ಸೃಷ್ಟಿ ರಹಸ್ಯ ಬೇಧಿಸುವ ಯತ್ನ; ‘ದೇವ ಕಣ’ದ ಭೌತಿಕ ದರ್ಶನ

ಜಿನೀವಾ: ಸೃಷ್ಟಿಯ ಮೂಲ ಧಾತು ಎನ್ನಲಾದ ಹಿಗ್ಸ್ ಬೋಸಾನ್ ಅಥವಾ ದೇವಕಣದ ಅಸ್ತಿತ್ವವನ್ನು ಗುರುತಿಸಿರುವುದಾಗಿ ವಿಜ್ಞಾನಿಗಳು ಬುಧವಾರ ಘೋಷಿಸಿದ್ದಾರೆ.

13.7 ಶತಕೋಟಿ ವರ್ಷಗಳ ಹಿಂದಿನ ಮಹಾ ಸ್ಫೋಟದ (ಬಿಗ್ ಬ್ಯಾಂಗ್) ನಂತರ ನಕ್ಷತ್ರಗಳು ಮತ್ತು ಗ್ರಹಗಳು ಅಸ್ವಿತ್ವಕ್ಕೆ ಕಾರಣವಾದ ಮೂಲ ದ್ರವ್ಯ ಎಂದು ನಂಬಲಾಗಿರುವ ಮೂಲ ಕಣ ಇದು.ದೇವ ಕಣದ ರಹಸ್ಯ ಭೇದಿಸುವ ನಿಟ್ಟಿನಲ್ಲಿ ಕಳೆದ 50 ವರ್ಷಗಳಿಂದ ನಡೆದಿರುವ ಸಂಶೋಧನೆಗೆ ಫಲ ಸಿಕ್ಕಿದೆ ಎಂದು ಸ್ವಿಜರ್ಲೆಂಡ್‌ನ ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್‌ಎನ್) ಸಂತಸ ವ್ಯಕ್ತಪಡಿಸಿದೆ.

‘ಜಗತ್ತನ್ನು ಅರ್ಥಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ನಾವಿಂದು ಮಹತ್ವದ ಮೈಲಿಗಲ್ಲು ತಲುಪಿದ್ದೇವೆ. ಹಿಗ್ಸ್ ಬೋಸಾನ್‌ನ ಕಣದ ಪತ್ತೆ, ಹೆಚ್ಚಿನ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ. ಬ್ರಹ್ಮಾಂಡದ ಅಗೋಚರ ವಿಷಯಗಳ ಮೇಲೆ ಬೆಳಕು ಚೆಲ್ಲಲು ಇದರಿಂದ ಸಾಧ್ಯವಾಗಲಿದೆ’ ಎಂದು ಸಿಇಆರ್‌ಎನ್‌ನ ಪ್ರಧಾನ ನಿರ್ದೇಶಕ ರಾಲ್ಫ್ ಹ್ಯೂರ್ ಹೇಳಿದ್ದಾರೆ. ಅನ್ವೇಷಣಗೆ ಅಗತ್ಯವಿದ್ದ ನಿರ್ದಿಷ್ಟ ಮಟ್ಟವನ್ನು ತಲುಪಿದ್ದೇವೆ. ಆದರೆ , ಪತ್ತೆಯಾಗಿರುವ ಹೊಸ ಕಣವನ್ನು ಹಿಗ್ಸ್ ಬೋಸಾನ್ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಎಂದು ಮಹಾ ಸ್ಫೋಟ ನಡೆಸಿದ ಎರಡು ತಂಡಗಳ ಪೈಕಿ ಒಂದಾದ ಸಿಎಂಎಸ್‌ನ ಮುಖ್ಯಸ್ಥ ಜೊ ಇನ್ಕ್ಯಾಡೆಲಾ ಸಿಇಆರ್‌ಎನ್ ಕೇಂದ್ರದಲ್ಲಿ ಹೇಳಿದ್ದಾರೆ. ಭೌತಶಾಸ್ತ್ರಜ್ಞರ ಎರಡನೇ ತಂಡ ಅಟ್ಲಾಸ್ ಸಹ ಹೊಸ ಕಣ ಗಮನಕ್ಕೆ ಬಂದಿರುವುದಾಗಿ ಹೇಳಿದ್ದು, ಬಹುಶಃ ಅದೇ ಹಿಗ್ಸ್ ಬೋಸನ್ ಇರಬಹುದು ಎಂದು ಅಭಿಪ್ರಾಯಪಟ್ಟಿದೆ.

ಹಿಗ್ಸ್ ಹರ್ಷ
ಹಿಗ್ಸ್ ಸೇರಿದಂತೆ ಹಲವಾರು ವಿಜ್ಞಾನಿಗಳು ದೇವಕಣ ಪತ್ತೆಯಾಗಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣಗಳೆಲ್ಲ ಹೇಗೆ ತಮ್ಮ ತೂಕ ಗಳಿಸುತ್ತವೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದವರೇ ಹಿಗ್ಸ್ . ‘ನನ್ನ ಜೀವಿತಾವಧಿಯಲ್ಲಿ ಇದು ಸಂಭವಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಶ್ಯಾಂಪೇನ್‌ನೊಂದಿಗೆ ಸಂಭ್ರಮ ಆಚರಿಸುವೆ’ ಎಂದು ಹಿಗ್ಸ್ ಹೇಳಿದ್ದಾರೆ.

ಬೋಸಾನ್ ಎಂದರೆ…
ದೇವ ಕಣದ ನಿಜವಾದ ಹೆಸರು ಹಿಗ್ಸ್ ಬೋಸಾನ್. ಇಂಗ್ಲೆಂಡಿನ ಪೀಟರ್ ಹಿಗ್ಸ್ ಈ ಸಿದ್ಧಾಂತ ಮಂಡಿಸಿದವರು. ಇನ್ನು ಬೋಸಾನ್ ಹೆಸರಿನಲ್ಲಿ ನಮ್ಮ ವಿಜ್ಞಾನಿ ಸತ್ಯೇಂದ್ರ ನಾಥ್ ಬೋಸ್ ಹೆಸರಿದೆ. ಬೆಳಕು ತರಂಗರೂಪದಲ್ಲಿ ಪ್ರವಹಿಸುತ್ತದೆ ಎಂದು ಬೋಸ್ 19ನೇ ಶತಮಾನದಲ್ಲಿ ಹೇಳಿದ್ದರು. ಬೆಳಕು ಫೋಟಾನ್ ಕಣದಲ್ಲೂ ಇರಬಹುದು ಎಂದು ನಂತರ 20ನೇ ಶತಮಾನದಲ್ಲಿ ಐನ್‌ಸ್ಟೀನ್ ಹೇಳಿದ್ದರು. ಫೋಟಾನ್‌ನ ವಿಶಿಷ್ಟ ಗುಣಗಳನ್ನು ಮಂಡಿಸಿದವರಲ್ಲಿ ಬೋಸ್ ಪ್ರಮುಖರು.

1920ರಲ್ಲಿ ಈ ಹೊಸ ಸಿದ್ದಾಂತ ಪ್ರತಿಪಾದಿಸಿ ವೈಜ್ಞಾನಿಕ ನಿಯತಕಾಲಿಕಗಳಿಗೆ ಲೇಖನ ಬರೆದಿದ್ದರು. ಆದರೆ ಅದು ಪ್ರಕಟವಾಗದ ಕಾರಣ, ಅದನ್ನು ಐನ್‌ಸ್ಟೀನ್‌ಗೆ ಕಳುಹಿಸಿಕೊಟ್ಟರು. ನಂತರ ಸಿದ್ಧಾಂತ ಇಡೀ ವಿಶ್ವಕ್ಕೆ ತಲುಪಿತು. ಕೊನೆಗೆ ಸಿದ್ಧಾಂತಕ್ಕೆ ಬೋಸ್ ಮತ್ತು ಐನ್‌ಸ್ಟೀನ್ ಇಬ್ಬರ ಹೆಸರನ್ನೂ ಬೆಸದು ಬೋಸನ್ ಎಂದು ಹೆಸರಿಡಲಾಯಿತು.

ಕೋಟಿ ಕೋಟಿ ಖರ್ಚು…
ದೇವ ಕಣ ಪತ್ತೆ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಜಿನೀವಾದಲ್ಲಿ ಅತ್ಯಾಧುನಿಕ ಯಂತ್ರ ಚಾಲೂ ಮಾಡಲಾಯಿತು. ಭಾರತ ಸೇರಿದಂತೆ 100 ದೇಶಗಳ 10 ಸಾವಿರ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಸತತ 10 ವರ್ಷಗಳ ಪರಿಶ್ರಮದಿಂದ ಸಿದ್ಧವಾದ ಯಂತ್ರವೇ ‘ಆಕ್ಸಿಲರೇಟರ್’. ಕಣಗಳಿಗೆ ಅಪಾರ ಶಕ್ತಿ ತುಂಬುವ ಸಾಮರ್ಥ್ಯ ಇದಕ್ಕಿದೆ. ಪ್ರಪಂಚದ ದುಬಾರಿ ಪ್ರಯೋಗಕ್ಕೆ ಸುರಿದಿರುವ ಹಣ 4,500 ಕೋಟಿ ರೂಪಾಯಿ ! ಯಂತ್ರದ ಶೋಧ ಈಗ ಫಲ ನೀಡಿದೆ.

‘ದೇವ ಕಣ’ ಎಂಬ ಹೆಸರೇಕೆ?
ಕಣ ಭೌತಶಾಸ್ತ್ರ ಕುರಿತು ಲಿಯೊನ್ ಲೆಡರ್‌ಮ್ಯಾನ್ ಅವರ ಪ್ರಖ್ಯಾತ ವಿಜ್ಞಾನ ಪುಸ್ತಕ ‘ದ ಗಾಡ್ ಪಾರ್ಟಿಕಲ್ : ಇಫ್ ಯೂನಿವರ್ಸ್ ಈಸ್ ದ ಆ್ಯನ್ಸರ್, ವಾಟ್ ಈಸ್ ದ ಕ್ವಶ್ಚನ್?’ನಲ್ಲಿ ಬಳಕೆಯಾಗಿರುವ ದೇವಕಣದ ಹೆಸರು ಮಾಧ್ಯಮಗಳಿಗೆ ಹೆಚ್ಚು ಪ್ರಿಯವಾಗಿ ಅದೇ ಹೆಸರು ಜನಜನಿತವಾಗಿದೆ. ಆದರೆ ಈ ಹೆಸರಿನಿಂದ ಕಣಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ದೊರೆಯುತ್ತದೆ ಎಂಬ ಕಾರಣಕ್ಕೆ ವಿಜ್ಞಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ವಸ್ತುವೊಂದರ ಮೂಲ ಧಾತುವನ್ನು ವಿವರಿಸಲು ದೇವಕಣ ಎಂಬ ಪದ ಬಳಕೆ ಮಾಡಿರುವುದಾಗಿ ಲೆಡರ್‌ಮ್ಯಾನ್ ವಿವರಣೆ ನೀಡಿದ್ದಾರೆ. ಆದರೆ ಈ ದುಬಾರಿ ಆವಿಷ್ಕಾರವನ್ನು ದೇವಕಣ ಎನ್ನದೇ ವಿಧಿ ಇಲ್ಲ ಎಂದು ಮತ್ತೊಂದು ಸಂದರ್ಭದಲ್ಲಿ ಅವರೇ ಲಘು ದಾಟಿಯಲ್ಲಿ ಹೇಳಿದ್ದಾರೆ.

ಇದರ ಕಾರ್ಯ ನಿರ್ವಹಣೆ ಹೇಗೆ?
ಕಣಗಳು ಹೇಗೆ ಒಗ್ಗೂಡುತ್ತವೆ ಎಂಬುದನ್ನು 1960ರಲ್ಲಿ ಪೀಟರ್ ಹಿಗ್ಸ್ ಹಾಗೂ ಇನ್ನಿತರರು ವಿವರಿಸಿದ್ದರು. ಅದರ ಮುಂದುವರಿದ ಭಾಗವೇ ಹಿಗ್ಸ್ ಬೋಸನ್ . ಶಕ್ತಿ ಕ್ಷೇತ್ರ ವಿಶ್ವವ್ಯಾಪಿಯಾಗಿದ್ದು, ಈ ಕ್ಷೇತ್ರದಲ್ಲಿ ಚಲಿಸುವ ಕಣಗಳು ಹಿಗ್ಸ್ ಬೋಸನ್ ಕಣಗಳತ್ತ ಆಕರ್ಷಿತಗೊಂಡು ಒಗ್ಗೂಡುತ್ತವೆ. ಕಣಗಳ ಸುತ್ತ ಅಸಂಖ್ಯಾತವಾಗಿ ಒಗ್ಗೂಡಿ ಸಾಂದ್ರತೆ ಪಡೆಯುತ್ತವೆ. ‘ಈ ವಿಶ್ವದ ಕಾರ್ಯ ವೈಖರಿ ಹೇಗೆ ಏನು ಎಂಬುದನ್ನು ಈ ಆವಿಷ್ಕಾರ ತಿಳಿಸದಿದ್ದರೂ, ಈ ಜಗತ್ತು ಏನು , ಹೇಗಿದೆ ಎಂಬ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ’ ಎಂದು ಮಿಶಿಗನ್‌ನ ಸೈದ್ಧಾಂತಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಗೊರ್ಡನ್ ಕೇನ್ ತಿಳಿಸಿದ್ದಾರೆ.

ಪತ್ತೆ ಹೇಗೆ, ಎಲ್ಲಿ?
ಕಳೆದ ಒಂದು ವರ್ಷದಿಂದ ವಿಜ್ಞಾನಿಗಳು ಜಿನೀವಾದ ಸಿಇಆರ್‌ಎನ್‌ನಲ್ಲಿ ಹಿಗ್ಸ್ ಬೋಸನ್ ಹುಡುಕಾಟ ನಡೆಸಿದ್ದರು. 328 ಅಡಿ ಆಳದ 17 ಮೈಲಿ ಕಾಲುವೆಯಲ್ಲಿ ಅತಿ ವೇಗವಾಗಿ ಪ್ರೋಟಾನ್‌ಗಳನ್ನು ಡಿಕ್ಕಿ ಹೊಡೆಸುವ ಮೂಲಕ ಕಣಗಳನ್ನು ಛಿದ್ರಗೊಳಿಸುವ ಪ್ರಯತ್ನ ನಡೆಸಲಾಗಿತ್ತು. ಅತಿ ಸಣ್ಣ ಕಣದಲ್ಲಿ ಹಿಗ್ಸ್ ಬೋಸನ್‌ನ ಅಸ್ತಿತ್ವ ಪತ್ತೆ ಮಾಡಲಾಗಿದೆ.

ಪ್ರಾಯೋಗಿಕ ಪುರಾವೆಯ ಟೈಮ್‌ಲೈನ್
2000-2004 : 2000ಕ್ಕೂ ಮೊದಲೇ ಸಂಗ್ರಹಿಸಲಾದ ದತ್ತಾಂಶಗಳನ್ನು ಬಳಸಿಕೊಂಡು 2003-2004ರಲ್ಲಿ ದೊಡ್ಡ ಮಟ್ಟದಲ್ಲಿ ಎಲೆಕ್ಟ್ರಾನ್ -ಪಾಸಿಟ್ರಾನ್ ಡಿಕ್ಕಿ ಹೊಡೆಸಿ ಪ್ರಯೋಗಗಳನ್ನು ಮಾಡಲಾಯಿತು. ಈ ಮೂಲಕ ಹೊಸ ಕಣಗಳ ಪತ್ತೆಯ ನಿಟ್ಟಿನಲ್ಲಿ ಹೆಜ್ಜೆ ಇಡಲಾಯಿತು.

2010 ಜುಲೈ : ಸಿಡಿಎಫ್ ( ಫರ್ಮಿಲ್ಯಾಬ್ ) ಮತ್ತು ಡಿಕ್ಯೂ ( ಟೆವಾಟ್ರನ್ ) ಪ್ರಯೋಗಗಳಲ್ಲಿ ಶೇ. 95ವಿಶ್ವಾಸಮಟ್ಟದಲ್ಲಿ (ಸಿಎಲ್) 158-175 ಜಿಇವಿ/ಸಿ2 ವ್ಯಾಪ್ತಿಯಲ್ಲಿ ಹಿಗ್ಸ್ ಬೋಸಾನ್ ಕಣಗಳು ಕಂಡುಬಂದಿರುವುದಾಗಿ ಹೇಳಲಾಯಿತು.

2011 ಏಪ್ರಿಲ್ 24 : ಮಾಧ್ಯಮಗಳು ಈ ಪತ್ತೆಯನ್ನು ಊಹಾಪೋಹ ಎಂದು ಪ್ರಕಟಿಸಿದವು.

2011 ನವೆಂಬರ್ 18 : ಅಟ್ಲಾಸ್ ಮತ್ತು ಸಿಎಂಎಸ್ ಪ್ರಯೋಗದ ಮಾಹಿತಿಯ ಸಂಯುಕ್ತ ವಿಶ್ಲೇಷಣೆಯು ಹಿಗ್ಸ್ ಬೋಸಾನ್ ಕಣಗಳ ಮೌಲ್ಯಕ್ಕೆ ದಾರಿ ಮಾಡಿಕೊಟ್ಟಿತ್ತು.

2011 ಡಿಸೆಂಬರ್ 13 : ಅಟ್ಲಾಸ್ ಮತ್ತು ಸಿಎಂಎಸ್ ಪ್ರಯೋಗಗಳಲ್ಲಿ ಹಿಗ್ಸ್ ಬೋಸಾನ್ ಇರುವುದಾದರೆ ಅದರ ಕಣಗಳನ್ನು 116-130ಜಿಇವಿ (ಅಟ್ಲಾಸ್ ) ಅಥವಾ 115-127 ಜಿಇವಿ (ಸಿಎಂಎಸ್ )ಗೆ ಸೀಮಿತಗೊಳಿಸಲಾಗಿದೆ ಎಂದು ಘೋಷಿಸಲಾಯಿತು.

2012 ಮಾರ್ಚ್ 7 : ಟೆವ್ರಾಟ್‌ನಿಂದ ಸಂಪೂರ್ಣ ಮಾದರಿಯ ದತ್ತಾಂಶದಲ್ಲಿ 115ರಿಂದ 135 ಕಣಗಳ ಜಿಇವಿ/ಸಿ2 ಪ್ರದೇಶದಲ್ಲಿ ಹಿಗ್ಸ್ ಬೋಸನ್ ಬರುತ್ತದೆ ಎಂದು ಅರ್ಥೈಸಬಹುದಾಗಿ ಡಿಪೈ ಮತ್ತು ಸಿಡಿಎಫ್ ಸಹಯೋಗದ ಫಲಿತಾಂಶವು ಪ್ರಕಟಿಸಿತು.

2012 ಜುಲೈ 2 : ಅಟ್ಲಾಸ್ ಸಹಭಾಗಿತ್ವದಲ್ಲಿ ನಡೆದ ಮತ್ತೊಂದು ಪ್ರಯೋಗದಲ್ಲಿ 2011ರ ದತ್ತಾಂಶವನ್ನು ಮತ್ತೆ ವಿಶ್ಲೇಷಣೆ ಮಾಡಲಾಯಿತು. ಹಿಗ್ಸ್ ಕಣಗಳ ವ್ಯಾಪ್ತಿಯನ್ನು 111.4 ಜಿಇವಿ-116 ಜಿಇವಿ, 119 ಜಿಇವಿ-122.1 ಜಿಇವಿಗೆ ಹೊರತುಪಡಿಸಲಾಯಿತು. ಹಿಗ್ಸ್ ಬೋಸಾನ್ ಬಹುಶಃ 2.9 ಸಿಗ್ಮಾ ಪ್ರಾಮುಖ್ಯತೆಯೊಂದಿಗೆ 126 ಜಿಇವಿ ನಲ್ಲಿ ಇರಬಹುದೆಂದು ಹೇಳಲಾಯಿತು. ಅದೇ ದಿನ ಡಿಪೈ ಮತ್ತು ಸಿಡಿಎಫ್ ಸಹಯೋಗಲ್ಲಿ ಮತ್ತೊಮ್ಮೆ ನಡೆಸಲಾದ ವಿಶ್ಲೇಷಣೆಯಲ್ಲಿ 115-140 ಜಿಇವಿ ನಡುವಿನ ದತ್ತಾಂಶವು ಹಿಗ್ಸ್ ಬೋಸಾನ್ ಕಣಗಳಿಗೆ ಅನುಗುಣವಾಗಿದೆ ಎಂದು ಹೇಳಲಾಯಿತು.

2012 ಜುಲೈ 4 : ಹಿಗ್ಸ್ ಬೋಸಾನ್ ಸಮೂಹವು 4.9 ಸಿಗ್ಮಾದೊಳಗೆ 125.3+0.6 ಜಿಇವಿ/ಸಿ2 ಇರುವುದಾಗಿ ಸಿಇಆರ್‌ಎನ್ ತಂಡದಲ್ಲಿರುವ ಸಿಎಂಎಸ್ ಪ್ರಕಟಿಸಿತು. 126 ಜಿಇವಿ ಸಮೂಹ ಪ್ರದೇಶದಲ್ಲಿ 5 ಸಿಗ್ಮಾ ಮಟ್ಟದಲ್ಲಿ ಹೊಸ ಕಣ ಇರುವುದನ್ನು ನಮ್ಮ ಪ್ರಯೋಗಗಳು ಸ್ಪಷ್ಟಪಡಿಸಿವೆ ಎಂದು ಅಟ್ಲಾಸ್ ಸಹಯೋಗವು ಘೋಷಿಸಿತು. ಆದರೆ ವಿಜ್ಞಾನಿಗಳು ಈ ಹೊಸ ಕಣಗಳನ್ನು ದೇವಕಣಗಳು ಎಂದು ಔಪಚಾರಿಕವಾಗಿ ಗುರುತಿಸಲಾಗಿದೆ. ಮತ್ತಷ್ಟು ವಿಶ್ಲೇಷಣೆ ನಡೆಯಬೇಕಿದೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಇನ್ನು ಅಧ್ಯಯನ
‘ಯೂರೋಪಿನ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ದ್ರವ್ಯ ಸೃಷ್ಟಿಯ ಮೊದಲ ಪುರಾವೆ ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಅತ್ಯಂತ ರೋಮಾಂಚನಕಾರಿ ವಿಷಯವಿದು. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ’
– ಕೆ. ಕಸ್ತೂರಿ ರಂಗನ್ , ಯೋಜನಾ ಆಯೋಗ (ವಿಜ್ಞಾನ)ದ ಸದಸ್ಯ

ಆಸಕ್ತಿಯುತ ಆವಿಷ್ಕಾರ
‘ಬಹಳ ಆಸಕ್ತಿಯುತವಾದ ಆವಿಷ್ಕಾರವಿದು. ಆದರೆ, ಇದರ ಫಲಶ್ರುತಿ ಬಗ್ಗೆ ಸದ್ಯ ಏನೂ ಹೇಳಲಾಗದು’
– ಅಶ್ವಿನಿ ಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

ದೇವ ಕಣದಲ್ಲಿ ಭಾರತದ ನಂಟು

ದೇವಕಣದ ಆವಿಷ್ಕಾರದಲ್ಲಿ ಭಾರತ ಮಹತ್ತರ ಪಾತ್ರ ವಹಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಕೋಲ್ಕೊತಾದ ಸಹಾ ಇನ್ಸ್‌ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಜಿಕ್ಸ್ (ಎಸ್‌ಐಎನ್‌ಪಿ), ಮುಂಬಯಿಯ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್, ಹರಿಶ್ಚಂದ್ರ ರೀಸರ್ಚ್ ಇನ್ಸ್‌ಟಿಟ್ಯೂಟ್, ಭುವನೇಶ್ವರದ ಅಲಹಾಬಾದ್ ಅಂಡ್ ಇನ್ಸ್‌ಟಿಟ್ಯೂಟ್ ಆಫ್ ಫಿಜಿಕ್ಸ್‌ನ ಹಲವಾರು ವಿಜ್ಞಾನಿಗಳು ವಿಶ್ವದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯೋಗದಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.

ಉಪ ಪರಮಾಣು ಕಣಗಳು ಹಿಗ್ಸ್ ಬೋಸಾನ್ ಅಥವಾ ದೇವರ ಕಣಗಳ ಜತೆ ಸ್ಥಿರವಾಗಿರುವುದು ಪತ್ತೆಯಾಗಿರುವುದಾಗಿ ಸಿಇಆರ್‌ಎನ್ ವಿಜ್ಞಾನಿಗಳು ಜಿನೀವಾದಲ್ಲಿ ಘೋಷಿಸುವಾಗ ಜಗತ್ತಿನ ಮಹತ್ವಾಕಾಂಕ್ಷೆಯ ಈ ಪ್ರಯೋಗದಲ್ಲಿ ಭಾರತದ ನಂಟು ಇರುವುದು ಪ್ರತಿಬಿಂಬಿಸಿತು.

‘ ಭಾರತವು ಈ ಯೋಜನೆಯ ಚಾರಿತ್ರಿಕ ತಂದೆ ‘ ಎಂದು ಸಿಇಆರ್‌ಎನ್ ಎಂದೇ ಪ್ರಸಿದ್ಧಿಯಾಗಿರುವ ಜಿನೀವಾ ಮೂಲದ ಪರಮಾಣು ಸಂಶೋಧನೆ ಕುರಿತ ಯುರೋಪಿಯನ್ ಸಂಸ್ಥೆಯ ವಕ್ತಾರ ಪೌಲೊ ಗಿಬೆಲಿನೊ ಘೋಷಿಸುವಾಗ ಇತ್ತ ಎಸ್‌ಐಎನ್‌ಪಿ ಸಂಸ್ಥೆಯಲ್ಲಿ ವಿಜ್ಞಾನಿಗಳ ಉತ್ಸಾಹ ಮೇರೆ ಮೀರಿತ್ತು. ಸಿಇಆರ್‌ಎನ್‌ನಲ್ಲಿ ನಡೆದ ಕಾಂಪ್ಯಾಕ್ಟ್ ಮ್ಯೂಯಾನ್ ಸೋಲೆನಾಯ್ಡ್ ಪ್ರಯೋಗದ ಅಭಿವೃದ್ಧಿಗೆ ಭಾರತದ ವಿಜ್ಞಾನಿಗಳು ಮಹತ್ವದ ಕೊಡುಗೆ ನೀಡಿದ್ದರು.

1920ರಲ್ಲಿ ಅಲ್ಬರ್ಟ್ ಐನ್‌ಸ್ಟೈನ್ ಅವರ ಜತೆ ಕೆಲಸ ಮಾಡಿದ್ದ ಭಾರತದ ವಿಜ್ಞಾನಿ ಸತ್ಯೇಂದ್ರ ಬೋಸ್ ಅವರ ಹೆಸರನ್ನು ದೇವರ ಕಣಕ್ಕೆ ಇಡಲಾಗಿದೆ.

‘ ಭೌತಶಾಸ್ತ್ರದಲ್ಲಿ ಇದೊಂದು ಐತಿಹಾಸಿಕ ಕ್ಷಣ. ಇತಿಹಾಸದ ಭಾಗವಾಗಲು ಎಸ್‌ಐಎನ್‌ಪಿ ಹೆಮ್ಮೆ ಪಡುತ್ತದೆ ಎಂದು ಅದರ ನಿರ್ದೇಶಕ ಮಿಲನ್ ಸನ್ಯಾಲ್ ತಿಳಿಸಿದ್ದಾರೆ. ಯಾವುದೇ ಅನುಮಾನಕ್ಕೆ ಆಸ್ಪದ ನೀಡದಂತೆ ಈ ಆವಿಷ್ಕಾರವನ್ನು ಸಾಬೀತುಪಡಿಸಲು ಮತ್ತಷ್ಟು ದತ್ತಾಂಶ ಮತ್ತು ತೀವ್ರ ಪರಿಶೀಲನೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ವಿಜ್ಞಾನದ ಬೆಳವಣಿಗೆಯಲ್ಲಿ ಇದೊಂದು ಪ್ರಮುಖ ಕ್ಷಣ. ವಿಜ್ಞಾನ ಕ್ಷೇತ್ರದ ಕ್ರಾಂತಿಯಲ್ಲಿ ನಮ್ಮ ಸಂಸ್ಥೆ, ನಗರ ಹಾಗೂ ದೇಶ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.

ಸಿಎಂಎಸ್ ತಂಡದಲ್ಲಿ ಎಸ್‌ಐಎನ್‌ಪಿ ಪ್ರತಿನಿಧಿಗಳಾಗಿ ಪ್ರೊ. ಸುನಂದಾ ಬ್ಯಾನರ್ಜಿ, ಪ್ರೊ. ಸತ್ಯಾಕಿ ಭಟ್ಟಾಚಾರ್ಯ, ಪ್ರೊ. ಸುಚಂದ್ರ ದತ್ತ, ಪ್ರೊ. ಸುಬೀರ್ ಸರಕಾರ್ ಮತ್ತು ಪ್ರೊ. ಮನೋಜ್ ಸರಣ್ ಇದ್ದರು ಎಂದು ಅವರು ಹೇಳಿದ್ದಾರೆ.

ನುಡಿಗಟ್ಟು ದೇವರ ಕಣವನ್ನು ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಲಿಯಾನ್ ಲಿಂಡರ್‌ಮನ್ ಹುಟ್ಟು ಹಾಕಿದರು. ಉಪ ಪರಮಾಣು ಬ್ರಹ್ಮಾಂಡ ಹೇಗೆ ಪ್ರಾರಂಭವಾಯಿತು ಮತ್ತು ಕೆಲಸ ಮಾಡುತ್ತದೆ ಎಂಬುದು ವಿವರಿಸುವುದು ಸುಲಭದ ಮಾರ್ಗವಾಗಿರುವುದರಿಂದ ಈ ನುಡಿಗಟ್ಟನ್ನು ಭೌತಶಾಸ್ತ್ರಜ್ಞರು ಬಳಸುತ್ತಿಲ್ಲ.

********* ********* *********

ಹಿಗ್ಸ್-ಬೋಸಾನ್ ಕಣಕಂಡ ಹಿಗ್ಗಿನಲ್ಲಿ

ಜೀವ ವಿಜ್ಞಾನದಲ್ಲಿ ವಿಕಾಸವಾದಕ್ಕಿರುವಷ್ಟೇ ಮಹತ್ವ ಭೌತವಿಜ್ಞಾನದಲ್ಲಿನ ಹಿಗ್ಸ್-ಬೋಸಾನ್ ಕಣ ವಾದಕ್ಕಿದೆ.

ಅದ್ಯಾವ ಘಳಿಗೆಯಲ್ಲಿ ‘ದೇವಕಣ’ವೆಂಬ ಹೆಸರನ್ನು ವಿಜ್ಞಾನಿಗಳಿತ್ತರೋ ಗೊತ್ತಿಲ್ಲ, ಹಿಗ್ಸ್-ಬೋಸಾನ್ ಎಂಬ ಹೆಸರಿನಿಂದ ಭೌತ ವಿಜ್ಞಾನಿಗಳು ಇದುವರೆಗೂ ಗುರುತಿಸುತ್ತಿದ್ದ ಪರಮಾಣು ಜಾತಕಣಕ್ಕೀಗ ಎಲ್ಲಿಲ್ಲದ ಮಹತ್ವ ಬಂದಿದೆ. ನಮ್ಮ ಭೌತವಿಜ್ಞಾನದ ಸಾಮಾನ್ಯ ತಿಳುವಳಿಕೆಯಲ್ಲಿ ಪ್ರತಿಯೊಂದು ಕಣಕ್ಕೂ ‘ದ್ರವ್ಯರಾಶಿ’ಯೆಂಬುದಿರುತ್ತದೆ. ಇಂಗ್ಲಿಷಿನಲ್ಲಿ ‘ಮಾಸ್’ ಎಂದು ಗುರುತಿಸಲಾದ ಇದು ಪದಾರ್ಥದ ಒಟ್ಟು ಪ್ರಮಾಣವನ್ನು ಸೂಚಿಸುತ್ತದೆ. ಗುರುತ್ವಾಕರ್ಷಣೆಯ ಬಲದೊಂದಿಗೆ ಒಗ್ಗೂಡಿಸಿದರೆ ಇದು ಯಾವುದೇ ಭೌತಿಕ ವಸ್ತುವಿನ ತೂಕವನ್ನು ನೀಡುತ್ತದೆ. ಒಂದು ಭೌತವಿಜ್ಞಾನ ಕಲ್ಪನೆಯ ಪ್ರಕಾರ ಯಾವುದಾದರೂ ಒಂದು ಕಣಕ್ಕೆ ದ್ರವ್ಯರಾಶಿಯೆಂಬುದೇ ಇಲ್ಲದಿದ್ದರೆ, ಅದನ್ನು ಬೆಳಕಿನ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವೇಗೋತ್ಕರ್ಷ ಮಾಡಬಹುದು. ಹಾಗೆ ಮಾಡಲು ಸಾಧ್ಯವಾದಲ್ಲಿ ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ನಮ್ಮ ಇಡೀ ಬ್ರಹ್ಮಾಂಡವನ್ನು ಆ ಕಣ ದಾಟಿ ಹೋಗಬಹುದು. ಈ ಅನಂತ ವಿಶ್ವದೊಳಗೆ ಅದು ತನ್ನ ಪಯಣವನ್ನು ನಿರಂತರವಾಗಿ ಸಾಗಿಸುತ್ತಿರಬಹುದು. ಇದು ಬಿಡಿ, ವಿಜ್ಞಾನ ಕಲ್ಪನಾಕತೆಯ ಭಾಗವೆಂದುಕೊಳ್ಳೋಣ. ನಮ್ಮ ಕಣ್ಣಿಗೆ ಕಾಣುವ, ನಮ್ಮ ಸ್ಪರ್ಶಕ್ಕೆ ಸಿಲುಕವ ಅಷ್ಟೇಕೆ ನಮ್ಮ ಇಂದ್ರಿಯಗಳಿಗೇ ಗ್ರಹಿಸಲಾಗದ ಯಾವ ವಸ್ತುವಿದ್ದರೂ ಅದು ಪರಮಾಣುಗಳಿಂದಲೇ ಜೋಡಣೆಯಾಗಿರಬೇಕು. ಹಾಗೆ ಜೋಡಣೆಯಾಗಬೇಕಿದ್ದಲ್ಲಿ ಪರಮಾಣು, ಪರಮಾಣುಗಳ ನಡುವೆ ಪರಸ್ಪರ ಆಕರ್ಷಣಾ ಬಲದ ಸೆಳೆತವಿರಲೇಬೇಕು. ದ್ರವ್ಯರಾಶಿಯೇ ಇಲ್ಲದ ಕಣಗಳಿಂದ ಏನಾದರೂ ಪರಮಾಣು ಸಷ್ಟಿಸಹೊರಟರೆ ಅವು ಒಂದನ್ನೊಂದು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆಯೇ ಹೋಗಬಹುದು.

ಭೌತವಿಜ್ಞಾನದಲ್ಲಿ ಪರಮಾಣು ಹಂತದ ಅಧ್ಯಯನಕ್ಕೂ ಮಿಗಿಲಾದದ್ದು ಪರಮಾಣುಗಳನ್ನು ಸೃಷ್ಟಿ ಮಾಡಿರುವ ಕಣಗಳದ್ದು. ಇಂಥ ಕಣ ಭೌತವಿಜ್ಞಾನದ ಶಿಷ್ಟ ಮಾದರಿಯಲ್ಲಿ ಹಿಗ್ಸ್-ಬೋಸಾನ್ ಹೆಸರಿನ ಕಣ ಮೂಲಭೂತವಾದದ್ದು. ಪರಮಾಣುವಿನಲ್ಲಿರುವ ಮತ್ತೆರಡು ಕಣಗಳೆಂದರೆ ಫರ್ಮಿಯಾನ್ ಹಾಗೂ ಗ್ಲೂವಾನ್. ಆಲ್ಬರ್ಟ್ ಐನ್‌ಸ್ಟೀನ್ ಅವರ ಸಮಕಾಲೀನರು ಹಾಗೆಯೇ ಭೌತವಿಜ್ಞಾನವೊಂದೇ ಅಲ್ಲ, ಇನ್ನೂ ಅನೇಕ ವಿಜ್ಞಾನ ಶಾಖೆಗಳಿಗೆ ಅಸಾಮಾನ್ಯ ಕೊಡುಗೆ ನೀಡಿರುವ ನಮ್ಮ ಸತ್ಯೇಂದ್ರನಾಥ ಬೋಸ್ ಅವರು ಕಣ ಭೌತವಿಜ್ಞಾನ ಕ್ಷೇತ್ರದಲ್ಲೂ ಅತ್ಯಮೂಲ್ಯ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಹೀಗಾಗಿ ಪರಮಾಣುವಿನ ಮೂಲ ಕಣವೊಂದಕ್ಕೆ ಅವರ ಹೆಸರನ್ನಿಡಲಾಗಿದೆ. ಇದಕ್ಕೆ ವಿಜ್ಞಾನಿ ಹಿಗ್ಸ್‌ಅವರ ಹೆಸರು ಹೇಗೆ ಸೇರಿಕೊಂಡಿತೆಂದರೆ, ಬೋಸಾನ್ ಕಣಗಳು ಮೂಡಿಸುವ ಕ್ಷೇತ್ರದ ಬಗ್ಗೆ ಕಲ್ಪನೆಯನ್ನು ಕೊಟ್ಟವರು ಅವರು. ಪ್ರೋಟಾನ್ ಕಣಕ್ಕೆ ವಿದ್ಯುದಯಸ್ಕಾಂತೀಯ ಕ್ಷೇತ್ರ ಇರುವಂತೆ ಬೋಸಾನ್ ಕಣಕ್ಕೆ ಹಿಗ್ಸ್ ಕ್ಷೇತ್ರವಿರುತ್ತದೆ. ಹಿಗ್ಸ್ ಕ್ಷೇತ್ರವು ಭೌತವಿಜ್ಞಾನದ ಜಟಿಲ ಭಾಗವಾದ ಕ್ವಾಂಟಮ್‌ಗೆ ಸಂಬಂಧಿಸಿದ ವಿಷಯ. ಅನಿಶ್ಚಯತೆ, ಏಕಕಾಲದಲ್ಲಿ ಬಹುರೂಪ, ಇರುವಿಕೆ-ಇಲ್ಲದಿರುವಿಕೆಯ ಕಣ್ಣುಮುಚ್ಚಾಲೆ… ಹೀಗೆ ಸಾಮಾನ್ಯ ತಿಳಿವಳಿಕೆಗೆ ಕೊಂಚ ಎತ್ತರದ ಸ್ತರದಲ್ಲಿರುವುದು ಈ ಕ್ವಾಂಟಮ್ ಭೌತವಿಜ್ಞಾನ. ಇಂಥದೊಂದು ಹಿಗ್ಸ್-ಬೋಸಾನ್ ಕಣ ಇದೆಯೆ? ಇರುವುದಾದರೆ, ಅದನ್ನು ಪ್ರತ್ಯೇಕಿಸುವುದು ಹೇಗೆ? ಪ್ರತ್ಯೇಕಿಸಿದ ನಂತರ ಅದನ್ನು ಬಳಸುವುದೆಲ್ಲಿ?ಬಳಕೆಯಿಂದ ವಿಜ್ಞಾನದ ಪ್ರಸ್ತುತ ತಿಳಿವಳಿಕೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು? … ಕಣಕಣದಲ್ಲೂ ಭೌತವಿಜ್ಞಾನದ ಕುರುಹುಗಳನ್ನರಸುತ್ತಿರುವ ವಿಜ್ಞಾನಿಗಳನ್ನು ದಶಕಗಳಿಂದ ಕಾಡುತ್ತಿರುವ ಪ್ರಶ್ನೆಗಳು.

ಬೋಸಾನ್ ಕಣಗಳು ತಮ್ಮ ಪ್ರಭಾವಳಿಯಂತೆ ಹೊತ್ತೊಯ್ಯುವ ಕ್ಷೇತ್ರದ ಬಗ್ಗೆ ಕ್ರಿ.ಶ.1964ರಲ್ಲಿಯೇ ವಿಜ್ಞಾನಿ ಹಿಗ್ಸ್ ಪ್ರತಿಪಾದಿಸಿದ್ದರೂ, ನಂಬಿಕೆ ತರಿಸುವಂಥ ಪ್ರಯೋಗಗಳು ಇದುವರೆಗೂ ನಡೆದಿರಲಿಲ್ಲ. ಜಿನೇವಾ ಸಮೀಪ ನಡೆಯುತ್ತಿರುವ ಭೂಗರ್ಭ ಪ್ರಯೋಗಗಳಲ್ಲಿ ಪರಮಾಣು ಮತ್ತು ಅವುಗಳಿಗಿಂತಲೂ ಕಿರಿದಾದ ಪರಮಾಣು ಜಾತ ಕಣಗಳ ಗುಣಲಕ್ಷಣಗಳ ಬಗ್ಗೆ ಹೊಸ ಹೊಳಹುಗಳು ಸಿಗುತ್ತಿವೆ. ಪರಮಾಣುವಿನ ಭಾಗವಾದ ಪ್ರೋಟಾನ್‌ಗಳನ್ನು ಬೆಳಕಿನ ವೇಗಕ್ಕೆ ಉತ್ಕರ್ಷಿಸಿ, ಪರಸ್ಪರ ಡಿಕ್ಕಿ ಹೊಡೆಯುವಂತೆ ಮಾಡಿ, ಆ ಸಂದರ್ಭದಲ್ಲಿ ಸಿಡಿದ ಚೂರುಗಳು ಹಿಗ್ಸ್-ಬೋಸಾನ್ ಕಣಗಳೇ ಆಗಿರಬೇಕು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಇದು ನಿನ್ನೆಯಷ್ಟೇ ಹೊರಬಿದ್ದಿರುವ ಫಲಿತಾಂಶದ ತಿರುಳು.

ಇದು ನೂರರಲ್ಲಿ 99.99995ರಷ್ಟು ಖಚಿತವಾದದ್ದು ಎಂಬುದು ಸದ್ಯದ ಊಹೆ. ಇದು ಸಂಪೂರ್ಣ ನಿಜವಾದಲ್ಲಿ ಸಷ್ಟಿ ಆರಂಭವಾದ ಅಂದರೆ ಮಹಾಸ್ಫೋಟದ ಮೊದಲ ಸೆಕೆಂಡಿನ ಲಕ್ಷ ಕೋಟಿ ಭಾಗವೊಂದನ್ನು ಪುನಾರೂಪಿಸಿದಂತೆ. ವಾರೆವ್ಹಾ ಎಂದು ಚೀರುವ ಸರದಿ ಕಣಭೌತವಿಜ್ಞಾನಿಗಳದ್ದು. ಅದೆಷ್ಟೇ ಅಲ್ಪ ಪ್ರಮಾಣದ ಅವಯ ದಾಖಲೆಯೇ ಆಗಲಿ, ಅದನ್ನು ಹಿಗ್ಗಿಸಿ, ಪೋಣಿಸಿ, ಇಡೀ ವಿಶ್ವ ಸಷ್ಟಿಯಾದ ಬಗೆಯನ್ನು ನಿಖರವಾಗಿ ತಿಳಿದುಕೊಳ್ಳಬಹುದು. ಇದುವರೆಗಿನ ಸಿದ್ಧಾಂತಗಳನ್ನು ಒಂದೊಂದಾಗಿ ಪ್ರಮಾಣಿಸಿ ನೋಡಬಹುದು, ಇಲ್ಲವೇ ನುಚ್ಚು ನೂರಾಗಿಸಬಹುದು – ಥೇಟ್ ಒಂದನ್ನೊಂದು ಗುದ್ದಿ ಚೂರಾದ ಪ್ರೋಟಾನ್‌ಗಳಂತೆ.

ಕೃಪೆ : ವಿಜಯ ಕರ್ನಾಟಕ
ಸಂಗ್ರಹ ಹರೀಶ್ ನಾಗರಾಜ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: