ಮಂದಲಿಗೆ ಬಸಮ್ಮನ ಮ್ಯಾಟ್ರಿಮೋನಿ ಸರ್ವಿಸ್

ಬೆಂಗಳೂರಿನಿಂದ ಕನಕಪುರಕ್ಕೆ ಪಯಣಿಸುವಾಗ ಕನಕಪುರ ಇನ್ನೇನು ಸಿಕ್ಕಿತು ಎನ್ನುವಾಗ ನಮಗೆ ಎದುರಾಗೋದು ಅರ್ಕಾವತಿ ಹೊಳೆಗೆ ಅಡ್ಡವಾಗಿ ಕಟ್ಟಿರುವ ಒಂದು ಪುಟ್ಟ ಸೇತುವೆ. ಬೇರೆಯವರ ಭಾಷೆಯಲ್ಲಿ ಅರ್ಕಾವತಿ ನದಿಯೇ ಆದರೂ ನಮ್ಮ ಕನಕಪುರದವರ ಭಾಷೆಯಲ್ಲಿ ಅದು ಹೊಳೆ. ಒಮ್ಮೆ ಆ ಸೇತುವೆಯ ಕಡೆಯಿಂದ ಅರ್ಕಾವತಿ ಹೊಳೆಯ ಮೇಲೆ ಕಣ್ಣಾಡಿಸಿದರೆ ಅದು ಸಣ್ಣ ಹಳ್ಳದಂತೆ ಕಾಣುತ್ತದೆ. ಒಂದು ಕಾಲದಲ್ಲಿ ಮಳೆ ಬಂದು ತುಂಬಿ ಹರಿದರಷ್ಟೇ ಆ ಹೊಳೆ ನದಿಯಂತೆ ಕಾಣುತಿತ್ತು. ಹಾಗೆ ಮಳೆಗಾಲದಲ್ಲಿ ತುಂಬಿ ಹರಿವ ಹೊಳೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿರುವುದು ಕನಕಪುರವನ್ನು ದಾಟಿದ ಮೇಲೆಯೇ. ಮಳೆಗಾಲದಲ್ಲಿ ಅದರ ನೀರು ಹರಿದು ನಷ್ಟವಾಗದಿರಲಿ ಎಂದೇ ಹಾರೋಬೆಲೆ ಎಂಬ ಜಾಗದಲ್ಲಿ ಡ್ಯಾಂ ಕಟ್ಟಿದ್ದಾರೆ. ಕನಕಪುರದಿಂದ ಹಾರೋಬೆಲೆವರೆಗೂ ಅರ್ಕಾವತಿ ನದಿ ಒಂದು ಕಾಲದಲ್ಲಿ ಮರಳು ತೆಗೆಯುವವರ ನೆಚ್ಚಿನ ತಾಣ. ಬಹುಶಃ ಬೆಂಗಳೂರಿನ ಯಾವುದೋ ಕಡೆಯಿಂದ ಹರಿದು ಬರುವ ಈ ನದಿ ಕಾವೇರಿ ನದಿಯ ಜೊತೆ ಒಂದು ಜಾಗದಲ್ಲಿ ಸೇರುತ್ತದೆ. ಆ ಜಾಗಕ್ಕೆ ಮತ್ತು ಊರಿಗೆ ಸಂಗಮ ಎಂಬ ಹೆಸರು. ಸಂಗಮದಿಂದ ಐದಾರು ಕಿಲೋ ಮೀಟರ್ ದೂರದಲ್ಲಿ ಕಾವೇರಿ ನದಿ ಒಂದು ಕಾಲದಲ್ಲಿ ಒಂದು ಮೇಕೆ ದಾಟಿಬಿಡುವಷ್ಟು ಅತಿ ಕಿರಿದಾಗಿ ಹರಿಯುತ್ತಿದ್ದರಿಂದ ಆ ಜಾಗಕ್ಕೆ ಮೇಕೆದಾಟು ಎಂಬ ಹೆಸರಿದೆ. ಬಹುಶಃ ನಿಮಗೆ ಗೊತ್ತಿರುವ ಹಾಗೆ ಪ್ರವಾಸಿಗರಿಗೆ ಮೇಕೆದಾಟು ನಮ್ಮ ಕಡೆಯ ತುಂಬ ಪ್ರಸಿದ್ದವಾದ ಜಾಗ.

ಅರ್ಕಾವತಿ ನದಿ ಇನ್ನೇನು ಕಾವೇರಿ ನದಿಯ ಜೊತೆ ಬೆರೆತುಬಿಡುತ್ತದೆ ಎನ್ನುವಾಗಲೇ ಐದಾರು ಕಿಲೋ ಮೀಟರ್ ಗಳ ಹಿಂದೆಯೇ ಅದು ಒಂದು ಫಾಲ್ಸ್ ಅಂದರೆ ಪುಟ್ಟ ಜಲಪಾತವನ್ನು ಹುಟ್ಟು ಹಾಕುತ್ತದೆ. ಆ ಜಾಗಕ್ಕೆ ಚುಂಚಿ ಫಾಲ್ಸ್ ಎನ್ನುತ್ತಾರೆ. ಈಗ ಚುಂಚಿ ಫಾಲ್ಸ್ ನ ಬಳಿ ನೀರನ್ನು ಜಲವಿದ್ಯುತ್ ತಯಾರಿಕೆಗೆ ಬಳಸುವುದರಿಂದ ಚುಂಚಿ ಫಾಲ್ಸ್ ಬಹುಶಃ ಮಳೆಗಾಲದಲ್ಲಷ್ಟೇ ಜಲಪಾತದಂತೆ ಕಾಣುತ್ತದೆ. ಆ ಜಾಗಕ್ಕೆ ಚುಂಚಿ ಫಾಲ್ಸ್ ಎಂಬ ಹೆಸರು ಬರಲು ಅಲ್ಲಿರುವ ಚುಂಚಿ ಅಥವಾ ಚುಂಚಿ ದೊಡ್ಡಿ ಎಂಬ ಊರೇ ಕಾರಣ. ಆ ಚುಂಚಿದೊಡ್ಡಿಯ ಅಕ್ಕಪಕ್ಕದಲ್ಲೇ ಐದಾರು ಊರುಗಳಿವೆ. ಆ ಊರುಗಳು ಒಂದು ಕಾಲದಲ್ಲಿ ಮಂದಲಿಗೆ ತಯಾರಿಸುವ ಜಾಗಗಳಾಗಿದ್ದವು. ಚುಂಚಿ ಫಾಲ್ಸ್ ನ ಅಕ್ಕಪಕ್ಕದಲ್ಲಿಯೇ ಹೊಳೆಯಲ್ಲಿ ಬೆಳೆಯುತ್ತಿದ್ದ ಒಂದು ಬಗೆಯ ಉದ್ದನೆಯ ಜೊಂಡಿನಂತಹ ಹುಲ್ಲನ್ನು ಆ ಊರುಗಳ ಕೆಲವು ಜನ ಕುಯ್ದು ತಂದು ಒಣಗಿಸುತ್ತಿದ್ದರು. ಅಲ್ಲೇ ಕಾಡಿನಲ್ಲಿ ಒಂದು ಗಿಡವನ್ನು ಚಚ್ಚಿ ದಾರ ಮಾಡುತ್ತಿದ್ದರು. ಅಥವಾ ಊರಿನ ಪಕ್ಕದಲ್ಲೇ ಸಿಗುತ್ತಿದ್ದ ಕತ್ತಾಳೆ ಗಿಡಗಳನ್ನು ಕತ್ತರಿಸಿ ಬಿಸಿ ನೀರಿನಲ್ಲಿ ಬೇಯಿಸಿ ಒಂದಷ್ಟು ದಿನ ಹೊಲದಲ್ಲಿ ಗುಂಡಿ ತೋಡಿ ಅವುಗಳನ್ನು ಹೂತುಬಿಡುತ್ತಿದ್ದರು. ಕತ್ತಾಳೆ ಗಿಡಗಳು ಭೂಮಿಯ ಬಿಸಿಗೆ ಕೊಳೆತಾದ ಮೇಲೆ ಅವುಗಳನ್ನು ತೆಗೆದು ಹದ ಮಾಡಿ ಹೊಸೆದು ಉದ್ದದ ದಾರದ ಉಂಡೆಗಳನ್ನು ತಯಾರಿಸುತ್ತಿದ್ದರು. ಆ ದಾರ ಮಂದಲಿಗೆ ಹೆಣೆಯುವ ಮಣೆಗಳಲ್ಲಿ ಪೋಣಿಸಲ್ಪಟ್ಟು ತನ್ನ ಮಧ್ಯೆ ಮಂದಲಿಗೆ ಕಡ್ಡಿಗಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಂದಲಿಗೆ ಹೆಣೆಯುವವರ ಕೈಯಲ್ಲಿ ಚಂದದ ಮಂದಲಿಗೆಗಳಾಗಿಬಿಡುತ್ತಿದ್ದವು.

ಮಂದಲಿಗೆ ಅಂದರೆ ಏನು ಎಂದು ಅಚ್ಚರಿಪಡಬೇಡಿ. ಮಂದಲಿಗೆ ಎಂದರೆ ಚಾಪೆ. ಒಂದು ಕಾಲದಲ್ಲಿ ನಮ್ಮೂರಿನ ಕಡೆ ಈಚಲ ಮರದ ಎಲೆಗಳಿಂದ ಹೆಣೆದ ಚಾಪೆಗಳು ಸಿಗುತ್ತಿದ್ದವು. ಊರುಗಳಲ್ಲಿ ಜನ ಎಷ್ಟು ಬುದ್ದಿವಂತರೆಂದರೆ ಮೊನಚಾದ ಮುಳ್ಳುಗಳಂತೆ ಕಾಣುವ ಈಚಲ ಎಲೆಗಳಲ್ಲೂ ಚಾಪೆ ಎಣೆದುಬಿಡುತ್ತಿದ್ದರು. ಆ ಚಾಪೆಗಳನ್ನು ಇಷ್ಟಪಡದ ಜನ ಪೇಟೆಗಳಲ್ಲಿ ಸಿಗುತ್ತಿದ್ದ ಸಣ್ಣ ಕಡ್ಡಿಗಳನ್ನು ಉಪಯೋಗಿಸಿ ನೂಲುಗಳಿಂದ ಹೆಣೆದ ಬಣ್ಣ ಹಚ್ಚಿದ ಚಾಪೆಗಳನ್ನು ಕೊಳ್ಳುತ್ತಿದ್ದರು. ಇವತ್ತು ಬಣ್ಣದ ಪ್ಲಾಸಿಕ್ ಚಾಪೆಗಳನ್ನಷ್ಟೇ ನೀವು ನೋಡುತ್ತಿರಬಹುದು. ಆದರೆ ಎಲ್ಲಾ ಚಾಪೆಗಳನ್ನು ಸೈಡು ಹೊಡೆದು ನಿಲ್ಲುವಂತೆ ನಮ್ಮೂರಿನ ಕಡೆಗಳಲ್ಲಿ ಹೊಳೆಯ ಜೊಂಡು ಹುಲ್ಲುಗಳಿಂದ ಮಾಡಿರುವ ಮೇಲೆ ತಿಳಿಸಿದ ಮಂದಲಿಗೆಗಳು ತುಂಬಾ ಪ್ರಸಿದ್ದವಾಗಿದ್ದವು. ಊಟಕ್ಕೆ ಕುಳಿತುಕೊಳ್ಳಲು ಪುಟ್ಟ 6 ಮಣೆ ಮಂದಲಿಗೆ, ಮಲಗಲು ಎಂಟು ಮಣೆ ಮಂದಲಿಗೆ (ಸಿಂಗಲ್ ಬೆಡ್ ಅಳತೆ ಎಂದುಕೊಳ್ಳಿ) ಯಿಂದ ಹಿಡಿದು ಇಪ್ಪತ್ತಾಲ್ಕು ಮಣೆ (ದೊಡ್ಡ ಡಬಲ್ ಬೆಡ್ ಅಳತೆ ಎಂದುಕೊಳ್ಳಿ)ಯ ಮಂದಲಿಗೆಗಳೂ ಸಿಗುತ್ತಿದ್ದವು. ಆಗಿನ ಕಾಲದಲ್ಲಿ ಅಂದರೆ 20-25 ವರ್ಷಗಳ ಹಿಂದೆ ಅಳತೆಗಳ ಮೇಲೆ ಮಂದಲಿಗೆಗಳ ಬೆಲೆ 18 ರೂಪಾಯಿಯಿಂದ ಹಿಡಿದು 80 ರೂಪಾಯಿಗಳವರೆಗೂ ಇತ್ತು ಎನ್ನಬಹುದು.

ಊರಿನಲ್ಲಿ ಹೆಣೆದ ಮಂದಲಿಗೆಗಳನ್ನು ಬೇರೆ ಊರಿಗೆ ಹೋಗಿ ಮಾರಲು ಆಗಿನ ಕಾಲದಲ್ಲಿ ಹೆಚ್ಚು ಜನರೇನು ಇರಲಿಲ್ಲ. ಇದ್ದವರಲ್ಲಿ ತುಂಬಾ ಫೇಮಸ್ ಎಂದರೆ ಬಸಮ್ಮ. ಜನರಲ್ಲಿ ಬಾಯಲ್ಲಿ ಮಂದಲಿಗೆ ಬಸಮ್ಮ. ಬೆಳಿಗ್ಗೆಯಿಂದ ಸಂಜೆಯವರೆಗೂ ಮಂದಲಿಗೆ ಹೆಣೆದು ರೆಡಿ ಮಾಡಿ ಆ ಊರುಗಳ ಜನ ರಾತ್ರಿಯ ವೇಳೆ ಮಂದಲಿಗೆಗಳನ್ನು ಬಸಮ್ಮನಿಗೆ ನೀಡುತ್ತಿದ್ದರು. ಬೆಳಗ್ಗೆ ಐದು ಗಂಟೆಯ ಮೊದಲ ಬಸ್ಸಿಗೆ ತನ್ನ ಮಂದಲಿಗೆಗೊಂದಿಗೆ ಬಸಮ್ಮ ಮಂದಲಿಗೆ ಮಾರಲು ಬೇರೆ ಊರುಗಳಿಗೆ ಹೋಗಿಬಿಡುತ್ತಿದ್ದರು. ಅವರು ಹೋಗುತ್ತಿದ್ದ ಊರುಗಳು ಕನಕಪುರದಿಂದ ಸಂಗಮದವರೆಗೆ ಹರಿಯುವ ಅರ್ಕಾವತಿಯ ನದಿಯ ಇಕ್ಕೆಲಗಳ ಊರುಗಳೇ ಆಗಿದ್ದವು ಎನ್ನಬಹುದು.

ಮಂದಲಿಗೆ ಬಸಮ್ಮನ ಮಾತು ಕೇಳಲು ತುಂಬಾ ಚಂದ. ಬಸಮ್ಮ ಮಂದಲಿಗೆ ಮಾರಲು ಹೋದಾಗ ಮಂದಲಿಗೆ ಕೊಳ್ಳುವವರು ಅವುಗಳ ಕೊಳ್ಳುವುದರ ಜೊತೆಗೆ ತಮ್ಮ ಮನೆಯ ಕಷ್ಟ ಸುಖದ ಮಾತುಗಳನ್ನು ಸಹ ಬಸಮ್ಮನೊಂದಿಗೆ ಹಂಚಿಕೊಳ್ಳುತ್ತಿದ್ದರು. ಹಾಗೆ ಬಸಮ್ಮ ಕೇಳುತ್ತಿದ್ದ ಕಷ್ಟ ಸುಖದ ಮಾತುಗಳಲ್ಲಿ ಬೆಳೆದು ನಿಂತ ಮನೆ ಮಗಳ ಅಥವಾ ಮನೆ ಮಗನ ಮದುವೆಯ ಕುರಿತು ಜನ ಬಸಮ್ಮನಲ್ಲಿ ಹೆಚ್ಚು ಹೇಳಿಕೊಳ್ಳುತ್ತಿದ್ದರು. ಬಸಮ್ಮ ಮತ್ತೊಂದು ಊರಿಗೆ ಮಂದಲಿಗೆ ಮಾರಲು ಹೋದರೆ ಮಂದಲಿಗೆ ಕೊಳ್ಳುವವರ ಮನೆಯ ಮಗಳನ್ನೋ ಮಗನನ್ನೋ ನೋಡಿದರೆ “ಮಗಾ, ಏನ್ ಓದ್ತಾ ಇರೋದು. ಲಗ್ನ ಏನೇರ ಮಾಡೀರ” ಎಂದು ಮಾತನ್ನು ಶುರು ಮಾಡುತ್ತಿದ್ದರು. ಬಸಮ್ಮನ ಮಾತಿಗೆ ಆ ಮನೆಯವರೇನಾದರೂ “ಮಾಡೋ ಯೋಚ್ನೆ ಏನೋ ಇದೆ. ಆದ್ರೆ ಇನ್ನೂ ಒಳ್ಳೆ ಸಂಬಂಧ ಸಿಕ್ತಿಲ್ಲ.” ಎಂದು ಒಂದು ಮಾತನಾಡಿದರೆ ಸಾಕು. ಬಸಮ್ಮನ ಲಿಸ್ಟ್ ನಲ್ಲಿರೋ ಮನೆಗಳ, ವಧು ವರರ ಕುರಿತ ವಿವರಗಳು ವರ್ಣಮಯ ಮಾತುಗಳ ರೂಪ ಪಡೆದು ಆ ಮನೆಯವರು ಲಗ್ನದ ಮಾತುಕತೆಗೆ ರೆಡಿಯಾಗುವಂತೆ ಮಾಡಿಬಿಡುತ್ತಿದ್ದವು. ಬಸಮ್ಮನ ಐವತ್ತುಕ್ಕೂ ಹೆಚ್ಚು ವರ್ಷಗಳ ಈ ಮ್ಯಾಟ್ರಿಮೋನಿಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಅದೆಷ್ಟು ಮಂದಿಯೋ ತಿಳಿಯದು.

ಅರ್ಕಾವತಿ ಹೊಳೆಯ ನೀರು ಎಂದೋ ಬತ್ತಿ ಹೋಗಿರುವುದರಿಂದ ಅಲ್ಲಿ ಆ ಜೊಂಡಿನಂತಹ ಹುಲ್ಲು ಬೆಳೆಯುವುದಿಲ್ಲ. ಹುಲ್ಲು ಬೆಳೆಯುವುದಿಲ್ಲ ಎಂದ ಮೇಲೆ ಮಂದಲಿಗೆ ಹೆಣೆಯುವ, ಮಾರುವ ಮಾತೇ ಬರುವುದಿಲ್ಲ. ಆ ಹೊಳೆಯ ನೀರು ಬತ್ತಿ ಹೋದ ಕಾರಣ ಆ ಹಳ್ಳಿಯ ಜನಗಳಿಗೆ ಒಂದೆರಡು ಕಾಸು ತರುತ್ತಿದ್ದ ಮಂದಲಿಗೆ ಹೆಣೆಯುವ ಕಸುಬು ಇದ್ದಕ್ಕಿದ್ದಂತೆ ನಶಿಸಿ ಹೋಗಿದೆ. ಇವತ್ತು ಪರಿಸರ ಸ್ನೇಹಿ (ಎಕೋ ಫ್ರೆಂಡ್ಲಿ) ಯಂತಿದ್ದ ಆ ಮಂದಲಿಗೆಗಳ ಜಾಗದಲ್ಲಿ ಮಾರಕವಾದ ಪ್ಲಾಸ್ಟಿಕ್ ಚಾಪೆಗಳು ಜಾಗ ಪಡೆದಿವೆ. ನಮ್ಮ ಊರುಗಳಲ್ಲಿ ಬಸಮ್ಮನಂತವರು ಎಷ್ಟೋ ವರ್ಷಗಳ ಹಿಂದಿನಿಂದಲೂ ಗಂಡು ಹೆಣ್ಣು ದಾಂಪತ್ಯ ಜೀವನ ತುಳಿಯುವಂತೆ ಮಾಡುತ್ತಿದ್ದ ಶ್ರೇಷ್ಠ ಕೆಲಸಗಳ ಐಡಿಯಾಗಳನ್ನು ನಗರದ ಬುದ್ದಿವಂತ ಜನ ಇವತ್ತಿನ ದಿನಗಳಲ್ಲಿ ಮ್ಯಾಟ್ರಿಮೋನಿ ಸರ್ವೀಸ್ ಗಳ ತರಹ ಮಾರ್ಪಡಿಸಿಕೊಂಡಿದ್ದಾರೆ. ಇವತ್ತು ಮ್ಯಾಟ್ರಿಮೋನಿ ಸರ್ವೀಸ್ ಗಳು ಬೇಕಾದಷ್ಟಿವೆ. ಹೆಚ್ಚಿನ ಮ್ಯಾಟ್ರಿಮೋನಿಗಳು ನಗರದ ಜನಗಳಿಗೆ ಹೆಚ್ಚು ಸೀಮಿತವಾಗಿವೆ. ಮ್ಯಾಟ್ರಿಮೋನಿಯವರು ಸುಳ್ಳು ಹೇಳಿಯಾದರೂ ಮದುವೆ ಮಾಡಿಸುವ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎನ್ನುವುದು ಸಮಾಧಾನಕರವಾದ ಸಂಗತಿ.

ಕೊನೆಯ ಪಂಚ್:

ಬಸಮ್ಮನ ಮಂದಲಿಗೆ ವ್ಯಾಪಾರ ದಶಕಗಳ ಹಿಂದೆಯೇ ಕೊನೆಯಾಗಿದ್ದರೂ ಇಂದಿಗೂ ಬಸಮ್ಮನ ಮ್ಯಾಟ್ರಿಮೋನಿ ಸರ್ವಿಸ್ ನಿಂತಂತೆ ಕಾಣುವುದಿಲ್ಲ. ನಾನು ಊರಿಗೆ ಹೋದಾಗ ಬಸಮ್ಮ ನಮ್ಮ ಮನೆಗೆ ಬಂದಿದ್ದರೆ “ಮಗಾ, ಮದುವೆ ಗಿದುವೆ ಆಗಲ್ಲ. ನೀನು ಊಂ ಅನ್ನು. ನಂಗೆ ಗೊತ್ತಿರೋ ಒಂದು ಹೆಣ್ಣದೆ. ಅದೇನೋ ಇಂಜಿನ್ ಅಂತಾರಲ್ಲಪ್ಪ. ಅದ ಓದದೆ. ಕೈ ತೊಳೆದು ಮುಟ್ ಬೇಕು ಹಂಗ್ ಅದೆ ಹುಡ್ಗಿ. ಒಳ್ಳೆ ಜನ. ಅನುಕೂಲಸ್ತರು. ಅವರಪ್ಪ ಗೌರ್ವಮೆಂಟ್ ಕೆಲಸದಲ್ ಅವ್ರೆ. ಒಬ್ಳೇ ಮಗ್ಳು. ಯಾರೂ ತಿನ್ನೋರು ಇಲ್ದೆ ಅವರ ಮನೇಲಿ ದುಡ್ಡು ಕೊಳತಾ ಅದೆ. ಕೈ ತುಂಬಾ ವರದಕ್ಷಿಣೆ ಕೊಟ್ಟು, ಬೆಂಗಳೂರಲ್ಲಿ ಒಂದು ಸೈಟ್ ಕೊಡ್ಸಿ, ಕಾರ್ ಕೊಟ್ಟು, ಕೈಗೆ ವಾಚು ಉಂಗುರ ಕೊಟ್ಟು ಸೂಟು ಬೂಟು ಕೊಡ್ಸಿ ಮದುವೇನೂ ಒಳ್ಳೆ ಛತ್ರದಲ್ಲಿ ಮಾಡಿಕೊಡ್ತಾರೆ ಕಣಪ್ಪ” ಎಂದು ಬಸಮ್ಮ ಹೇಳಲು ಶುರು ಮಾಡಿದರೆ ಅವಳ ಮಗಳಾದ ನನ್ನ ತಾಯಿ ತನ್ನವ್ವ ಸುಳ್ಳು ಹೇಳುವ ಪರಿಗೆ ರೇಗಿ “ಅವ್ವೋ ಸುಮ್ಗೆ ಕುತ್ಕೋ ನೀನ್ ಎಲ್ಲಾರ” ಎಂದು ಗದರುತ್ತದೆ. ಆಗ ನಾನು, ನನ್ನ ತಮ್ಮ, ತಂಗಿ ಎಲ್ಲರೂ ಗೊಳ್ ಎಂದು ನಕ್ಕರೆ “ನಾನ್ ಏನಾದ್ರು ತಪ್ ಮಾತಾಡಿದ್ನೆ. ನಾನ್ ಹೋಯ್ತೀನಿ ಕಣವ್ವ ನಮ್ಮೂರಿಗೆ” ಎಂದು ನನ್ನ ಅಜ್ಜಿ ಬಸಮ್ಮ ಸಿಡುಕುತ್ತಾಳೆ. ಅವಳನ್ನು ನೈಸ್ ಮಾಡಿ ಮತ್ತಷ್ಟು ಮಾತನಾಡಿಸಿ ಮತ್ತಷ್ಟು ರೇಗಿಸುವ ಸರದಿ ಅವಳ ಮೊಮ್ಮಕ್ಕಳಾದ ನಮ್ಮದಾಗಿರುತ್ತದೆ.

-ನಟರಾಜು ಸೀಗೆಕೋಟೆ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: