ಸಾರ್, ಒಂದು ಕಥೆ ಮತ್ತು ಚಿತ್ರ ಕಥೆ ಬರೆದಿದೀನಿ

ಹದಿನೈದು ವರ್ಷಗಳ ಹಿಂದೆ ಯಶಸ್ಸಿನ ಅಲೆಯಲ್ಲಿ ತೇಲುತ್ತಾ ಒಟ್ಟೊಟ್ಟಿಗೆ ನಾಲ್ಕು ಐದು ಸಿನೆಮಾ ಗಳನ್ನು ಶೂಟ್ ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾ ಬಳಿ ಇಪ್ಪತ್ನಾಲ್ಕು ವರ್ಷ ವಯಸ್ಸಿನ ಒಬ್ಬ ಯುವಕ ಬಂದು ”ಸಾರ್, ಒಂದು ಕಥೆ ಮತ್ತು ಚಿತ್ರ ಕಥೆ ಬರೆದಿದೀನಿ, ನೀವು ಅದನ್ನು ಸಿನೆಮಾ ಮಾಡಿ” ಅಂದ . ಕಥೆ ಚೆನ್ನಾಗಿತ್ತು. ಆದರೆ ಈ ಹುಡುಗನ್ನು ಮತ್ತು ಅವನ ಬರವಣಿಗೆಯನ್ನು ನಂಬಿ ಇಷ್ಟು ದೊಡ್ಡ ಸಿನೆಮಾ ಮಾಡೋದು ಕಷ್ಟ ಅಂತ ಅನಿಸಿ ವರ್ಮಾ ಸಾಹೇಬರು ಸೌರಬ್ ಶುಕ್ಲಾರನ್ನು ಜೊತೆ ಮಾಡಿ ಆ ಹುಡುಗ ಬರೆದದ್ದನ್ನು ಸ್ವಲ್ಪ ತಿದ್ದಿ ಅಂತ ಹೇಳಿದ್ರು. ಸೌರಬ್ ಶುಕ್ಲಾರ ಮೇಲ್ವಿಚಾರಣೆಯಲ್ಲಿ ಆ ಹುಡುಗ ಹೈದರಾಬಾದಿನ ಫಾರ್ಮ್ ಹೌಸಲ್ಲಿ ಕುಳಿತು ಮತ್ತೆ ಚಿತ್ರ-ಕಥೆ, ಸಂಭಾಷಣೆ ಬರೆದ. ಅವನು ಬರೆದ ಸ್ಕ್ರಿಪ್ಟ್ ಹಾಳೆಗಳನ್ನು ಕೈಯಲ್ಲಿ ಹಿಡಿದು ರಾಮು ಸುಮ್ಮನೆ ಜೋವಿಯಲ್ ಆಗಿ ಸಿನೆಮಾ ಮಾಡಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಮು ತಾವೇ ಸ್ವತಃ ”ಆ ಸಿನೆಮಾ ಮಾಡುವಾಗ ಇದು ನನಗೆ ಅಷ್ಟು ಒಳ್ಳೆಯ ಹೆಸರು ತರುತ್ತೆ ಅಂತ ಗೊತ್ತೇ ಇರಲಿಲ್ಲ. ಸುಮ್ನೆ ಆಡ್ತಾ ಆಡ್ತಾ ಮಾಡಿದ ಸಿನೆಮಾ ಅದು” ಅಂತ ಹೇಳಿದ್ರು. ಆದರೆ ಅವರು ಕನಸು ಮನಸಿನಲ್ಲೂ ಎಣಿಸಿರದಷ್ಟು ಖ್ಯಾತಿಯನ್ನು ಎಲ್ಲ ವಲಯಗಳಲ್ಲಿಯೂ ಆ ಒಂದೇ ಸಿನೆಮಾ ಅವರಿಗೆ ತಂದು ಕೊಟ್ಟಿದ್ದು ಸಿನೆಮಾ ನೋಡುವವರಿಗೆಲ್ಲ ಗೊತ್ತಿರುವ ವಿಚಾರ.

ರಾಮು ಮಾಡಿದ ಆ ಚಿತ್ರ ಬಿಡುಗಡೆ ಆದ ಮೇಲೆ ಅದನ್ನು ನೋಡಿದ ಅಮಿತಾಬ್ ಬಚ್ಚನ್ ಆ ಕಥೆ-ಚಿತ್ರ ಕಥೆ ಬರೆದ ಹುಡುಗನನ್ನು ಮನೆಗೆ ಕರೆಸಿಕೊಂಡು ತಮಗಾಗಿ ಒಂದು ಕಥೆ ಬರೆಯಲು ಹೇಳಿದರು. ಆಗ ಅವರು ಮಾಡಿದ್ದೆಲ್ಲವನ್ನೂ ಕಳೆದುಕೊಂಡು ಸಾಲ ತೀರಿಸಲಿಕ್ಕಾಗಿ, ಒಂದೇ ಒಂದು ಯಸಸ್ಸಿಗಾಗಿ ”ಸೂರ್ಯವಂಶಂ” ನಂತಹ ತಮಿಳು ಸಿನೆಮಾ ಗಳನ್ನು ರಿಮೇಕ್ ಮಾಡುತ್ತಿದ್ದ ”ಕೌನ್ ಬನೇಗಾ ಕರೋಡ್ ಪತಿ”ಗಿಂತ ಮುಂಚಿನ ಕಾಲ ಅದು. ಈ ಹೊಸ ಹುಡುಗ ಹೇಳಿದ ಕಥೆ ಅವರಿಗೆ ಇಷ್ಟವಾದರೂ ಕೂಡ ಆ ಹುಡುಗನಿಗೆ we should respect the audience ಎಂದು ಬೋಧನೆ ಮಾಡಿದರು. ತನ್ನ ಹಿರೋಗಿರಿಗೆ ತಕ್ಕಂತೆ ಕಥೆ ಬದಲಿಸಲು ಹೇಳಿದರು. ಆ ಹುಡುಗ ಸಾಧ್ಯವಿಲ್ಲ ಎಂದು ಎದ್ದು ಬಂದಿದ್ದ. ಮತ್ತೆಂದೂ ಅಮಿತಾಬ್ ಮನೆಯಿಂದ ಆ ಹುಡುಗನಿಗೆ ಯಾವ ಕರೆಯೂ ಬರಲಿಲ್ಲ. ಮುಂದೆ ಆ ಹುಡುಗ ತಾನು ಬರೆಯುವ ಕಥೆಗಳಿಗೆ ತಾನೇ ನಿರ್ದೇಶಕನಾದ. ಅವನು ಮಾಡಿದ ಮೊದಲ ಚಿತ್ರವನ್ನು ಬಾರತೀಯ ಸೇನ್ಸಾರ್ ಬೋರ್ಡ್ ಇಂದಿಗೂ ಕೂಡ ಬಿಡುಗಡೆ ಮಾಡಲು ಬಿಟ್ಟಿಲ್ಲ. ಅವನು ಬರೆಯುವ ಕಥೆಗಳಿಗೆ ನಿರ್ಮಾಪಕರೇ ಸಿಗುತ್ತಿರಲಿಲ್ಲ. ಆದರೂ ಅದು ಹೇಗೋ ಮಾಡಿ ಸಿನೆಮಾ ಮಾಡುತ್ತಿದ್ದ. ಬಾಲಿವುಡ್ಡಿನ ಅನೇಕ ಗುಂಪುಗಳು ಅವನ ಸಿನೆಮಾಗಳು ಬಿಡುಗಡೆಯಾಗದಂತೆ ಮತ್ತು ಅವನಿಗೆ ನಿರ್ಮಾಪಕರು ಸಿಗದಂತೆ ನೋಡಿಕೊಂಡರು. ಅವನ ಬಗ್ಗೆ ಅನಗತ್ಯ ಊಹಾಪೋಹಗಳನ್ನು ಹರಿಬಿಟ್ಟರು. ವಿಮರ್ಶಕರು ಅವನನ್ನು ಹುಚ್ಚ ಎಂದು ಕರೆದರು. ಅವನ ಹೆಂಡತಿ ಇದೆಲ್ಲ ಕಷ್ಟ ಸಹಿಸಲಾರದೆ ಅವನಿಂದ ವಿಚ್ಛೇದನ ಪಡೆದಳು.

ಆದರೂ ಆ ಹುಡುಗ ಸಿನೆಮಾ ಮಾಡುವುದನ್ನು ನಿಲ್ಲಿಸಲಿಲ್ಲ. ಅವನ ಒಂದು ಸಿನೆಮಾ ಯಶಸ್ವಿಯಾದ ಕೂಡಲೇ ಒಂದೊಂದಾಗಿ ಅವನ ಹಳೆಯ ಚಿತ್ರಗಳೆಲ್ಲ ಡಬ್ಬದಿಂದ ಹೊರಬರತೊಡಗಿದವು ಮತ್ತು ಯಶಸ್ವಿಯೂ ಆದವು. ಅವನು ಅನೇಕ ಸಿನೆಮಾಗಳನ್ನು ಮಾಡುವುದಲ್ಲದೆ ತನ್ನಂತಹ ಅನೇಕ ಹೊಸ ಬರಹಗಾರರನ್ನು ನಿರ್ದೇಶಕರನ್ನು ಪ್ರೋತ್ಸಾಹಿಸಿದ. ಅವರ ಸಿನೆಮಾಗಳನ್ನೂ ತಾನೇ ಸ್ವತಃ ನಿರ್ಮಾಣ ಮಾಡಿದ. ”ಆರ್ಕುಟ್” ಹಾಗೂ ”ಫೆಸ್ ಬುಕ್” ಗಳ ಮೂಲಕ ತನ್ನ ಚಿತ್ರಕ್ಕೆ ಹಣ ಹಾಕುವ ಉತ್ಸಾಹಿಗಳನ್ನು ಹುಡುಕಿಕೊಂಡ. ಅವನು ಮತ್ತು ಅವನ ಮಿತ್ರರ ಗುಂಪು ಇವತ್ತು ಯಾವುದೇ ಹೊಸ ಚಿತ್ರಕ್ಕೆ ಕೈ ಹಾಕಿದರೆ ನಿರ್ಮಾಪಕರನ್ನು ಹುಡುಕುವ ಚಿಂತೆಯೇ ಇಲ್ಲ. ಏಕೆಂದರೆ ವಿದೇಶಗಳಲ್ಲಿ ಉದ್ಯೋಗ ಮಾಡುವ ಯುವಕರು ಮತ್ತು ಅನೇಕ ಶ್ರೀಮಂತರು ಈ ಯುವಕನ ಚಿತ್ರಗಳಿಗೆ ಹಣ ಹಾಕಲು ಫೆಸ್ ಬುಕ್ಕಿನಲ್ಲಿ ಸಾಲು ಸಾಲಾಗಿ ಸಿದ್ಧರಾಗುತ್ತಾರೆ. ಆತನ ಮತ್ತು ಆತನ ಪ್ರೊಡಕ್ಷನ್ ಹೌಸಿನಿಂದ ಬರುವ ಚಿತ್ರಗಳಿಗಾಗಿಯೇ ಕಾದು ಕೂರುವ ಪ್ರೇಕ್ಷಕರ ಸಂಖ್ಯೆ ಕೋಟಿಗಳನ್ನು ದಾಟಿದೆ ಮತ್ತು ದೇಶ ವಿದೇಶಗಳ ಗಡಿಯನ್ನೂ ದಾಟಿದೆ. ಹೀಗೆ ಯಾರ ಸಹಾಯವೂ ಇಲ್ಲದೇ, ಎಲ್ಲ ರೀತಿಯ ಅವಮಾನಗಳನ್ನು, ತುಳಿತಗಳನ್ನು ಅನಗತ್ಯ ದ್ವೇಷಗಳನ್ನು ಎದುರಿಸಿ ಯಾವುದೇ ನಿರ್ಮಾಪಕರುಗಳ ಹಂಗಿಲ್ಲದೆ ಸ್ವತಂತ್ರವಾಗಿ ಸಿನೆಮಾ ಮಾಡುವ, ಇಂದಿಗೂ ಹೆಗಲಿಗೆ ಒಂದು ಲ್ಯಾಪ್ ಟಾಪ್ ನೇತಾಡಿಸಿಕೊಂಡು ಮುಂಬೈನ ಆಟೋರಿಕ್ಷಾಗಳಲ್ಲಿ ಓಡಾಡುವ ಮೂವತ್ತೆಂಟು ವರ್ಷ ವಯಸ್ಸಿನ ಯುವಕ ಸಾವಿರಾರು ಕೋಟಿ ವಹಿವಾಟಿನ, ಕಾರ್ಪೋರೆಟ್ ಕಂಪೆನಿಗಳ ಮತ್ತು ದೊಡ್ಡ ದೊಡ್ಡ ತಿಮಿಂಗಲಗಳ ಹಿಡಿತದಲ್ಲಿರುವ ಬಾಲಿವುಡ್ ಎಂಬ ಮಹಾಸಾಗರದಲ್ಲಿ ತನ್ನದೇ ಆದ ”ಇಂಡಿಪೆಂಡೆಂಟ್ ಸಿನೆಮಾ” ಎಂಬ ಹೊಸ ಅಲೆಯನ್ನು ಎಬ್ಬಿಸಿದ್ದಾನೆ. ಆ ಅಲೆಯ ರಭಸಕ್ಕೆ ಎಲ್ಲರೂ ಕಂಗಾಲಾಗಿ ಕಣ್ ಬಿಟ್ಟು ನೋಡುತ್ತಿದ್ದಾರೆ. ಇತ್ತೀಚೆಗೆ ನಡೆದ ಕ್ಯಾನ್ಸ್ ಅಂತರ್ ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಆ ಯುವಕನನ್ನು ತೀರ್ಪುಗಾರನನ್ನಾಗಿ ನೇಮಿಸಲಾಗಿತ್ತು.

ಕಾಲದ ಹೊಳೆಯಲ್ಲಿ ಹದಿನಾಲ್ಕು ವರ್ಷಗಳು ಹರಿದು ಹೋಗಿವೆ. ಅಂದು ಮನೆಗೆ ಕರೆದು ಆ ಯುವಕನಿಗೆ ಹಿರೋಗಿರಿಯ ಮತ್ತು ಬಾಲಿವುಡ್ ಗ್ರಾಮರ್ ಬಗ್ಗೆ ಪಾಠ ಹೇಳಿಕೊಟ್ಟ ಅಮಿತಾಬ್ಹ್ ಬಚ್ಚನ್ ಮೊನ್ನೆ ”ಗ್ಯಾಂಗ್ಸ್ ಆಫ್ ವಸೀಪುರ್” ಚಿತ್ರ ನೋಡಿದ ಕೂಡಲೇ “What a film,” direction is amazing… Indian cinema taking path breaking strides… pride and extreme gratification.” ಎಂದು ಟ್ವಿಟ್ಟರ್ ನಲ್ಲಿ ಪ್ರತಿಕ್ರಯಿಸಿದ್ದಾರೆ.

ನಿಮಗೀಗ ಅರ್ಥ ವಾಗಿರಬಹುದು. ಇಷ್ಟ್ಹೊತ್ತು ನಾನು ಹೇಳಿದ್ದು ಯಾರ ಬಗ್ಗೆ ಎಂದು.

yes ..! you are right. ಅದು ಮತ್ಯಾರೂ ಅಲ್ಲ..! ತನ್ನ ಇಪ್ಪತ್ಮೂರನೇ ವಯಸಿನಲ್ಲಿ ”ಸತ್ಯಾ” ದಂತಹ ಚಿತ್ರದ ಅದ್ಭುತ ಸ್ರಿಪ್ಟ್ ಬರೆದು ರಾಮ್ ಗೋಪಾಲ್ ವರ್ಮಾಗೆ ನೀಡಿದ ”ಅನುರಾಗ್ ಕಶ್ಯಪ್” ಎಂಬ ತರುಣನ ಬಗ್ಗೆಯೇ ಇಷ್ಟೆಲ್ಲಾ ಹೇಳಿದ್ದು. .

ತಮಿಳು -ತೆಲುಗು ಅಥವಾ ಇಂಗ್ಲೀಷ್ ಚಿತ್ರಗಳನ್ನು ಕಾಪಿ ಹೊಡೆಯುವ ಬಹುತೇಕ ಬಾಲಿವುಡ್ಡಿನ ಮಸಾಲಾ ಚಿತ್ರಗಳನ್ನು ನೋಡಿ ನೋಡಿ ಬೇಸತ್ತು ಚಿತ್ರಗಳನ್ನು ನೋಡುವುದನ್ನೇ ಬಿಟ್ಟಿದ್ದ ಲಕ್ಷಾಂತರ ಪ್ರೇಕ್ಷಕರು ಮತ್ತೆ ಚಿತ್ರಗಳನ್ನು ನೋಡಲು ಪ್ರಾರಂಭಿಸಿದ್ದಾರೆ, ಮತ್ತು ಚಿಕ್ಕ ಚಿತ್ರಗಳಿಗೂ ಕೂಡ ಆನ್ ಲೈನ್ ಮತ್ತು ವಿದೇಶಿ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ ಎಂದರೆ, ಅದರ ಶ್ರೇಯಸ್ಸು ಪೂರ್ಣವಾಗಿ ಅನುರಾಗ್ ಕಶ್ಯಪ್ ಮತ್ತು ಅವನ ಮಿತ್ರರಿಗೆ ಸೇರುತ್ತದೆ. ಆರ್ಟ್ ಸಿನೆಮಾ, ಕಮರ್ಷಿಯಲ್ ಸಿನೆಮಾ, ಪ್ಯಾರಲಲ್ ಸಿನೆಮಾ, ಬ್ರಿಡ್ಜ್ ಸಿನೆಮಾ ಮುಂತಾದ ಸಿನೆಮಾದ ಎಲ್ಲ ಪ್ರಕಾರಗಳನ್ನು ಕೇಳಿದ್ದ ಭಾರತೀಯರಿಗೆ ”ಇಂಡಿಪೆಂಡೆಂಟ್ ಸಿನೆಮಾ” ಎಂಬ ಶಬ್ದವನ್ನು ಪರಿಚಯಿಸಿದ ಕೀರ್ತಿಯೂ ಆತನಿಗೆ ಸಲ್ಲುತ್ತದೆ. ಇತ್ತೇಚೆಗೆ ಬಾಲಿವುಡ್ ನ ಟ್ರೇಡ್ ಪಂಡಿತರು ಹಾಗೂ ವಿಮರ್ಶಕರು ಅನುರಾಗ್ ನನ್ನು The poster boy of Hindi Cinema ಎಂದು ಕೊಂಡಾಡುತ್ತಿದ್ದಾರೆ. ಏಕೆಂದರೆ ಆರ್ಥಿಕವಾಗಿ ಯಶಸ್ವಿಯಾಗಿದ್ದರೂ ಕೂಡ ಮಸಾಲೆಯ ಭರಾಟೆಯಲ್ಲಿ ಬಿದ್ದು ಅಂತರಾಷ್ಟೀಯ ಮಟ್ಟದಲ್ಲಿ ಬಿದ್ದು ಹೋಗಿದ್ದ ಹಿಂದಿ ಸಿನೆಮಾದ ಮರ್ಯಾದೆಯನ್ನು ಮತ್ತೆ ಎತ್ತಿ ಹಿಡಿಯುವುದಲ್ಲದೇ, ಹತಾಶೆಯಿಂದ – ನಿರಾಸೆಯಿಂದ ಕಳೆದು ಹೋಗಿದ್ದ ಪ್ರಬುದ್ಧ ಪ್ರೇಕ್ಷಕ ವರ್ಗವನ್ನು ಮತ್ತೆ ಆಕರ್ಷಿಸಿ ಒಂದು ಹೊಸ ರೀತಿಯ ಸಿನೆಮಾ ಸಂಸ್ಕೃತಿ ನಿರ್ಮಾಣಮಾಡಿ ಬಾರತೀಯ ಸಿನೆಮಾದ ಪೋಸ್ಟರ್ ನ ಗೌರವವನ್ನು ಅನುರಾಗ್ ಉಳಿಸಿದ್ದಾನೆ.

ರಾಮ್ ಗೋಪಾಲ್ ವರ್ಮಾ ಸ್ವಲ್ಪ ಮಂಕಾದ ನಂತರ ವಿಶಾಲ್ ಭಾರದ್ವಾಜ್ ಅದ್ಭುತವಾಗಿ ಚಿತ್ರಗಳನ್ನು ಮಾಡಿ ಭರವಸೆ ಮೂಡಿಸಿದ್ದು ನಿಜ. ಆದರೆ ಅನುರಾಗ್ ಕಶ್ಯಪ್ ತಾನು ಚಿತ್ರ ಮಾಡುವುದು ಮಾತ್ರವಲ್ಲದೆ ಅನೇಕ ಯುವಕರನ್ನು ಪ್ರೋತ್ಸಾಹಿಸಿ ಅವರಿಂದ ವರ್ಷಕ್ಕೆ ನಾಲ್ಕಾರು ಚಿತ್ರಗಳನ್ನು ಮಾಡಿಸಿ ತನ್ನದೇ ಒಂದು ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಂಡು ಫಿಲ್ಮ್ ಮೇಕಿಂಗ್ ನ ಕನಸು ಕಾಣುತ್ತಿರುವ ಸಾವಿರಾರು ಯುವ ಪ್ರತಿಭೆಗಳಿಗೆ ಆಶಾಕಿರಣವಾಗಿ ಕಾಣಿಸುತ್ತಿದ್ದಾನೆ. ಇಂತಹ ಅನೇಕ ಕಾರಣಗಳಿಗಾಗಿ ಅನುರಾಗ್ ರಾಮು ಮತ್ತು ವಿಶಾಲ್ ಭಾರದ್ವಾಜರಿಗಿಂತ ವಿಭಿನ್ನವಾಗಿ ನಿಲ್ಲುತ್ತಾನೆ.

ಅನುರಾಗ್ ನಂತಹ ನಿರ್ಮಾಪಕ ಸಿಗದೇ ಹೋಗಿದ್ದರೆ ವಿಕ್ರಂ ಮೊಟವಾನೆ ಯಂತಹ ಯುವಕ ”ಉಡಾನ್” ನಂತಹ ಸಂವೇದನಶೀಲ ಚಿತ್ರವನ್ನು ತೆರೆಯ ಮೇಲೆ ತರಲು ಸಾಧ್ಯವೇ ಇರಲಿಲ್ಲ. ನೀವು ”ಉಡಾನ್” ಚಿತ್ರವನ್ನು ನೋಡಿದವರೇ ಆಗಿದ್ದರೆ ಅಂತಹ ಚಿತ್ರವನ್ನು ಕೊಟ್ಟಿದ್ದಕ್ಕೆ ಮತ್ತು ಅದರ ನಿರ್ದೇಶಕನನ್ನು ಪರಿಚಯಿಸಿದ್ದಕ್ಕೆ ನೀವು ಜೀವನ ಪರ್ಯಂತ ಅನುರಾಗ್ ಕಶ್ಯಪ್ ಬಗ್ಗೆ ಋಣಿಯಾಗಿರುತ್ತೀರಿ.

ಮೊನ್ನೆ ಟಿವಿಯಲ್ಲಿ ಅನುರ್ರಾಗ್ ಕಶ್ಯಪ್ ಹೇಳುತ್ತಿದ್ದ ..”ನನಗೆ ಹೊಸ ನಟರ ಬಗ್ಗೆ ಭಯ ಇಲ್ಲ, ನನಗೆ ಹೊಸ ರೀತಿಯ ಕಥೆಯ ಬಗ್ಗೆ ಭಯ ಇಲ್ಲ. ನನಗೆ ನನ್ನ ಚಿತ್ರ ಪ್ಲಾಪ್ ಆಗುವ ಭಯ ಇಲ್ಲ. ಏಕೆಂದರೆ ನನಗೆ ಅತೀ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಸಿನೆಮಾ ಮಾಡುವುದಕ್ಕೆ ಬರುತ್ತದೆ” ಅಂತ. ಈ ಮಾತು ಅಹಂಕಾರದಿಂದ ಕೂಡಿದೆ ಅನಿಸಬಹುದು. ಆದರೆ ಅವನ ಮಾತು ವಾಸ್ತವ. ಆ ಮಾತು ನಮ್ಮ ಕನ್ನಡದ ನಿರ್ದೇಶಕರಿಗೆ ಅರ್ಥವಾದರೆ ಕನ್ನಡ ಪ್ರೇಕ್ಷಕರಿಗೂ ಒಂದಷ್ಟು ಒಳ್ಳೆಯ ಚಿತ್ರಗಳನ್ನು ನೋಡುವ ಯೋಗ ಬರಬಹುದು.

ಇದೆಲ್ಲ ಇರಲಿ, ಅಂದ ಹಾಗೆ ನಿಮಗೆ ಅನುರಾಗ್ ಕಶ್ಯಪ್ ಯಾರು ಎಂದು ಗೊತ್ತಾ..? ಗೊತ್ತಿಲ್ಲದೇ ಹೋದರೆ ”ಗ್ಯಾಂಗ್ಸ್ ಆಫ್ ವಸೀಪುರ್” ಚಿತ್ರದ ಎರಡನೇ ಭಾಗ ಈ ವಾರ ಬಿಡುಗಡೆಯಾಗಿದೆ. ಒಮ್ಮೆ ನೋಡಿ ಬನ್ನಿ. ಸಾಧ್ಯವಾದರೆ ಅವನ ಹಿಂದಿನ ಚಿತ್ರಗಳನ್ನು ನೋಡಿ. ಅನುರಾಗ್ ಪ್ರಭಾವದಿಂದ ಹೊರಬರುವುದು ಬಹಳ ಕಷ್ಟ. ಬಹುಶಃ ನೀವು ಸಿನೆಮಾ ನೋಡುವ ದೃಷ್ಟಿಕೋನವೇ ಬದಲಾದೀತು.

ಬರಹಗಾರ : ದತ್ತರಾಜ್
ಸಂಗ್ರಹ: – ಮಣಿ ಮನು

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: