ತ್ಯಾಗದ ಹಿರಿಮೆ

ಸಾಮಾನ್ಯವಾಗಿ ಒಂದು ಊರಿಗೆ ನಾಟಕ ಕಂಪೆನಿ, ಸರ್ಕಸ್ ತಂಡ, ಯಕ್ಷಗಾನ ಮೇಳ ಇತ್ಯಾದಿ ಮನೋರಂಜನೆ ನೀಡುವ ಸಾಂಸ್ಕೃತಿಕ ತಂಡಗಳು ಬಂದಾಗ ಬಡವರೂ, ಶ್ರೀಮಂತರೂ, ಮಧ್ಯಮ ವರ್ಗದವರೂ ಅಲ್ಲಿಗೆ ಹೋಗಿ ಮನೋರಂಜನೆ ಪಡೆಯುತ್ತಾರೆ. ಇದರಿಂದ ದೈನಂದಿನ ಚಟುವಟಿಕೆ, ದುಡಿತಗಳಿಂದ ಉಂಟಾದ ಆಯಾಸ ಪರಿಹಾರವಾಗುತ್ತದೆ, ಮತ್ತು ಇನ್ನಷ್ಟು ದುಡಿಯಲು ಉತ್ಸಾಹ-ಚೈತನ್ಯ, ಪ್ರೇರಣೆಗಳನ್ನು ಪಡೆಯುತ್ತಾರೆ.

ಅದೇ ರೀತಿಯಲ್ಲಿ ಊರಿಗೊಬ್ಬರು ಸಂತರು, ವಿದ್ವಾಂಸರು, ಮಹಾಪುರುಷರು ಆಗಮಿಸಿದಾಗ, ಅವರ ಭೇಟಿಗೆ ಯಾರು ಹೋಗಬೇಕು ? ಮತ್ತು ಹೋದವರಿಗೆ ಸಿಗಬಹುದಾದ ಪ್ರಯೋಜನಗಳಾದರೂ ಏನು ? ಎಂಬ ವಿಷಯದ ಬಗ್ಗೆ ಸ್ವಾರಸ್ಯಕರವಾದ ಒಂದು ಪ್ರಸಂಗ ಹೀಗಿದೆ:

ಎರಡೂವರೆ ಸಾವಿರ ವರ್ಷಗಳ ಹಿಂದೆ ಮಗಧ ದೇಶದಲ್ಲಿ ಕೂಟದತ್ತನೆಂಬ ಒಬ್ಬ ಬ್ರಾಹ್ಮಣನಿದ್ದನು. ಘನ ವಿದ್ವಾಂಸನಾಗಿದ್ದು, ತನ್ನ ಮಧುರ-ಸರಳ ವ್ಯವಹಾರ ವಿಧಾನಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು. ಒಮ್ಮೆ ಮಗಧ ದೇಶಕ್ಕೆ ಭಗವಾನ್ ಬುದ್ಧರ ಆಗಮನವಾದಾಗ, ಜನರು ಗುಂಪು-ಗುಂಪಾಗಿ ಆಕರ್ಷಿತರಾದರು ಮತ್ತು ಅವರ ದರ್ಶನಕ್ಕೆಂದು ಧಾವಿಸಿ ಬರತೊಡಗಿದರು. ಭಗವಾನ್ ಬುದ್ಧರಿಗೆ ವಂದಿಸಿ, ಆಶೀರ್ವಾದ ಪಡೆಯಲೆಂದು ಅಲ್ಲಿಯ ರಾಜನೂ, ರಾಣಿಯರೊಂದಿಗೆ ಸಿದ್ಧತೆ ನಡೆಸತೊಡಗಿದ. ಆಗ ಕೂಟದತ್ತ ಬ್ರಾಹ್ಮಣನು ರಾಜನೊಡನೆ ಹೇಳಿದ- ‘ಹೇ ಮಹಾರಾಜ, ತಮ್ಮಂಥ ಘನತೆವತ್ತ ರಾಜರು ಬುದ್ಧನ ಬಳಿಗೆ ಹೋಗುವುದು ಸರಿಯಲ್ಲ. ಹೋದರೆ ನಿಮ್ಮ ಗೌರವ ಕಡಿಮೆಯಾಗುವುದು ಮತ್ತು ಬುದ್ಧನ ಗೌರವ ಹೆಚ್ಚುವುದು. ಒಬ್ಬ ರಾಜನು ಒಬ್ಬ ಭಿಕ್ಷುವಿನ ಬಳಿ ಹೋಗಬೇಕಾದ ಅಗತ್ಯವೇನಿದೆ ?’

ರಾಜನು ಮುಗುಳುನಗುತ್ತಾ ನುಡಿದನು- ‘ಅಯ್ಯಾ ಬ್ರಾಹ್ಮಣವರ್ಯ, ನನ್ನ ಪಾಲಿಗೆ ಬುದ್ಧ ಭಗವಾನರು ಮಹಾನ್ ಆಗಿದ್ದಾರೆ. ನೀವು- ನಾವೆಲ್ಲರೂ ವೇದಗಳ ಜ್ಞಾನಿಗಳಾಗಿದ್ದರೆ, ಅವರು ವೇದಗಳ ಜ್ಞಾನವನ್ನು ಆಚರಣೆಯಲ್ಲಿ ಅಳವಡಿಸಿದ್ದಾರೆ. ಜಗತ್ತಿನ ಒಳಿತಿಗಾಗಿ ಅವರು ಧನ-ವೈಭವಗಳನ್ನು ತ್ಯಾಗ ಮಾಡಿದ್ದಾರೆ. ಈ ಪ್ರಪಂಚದಲ್ಲಿ ಧನ-ಕನಕ-ವೈಭವಗಳನ್ನು ಸಂಗ್ರಹಿಸುವವರಿಗಿಂತ, ತ್ಯಾಗ ಮಾಡಬಲ್ಲವರೇ ಶ್ರೇಷ್ಠರು. ಬುದ್ಧ-ಭಗವಾನರು ಪ್ರಾಪಂಚಿಕ ಯುದ್ಧಗಳನ್ನು ಗೆಲ್ಲುವ ಬದಲು, ತನ್ನ ‘ಅಹಂ’ನ್ನು ಗೆದ್ದಿದ್ದಾರೆ. ಇಂಥ ಮಹಾಯೋಧರಿಗೆ ವಂದನೆ ಸಲ್ಲಿಸುವುದು ನನ್ನಂಥ ರಾಜನ ಕರ್ತವ್ಯವಾಗಿದೆ.’ ಹೀಗೆ ಪ್ರಾಪಂಚಿಕ ವೈಭವಕ್ಕಿಂತ ತ್ಯಾಗದ ಮೇಲ್ಮೆ-ಗರಿಮೆಗಳನ್ನು ಗೌರವಿಸಲು ಹೊರಟ ಮಹಾರಾಜನ ಅನುಯಾಯಿಯಾಗಿ ಮಹಾಬ್ರಾಹ್ಮಣ ಕೂಟದತ್ತನೂ ತಲೆಬಾಗಿ ಹೊರಟ.

ಇಂಥ ತ್ಯಾಗದ ಗೆಲುವು, ಯಶಸ್ಸಿನ ಅನೇಕ ನಿದರ್ಶನ ಉದಾಹರಣೆಗಳು ನಮ್ಮ ಪ್ರಾಚೀನ ಪುರಾಣ ಮತ್ತು ಆಧುನಿಕ ಇತಿಹಾಸದಲ್ಲೂ ಅನೇಕ ಸಂದರ್ಭಗಳಲ್ಲಿ ದೊರೆಯುತ್ತವೆ. ಸಾಮಾನ್ಯ ಸರಳ-ಖಾದೀ-ವಸ್ತ್ರ ತೊಟ್ಟ ಅರೆ ಬೆತ್ತಲೆ ಫಕೀರನೆಂದೇ ಖ್ಯಾತರಾದ ಮಹಾತ್ಮಾ ಗಾಂಧೀಜಿಯವರೆದುರಲ್ಲಿ ‘ಸೂರ್ಯನೇ ಮುಳುಗದಿರುವ’ ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿ ವೈಸರಾಯ್ ಕೂಡಾ ತಲೆಬಾಗಿ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕಾಯ್ತು.

ಆದ್ದರಿಂದ ಅತಿ ಸಂಗ್ರಹದ ದುರಾಶೆಯನ್ನು ತ್ಯಜಿಸಿ, ತ್ಯಾಗ ಮನೋವೃತ್ತಿಯ ಕಡೆಗೆ ಒಲಿದವರನ್ನು ಗೌರವಿಸಲು ಕಲಿಯೋಣ.

– ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ
– ಕೃಪೆ : ವಿಜಯ ಕರ್ನಾಟಕ
ಸಂಗ್ರಹ: ಮಂಜುನಾಥರೆಡ್ಡಿ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: