ಐದು ರೂ ನಾಣ್ಯಗಳು ಒಡವೆಗಳಾದ ಕಥೆ

ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಹಳ್ಳಿಯ ರೈತರಿಗೆ, ಕೂಲಿಕಾರರಿಗೆ ಬಂಗಾರವೆಂಬುದು ಗಗನ ಕುಸುಮವಾಗಿದೆ. ಅದಕ್ಕವರು ಪರ್ಯಾಯಗಳನ್ನು ಅವರದೇ ರೀತಿಯಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೆಣ್ಣುಮಗಳು ಕಂಡಕ್ಟರ್ ಬಳಿ ಇರುವ ಕಂದು ಬಣ್ಣದ ಐದು ರೂನ ಹೊಸ ನಾಣ್ಯಗಳನ್ನು ಕೇಳಿದರು. ಕಂಡಕ್ಟರ್ ನೋಟು ಪಡೆದು ಇರುವ ಹತ್ತಾರು ನಾಣ್ಯಗಳನ್ನು ಕೊಟ್ಟರು. ನಾನು ಕುತೂಹಲದಿಂದ ನಾಣ್ಯಗಳು ಯಾಕೆ ಎಂದು ವಿಚಾರಿಸಿದೆ. ಆಯಮ್ಮ ಒಂದು ಮಾಂಗಲ್ಯಸರ ಮಾಡಿಸ್ಬೇಕ್ರಿ ಎಂದರು. ಕಾರಣ ಕೇಳಿದರೆ ಐದು ರೂಪಾಯಿಯ ನಾಣ್ಯವನ್ನು ಕರಗಿಸಿ ಒಡವೆ ಮಾಡಿಸಿದರೆ ಥೇಟ್ ಬಂಗಾರದ ಬಾಯಿ ಬಡಿಯುವಂತಾಗುತ್ತವೆ. ಅವಕ್ಕೆ ಬಂಗಾರದ ನೀರು ಕುಡಿಸಿದರಂತೂ ಗುರುತಿಸಲಾರದಷ್ಟು ಬಣ್ಣ ತಾಳುತ್ತವೆ ಎನ್ನುವುದು ಆಯಮ್ಮನ ನಿಲುವು.

ನಂತರ ನಮ್ಮೂರಲ್ಲಿ ಈ ಸಂಗತಿ ಕೇಳಿದಾದ ಚೈನು, ಉಂಗುರ, ಮೂಗುತಿ, ಕಳಸ ಮುಂತಾದ ರೂಪಾಂತರಗಳಿಗೆ ಐದು ರೂ ಒಳಗಾದದ್ದು ತಿಳಿಯಿತು. ಐದು ರೂಪಾಯಿಯ ಕಾರಣಕ್ಕೆ ಗಂಡ ಹೆಂಡತಿಯನ್ನು ಬಿಟ್ಟ ಪ್ರಸಂಗವೊಂದನ್ನು ಹೇಳಿದರು. ಮದುವೆಯಲ್ಲಿ ಗಂಡಿಗೆ ಕೊಡುವ ಉಂಗುರವನ್ನು ಐದು ರೂ ನಾಣ್ಯದಿಂದ ಮಾಡಿಸಿ ಕೊಟ್ಟಿದ್ದಾರೆ. ಅದು ವರ್ಷದ ನಂತರ ಹಿತ್ತಾಳೆಯ ಕಂದು ಬಣ್ಣಕ್ಕೆ ತಿರುಗಿದೆ. ಆಗ ಗಂಡನ ಮನೆಯವರು ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಐದು ರೂಪಾಯಿಯನ್ನು ಕರಗಿಸಿ ಮಾಡಿಸಿದ್ದು ಎಂದು ಗೊತ್ತಾಗಿದೆ. ಬಂಗಾರದ ಉಂಗುರ ಮಾಡಿಸಿಕೊಂಡು ಮನೆಗೆ ಬಾ ಎಂದು ಗಂಡ ಹೆಂಡತಿಯನ್ನು ತವರಲ್ಲಿ ಬಿಟ್ಟು ಹೋಗಿದ್ದಾನೆ. ಇಂತದೇ ಕಥೆಗಳು ಐದು ರೂ ನಾಣ್ಯದ ಸುತ್ತ ಸುತ್ತುವರಿದಿವೆ.

ಇದರ ಹಿಂದೆ ಬಂಗಾರ ಕೊಳ್ಳಲಾಗದ ಅಸಾಹಯಕತೆ, ಒಡವೆಗಳನ್ನು ತೊಡಬೇಕೆಂಬ ಹಪಾಹಪಿ ಇದ್ದಂತಿದೆ. ಹಾಗಾಗಿ ಹಳ್ಳಿಗಳಲ್ಲಿ ಹೊಸ ಐದು ರೂ ನಾಣ್ಯವನ್ನು ಕೂಡಿಡುವ ಸ್ಪರ್ಧೆ ಏರ್ಪಟ್ಟಿದೆ. ನನ್ನ ಬಳಿ ಹತ್ತು ನಾಣ್ಯಗಳಿವೆ, ನನ್ನಲ್ಲಿ ಇಪ್ಪತ್ತು ನಾಣ್ಯಗಳಿವೆ ಎಂಬಂತಹ ಮಾತುಕತೆಗಳು ನಡೆಯುತ್ತಿವೆ. ಹೀಗೆ ಐದು ರೂ ನಾಣ್ಯಗಳನ್ನು ಸಂಗ್ರಹಿಸಿಡುವುದು ಒಂದು ಹವ್ಯಾಸವೆ ಆಗಿದೆ. ಕೆಲವು ಅಂಗಡಿಯವರು ಈ ನಾಣ್ಯಗಳನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರುವುದೂ ಇದೆ. ಇನ್ನು ಅಕ್ಕಸಾಲಿಗರು (ಬಂಗಾರದ ಕೆಲಸ ಮಾಡುವವರು) ಈ ನಾಣ್ಯದ ಒಡವೆಗಳನ್ನು ಮಾಡಿ ಮಾರುವುದೂ ಇದೆ. ಹೀಗೆ ಐದು ರೂಪಾಯಿ ನಾಣ್ಯವು ಜನಸಮುದಾಯದಲ್ಲಿ ಒಡವೆಗಳಾಗಿ ಬೇರೆಯದೇ ರೀತಿಯ ಸಂಬಂಧವನ್ನು ಪಡೆಯುತ್ತಿದೆ.

ನಾಣ್ಯವನ್ನು ಕರಗಿಸಿ ಒಡವೆಗಳನ್ನು ಮಾಡಿಕೊಡಲು ಅಕ್ಕಸಾಲಿಗರು ಈ ನಾಣ್ಯಗಳ ಬೆಲೆಗಿಂತ ಹೆಚ್ಚು ಪಟ್ಟು ಹಣ ಪಡೆಯುತ್ತಾರೆ. ನಮ್ಮೂರಿನಲ್ಲೊಬ್ಬ ಇಪ್ಪತ್ತು ನಾಣ್ಯಗಳನ್ನು ಕರಗಿಸಿ ಚೈನ್ ಮಾಡಿಸಲು ಆರುನೂರು ರೂಗಳನ್ನು ಕೊಟ್ಟಿದ್ದಾನೆ. ನಾಣ್ಯಗಳ ಬೆಲೆ ನೂರು ರೂ ಆದರೆ, ಅದನ್ನು ಚೈನು ಮಾಡಿಸಲು ಆರುನೂರು. ಹೀಗೆ ನಾಣ್ಯಗಳಿಂದ ಒಡವೆ ಮಾಡಿಸಿಕೊಳ್ಳುವವರಲ್ಲಿ ಹೆಚ್ಚಿನವರು ಬಡವರು, ರೈತರು, ಕೆಳಸಮುದಾಯಗಳ ಜನ. ಕೆಲವು ಬುಡಕಟ್ಟುಗಳಲ್ಲಿ ನಾಣ್ಯಗಳನ್ನು ಪೋಣಿಸಿ ಸರ ಮಾಡಿಕೊಳ್ಳುವುದು ಪವಿತ್ರವೂ ಆಗಿದೆ. ಹಾಲಕ್ಕಿಗಳಲ್ಲಿ, ಸಿದ್ದಿಗಳಲ್ಲಿ ಲಂಬಾಣಿ ಸಮುದಾಯಗಳಲ್ಲಿ ಇಂತಹ ಸರಗಳನ್ನು ಈಗಲೂ ನೋಡಬಹುದು.

ಇದೇನು ಹೊಚ್ಚ ಹೊಸ ಸಂಶೋಧನೆಯಲ್ಲ, ಹಿಂದಿನಿಂದಲೂ ಇದೆ. ಕಾಸು, ದುಡ್ಡು, ದಮ್ಮಡಿ, ಇದ್ದ ಕಾಲದಲ್ಲೂ ಅವುಗಳನ್ನು ಕರಗಿಸಿ ಒಡವೆಗಳನ್ನು ಮಾಡಿಸಿಕೊಳ್ಳುತ್ತಿದ್ದರಂತೆ. ಅಂತೆಯೇ ಕಾಸಿನ ರಸ ಎಂಬ ಒಡವೆ ಹುಟ್ಟಿದ್ದೇ ಕಾಸಿನಿಂದ ಸರ ಮಾಡಿಕೊಳ್ಳಬಹುದೆಂಬ ಜನರ ಸಂಶೋಧನೆಯಿಂದ. ನಾಣ್ಯಕ್ಕೆ ಬಳಸುವ ಹಿತ್ತಾಳೆ ತಾಮ್ರವು ಶುದ್ಧವಾಗಿರುತ್ತದೆ, ಅದು ಕಲಬೆರಕೆಯಾಗಿರುವುದಿಲ್ಲ, ಅದು ಬಣ್ಣ ಕಳೆದುಕೊಳ್ಳುವುದಿಲ್ಲ ಎನ್ನುವುದು ಜನರು ನಂಬಿಕೆ.

ನಾಣ್ಯಗಳನ್ನು ಕೂಡಿಡುವುದರ ಹಿಂದೆ ಹಳ್ಳಿಗಳಲ್ಲಿ ಕಾಲಕಾಲಕ್ಕೆ ನಾನಾ ಬಗೆಯ ಕಥನಗಳು ಹುಟ್ಟುತ್ತವೆ. ಇಪ್ಪತ್ತು ಇಂದಿರಾಗಾಂಧಿ ಚಿತ್ರಗಳಿರುವ ಐವತ್ತು ಪೈಸೆ ನಾಣ್ಯಗಳನ್ನು ಕೂಡಿಸಿ ಕೊಟ್ಟರೆ ಒಂದು ಲಕ್ಷ ರೂಪಾಯಿ ಕೊಡುವುದಾಗಿ ಕಥೆ ಚಾಲ್ತಿಯಲ್ಲಿತ್ತು. ಹಡಗಿನ ಚಿತ್ರ ನನ್ನ ಫೋಟೋಇರುವ ಐವತ್ತು ಪೈಸೆ ನಾಣ್ಯದಲ್ಲಿ ಓಸಿ ನಂಬರಿರುತ್ತದೆ ಎಂದು ಬುಗಿಲೆದ್ದಿತ್ತು. ಈ ಬಗೆಯಲ್ಲಿ ನಾಣ್ಯಗಳನ್ನು ಕುರಿತ ಜಾನಪದವೇ ಸೃಷ್ಠಿಯಾಗುವುದನ್ನು ನೋಡಬಹುದು.

ಒಂದು ಕಡೆ ಲೋಕಾಯುಕ್ತರ ದಾಳಿಗೆ ಸಿಕ್ಕ ಅಧಿಕಾರಿಗಳ ಕೆ.ಜಿಗಳ ಲೆಕ್ಕದಲ್ಲಿ ಬಂಗಾರದ ಸಂಗ್ರಹದ ಮಾಹಿತಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಮತ್ತೊಂದೆಡೆ ಬಂಗಾರದಲ್ಲಿ ಕುರ್ಚಿ ಮೇಜು ಚೆಂಬು ಗಂಗಾಳ ಚಮಚ ಕಿರೀಟ ಮಾಡಿಸಿಕೊಂಡು ಮೆರೆವ ಜನರಿದ್ದಾರೆ. ಇವರುಗಳ ನಡುವೆಯೇ ಐದು ರೂ ನಾಣ್ಯಗಳ ಕೂಡಿಟ್ಟುಕೊಂಡು ಒಡವೆಗಳ ಮಾಡಿಸಿಕೊಂಡು ಖುಷಿ ಪಡುವ ಜನರಿದ್ದಾರೆ, ಇದು ನಮ್ಮ ಕಣ್ಣೆದುರಿನ ವೈರುಧ್ಯದ ಚಿತ್ರ.

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: