವ ದೇವಸ್ಥಾನವೂ ಇಲ್ಲ, ಪವಿತ್ರಕ್ಷೇತ್ರವೂ ಇಲ್ಲ ಅಥವಾ ಸಿಂಗಪೂರದಂತೆ ಷಾಪಿಂಗ್ ಸೆಂಟರೂ ಇಲ್ಲ. ಆದರೆ ಅಂಡಮಾನಿನ ಹೆಸರು ತಿಳಿದವರು ಮಾತ್ರ ತುಂಬಾ ಜನ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಹಿಂದೆಲ್ಲಾ ಪಕ್ಕಾ ಕೇಡಿಗಳನ್ನು ಅಂಡಮಾನಿನ ಪ್ರಸಿದ್ದ ಜೈಲುಗಳಿಗೆ ರವಾನಿಸುತ್ತಿದ್ದುದು. ಸಹಸ್ರಾರು ಮೈಲುಗಳ ಸಮುದ್ರದಿಂದ ಸುತ್ತುವರೆದಿದ್ದ ಈ ದ್ವೀಪದ ಜೈಲುಗಳಿಗೆ ಹೋಗುವುದು ಮರಣದಂಡನೆಗೆ ಸರಿಸಮನಾದುದಾಗಿತ್ತು. ಆ ಖೈದಿಗಳು ಜೈಲುಗಳಿಂದ ತಪ್ಪಿಸಿಕೊಂಡರೂ ಅಂಡಮಾನಿನ ಕಗ್ಗಾಡಿನ ಕಾಡುಮನುಷ್ಯರಿಗೆ ಆಹುತಿಯಾಗಬೇಕಿತ್ತು. ಇದರೊಡನೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಅಪ್ರತಿಮ ಹೋರಾಟಗಾರರನ್ನೂ ಬ್ರಿಟೀಷರು ಅಂಡಮಾನಿನ ಜೈಲುಗಳಿಗೆ ರವಾನಿಸಿದ್ದರಿಂದ ಅಂಡಮಾನ್ ಹೆಸರಿಗೆ ಒಂದು ಚಾರಿತ್ರಿಕ ಮಹತ್ವವೂ ಬಂದಿತ್ತು. ಇದೆಲ್ಲಾ ಕಾರಣಗಳಿಂದಾಗಲೇ ಎಂದು ತೋರುತ್ತದೆ ಅಂಡಮಾನ್ ಹೆಸರು ಭಾರತದಲ್ಲಿ ಚಿರಪರಿಚಿತವಾಗಿರುವುದು……  ಮುಂದುವರೆಯುವುದು

ಸಂಗ್ರಹ: ಮಂಜುನಾಥರೆಡ್ಡಿ
ಕೃತಿ:  ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್
ಲೇಖಕರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ

Advertisements

2 responses

  1. You made my day sir..very creative writing…i love to visit this place..thanks for your information…keep writing..:-) thanks..:-)

  2. ಧನ್ಯವಾದಗಳು ಮಮತಾರವರೆ, ಫೇಸ್ ಬುಕ್ ಗುಂಪಿಗೂ ಒಮ್ಮೆ ಬೇಟಿ ಕೊಡಿ ಸಾದ್ಯವಾದರೆ
    http://www.facebook.com/groups/kannadavesatya/

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: