ಕಳ್ಳನಿಗೂ ನೆರವು

ಸಾಮಾನ್ಯವಾಗಿ ‘ಕಳ್ಳ ಬರುತ್ತಾನೆ’- ಎಂದು ಗೊತ್ತಾದರೆ ಸಾಕು, ಎಲ್ಲರೂ ಹೆದರುತ್ತಾರೆ. ಎಲ್ಲರೂ ಕಳ್ಳನಿಂದ ತಮ್ಮ-ತಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಕಳ್ಳನಿಂದ ಅಪಾಯವಿದೆ ಎಂದು ತಿಳಿದೊಡನೆ ಜನರು ಪೊಲೀಸರನ್ನು ಕರೆಸುತ್ತಾರೆ. ಮನೆಗೆ ದೊಡ್ಡ ಬೀಗ ಹಾಕಿ ಭದ್ರತೆಯೊದಗಿಸುತ್ತಾರೆ. ಹೇಗಾದರೂ ಮಾಡಿ, ತಮ್ಮ ಮನೆ-ಸೊತ್ತು, ದುಡ್ಡು-ಬಂಗಾರ ಮೊದಲಾದುವನ್ನು ಕಾಪಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಬಿಡುತ್ತಾರೆ.’ಕಳ್ಳತನ’ ಎಂಬುದೇನೋ ಅತೀವ ದುಷ್ಟ ಪಾಪ ಕೃತ್ಯ, ಇಂಥ ಪಾಪ ಮಾಡಿದವರು ಅದರ ಫಲವನ್ನು ಅನುಭವಿಸಲೇಬೇಕಾಗುತ್ತದೆ. ಎಲ್ಲ ಶಾಸ್ತ್ರ ಪುರಾಣಗಳೂಕಳ್ಳತನವನ್ನು ನಿಂದಿಸುತ್ತವೆ. ಆದರೆ ಸಂತ ಆಚಾರ್ಯ ರಜನೀಶ್ (ಓಶೋ) ಅವರು ಕಳ್ಳನ ಮಾನಸಿಕ ವಿಶ್ಲೇಷಣೆ ಮಾಡಿ, ಕಳ್ಳನ ಬಗ್ಗೆ ಸಹಾ ಸಹಾನುಭೂತಿ-ಅನುಕಂಪದ ಕರುಣಾಶ್ರು ಹರಿಸುವ ಪ್ರಯತ್ನ ಮಾಡಿರುವುದು ಹೃದಯಸ್ಪರ್ಶಿಯಾಗಿದೆ.’ರಿಝಾಯಿ’- ಎಂಬ ಹೆಸರಿನ ಒಬ್ಬ ಬಡ ಸನ್ಯಾಸಿಯಿದ್ದ. ಒಮ್ಮೆ ರಾತ್ರಿ ವೇಳೆ ತನ್ನ ಗುಡಿಸಲಲ್ಲಿ ಮಲಗಿದ್ದ. ಅಲ್ಲಿಗೊಬ್ಬ ಕಳ್ಳ ನುಗ್ಗಿದ. ಆದರೆ ಸನ್ಯಾಸಿಯ ಬಳಿ ಆತ ಹೊದ್ದುಕೊಂಡ ಕಂಬಳಿಯ ಹೊರತು ಬೇರೇನೂಇರಲಿಲ್ಲ, ಕಂಬಳಿ ಹೊದ್ದು ನೆಲದಲ್ಲಿ ಮಲಗಿದ್ದ ಆ ಸನ್ಯಾಸಿ ಚಿಂತೆಗೊಳಗಾದ- ‘ಛೆ !ಇಂಥ ಬಡಪಾಯಿ ಕಳ್ಳನೆಷ್ಟು ದೂರದಿಂದ ಬಂದಿರಬಹುದು ? ಎಂಥ ತಾಪತ್ರಯವೋ ? ನಾನೆಂತು ಇವನಿಗೆ ನೆರವಾಗಲಿ ?ನನ್ನಲ್ಲಿ ಕಂಬಳಿ ಬಿಟ್ಟರೆ ಬೇರೇನಿಲ್ಲ. ಏನು ಮಾಡಲಿ ?’ ಕಳ್ಳನಿಗೆ ಸನ್ಯಾಸಿ ಮಲಗಿದ್ದ ಹಾಗೆಯೇ ಕಂಬಳಿಯನ್ನು ಸೆಳೆಯುವಷ್ಟು ಸಾಹಸವಿರಲಿಲ್ಲ. ಅದಕ್ಕಾಗಿ ಸನ್ಯಾಸಿಯು ಕಂಬಳಿಯಿಂದಾಚೆಗೆ ಮಗ್ಗುಲು ಬದಲಾಯಿಸಿದ. ತಕ್ಷಣವೇ ಕಳ್ಳ ಕಂಬಳಿಯೊಂದಿಗೆ ಹೊರಗೋಡಿದ ಖುಷಿಯಿಂದ.

ಚಳಿ ಜೋರಾಗಿತ್ತು. ಆದರೆ ಕಳ್ಳನಿಗೆ ಸಂತಸ ನೀಡಿದ ಸಂತೃಪ್ತಿಯಿಂದ ಸನ್ಯಾಸಿಯ ಹೃದಯ ತುಂಬಿ ಬಂತು. ಆತ ಗುಡಿಸಲ ಕಿಟಕಿಯಲ್ಲಿ ಕುಳಿತು ಹೊರಗೆ ನೋಟ ಹರಿಸಿದ. ಹುಣ್ಣಿಮೆಯ ಪೂರ್ಣಚಂದ್ರ ! ಆ ಕಳ್ಳನಿಗೆ ಈ ಚಂದ್ರನನ್ನು ಕೊಡಲು ಸಾಧ್ಯವಿದ್ದರೆ ಕೊಟ್ಟು ಬಿಡುತ್ತಿದ್ದೆ ! ನಾನು ಕಳಕೊಂಡದ್ದೇನು ?ಒಂದು ಕಂಬಳಿ !ಆದರೆ ಬಡಪಾಯಿ ಕಳ್ಳನ ಹೃದಯಕ್ಕೆ ಸಂತಸದ ಬೆಳದಿಂಗಳು ತುಂಬಲು ಸಾಧ್ಯವಾಯಿತಲ್ಲ ! ಇದೇ ತನ್ನ ಸಾಫಲ್ಯ, ಯಶಸ್ಸು- ಎಂದು ಸನ್ಯಾಸಿ ಮನದಲ್ಲೇ ಸಂಭ್ರಮ ಪಟ್ಟ. ಕಳ್ಳನಾದರೋ ತನ್ನ ಬದುಕಿನ ದುರವಸ್ಥೆಯನ್ನು ನಿವಾರಿಸಿ, ಚಳಿಯ ರಾತ್ರಿಗೆ ಕಂಬಳಿಯೊದಗಿಸಿದ ಭಗವಂತನಿಗೆ ಧನ್ಯವಾದ ಸಮರ್ಪಿಸಿದ ಹಾಗೂ ಇನ್ನು ಮುಂದೆ ಕಳ್ಳತನ ಮಾಡದಿರಲು ನಿರ್ಧರಿಸಿದ.

-ಹೀಗೆ ಪ್ರಪಂಚದಲ್ಲಿ ಎಲ್ಲರಿಂದ ನಿಂದಿಸಲ್ಪಡುವ ಕಳ್ಳನ ಮನಸ್ಸಿನ ಮೂಲವನ್ನು, ಕಳ್ಳನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡ ಸನ್ಯಾಸಿಯು ತಾನು ಮಾಡಿದ ಒಂದು ಸಣ್ಣ ತ್ಯಾಗದಿಂದ ಇಮ್ಮಡಿ ಲಾಭ ಪಡೆಯುತ್ತಾನೆ. ಆತ ಕಳೆದುಕೊಂಡದ್ದು ಕೇವಲ ಹಳೆಯ ಕಂಬಳಿಯೊಂದನ್ನು. ಆದರೆ ಕಳ್ಳನ ಬಯಕೆಯೊಂದನ್ನು ಪೂರೈಸಿದ ಸಂತೃಪ್ತಿಯೊಂದಿಗೆ, ಒಬ್ಬ ಕಳ್ಳನ ಮನಸ್ಸನ್ನು ಶುದ್ಧೀಕರಿಸಿದ ಪುಣ್ಯವೂ ಪ್ರಾಪ್ತವಾಯಿತು.

ಕಳ್ಳನೊ, ಸುಳ್ಳನೋ, ಮೋಸಗಾರನೋ, ಯಾರೇ ಇರಲಿ, ಅವರಲ್ಲೂ ಮಾನವಿಯತೆಯ ಬೀಜಗಳು ಅಡಗಿರುತ್ತವೆ. ಸೂಕ್ತ ಗೊಬ್ಬರ, ಗಾಳಿ, ನೀರು, ಪರಿಸರ ದೊರೆತರೆ, ಮಾನವೀಯತೆಯ ನವುರಾದ ತಳಿರು ಚಿಗುರೊಡೆಯಲು ಸಾಧ್ಯ. ಅದಕ್ಕೋಸ್ಕರವೇ ಜೈಲುಗಳಲ್ಲಿ ಕೈದಿಗಳಿಗೆ ಕೊಡುವ ಶಿಕ್ಷೆಯು ದಂಡನೆಯಾಗದೆ, ಶಿಕ್ಷಣವಾಗಬೇಕು; ಹೊಸ ಮಾನವನನ್ನು ಸೃಜಿಸುವಂತಿರಬೇಕು- ಎಂದು ಹಾರೈಸಲಾಗಿದೆ.

– ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ
– ಕೃಪೆ : ವಿಜಯ ಕರ್ನಾಟಕ
ಸಂಗ್ರಹ: ಮಂಜುನಾಥರೆಡ್ಡಿ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: