ಮಲಬದ್ಧತೆ ಒಂದು ರೋಗವೆ?

ಆಯುರ್ವೇದ ಪಿತಾಮಹರಾದ ಧನ್ವಂತರಿ, ಸುಶೃತ, ಚರಕ, ವಾಗ್ಭಾಟಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಆರೋಗ್ಯವಂತನ ಲಕ್ಷಣಗಳನ್ನು ಹೀಗೆ ಹೇಳಿದ್ದಾರೆ.

ಸಮದೋಷಃ ಸಮಾಗ್ನಿಶ್ಚ ಸಮಾಧಾತು ಮಲಕ್ರಿಯಃ|
ಪ್ರಸನ್ನಾತ್ಮೇಂದ್ರಿಯ ಮನಃ ಸ್ವಸ್ಥ ಇತ್ಯಬಿದೀಯತೆ||

ಯಾರ ವಾತಾದಿದೋಷಗಳು, ಜಠರಾಗ್ನಿ, ಹಾಗೂ ದೇಹಧಾರಣ ಮಾಡುವ ರಸಾದಿ ಸಪ್ತ ಧಾತುಗಳು ಸಮಸ್ಥಿತಿಯಲ್ಲಿರುತ್ತವೆಯೋ, ಪುರೀಷಾದಿ, ತ್ರಿಮಲಗಳ ವಿಸರ್ಜನೆ ಸರಿಯಾಗಿ ಆಗುತ್ತದೆಯೋ ಮತ್ತು ಮನಸ್ಸು ಪ್ರಸನ್ನವಿರುತ್ತದೆಯೋ ಅಂಥವರಿಗೆ ನಾವು ಆರೋಗ್ಯವಂತರೆಂದು ಕರೆಯಬೇಕು.

ಅಲ್ಲದೇ ಭಾರತದ ಪ್ರಾಚೀನ ವೈದ್ಯರಾದ ಬಾಹಟರು ವೈಜ್ಞಾನಿಕವಾಗಿ ನಿರೋಗಿ ಎಂದು ಯಾರಿಗೆ ಅನ್ನ ಬೇಕೆಂಬುದನ್ನು ದೃಷ್ಟಾಂತಪೂರ‍್ವಕ ಹೀಗೆ ಹೇಳಿದ್ದಾರೆ.

ಒಮ್ಮೆ ಬಾಹಟರು ವಾಯು ಸಂಚಾರಕ್ಕಾಗಿ ಕೊಳದ ಬಳಿ ಬಂದರಂತೆ. ಕೊಳದಲ್ಲಿ ಒಂದು ಬಾತುಕೋಳಿ ಅವರ ಕಡೆ ನೋಡುತ್ತಾ ಪ್ರಶ್ನೆ ಕೇಳಿತಂತೆ. ಕೋ.. ರುಕ್‌ಕೋ… ರುಕ್ ಕೋ… ರುಕ್‌ಎಂದು ಅಂದರೆ ರೋಗವಿಲ್ಲದವನು ಯಾವನು? ಯಾವನು? ಯಾವನು? ಎಂದು ಅದು ತನ್ನನ್ನು ಕೇಳುತ್ತದೆ ಎಂದು ಭಾವಿಸಿದ ವೈದ್ಯ. “ಹಿತಭುಂಗ್ಮಿತ ಭುಕ್ರತ್ ಚಂಕ್ರಮಣೋ ಕ್ರಮೇಣವಾಮ ಶಯನೋ ಸ್ತ್ರೀಷು ಜಿತಾತ್ಮ: ಆರುಧಿತ ಮೂತ್ರ ಪುರಿಷೋ, ಸೋ.. ರುಕ್” ಹಿತವಾಗಿ ಮಿತವಾಗಿ ಉಣ್ಣುವವನು, ಎಡಮಗ್ಗುಲಾಗಿ ಮಲಗುವವನು, ದಿನವೂ ಸ್ವಲ್ಪ ದೂರ ನಡೆಯುವವನು, ಕಾಮವನ್ನು ಗೆದ್ದವನು ಅಂದರೆ ಅತಿ ಸ್ತ್ರೀಸಂಗ ಮಾಡದವನು ಮಲಮೂತ್ರ ವಿಸರ್ಜನೆಯಲ್ಲಿ ತೊಂದರೆಯಿಲ್ಲದವನು ಯಾರೋ ಅವನೇ ರೋಗವಿಲ್ಲದವನು. ಅರ್ಥಾತ ನಿರೋಗಿಯು.

ನಮ್ಮ ಶರೀರದ ನೈಸರ್ಗಿಕ ವೇಗಗಳು ಸಮಸ್ಥಿತಿಯಲ್ಲಿರಬೇಕು. ಇಲ್ಲಿ ಮಲಬದ್ಧತೆಯಿಂದ ಅನೇಕ ವ್ಯಾಧಿಗಳಿಗೆ ಕಾರಣವಿದೆಯೆಂದು ತಿಳಿದುಬರುತ್ತೆ.

ಮಲಬದ್ಧತೆ ಇತ್ತೀಚಿನ ನವ್ಯನಾಗರಿಕತೆಯ ವ್ಯಾಧಿಯಾಗಿದೆ. ಇದು ರೊಟ್ಟಿ, ತೊಪ್ಪಲುಪಲ್ಲೆ, ನುಚ್ಚು, ಮನೆಯಲ್ಲಿಯೇ ಕುಟ್ಟಿ, ಬೀಸಿದ ಆಹಾರ ಧ್ಯಾನಗಳನ್ನು ತಿಂದು, ದುಡಿದು ಸುಖವಾಗಿ ನಿದ್ರಿಸುವ ಬಡವರ ವರ್ಗಕ್ಕೆ ಬರದೇ, ಸದಾ ಮೃಷ್ಟಾನ್ನ ಭೋಜನ, ಅತಿ ಹಾಲು, ತುಪ್ಪ, ಚಾಕಲೇಟು, ಬಿಸ್ಕತ್ತು, ಕರಿದ, ಹುರಿದ ಪದಾರ್ಥಗಳನ್ನು ತಿಂದುಂಡು, ಜಿವ್ಹಾ ಚಾಪಲ್ಯಕ್ಕೆ ಒಳಗಾಗಿ, ಸದಾ ಗಾದಿಗೆ ಆಸರೆಯಾಗಿ ಕೂಡುವ ವರ್ಗಕ್ಕೆ ಮತ್ತು ಆಲಸಿಗಳಿಗೆ ಬರುವ ಪ್ರಮಾಣ ಹೆಚ್ಚು. ಇದು ಅಪಥ್ಯ. ಆಹಾರ-ವಿಹಾರ-ವಿಚಾರಗಳಿಂದ ಉದ್ಭವಿಸುವ ವಿಕಾರವಾಗಿದೆ. ಹಾಗಾದರೆ ಇದಕ್ಕೆ ಸೂಕ್ತ ಪರಿಹಾರವೇನಿದೆ ಎಂಬುದನ್ನು ವಿವೇಚಿಸುವಾ.

ಮಲಬದ್ಧತೆ (Constipation) ಅಂದರೆ ತ್ರಿಮಲಗಳ ಪೈಕಿ ಪುರೀಷವು ದಿನಾಲು ಸರಿಯಾಗಿ ಸಾಫಾಗದೇ ದೊಡ್ಡ ಕರುಳಿನ ಮೊದಲ ಭಗದಲ್ಲಿ ಬದ್ಧವಾಗುವುದು. ಅಂದರೆ ವಿಸರ್ಜನೆಯಾಗದೇ ಇರುವ ಅವಸ್ಥೆಗೆ ಮಲಬದ್ಧತೆ ಎನ್ನುತ್ತಾರೆ. ನಾವು ಸೇವಿಸಿದ ಆಹಾರವು ಮೊದಲು ದಂತಪಂಕ್ತಿಗಳಿಂದ ಜಗಿದು-ಚರ್ಮಣ ಚರ್ವಿತವಾಗಿ, ಅನ್ನ ನಳಿಕಾ ಮುಖಾಂತರ ಜಠರಕ್ಕೆ ಹೋಗುತ್ತದೆ. ಅಲ್ಲಿ ಅನೇಕ ರಸಗಳು ಉತ್ಪತ್ತಿಯಾಗಿ ಆಹಾರದೊಂದಿಗೆ ಕೂಡಿ ಜಠರಾಗ್ನಿಯಿಂದ ಪಚನವಾಗಿ ಮೂರು ತೆರನಾಗಿ ರೂಪಾಂತರವಾಗುತ್ತದೆ. ಒಂದು ರಸ ಧಾತು, ಇನ್ನೊಂದು ದ್ರವಭಾಗ ಮತ್ತು ಮಲಭಾಗ, ದ್ರವಭಾಗವೇ ಮೂತ್ರ ಅಸಾರ. ಘನವಸ್ತುವೇ ಮಲ ಅಥವಾ ಪರೀಷವೆನಿಸಿ ಮೂರು ವಲಯಗಳುಳ್ಳ ಗುದದ್ವಾರ (Anus) ದಿಂದ ಹೊರಬೀಳುವುದು ಸಹಜ ಕ್ರಿಯೆಯಾಗಿದೆ. ಈ ಸಾಮಾನ್ಯ ಕ್ರಿಯೆಯಲ್ಲಿ ವ್ಯತ್ಯಾಸವಾಗುವದೇ ‘ಮಲಬದ್ಧತೆ’ ಈ ಮಲಬದ್ಧತೆಯು ಅನೇಕ ರೋಗಗಳಿಗೆ ಮೂಲ ಕಾರಣವಾಗಿದೆ ಎಂದು ಹೇಳಬಹುದು. ಆದರೆ ಮಲಬದ್ಧತೆಯು ಸ್ವತಂತ್ರ ರೋಗವಲ್ಲ. ಕರುಳುಗಳ ಸ್ವಾಭಾವಿಕ ಚಲನವಲನದಲ್ಲಿ ಉಂಟಾಗುವ ಆತಂಕವೇ ಬದ್ಧಕೋಷ್ಟ. ಚಿಂತೆ-ದುಃಖ- ದುಮ್ಮಾನಗಳಿಂದ ಮಜ್ಜಾತಂತುಗಳು ಪ್ರಕ್ಷೋಭಗೊಂಡು ಕರುಳಿನ ಸ್ನಾಯುಗಳು ಅಕುಂಚನವಾಗುವುದೇ ಇದಕ್ಕೆ ಕಾರಣವೆಂದು ವಿಜ್ಞಾನ ತಿಳಿಸುತ್ತದೆ. ಒಮ್ಮೆ ಇದು ಪ್ರಾರಂಭವಾಯಿತೆಂದರೆ ಬೇಗನೆ ಹೋಗುವುದಿಲ್ಲ. ಇದು ಅನೇಕ ವ್ಯಾಧಿಗಳಿಗೆ ದಾರಿತೋರಿಸುತ್ತದೆ. ಇಷ್ಟಕ್ಕೆ ನಾವು ಅಂಜಬೇಕಾಗಿಲ್ಲ. ಸರಿಯಾದ ಚಿಕಿತ್ಸೆ ಹಾಗೂ ಆಹಾರ-ವಿಹಾರ- ವಿಚಾರಗಳಿಂದ ಮತ್ತು ಸರಿಯಾದ ದಿನಚರ್ಯೆಯಿಂದ ಪರಿಹರಿಸಿಕೊಳ್ಳಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ತಕ್ಕೊಳ್ಳದಿದ್ದರೆ ಮೂಲವ್ಯಾಧಿ ಹಾಗೂ ಕ್ಯಾನ್ಸರ ಆಗಬಹುದು.

ಸುಲಭ ಚಿಕಿತ್ಸೆ ಹಾಗೂ ಉಪಾಯಗಳು

೧. ಯಾವ ಕಾರಣಗಳಿಂದ ಬರುತ್ತದೆಯೋ ಅವುಗಳನ್ನು ವರ್ಜ್ಯ ಮಾಡಬೇಕು.

೨. ಸಮತೋಲನ ಆಹಾರ ಸೇವನೆ.

೩. ಸಾಕಷ್ಟು ನೀರು ಕುಡಿಯುವುದು.

೪. ಸಮಯಕ್ಕೆ ಸರಿಯಾಗಿ ವ್ಯಾಯಾಮ, ಆಸನಗಳನ್ನು ಮಾಡಬೇಕು.

೫. ಮಾನಸಿಕವಾಗಿ ಸದಾ ಪ್ರಸನ್ನವಾಗಿರುವುದನ್ನು ರೂಢಿಸಿಕೊಳ್ಳಬೇಕು.

೬. ಎರಡು ಹೊತ್ತು ಶೌಚಕ್ಕೆ ಹೋಗಬೇಕು.

೭. ವೇಳೆಗೆ ಸರಿಯಾಗಿ ನಿದ್ರೆ ಮಾಡುವುದು.

೮. ಮೇಲಿನ ಮೇಲೆ ಭೇದಿಯಾಗಲು ಗುಳಿಗೆ ಸೇವಿಸಕೂಡದು. ಏಕೆಂದರೆ ತೀವ್ರ ರೇಚಕ ಗುಳಿಗೆಗಳಿಂದ ಕರುಳಿನಲ್ಲಿ ಕ್ಷೋಭೆಯಾಗಿ ರಕ್ತ ಸಂಚಯವಾಗಿ ಬೆನ್ನುನೋವು, ಅರ್ಶ, ಅಶಕ್ತತೆ ಮುಂತಾದ ಉಪದ್ರವಗಳು ಕಾಣಿಸಿಕೊಳ್ಳುತ್ತವೆ. ಕಾರಣ ಸ್ವಂತ ವೈದ್ಯನಾಗುವುದು ಅಪಾಯಕಾರಿ.

೯. ಉಪ: ಪಾನ-೧ ಗ್ಲಾಸ್ ಸ್ವಲ್ಪ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಬೇಕು.

೧೦. ಭೇದಿಯಾಗಿ ಸೌಮ್ಯರೇಚಕ ಮಾತ್ರೆಗಳನ್ನು ವಾರಕ್ಕೆ ೧ ಸಲ ಅಥವಾ ೨ ಸಲ ವೈದ್ಯರ ಸಲಹೆ ಮೇರೆಗೆ ತಕ್ಕೊಳ್ಳಬೇಕು.

೧೧. ಯಕೃತಿನ (ಔಡೋಟ) ವಿಕಾರವಿದ್ದಾಗ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

೧೨. ಸೌಮ್ಯ ರೇಚಕಗಳಾದ – ಲಿಕ್ವಿಡ್ ಪ್ಯಾರಾಫಿನ್ ಸ್ವಾದಿಷ್ಟ ವಿರೇಚನ ಚೂರ್ಣ, ಅಭಯಾರಿಷ್ಟ, ತ್ರಿಫಳಾ ಚೂರ್ಣ, ಮುಂತಾದ ಔಷಧಿಗಳಲ್ಲಿ ಯಾವುದಾದರೊಂದನ್ನು ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು.

೧೩. ತೀವ್ರತೆರನಾದ ಬದ್ಧಕೋಷ್ಠವಿದ್ದರೆ ಎನಿಮಾ ತೆಗೆದುಕೊಳ್ಳಬೇಕು. ಇದರಿಂದ ವಾತಾದಿದೋಷಗಳು ಸಮಸ್ಥಿತಿಗೆ ಬರುತ್ತವೆ.

ಆಹಾರ-ಪಥ್ಯ

‘ಸೆಲ್ಲುಲೊಜ’ ಅಂಶವಿರುವ ಎಲ್ಲ ಹಸಿರು ತಪ್ಪಲು ಪಲ್ಯ, ಬೆಂಡಿ, ಚವಳಿ, ನುಗ್ಗೆ, ಕಿರಕಸಾಲಿ, ಮೆಂತ್ಯ, ರಾಜಗಿರಿ, ಹರವಿ, ಕಾಲಿಫ್ಲಾವರ್, ಮೂಲಂಗಿ, ಗಜ್ಜರಿಗಳನ್ನು ಬೇಯಿಸದೇ ಪಚಡಿ ಮಾಡಿ ಊಟದಲ್ಲಿ ಸೇವಿಸಬೇಕು. ಇವು ಪೂರ್ತಿಯಾಗಿ ಕರುಳಿನಲ್ಲಿ ಪಚನವಾಗುವುದಿಲ್ಲ. ಆ ಉಳಿದ ‘ಸೆಲ್ಲುಲೋಜ’ ಅಂಶವು ಕೆಟ್ಟ ಭಾಗವನ್ನು ಸರಿಸುವುದರಲ್ಲಿ ಸಹಾಯ ಮಾಡುತ್ತದೆ.

ನಮ್ಮ ಊಟದಲ್ಲಿ ಹಣ್ಣು ಪದಾರ್ಥಗಳಾದ ಮಾವು, ಪಪಾಯಿ, ಬಾಳೆಹಣ್ಣುಗಳನ್ನು ಸೇವಿಸಬೇಕು. ಪಪಾಯಿಹಣ್ಣು ಮಲಬದ್ಧತೆಯನ್ನು ಹೋಗಲಾಡಿಸುವಲ್ಲಿ ಉತ್ತಮವಾಗಿ ಕಾರ್ಯ ಮಾಡುತ್ತದೆ.

ನಿಯಮಿತವಾಗಿ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುಂದೆ ಉಗುರು ಬೆಚ್ಚಗಿನ ನೀರನ್ನು ೧ ರಿಂದ ೨ ಗ್ಲಾಸನ್ನು ಕುಡಿಯಬೇಕು. ಊಟದ ನಂತರ ಸ್ವಲ್ಪ ಸಮಯ ಬಿಟ್ಟು ನೀರು ಕುಡಿಯಬೇಕು. ಹೀಗೆ ಹಿತ, ಮಿತವಾದ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು.

ಅಪಥ್ಯ

ಕರಿದ, ಹುರಿದ, ಅತಿಖಾರ, ಜಡ ಮತ್ತು ಹಿಟ್ಟಿನ ಪದಾರ್ಥಗಳನ್ನು, ಹುಳಿ ತಿಂಡಿ ತಿನಿಸುಗಳನ್ನು ಬಿಡಬೇಕು. ಮೇಲಿಂದ ಮೇಲೆ ಚಹಾ, ಕಾಫಿ, ಸಿಗರೇಟು, ತಂಬಾಕು ಸೇವಿಸಬಾರದು.
-ಮಂಗಳ ಮೂರ್ತಿ ಭಟ್
http://www.burningsoul.in/blog/Constipation.html

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: