ದಾರಿ ಯಾವುದಯ್ಯ….?

ವಿಶೇಷ ಕಾರ್ಯಕ್ರಮ ಟಿವಿ9 ನಲ್ಲಿ ಪ್ರಸಾರವಾಯಿತು.
ಕರ್ನಾಟಕ ರಾಜ್ಯ ದ ಮುಖ್ಯಮಂತ್ರಿಗಳಾಗಿದ್ದ “ಶ್ರೀ ಬಿ. ಎಸ್. ಯಡಿಯೂರಪ್ಪ”ರವರ ಜೊತೆ ಚರ್ಚೆ ನಡೆಯಿತು.
ಯಡಿಯೂರಪ್ಪನವರು ತಮ್ಮ ಮನಸ್ಸಿನ ನೋವನ್ನು ಟಿವಿ ಮಾಧ್ಯಮದ ಮೂಲಕ ರಾಜ್ಯದ ಜನತೆಯ ಮುಂದೆ ತೋಡಿಕೊಂಡರು.
__________________

ಡಿಸೆಂಬರ್ ತಿಂಗಳವರೆಗೂ ಪ್ರವಾಸ ಮಾಡಿ, ನಂತರ ಹೊಸ ಪಕ್ಷವನ್ನೋ ಅಥವಾ ಇನ್ಯಾವುದೋ ತಿರ್ಮಾನ ಮಾಡುತ್ತಾರಂತೆ. ಅದು ಅವರಿಗಾಗಿ ಅಲ್ಲವಂತೆ. ಜನರಿಗಾಗಿ ಅಂತೆ.
_____________________

ಯಡಿಯೂರಪ್ಪನವರೇ,
ಸಂದರ್ಶನದಲ್ಲಿ ನೀವೇ ಹೇಳಿದ ಹಾಗೆ ಜನರು ಪತ್ರ ಬರೆಯುವಂತೆ ಹೇಳಿದ್ದೀರಿ. ನೀವು ಹೊಸ ಪಕ್ಷ ಕಟ್ಟಿ ನಂತರ ಕಛೇರಿ ಮಾಡಿ ಆಗ ಬರೆಯಬಹುದಾದ ಪತ್ರವನ್ನು ಈ ರಾಜ್ಯದ ಒಬ್ಬ ಪ್ರಜೆಯಾಗಿ ಇಂದೇ ಬರೆಯುತ್ತಿದ್ದೇನೆ.

ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ನಿಮ್ಮನ್ನು , ಪುರಸಭೆಯ ಸದಸ್ಯರಾಗಿ, ರಾಜ್ಯಾಧ್ಯಕ್ಷರಿಂದ ಹಿಡಿದು, ಮುಖ್ಯಮಂತ್ರಿಯನ್ನಾಗಿ ಗುರುತಿಸುವಂತೆ ಮಾಡಿದ್ದು ನಿಮ್ಮ “…ಪಕ್ಷ”. ನೀವು ಶಿಕಾರಿಪುರದಲ್ಲಿ ನಿಮ್ಮ ಶಿಷ್ಯ …………….ನವರ ವಿರುದ್ಧವೇ ಸೋತಾಗ,
ನಿಮ್ಮನ್ನು “ವಿಧಾನ ಪರಿಷತ್ತಿಗೆ” ಆಯ್ಕೆ ಮಾಡಿ ಕಳುಹಿಸಿದ್ದು “… ಪಕ್ಷ”ವೇ.

ಜೆಡಿಎಸ್. ಜೊತೆ ಕೈ ಜೋಡಿಸಿದಾಗ ನಿಮ್ಮ ನಾಯಕತ್ವದಲ್ಲೇ ಸರ್ಕಾರ ರಚನೆಗೆ ಅನುಮತಿ ಕೊಟ್ಟದ್ದು “… ಪಕ್ಷ”ವೇ.

ಜೆಡಿಎಸ್.ನವರು ಕೈ ಕೊಟ್ಟಾಗ ನಿಮ್ಮ ಜೊತೆ ನಿಂತದ್ದು “… ಪಕ್ಷ”ವೇ. ಕರ್ನಾಟಕದ ಅತ್ಯುನ್ನತ ಸ್ಥಾನ “ಮುಖ್ಯಮಂತ್ರಿ” ಪದವಿಯಲ್ಲಿ ಕೂಡಿಸಿದ್ದು “… ಪಕ್ಷ”ವೇ.

ಪಕ್ಷೇತರರ ಬೆಂಬಲ ಇದ್ದರೂ “ಆಪರೇಷನ್ ಕಮಲ” ಮಾಡಲು ಅನುಮತಿ ಕೊಟ್ಟದ್ದು “… ಪಕ್ಷ”ವೇ.

ನೀವು ನಡೆಸಿದ 3 ವರೆ ವರ್ಷ ಅಧಿಕಾರಾವಧಿಯಲ್ಲಿ ನಿಮ್ಮ ವಿರುಧ್ದ ಸಮರ ಸಾರಿದ್ದವರ ಜೊತೆ ಕೈ ಜೋಡಿಸದೇ ನಿಮ್ಮ ಬೆಂಬಲಕ್ಕೆ ನಿಂತದ್ದು. “… ಪಕ್ಷ”ವೇ.

ಚೆನ್ನೈ, ಗೋವಾಗೆ ಶಾಸಕರು ನಿಮ್ಮ ವಿರುದ್ಧ ಹೋದಾಗ ರಾಜ ಭವನ, ಸಂಸತ್ ಭವನ, ರಾಷ್ಟ್ರಪತಿಗಳ ಭವನದ ಎದುರಿಗೆ ಪೇರೆಡ್ ನಡೆಸಿದ್ದು “… ಪಕ್ಷ”ವೇ.

ಇಂತಹ ಸಂದರ್ಭಗಳಲ್ಲೆಲ್ಲಾ ನಿಮ್ಮ ಜೊತೆ ಇದ್ದದ್ದು ಯಾವ ಪಕ್ಷ. “… ಪಕ್ಷ”ವೇ.

ನಿಮ್ಮ ಆಡಳಿತಾವಧಿಯಲ್ಲಿ ನೀವು ಮಾಡಿಕೊಂಡಿರುವ ಯಡವಟ್ಟುಗಳಿಗೆ, ಸ್ವಜನ ಪಕ್ಷಪಾತಗಳಿಗೆ ನೀವಾಗಿಯೇ ತೊಂದರೆಗೆ ಸಿಕ್ಕಿ ಹಾಕಿಕೊಂಡಿರಿ.

ಆದರೂ ನಿಮ್ಮ ಮೇಲಿನ ಗೌರವದಿಂದ, ನೀವೇ ಸೂಚಿಸಿದ ಸದಾನಂದಗೌಡರನ್ನು ಮುಖ್ಯಮಂತ್ರಿ ಯನ್ನಾಗಿ ಮಾಡಿದರು. ಪಾರದರ್ಶಕ ಆಡಳಿತ ನೀಡುತ್ತಿದ್ದ ವ್ಯಕ್ತಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮಾನಸಿಕ ಕಿರುಕುಳ ಕೊಟ್ಟು, ಅವರನ್ನೂ ಕೆಳಗೆ ಇಳಿಸಿ, ಮತ್ತೊಂದು ನಿಮ್ಮ ಆಯ್ಕೆಯ ಶ್ರೀ ಜಗದೀಶ್ ಶೆಟ್ಟರ್ ರವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಇಷ್ಟೆಲ್ಲಾ ನಿಮ್ಮ ನಡೆಗಳಿಗೆ ಬೆಂಬಲವಾಗಿ ನಿಂತದ್ದು, ನಿಂತಿರುವುದು “… ಪಕ್ಷ”ವೇ. ಜಗದೀಶ್ ಶೆಟ್ಟರ್ ರವರು ಅಧಿಕಾರ ವಹಿಸಿಕೊಂಡು ಕೆಲವು ದಿನಗಳೇ ಕಳೆದಿಲ್ಲ ಅಷ್ಟರಲ್ಲಿಯೇ ಮತ್ತೆ ನಿಮ್ಮ ಉಭಯ ಸಂಕಟ ಪ್ರಾರಂಭವಾಗಿದೆ.

ನನಗೆ ಉಸಿರು ಕಟ್ಟಿದ ವಾತಾವರಣವಿದೆ. ಯಾವ ಪುರುಷಾರ್ಥಕ್ಕಾಗಿ ನಾನು “… ಪಕ್ಷ”ದಲ್ಲಿರಬೇಕು ಇಂತಹ ಮಾತುಗಳು ನಿಮ್ಮ ಬಾಯಿಂದ ಹೊರಡುತ್ತಿವೆ.

ಇನ್ಯಾವ ರೀತಿಯ ಸಹಕಾರ ನೀಡಬೇಕಿತ್ತು ನಿಮಗೆ ಅನ್ನೋದು ನಿಮ್ಮನ್ನು ನಂಬಿ ನಿಮಗೆ ಓಟು ಕೊಟ್ಟು ಗೆಲ್ಲಿಸಿದ ನನ್ನಂತಹ ಸಾಮಾನ್ಯ ವ್ಯಕ್ತಿಗೆ ಅರ್ಥವಾಗುತ್ತಿಲ್ಲ.

ಡಿಸೆಂಬರ್ ವರೆವಿಗೂ ರಾಜ್ಯ ಪ್ರವಾಸ ಮಾಡುತ್ತೇನೆ ನಂತರ ನನ್ನ ನಿರ್ಧಾರ ಮಾಡುತ್ತೇನೆ “… ಪಕ್ಷ”ದಿಂದ ಹೊರಗೆ ಹೋಗುವುದೇ ನಿಮ್ಮ ನಿಲುವನ್ನು ಸುತ್ತಿಬಳಸಿ ಹೇಳುತ್ತಾ ಕಾಲ ದೂಡುತ್ತಿದ್ದೀರಿ. ನೀವು “… ಪಕ್ಷ”ದಿಂದ ಹೊರಗೆ ಹೋಗಲು ಡಿಸೆಂಬರ್ ವರೆವಿಗೆ ಯಾಕೆ ಕಾಯಬೇಕೋ, ಸಾಲದ್ದಕ್ಕೆ ಆಡಳಿತದಲ್ಲಿ ತೊಡಗಿಸಿಕೊಂಡಿರುವ ಸಚಿವರುಗಳ ಜೊತೆ ಗುರುತಿಸಿಕೊಂಡು ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ನಂತರ “… ಪಕ್ಷ”ವನ್ನು ಬಿಟ್ಟು ಜೀವ ಕೊಟ್ಟ, ಕೈ ಹಿಡಿದು ನಡೆಸಿದ, ಕಷ್ಟಕಾಲದಲ್ಲಿ ಜೊತೆಗಿದ್ದ ಪಕ್ಷಕ್ಕೆ ದ್ರೋಹ ಮಾಡಿ ತಾನೂ ಹೊರಗೆ ಹೋಗಿ, ರಾಜ್ಯದ ಜನರಿಗೆ ಮಂಕುಬೂದಿ ಎರೆಚಿ, ನಾನು ಮಹಾನ್ ನಾಯಕ ಅಂತ ಬಿಂಬಿಸಿಕೊಂಡು ಏನೋ ಸಾಧಿಸಲು ಹೊರಟಿದ್ದೀರಲ್ಲ.

ಬಹಳ ಹಳೆಯ ವಿಷಯವಲ್ಲ, ಬಳ್ಳಾರಿಯಲ್ಲಿ ಶ್ರೀರಾಮುಲು ರಾಜೀನಾಮೆ ಕೊಟ್ಟು ಬಳ್ಳಾರಿಯಲ್ಲಿ “… ಪಕ್ಷ”ಕ್ಕೆ ಏಕಾಏಕಿ ನೆಲೆ ಇಲ್ಲದಂತ ಮಾಡಿ ತಾನು ಗೆದ್ದು ಬಂದ ಹಾಗೆ ನೀವು ಸಹ ಅತಂತ್ರವಾಗಿ, ನಿಮ್ಮನ್ನು ನಂಬಿದ್ದ “… ಪಕ್ಷ”ಕ್ಕೂ ಹಿನ್ನಡೆ ಮಾಡಿ ಸಾಧಿಸುವುದಾದರೂ ಏನನ್ನು ಯಡಿಯೂರಪ್ಪನವರೇ,

ಅಷ್ಟಕ್ಕೂ ನೀವು ಚುನಾವಣೆಯಲ್ಲಿ ಗೆದ್ದದ್ದು ಬರೀ 110 ಸೀಟು ಮಾತ್ರವೇ, ಹಿಂದೆ ಎಸ್. ಎಂ. ಕೃಷ್ಣ ರವರು 170 ಸೀಟುಗಳನ್ನು ಗೆದ್ದವರೂ ಸಹ ಮುಂದೊಂದು ದಿನ ಸೋಲನ್ನು ಅನುಭವಿಸಬೇಕಾಯಿತು.

ಸದಾನಂದಗೌಡರು, ಜಗದೀಶ್ ಶೆಟ್ಟರ್ ಯಾರೂ ನಿಮ್ಮ ಮುಂದೆ ಅಧಿಕಾರ ನಡೆಸಬಾರದು. ನೀವೇ ನಡೆಸಬೇಕು ಬೇಡ ಅಂದಿದ್ದಾದರೂ ಯಾರು? ನಿಮ್ಮ ಸ್ವಯಂಕೃತ ಅಪರಾಧದಿಂದ ಮಾಡಿಕೊಂಡ ತಪ್ಪಿಗೆ ಎಲ್ಲರೂ ಬಲಿಯಾಗಬೇಕೇ?

ನಾನು ಭಾಗ್ಯಲಕ್ಷ್ಮಿ ತಂದೆ, ಸೈಕಲ್ ಕೊಟ್ಟೆ, 2 ರೂ ಹಾಲಿಗೆ ಕೊಟ್ಟೆ ಹೀಗೇ ಹೇಳುವ ನೀವು ಯಾರ ಹಣ ಕೊಟ್ಟಿದ್ದೀರಿ, ಜನರ ತೆರಿಗೆ ಹಣವನ್ನು ಕೊಟ್ಟಿದ್ದೀರಿ. ನಿಮ್ಮ ಕೈಯಿಂದ ಒಂದೇ ಒಂದು ಬಿಡಿಗಾಸು ಕೊಟ್ಟಿದ್ದರೆ ನಿಮ್ಮ ಋಣ ಇಡೀ ರಾಜ್ಯದ ಜನರ ಮೇಲೆ ಇರುತ್ತಿತ್ತು. ನೀವು ಅನುಭವಿಸುತ್ತಿರುವ ಸವಲತ್ತುಗಳು, ನಡೆಸುತ್ತಿರುವ ಜೀವನದ ಒಂದೊಂದು ಪೈಸೆಗೂ ಬೆಲೆ ಇದೆ. ಅದು ಜನರು ಕಷ್ಟಪಟ್ಟು ಬೆವರು ಸುರಿಸಿದ ಹಣ.

ಜನರ ಕಣ್ಣೀರನ್ನು ಒರೆಸುವುದಕ್ಕೆ ಹೊರಟಿರುವ ನೀವು..

ಜನರ ಪಾಲಿಗೆ ಖಳನಾಯಕನಾಗಿ ರೂಪುಗೊಳ್ಳುತ್ತಿದ್ದೀರಿ. ಬಹುಶಃ ಹಿಂದೆ ರಾಜ್ಯ ಆಳಿದ ಯಾವೊಬ್ಬ ಮುಖ್ಯಮಂತ್ರಿಗಳು ಸಹ ನಿಮ್ಮ ಹಾಗೆ ಅತಿರೇಕದಿಂದ, ಆಡಿದ ಮಾತಿಗೆ ತಪ್ಪುತ್ತಾ , ಜನರನ್ನು ಹಾದಿ ತಪ್ಪಿಸುತ್ತಾ, ಆಡಳಿತ ನಡೆಸಲಿಲ್ಲ.  ನಿಮಗೊಂದು ಅವಕಾಶ ಕೊಟ್ಟಿದ್ದರು ಯಡಿಯೂರಪ್ಪನವರೇ, ಈ ದೇಶದಲ್ಲಿ ನ್ಯಾಯ-ನೀತಿ-ಧರ್ಮ ಇನ್ನು ಅಲ್ಪಸ್ವಲ್ಪ ಉಳಿದಿದೆ.

ಜನರಿಗೆ ಜೀವನ ನಡೆಸೋದು ದುಸ್ತರವಾಗಿ ಹೋಗಿದೆ. ಇಂದೋ ನಾಳೆನೋ ಅನ್ನೋ ದಿನಗಳನ್ನು ಎದುರು ನೋಡುತ್ತಿದ್ದಾರೆ ಇಂತಹ ಸಮಯದಲ್ಲಿ ಅಧಿಕಾರದಿಂದ ಕೆಳಗೆ ಇಳಿಯುವಾಗ, ಇಳಿದ ಮೇಲೆ, ನಿಮ್ಮಾಟಕ್ಕೆ ಕುಣಿದ ಮೇಲೂ ಸಹ ನಿಮ್ಮ ಮನಸ್ಸು ಉಭಯ ಸಂಕಟ ದಿಂದ ನರಳುತ್ತಿದೆ.

ದೇವಸ್ಥಾನಗಳು, ಮಠ, ಮಾನ್ಯಗಳಿಗೆ ಭೇಟಿಕೊಟ್ಟು ಆಶೀರ್ವಾದ ಪಡೆಯುತ್ತೀರಲ್ಲ. ಇದೇನಾ ಆಧ್ಯಾತ್ಮಿಕದಿಂದ ಕಲೆತದ್ದು.

ನಾನು, ನಾನು, ನನ್ನದು, ಅನ್ನೋದನ್ನೂ ಬಿಡಿ, ಎಲ್ಲರೂ ನಮ್ಮವರೇ ಅನ್ನೋದನ್ನು ಮನಸ್ಸಿನಲ್ಲಿ ಪ್ರತಿಷ್ಟಾಪಿಸಿಕೊಳ್ಳಿ ಆಗ ನೀವು ಹೃದಯ ಶ್ರೀಮಂತ ವ್ಯಕ್ತಿಯಾಗಿ ಕಾಣುತ್ತೀರಿ.

ಅನಾವಶ್ಯಕ ನಡೆಗಳಿಂದ ನಿಮ್ಮ ಜೊತೆ ನಂಬಿ ಬರುವವರ ರಾಜಕೀಯ ಜೀವನವನ್ನು ಕತ್ತಲೆಯಲ್ಲಿಟ್ಟು ಚುನಾವಣೆಯ ನಂತರ ನಿಮ್ಮ ನಂಬಿಕೆ ತಂತ್ರಗಳೆಲ್ಲವೂ ತಿರುಗುಬಾಣವಾದಾಗ, ಆಗ ನಿಮ್ಮ ಹಿಂದೆ ಯಾರೂ ಇರೋದಿಲ್ಲ. ಆಗ ಪಶ್ಚಾತ್ತಾಪ ಪಟ್ಟು ಪುನಃ ತಪ್ಪಾಗಿದೆ ಅಂತ ಜನರ ಮುಂದೆ ಹೋಗಲು ಇನ್ನೈದು ವರ್ಷ ಕಾಯಬೇಕಾಗುತ್ತದೆ.

ನಾನು ಯಾವ ಪಕ್ಷದ ಪರವಾಗಿಯೂ ಮಾತಾನಾಡುತ್ತಿಲ್ಲ. ನಿಮ್ಮನ್ನಲ್ಲದೇ ಎಲ್ಲಾ ರಾಜಕೀಯ ಪಕ್ಷದವರನ್ನು ಗಮನಿಸುತ್ತಾ ತಪ್ಪುಗಳನ್ನು ಹೇಳುತ್ತಿದ್ದೇನೆ.

ಮತ್ತೊಮ್ಮೆ ನಿಮ್ಮಲ್ಲಿ ನನ್ನ ಮನವಿಯೆನೆಂದರೆ,  ಅದೋ ಅದು ಮಾಡಿದೆ ಇದು ಮಾಡಿದೆ ನನ್ನಿಂದಲೇ ಎಲ್ಲ, ನಾನು…. ಮಂತ್ರಿ ಮಾಡಿದೆ ಇವೆಲ್ಲಾ ಬಿಟ್ಟು, ಒಬ್ಬ ರಾಜಕಾರಣಿಯಾಗಿ ಈ ರಾಜ್ಯಕ್ಕೆ ನಿಮ್ಮ ಕೈಯಲ್ಲಿ ಒಳ್ಳೇಯದು ಮಾಡುವ ಹಾಗಿದ್ದರೆ ಮಾತ್ರ ಮಾಡಿ, ನನ್ನ ಬಳಿ 65 ಜನ ಶಾಸಕರಿದ್ದಾರೆ ಅನ್ನೋ ಜಪದ ಹಿಂದೆ ಸಂತೇಮರಳ್ಳಿ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೇಸ್ ಪಕ್ಷಗಳ ನಡುವೆ ಕೇವಲ “1 ಮತದಿಂದ” ಚುನಾವಣೆಯಲ್ಲಿ ಸೋಲು ಗೆಲುವು ನಿರ್ಧಾರವಾಯಿತು.

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ಕೇವಲ 1 ಮತದಿಂದ ಅಧಿಕಾರವನ್ನೇ ಬಿಟ್ಟುಕೊಡಬೇಕಾಯಿತು. ಜನರು ಎಲ್ಲವನ್ನು ನೋಡುತ್ತಿದ್ದಾರೆ

ಈಗಾಗಲೇ 1) ಕಾಂಗ್ರೇಸ್ 2) ಬಿಜೆಪಿ 3) ಜೆಡಿಎಸ್ 4) ಬಿಎಸ್.ಆರ್. ಕಾಂಗ್ರೇಸ್ ಪಕ್ಷಗಳ ಜೊತೆಗೆ ನಿಮ್ಮದೂ ಒಂದು 5)…………… ಆಗಿ

ಏನೋ ಮಾಡಲು ಹೋಗಿ ಮತ್ತೆ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣ ಮಾಡಿ ಜನರನ್ನು ಗೊಂದಲಕ್ಕೆ ತಳ್ಳಬೇಡಿ. ಜನರ ಹಣಕ್ಕೆ ಬೆಲೆ ಇದೆ ಅದನ್ನು ಚುನಾವಣೆಯ ನೆಪದಲ್ಲಿ ಹಾಳುಮಾಡಬೇಡಿ
_____________________

ಒಂದು ದಿನ ಒಬ್ಬರೇ ಕುಳಿತು ನಿಮ್ಮ ಹುಟ್ಟು, ಬಾಲ್ಯ, ಯೌವ್ವನ, ಜನಸಂಘ, ರಾಜಕೀಯ ಪ್ರವೇಶ, ನಡೆದುಬಂದ ಹಾದಿ, ಈಗ ಅನುಭವಿಸುತ್ತಿರುವ ಉಭಯ ಸಂಕಟಗಳ ಬಗ್ಗೆ ಯೋಚಿಸಿ ನೋಡಿ. ನಿಮ್ಮ ಮನಸ್ಸಾಕ್ಷಿಯನ್ನು ಕೇಳಿಕೊಳ್ಳಿ. ನಾನು ಮಾಡುತ್ತಿರುವುದು ಸರಿಯೇ ಅಂತ..??

———————————–

ಸಂದರ್ಶನದಲ್ಲಿ ಕೊನೆಯದಾಗಿ ನೀವೇ ಹೇಳಿದ ಹಾಗೆ

“ವಿನಾಶ ಕಾಲೇ ವಿಪರೀತ ಬುದ್ಧಿ” ಅನ್ನೋ ನಾಣ್ಣುಡಿ ಅನ್ವಯವಾಗುವುದು ಬೇಡ”
ಯಾಕೆಂದರೆ ನಾವು ಮಾನವರು” ಏನೇ ಆಗಲೀ ಮೊದಲು ಮಾನವನಾಗಿರೋಣ”

-ರಾಜು ವಿನಯ್ ದಾವಣಗೆರೆ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: