ಪ್ರಯತ್ನಕ್ಕೆ ತಕ್ಕ ಫಲ

ಅದೊಂದು ಪುಟ್ಟ ಹಳ್ಳಿ. ಅಲ್ಲಿ ಯಾರೂ ಶ್ರಿಮಂತರಿಲ್ಲ. ಎಲ್ಲರೂ ತಮ್ಮ ತಮ್ಮ ಪಾಲಿಗೆ ಬಂದ ಚಿಕ್ಕ, ಚಿಕ್ಕ ಹೊಲಗಳನ್ನು ಉತ್ತು, ಬಿತ್ತಿ ಬಂದ ಬೆಳೆಯಲ್ಲೇ ಜೀವನ ಮಾಡುತ್ತಿದ್ದರು. ಕಳೆದ ನಾಲ್ಕಾರು ವರ್ಷಗಳಿಂದ ಮಳೆ ಸರಿಯಾಗಿ ಆಗದಿದ್ದರಿಂದ ಒಕ್ಕಲುತನವನ್ನೇ ನಂಬಿ ಬದುಕುವುದು ಕಷ್ಟ ಎನ್ನಿಸಿತು.

ಜೀವನಕ್ಕೆ ಮತ್ತೇನು ಹಾದಿ ಎಂದು ಯೋಚಿಸಿದರು. ಒಂದು ದಿನ ಸಂಜೆ ಹೀಗೆ ಮಾತನಾಡುತ್ತಿರುವಾಗ ಹಿರಿಯರೊಬ್ಬರು ಹೇಳಿದರು. ನಾವು ಒಕ್ಕಲುತನ ನಡೆಸಿಕೊಂಡು ಬಂದದ್ದೇನೋ ಸರಿಯೇ. ಈಗ ಅದು ನಮ್ಮಿಂದ ಸಾಧ್ಯವಾಗುವುದಿಲ್ಲವೆಂದಾಗ ಮತ್ತೇನಾದರೂ ದಾರಿ ನೋಡಬೇಕಲ್ಲವೇ.

ನಮ್ಮ ಹಿರಿಯರು ನಮಗೆ ಹಾಡುವ, ಕುಣಿಯುವ ಕಲೆಯನ್ನೂ ಕಲಿಸಿದ್ದಾರೆ. ನಾವು ಪರಿವಾರದವರೆಲ್ಲ ಹಬ್ಬ ಹರಿದಿನಗಳಲ್ಲಿ ಹಾಡಿ, ಕುಣಿದು ಸಂಭ್ರಮಪಡುವುದಿಲ್ಲವೇ ಅದನ್ನೇ ಏಕೆ ಇನ್ನಷ್ಟು ಚೆನ್ನಾಗಿ ಬೆಳೆಯಿಸಿಕೊಂಡು ಊರೂರು ಅಲೆದು ಜೀವನ ಮಾಡಬಾರದು. ಎಲ್ಲರಿಗೂ ಹೌದೆನ್ನಿಸಿತು.

ಮರುದಿನದಿಂದಲೇ ಪರಿವಾರದವರೆಲ್ಲ ಸೇರಿ ತಮಗೆ ತಿಳಿದಿದ್ದ ಹಾಡುಗಳನ್ನೆಲ್ಲ ಕೂಡಿಹಾಕಿದರು. ನೃತ್ಯಗಳನ್ನು ನೆನಪಿಸಿಕೊಂಡರು, ಜನಪದ ಪ್ರಕಾರಗಳನ್ನು ಸೇರಿಸಿದರು. ಮುಂದೆ ಹದಿನೈದು ದಿನ ಸತತವಾಗಿ ಪರಿಶ್ರಮವಹಿಸಿ ಎರಡು ತಾಸಿನ ಕಾರ್ಯಕ್ರಮ ರೂಪಿಸಿದರು. ಅದನ್ನು ದಿನಾಲು ಅಭ್ಯಾಸ ಮಾಡಿ, ಪರಿಷ್ಕರಿಸಿ ಒಂದು ಹಂತಕ್ಕೆ ಬಂದಿತೆಂದಾಗ ಊರಿಂದ ಊರಿಗೆ ನಡೆದರು.

ಪ್ರತಿಯೊಂದು ಊರಿನ ಮಧ್ಯದಲ್ಲಿ ಒಂದು ಒಳ್ಳೆಯ ಸ್ಥಳವನ್ನು ನೋಡಿ ದಿನಾಲು ಸಂಜೆ ಆರು ಗಂಟೆಗೆ ಪ್ರಾರಂಭ ಮಾಡುವರು. ಜನರಿಗೆ ತಿಳಿಯಲೆಂದು ನಿತ್ಯ ಬೆಳಿಗ್ಗೆ ಊರತುಂಬ ಜಾಗಟೆ ಬಾರಿಸುತ್ತ ವಿಷಯ ತಿಳಿಸುವರು. ಕೆಲವರು ಕುತೂಹಲದಿಂದ, ಕೆಲವರು ಆಸಕ್ತಿಯಿಂದ ಸಾಯಂಕಾಲ ಕಾರ್ಯಕ್ರಮಕ್ಕೆ ಬರುತ್ತಿದ್ದರು.

ಬಂದವರು ಏನಾದರೂ ಕಾಣಿಕೆ ಕೊಟ್ಟೇ ಹೋಗುತ್ತಿದ್ದರು. ಅದರಿಂದ ಈ ಕಲಾವಿದರ ಜೀವನ ಸಾಗುತ್ತಿತ್ತು. ಒಂದು ಊರಿನಲ್ಲಿ ಸ್ವಲ್ಪ ಆಸಕ್ತಿ ಕಡಿಮೆಯಾಯಿತು ಅಂತ ಎನ್ನಿಸಿತೋ ಮತ್ತೊಂದು ಊರಿಗೆ ಪ್ರಯಾಣ. ಹೀಗೆ ಪ್ರಯಾಣ ಮಾಡುತ್ತ ಒಂದು ರಾಜ್ಯಕ್ಕೆ ಬಂದರು. ಬೆಳಿಗ್ಗೆ ಸಾಯಂಕಾಲದ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಿ ಬಂದರು. ಸಂಜೆಗೆ ಎಲ್ಲ ತಯಾರಿ ಮಾಡಿಕೊಂಡರು.

ಐದು ಗಂಟೆಯ ಹೊತ್ತಿಗೆ ಜೋರಾಗಿ ಮಳೆ ಬರತೊಡಗಿತು. ಮರದ ಕೆಳಗೆ ಬಯಲಿನಲ್ಲಿ ಇವರ ಕಾರ್ಯಕ್ರಮ ನಡೆಯುವುದಿತ್ತು. ಈ ಪರಿ ಮಳೆ ಬಂದರೆ ಯಾರು ಬಂದಾರು. ಪಾಪ! ಈ ಪರಿವಾರದವರೆಲ್ಲ ಕಾಯ್ದು ಕುಳಿತರು. ಆರು ಗಂಟೆಗೆ ಮಳೆ ನಿಂತರೂ ಜನರು ಬರಲಿಲ್ಲ. ಆಯ್ತು, ಇನ್ನೇನು ಮಾಡುವುದು, ಇಂದು ವಿಶ್ರಾಂತಿ ತೆಗೆದುಕೊಂಡರಾಯಿತು ಎಂದು ತೀರ್ಮಾನ ಮಾಡಿದರು.

ಆಗ ಆ ಪರಿವಾರದಲ್ಲಿದ್ದ ಪುಟ್ಟ ಹುಡುಗಿಯೊಬ್ಬಳು, ಯಾರೂ ಬರದಿದ್ದರೇನಾಯಿತು. ನಾವು ಆಟ ಆಡಿಯೇ ಬಿಡೋಣ. ನಮಗೆ ಅಭ್ಯಾಸ ತಪ್ಪಬಾರದು. ಆಟ ಶುರು ಮಾಡದಿದ್ದರೆ ನಮ್ಮ ಆಟದ ಬಗ್ಗೆ ಜನರ ಅಭಿಪ್ರಾಯವೇ ಬದಲಾಗಬಹುದು. ಆಟವನ್ನು ಸರಿಯಾದ ಸಮಯಕ್ಕೆ ಪ್ರಾರಂಭ ಮಾಡದಿದ್ದರೆ ನಮ್ಮ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ.

ಶುರು ಮಾಡೋಣ. ಒಬ್ಬಿಬ್ಬರೂ ಬಂದರೂ ಸರಿಯೇ ಎಂದಳು. ಹಿರಿಯರಿಗೆ ಹೌದೆನ್ನಿಸಿ ಆಟ ಶುರುಮಾಡಿದರು. ತುಂಬ ಶ್ರದ್ಧೆಯಿಂದಲೇ, ಜನ ಭರ್ತಿಯಾದಾಗ ಹೇಗೆ ನಡೆಸುತ್ತಿದ್ದಾರೋ ಹಾಗೆಯೇ ನಡೆಸಿದರು. ಈ ಸದ್ದು ಕೇಳಿ ಹತ್ತಿಪ್ಪತ್ತು ಜನ ಸೇರಿದರು. ಕಾರ್ಯಕ್ರಮ ಸಾಂಗವಾಗಿ ಮುಗಿಯಿತು.

ಪರಿವಾರದವರೊಬ್ಬರು ಮೂಗು ಮುರಿದರು. `ಇವತ್ತೇನು ಕಾಣಿಕೆ ಬರುವುದು ಅಷ್ಟರಲ್ಲೇ ಇದೇ, ಸುಮ್ಮನೇ ಕುಣಿದದ್ದಾಯಿತು` ಎಂದರು. ಆಗ ಗುಂಪಿನಲ್ಲಿದ್ದವರೊಬ್ಬರು ಬಂದು ಪರಿವಾರದ ಹಿರಿಯನನ್ನು ಕರೆದು ಒಂದು ರೇಷ್ಮೆಯ ಚೀಲವೊಂದನ್ನು ಕೊಟ್ಟರು. ತೆಗೆದು ನೋಡಿದರೆ ಅದರಲ್ಲಿ ನೂರು ಬೆಳ್ಳಿಯ ನಾಣ್ಯಗಳು!. ಕೊಟ್ಟವರು ಹೇಳಿದರು, ಇಂದು ನೀವು ಜನರಿಲ್ಲದಿದ್ದರೂ ಆಟ ಮಾಡುತ್ತೀರೋ ಇಲ್ಲವೋ ಪರೀಕ್ಷಿಸಲು ರಾಜರೇ ಬಂದಿದ್ದರು. ಅವರಿಗೆ ನಿಮ್ಮ ಆಟ ತುಂಬ ಇಷ್ಟವಾಯಿತು.

ಅದಕ್ಕೇ ಈ ಹಣ ಕೊಟ್ಟು, ನಾಳೆ ನಿಮ್ಮೆಲ್ಲರನ್ನು ಅರಮನೆಗೆ ಬರಹೇಳಿದ್ದಾರೆ. ಇವರ ಸಂತೋಷಕ್ಕೆ ಪಾರವಿಲ್ಲದಂತಾಯಿತು. ನಾವು ಮಾಡಬೇಕಾದ ಕೆಲಸವನ್ನು, ಯಾರು ಗಮನಿಸಲಿ, ಬಿಡಲಿ ಮಾಡಲೇಬೇಕು.

ಕೆಲವೊಂದು ಬಾರಿ ಇದನ್ನಾರು ಗಮನಿಸುತ್ತಾರೆ, ಮಾಡದಿದ್ದರೇನಾಗುತ್ತದೆ ಎಂದುಕೊಂಡು ಮಾಡದೇ ಉಳಿಯುತ್ತೇವೆ. ಯಾವ ರೂಪದಲ್ಲಿ, ಯಾವ ಶಕ್ತಿ ನಮ್ಮನ್ನು ಪರೀಕ್ಷಿಸುತ್ತದೋ ಹೇಳುವುದು ಸಾಧ್ಯವಿಲ್ಲ. ನಮ್ಮ ಕರ್ತವ್ಯ ಸರಿಯಾಗಿದ್ದರೆ ತಕ್ಕ ಫಲ ದೊರೆತೇ ತೀರುತ್ತದೆ.
ಕೃಪೆ: ನಮ್ಮ ಕನ್ನಡ ನಾಡು
ಸಂಗ್ರಹ: ರವಿಕುಮಾರ್ ಆರಾಧ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: