ಮಂಕುತಿಮ್ಮನ ಕಗ್ಗ – 8-32

ಮಂಕುತಿಮ್ಮನ ಕಗ್ಗ – ೧೮

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು ? |
ಉದಕಬುದ್ಬುದವೆಲ್ಲ ! – ಮಂಕುತಿಮ್ಮ ||

ಈ ಜಗತ್ತಿನಲ್ಲಿರುವ ಜೀವಿಗಳು ನದಿಯ ತೆರೆಗಳಂತೆ ಉರುಳಿ ಹೊರಲಾಡುತ್ತಿವೆ. ಅದರಂತೆಯೇ ಇವಕ್ಕೆ ಮೊದಲೂ, ನಿಲುವು ಮತ್ತು ಕೊನೆ ಇಲ್ಲ, ಅಂತೆಯೇ ಜನರ ಬದುಕು, ಸಾವು, ಅಮೃತ (ಸೊದೆ) ಅಥವಾ ವಿಷ, ಇವುಗಳೆಲ್ಲವೂ ನೀರಿನ (ಉದಕದ) ಗುಳ್ಳೆಗಳು (ಬುದ್ಬುಧ), ಇವತ್ತು ಇರುತ್ತವೆ. ನಾಳೆ ಹೋಗುತ್ತವೆ. ಶಾಶ್ವತವಲ್ಲ.

___________________

ಮಂಕುತಿಮ್ಮನ ಕಗ್ಗ – ೧೯

ಇದೇನು ಒಣರಗಳೆ?

ಗಾಳಿ ಮಣ್ಣುoಡೆಯೊಳಹೊಕ್ಕು ಹೊರಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ |
ಕ್ಷ್ವೇಳವೇನಮೃತವೇಂ ?- ಮಂಕುತಿಮ್ಮ ||

ಮಣ್ಣಿನ ಉಂಡೆಯ ಒಳಗಡೆ ಗಾಳಿ ಹೋದರೆ, ಅದು ಹೊರಗಡೆ ಬರುವುದಕ್ಕೆ ಆಗುವುದಿಲ್ಲ. ಮನುಷ್ಯನಲ್ಲೂ (ಆಳ್) ಸಹ ಈ ಗಾಳಿ ಇರದಿದ್ದರೆ, ಅವನು ಒಂದು ಕೇವಲ ಮಣ್ಣಿನ ಉಂಡೆಯೇ ಸರಿ. ಈ ಬಾಳು ಬರೀ ಧೂಳು, ಸುಳಿ ಮತ್ತು ಮರ ತಿಕ್ಕಿದರೆ ಬರುವ ಉರಿಯ ಹೊಗೆ ಹೀಗಿರುವಾಗ ವಿಷವೇನು ? ಅಮೃತವೇನು ? ಎರಡು ಒಂದೇ.
______________________

ಮಂಕುತಿಮ್ಮನ ಕಗ್ಗ – ೨೦

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು ? |
ಚಂಡಚತುರೋಪಾಯದಿಂದಲೇನಹುದು ? ||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು |
ಅಂಡಲೆತವಿದಕೇನೋ ? – ಮಂಕುತಿಮ್ಮ ||

ನಮ್ಮ ಮನೋಭಿಲಾಷೆಗಳನ್ನು ಈಡೇರಿಸಿ ಕೊಳ್ಳುವದಕೋಸ್ಕರ, ನಾವು ಕಂಡ ಕಂಡ ದೇವರುಗಳಿಗೆಲ್ಲಾ ನಮಸ್ಕಾರ ಹಾಕುತ್ತೇವೆ. ಅಷ್ಟಕ್ಕೇ ನಾವು ಸುಮ್ಮನಿರುವುದಿಲ್ಲ. ಉಗ್ರವಾದ ನಾಲ್ಕು ಉಪಾಯಗಳನ್ನು (ಸಾಮ, ದಾನ, ಭೇದ, ದಂಡ) ಅನುಸರಿಸುತ್ತೇವೆ. ನಮಗೆ ಬೇಕಾಗಿರುವುದು ಒಂದು ಹಿಡಿ ಅಕ್ಕಿ (ತಂಡುಲ), ಮತ್ತು ಸುತ್ತಿಕೊಳ್ಳುವುದಕ್ಕೆ ಒಂದು ತುಂಡು ಬಟ್ಟೆ ಮಾತ್ರ. ಈ ಪರದಾಟ (ಅಂಡಲೆತ) ಗಳೆಲ್ಲಾ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರ. ಎನ್ನುವುದನ್ನು ಅರಿತರೆ, ನಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ.
______________________

ಮಂಕುತಿಮ್ಮನ ಕಗ್ಗ – ೨೨

ಕೃತ್ರಿಮವೋ ಜಗವೆಲ್ಲ | ಸತ್ಯತೆಯದೆಲ್ಲಿಹುದೋ ?|
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||
ಚತ್ರವೀ ಜಗವಿದರೊಳಾರ ಗುಣವೆಂತಿಹುದೊ||
ಯಾತ್ರಿಕನೆ, ಜಾಗರಿರೊ – ಮಂಕುತಿಮ್ಮ ||

ಈ ಹಿಂದಿನ ಐದು ಪದ್ಯಗಳಲ್ಲಿ, ನಮನ್ನು ಸ್ವಲ್ಪ ಮಟ್ಟಿಗೆ ವೇದಾಂತದ ಕಡೆಗೆ ಕೊಂಡೊಯ್ದರೆ, ಈ ಪದ್ಯದಲ್ಲಿ,
ನಮ್ಮನ್ನು, ಈ ಜಗತ್ತಿನ ಬಗ್ಗೆ ಜಾಗರೂಕರಾಗಿರಬೇಕೆಂದು ಎಚ್ಚರಿಸುತಿದ್ದಾರೆ.

ಈ ಜಗತ್ತೆಲ್ಲಾ ಕಪಟ, ಮೋಸದಿಂದ ತುಂಬಿಹೋಗಿದೆ, ಸತ್ಯವೆನ್ನುವುದು ಎಲ್ಲಿಯೂ ಇಲ್ಲವೇ ಇಲ್ಲ, ದಾಸ ಶ್ರೇಷ್ಠರಾದ ಶ್ರೀ ಪುರಂದರದಾಸರು ಹೇಳಿದಂತೆ ” ಸತ್ಯವಂತರಿಗಿದು ಕಾಲವಲ್ಲ “. ಈ ಪ್ರಪಂಚವನ್ನು ಸೃಷ್ಟಿ ಮಾಡಿರುವ ಪರಮಾತ್ಮನೇ, ಕಣ್ಣಿಗೆ ಕಾಣಿಸಿಕೊಳ್ಳದೆ ಅವಿತಿಟ್ಟು ಕೊಂಡಿದ್ದಾನೆ. ಈ ಜಗತ್ತು ಒಂದು ಛತ್ರ. ಅದರಲ್ಲಿ ಯಾರಯಾರ ಸ್ವಭಾವಗಳು ಹೇಗಿವೆಯೋ ನೀನೇನು ಬಲ್ಲೆ ! ನಿನ್ನ ಜಾಗರೂಕತೆಯಲ್ಲಿ ನೀನಿರು. ಎಲ್ಲರನ್ನು ನಂಬಿದೆಯೋ, ನೀನು ಮೋಸ ಹೋಗುವುದು ಖಂಡಿತ.
__________________________

ಮಂಕುತಿಮ್ಮನ ಕಗ್ಗ – ೨೩

ತಿರುಗಿ ತಿರುಗಿ ತೊಳಲುವುದು ತಿರಿದನ್ನವುಣ್ಣುವುದು|

ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು||
ಮರಳಿ ಕೊರಗಾಡುವುದು ಕೆರಳುವುದು ನರಳುವುದು|
ಇರವಿದೇನೊಣರಗಳೆ? – ಮಂಕುತಿಮ್ಮ ||

ಎಲ್ಲೆಲ್ಲಿಯೂ ಓಡಾಡಿ ಸುಸ್ತಾಗುವುದು, ಭಿಕ್ಷೆ ಬೇಡಿ ಅನ್ನವನ್ನು ತಿನ್ನುವುದು. ಇಷ್ಟೆಲ್ಲಾ ಮಾಡಿಯೂ, ವೈಭವದ ಪ್ರದರ್ಶನ ಮಾಡಿ ಮೈಮರೆಯುವುದು, ಇನ್ನೊಬ್ಬರ ಹತ್ತಿರ ಹೋಗಿ ಹಲ್ಲು ಗಿಂಜುವುದು ಪುನಃ ವ್ಯಥೆ ಪಡುವುದು, ಕೋಪಿಸಿಕೊಳ್ಳುವುದು, ಇನ್ನೊಬ್ಬರ ಮೇಲೆ ರೇಗಾಟ, ಮೇಲಿನದೆಲ್ಲವನ್ನು ಮಾಡಿದರೂ, ನಾವು ಎಣಿಸಿದಂತಾದಾಗ ಸಂಕಟ ಪಡುವುದು. ನಾವಿರುದು ಈ ರೀತಿಯ ಕೆಲಸಕ್ಕೆ ಬಾರದ ಸಮಸ್ಯೆಗಳ ಒಳಗೆ.
_____________

ಮಂಕುತಿಮ್ಮನ ಕಗ್ಗ – ೨೪

ಬಾಳಿಗೆ ನಕಾಸೆ

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೋ ?|
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ?|
ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ ||

ಮಾನ್ಯ ಡಿ.ವಿ.ಜಿ.ಯವರು, ಮಂಕುತಿಮ್ಮನ ಕಗ್ಗವನ್ನು ಬರೆಯುವುದಕ್ಕೆ ಹತ್ತು ವರ್ಷಗಳ ಹಿಂದೆ, ಉಮರನ ಒಸಗೆಯನ್ನು ಭಾಷಂತರ ಮಾಡಿದ್ದರು, ಈ ಕೆಲವು ಪದ್ಯರಚನೆಗಳು, ಅವನ್ನು ಹೋಲುತ್ತವೆ, ಎಂದಾದರೂ ತಪ್ಪಾಗಲಾರದು. ಅದರಲ್ಲಿ ಒಂದು ಕಡೆ ಉಮರನು ದೇವರನ್ನು ಕೇಳುವ ಪ್ರಸಂಗ. ನಾನು ತಪ್ಪು ಮಾಡಿರುವುದುಂಟು. ನಾನಾದರೋ ನೀನು ಸೃಷ್ಟಿಸಿದ ಹುಲು ಮನುಜ, ಸೃಷ್ಟಿಕರ್ತನಾದ ನೀನು ನನ್ನ ತಪ್ಪಿಗೆ ನನ್ನನ್ನು ಶಿಕ್ಷಿಸುವುದಾದರೆ ನಿನಗೂ ನನಗೂ ವ್ಯತ್ಯಾಸವೇನಿಲ್ಲ. ಇದೇ ರೀತಿ ಮಾನ್ಯ ಡಿ.ವಿ.ಜಿ ಯವರು ದೇವತೆಗಳನ್ನು ಪ್ರಶ್ನಿಸುತ್ತಾರೆ.

ಮನುಷ್ಯರಲ್ಲಿ ಭಯ ಮತ್ತು ಅವರ ಅಭಿಲಾಷೆಗಳು. ದೇವತೆಗಳ ತಾಯಿ ಮತ್ತು ತಂದೆಗಳೋ? ಮನುಷ್ಯರ ಭಕ್ತಿಯಿಂದ
ಕೂಡಿದ ಕೂಗು (ಒರಲು). ಆ ದೇವತೆಗಳ ಜಂಬದಿಂದ ಕೂಡಿದ ನಗುವಿಗೆ (ಸುರರ ಅಟ್ಟಹಾಸದಿನೆ ) ಹೆದರಿಯೋ ? ಅವರ ಪರಸ್ಪರ ಬಲಾಬಲಗಳನ್ನು ಇವರು ಪರಿಕ್ಷಿಸುತ್ತಿರುವರೋ ? ಹಾಗಿದ್ದಲ್ಲಿ ಇದರಲ್ಲಿ ಧರ್ಮದ ಪ್ರಶ್ನೆ ಎಲ್ಲಿಂದ ಬಂತು ?
_________________

ಮಂಕುತಿಮ್ಮನ ಕಗ್ಗ – ೨೫

ಜೀವಗತಿಗೊಂದು ರೇಖಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆನಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? |
ಆವುದೀ ಜಗಕಾದಿ ? – ಮಂಕುತಿಮ್ಮ ||

ಹಡಗು ಮತ್ತು ದೋಣಿಗಳನ್ನು ನಡೆಸುವವನಿಗೆ ದಿಕ್ಕು ದಿನ ತೋರಿಸಲು, ಒಂದು ದಿಕ್ಸೂಚಿ ಇರುವಂತೆ, ಈ ಬಾಳನ್ನು ನಡೆಸಲು ಸಹ ಒಂದು ಸರಿಯಾದ ದಾರಿಯಿರ ಬೇಕು. ಈ ದಾರಿಗೆ ಇರುವ ಮೊದಲು ಅಥವಾ ಕೊನೆ ಎರಡು ಕಾಣಿಸದಿದ್ದಲ್ಲಿ, ಇದನ್ನು ಊಹಿಸುವುದು ಹೇಗೆ ? ಈ ಜಗತ್ತಿಗೆ ಮೊದಲು ಯಾವುದು ? ಯಾರಿಗಾದರು ತಿಳಿದಿದೆಯೆ ?

____________________

ಮಂಕುತಿಮ್ಮನ ಕಗ್ಗ – ೨೬

ಸೃಷ್ಟಿಯಾಶಾವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ – ಮಂಕುತಿಮ್ಮ ||

ಈ ಸೃಷ್ಟಿಯ ಉದ್ದೇಶವಾದರೂ ಏನು ? ಅದು ಸ್ಪಷ್ಟವಾಗಿಲ್ಲ. ಸರಿಯಾಗಿ ತಿಲಿಯಲಾಗುವುದಿಲ್ಲಾ. ಅದರ ಜೊತೆಗೆ ಅದು ಬಹಳ ತೊಡಕಾದದ್ದೂ (ಸಂಶ್ಲಿಷ್ಟ) ಹೌದು. ಒಂದುಕಡೆಯೋ ನಮಗೆ ಪ್ರೀತಿಪಾತ್ರವಾಗುವ ಮತ್ತು ಮರುಳುಗೊಳಿಸುವ, ಸುಂದರವಾದ ಸ್ವಭಾವಗಳು. ಮತ್ತೊಂದು ಕಡೆ, ಕಠಿಣ ಮತ್ತು ಅಸಹ್ಯವಾಗಿರುವ (ಭೀಭತ್ಸ) ಭಯಂಕರಗಳು. ಈ ರೀತಿಯಾಗಿ, ಈ ಬ್ರಹ್ಮಸೃಷ್ಟಿ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟವಾದದ್ದು (ಕ್ಲಿಷ್ಟ).
__________________

ಮಂಕುತಿಮ್ಮನ ಕಗ್ಗ – 27

ಧರೆಯ ಬದುಕೇನದರ ಗುರಿಯೇನು ಫಲವೇನು ? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರೆಕೊಳ್ಳುವ ಮೃಗಖಗಕಿಂತ |
ನರನು ಸಾದಿಪುದೇನು ? – ಮಂಕುತಿಮ್ಮ ||

ಈ ಪ್ರಪಂಚದ ಬದುಕಿನ ಉದ್ದೇಶ ಮತ್ತು ಪ್ರಯೋಜನಗಳೇನು? ಇವು ವ್ಯರ್ಥವಾದ ಕೇವಲ ಓಡಾಟ, ಹೊಡೆದಾಟ ಮತ್ತು ತೊಳಲಾಟ ಮಾತ್ರವೇ ? ಸುತ್ತಿ ಸುತ್ತಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚಿನದೇನನ್ನಾದರು ಮನುಷ್ಯರು ಸಾಧಿಸುತ್ತಾನೆಯೋ ????????????
_________________

ಮಂಕುತಿಮ್ಮನ ಕಗ್ಗ – 28

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರದಾವುದು ದಿಟವೋ – ಮಂಕುತಿಮ್ಮ ||

ಮರುಕ, ವಿನೋದ, ಹಾಸ್ಯ ಮತ್ತು ಸೌಂದರ್ಯಗಳೇ , ಈ ಸೃಷ್ಟಿಗೆ ಕಾರಣವೆಂದು ಕೆಲವು ಸಲ ಎನ್ನಿಸುತ್ತದೆ. ಇನ್ನೊಂದು ಸಲ ಬಡತನ, ಜಿಪುಣತನ, ಕ್ರೂರತನಗಳೇ ಈ ಸೃಷ್ಟಿಯ ಉದ್ದೇಶವೆಂದೆನ್ನಿಸುತ್ತದೆ. ಈ ಎರಡರಲ್ಲಿ ನಿಜ ಯಾವುದು ಎನ್ನುವುದು ನಮ್ಮ ಮನಸ್ಸಿಗೆ ಗೋಚರವಾಗುವುದಿಲ್ಲ.

____________

ಮಂಕುತಿಮ್ಮನ ಕಗ್ಗ – 29

ಸಮಸ್ಯೆಗೆಲ್ಲಿ ಪೂರಣ

ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು ? – ಮಂಕುತಿಮ್ಮ ||

ಪರಮಾತ್ಮನು ಎರಡು ವಿಧಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಅವನು ಮಂಗಳಕರನಾದ ಶಿವನಾಗಿರಬಹುದು ಅಥವಾ ಕಾಲ ಭಯಂಕರನಾದ ರುದ್ರನಾಗಿರಬಹುದು. ಒಂದು ಕೈನಲ್ಲಿ ಕೊಳಲನ್ನು ಹಿಡಿದುಕೊಂಡು ಗೋಪಿಕಾ ಸ್ತ್ರೀಯರನ್ನು ಮೋಹಗೊಳಿಸಬಹುದು ಮತ್ತು ಇನ್ನೊಂದು ಕೈಯಿಂದ ಶಂಖವನ್ನು ಊದಿ ರಣ ಘೋಷಣೆಯನ್ನು ಮಾಡಬಹುದು.
ಎರಡು ಬೆರಳುಗಳಿಂದ ಕೈ ಚಿಟಿಕೆ ಹಾಕಬಹುದಾದರೂ, ಒಬ್ಬನೇ ಹೇಗೆ ಆಟವಾಡಲು ಸಾಧ್ಯ ? ಆಟವಾಡಲು ಇಬ್ಬರಾದರೂ ಇರಬೇಕಲ್ಲವೇ ?
_________________

ಮಂಕುತಿಮ್ಮನ ಕಗ್ಗ – 30

ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯೆಯೆನ್ನು ವೊಡೆ |
ಸಂಬಂಧವಿಲ್ಲವೇನಾ ವಿಷಯಯುಗಕೆ ? ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |
ನೆಮ್ಮುವುದಾದರೆನೋ ? – ಮಂಕುತಿಮ್ಮ ||

ಹೌದು ಬ್ರಹ್ಮವೇ ಸತ್ಯ, ನಿಜವಾದದ್ದು. ಈ ಸೃಷ್ಟಿಯೆಲ್ಲಾ ಒಂದು ಮಾಯೆ ! ಇದು ಸುಳ್ಳು (ಮಿಥ್ಯೆ) ಎನ್ನುವುದಾದರೆ, ಈ ಎರಡಕ್ಕೂ (ಯುಗ) ಏನು ಸಂಬಂಧವೇ ಇಲ್ಲವೇ ? ಬ್ರಹ್ಮನೇ ತಾನೇ ಈ ಸೃಷ್ಟಿ ಮಾಡಿದ್ದು. ಹಾಗಿದ್ದರೆ ಇವೆರಡಕ್ಕೂ ಸಂಬಂಧವಿಲ್ಲವೆಂದು ಹೇಗೆ ಹೇಳುವುದಕ್ಕಾಗುತ್ತದೆ ? ನಮ್ಮ ಕಣ್ಣು ಮತ್ತು ಮನಸ್ಸುಗಳೇ ನಮಗೆ ಸುಳ್ಳನ್ನು (ಸಟೆ) ಹೇಳುವುದಾದರೆ, ನಾವು ಇನ್ನು ಯಾರನ್ನು ತಾನೆ ನಂಬುವುದು ?????
__________________

ಮಂಕುತಿಮ್ಮನ ಕಗ್ಗ – 32

ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೊ ನಿದ್ದೆ ಕಲವರವೋ ? ||
ಮರಳನವನಲ್ಲ ದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ ? – ಮಂಕುತಿಮ್ಮ ||

ಈ ಜಗತ್ತನ್ನು ಬ್ರಹ್ಮ ರಚಿಸಿದರೂ, ಇದೇನು ಬರೀ ಆಟವೋ, ಕನಸೋ ಅಥವಾ ಅವನು ನಿದ್ದೆಯಲ್ಲಿ ಬಡಬಡಿಸುತ್ತಿರುವನೋ (ಕಲವರ) ಅರ್ಥವಾಗುತ್ತಿಲ್ಲ. ಈ ಸೃಷ್ಟಿಕರ್ತ ಒಬ್ಬ ದಡ್ಡ ಅಥವಾ ಹುಚ್ಚನಲ್ಲನೆಂದುಕೊಂಡರೆ, ಈ ಸೃಷ್ಟಿಗೆ ಒಂದು ನಿಯಮವಿರಬೇಕು. ಅಂತೆಯೇ ಒಂದು ಉದ್ದೇಶ ಮತ್ತು ನೆಲೆ. ಇವು ಯಾವುವು ನಮಗೆ ಗೋಚರವಾಗುತ್ತಿಲ್ಲವಲ್ಲಾ !

– 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: