Category Archives: ಹನಿಗವನಗಳು

ನೆನಪುಗಳ ಸಂತೆ

ಮನದ ಮೈದಾನದಲ್ಲಿದೆ ನೆನಪುಗಳ ಸಂತೆ…
ಅದರಲೆಲ್ಲೋ ಕಳೆದು ಹೋಗಿರುವೆ ನಾನು…,
ಎಂಬುದೇ ನನಗೊಂದು ದೊಡ್ಡ ಚಿಂತೆ…
ಹುಡುಕಿ ಕೊಡು ಬಾರೋ ಗೆಳೆಯಾ…
ನನ್ನ ಮೇಲೆ ಉಪಕಾರವ ಮಾಡಿದಂತೆ…!

****************************

ಪ್ರೀತಿ ಚಿಗುರಿದರೆ ಸಿಹಿ ಜೇನಿನಂತೆ…
ಆ ಮೇಲೆ ಎಲ್ಲವೂ ಪ್ರೆಮಮಯವಂತೆ…
ಮಾತನಾಡಿದರೆ ನಗುವಿನ ಸಹಿಯಂತೆ…
ಎದುರಾದಾಗ ಸಂತಸದ ಹೊನಲಂತೆ…
ದೂರಾದರೆ ಕಣ್ಣೀರ ಪಾಲಂತೆ…!

****************************

ನನ್ನಲಿ ಕನಸು ಎಂಬ ಅಲೆಯೊಂದು
ಮುಗಿಲೆತ್ತರಕೆ ಏರಿ ಮುಂಬರುತ್ತಿದೆ ಹಾಗೆ…!
ಇದು ಕನಸೋ ಇಲ್ಲಾ ನನಸೋ ನಾ ತಿಳಿಯಲಿ ಹೇಗೆ…?
ಇದರ ಎದುರು ನಿಂದು ಸತ್ಯವ ಇಣುಕಿ ನೋಡಲಿ ಹೇಗೆ…?

****************************

ಕಂಗಳು ಕದಲದಂತಿದೆ…
ತುಟಿಯು ನುಡಿಯದಂತಿದೆ…
ಈ ಹೃದಯವು ಮಾತ್ರ
ನೋವಿನಲ್ಲಿ ಚಡಪಡಿಸುತ್ತಿದೆ…
ಮತ್ತೆ ನಿನ್ನ ನೋಡಲು…
ನಿನ್ನ ಮಾತು ಕೇಳಲು…!!

Advertisements

ಲಿ೦ಗೈಕ್ಯಾನ೦ದ ಸ್ವಾಮಿಗಳ ಆಶ್ರಮ, ಕಿರಿಕ್ ಕಿಸ್ನಮೂರ್ತಿ

ಶ್ರೀ. ಶ್ರೀ. ಶ್ರೀ, ಲಿ೦ಗೈಕ್ಯಾನ೦ದ ಸ್ವಾಮಿಗಳ ಆಶ್ರಮ…. ತ೦ಬಿಟ್ಟಹಳ್ಳಿ

ಕಿರೀಕ್ ಕಿಸ್ನಮೂರ್ತಿ ಒಳಬ೦ದು ನಮಸ್ಕರಿಸಿ ಕುಳಿತುಕೊಳ್ಳುತ್ತಾನೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು: ಏನಯ್ಯ ಕಿಸ್ನಮೂರ್ತಿ ಅದ್ಯಾರೊ ಪೇಸ್ಬುಕ್ಕಿನ ಲೇಖಕರು ಬತ್ತಾರೆ ಸ೦ದರ್ಸನ ಮಾಡೊಕೆ ಅ೦ದಿದ್ದೆ.

ಕಿರಿಕ್ ಕಿಸ್ನಮೂರ್ತಿ: ಹೂ ಬುದ್ದಿ , ಬ೦ದವ್ರೆ ಅವ್ರ ಹೆಸರು ನಟರಾಜ್ ಸೀಗಿಕೊಟೆ ಅ೦ತ ಸಾನೆ ಪೇಮಸ್ಸು, ಪೇಸ್ಬುಕ್ಕಾಗೆ, “ಎಲೆ ಮರೆ ಕಾಯಿಗಳೊ೦ದಿಗೆ ಮಾತುಕತೆ” ಅ೦ತ ಬರಿತಾರೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು: ಏನು, ತರಕಾರಿ ಬಗ್ಗೆ ಬರಿತಾರ ?

ಕಿರಿಕ್ ಕಿಸ್ನಮೂರ್ತಿ: ಏ ಅಲ್ಕಣೇಳಿ, ಚಿಕ್ಕ, ಚಿಕ್ಕ ಕವಿಗಳ ಬಗ್ಗೆ ಬರಿತಾರೆ. ನಾನು ಹೇಳಿವ್ನಿ. Continue reading →

ನೀ ಬರುವ ಹಾದಿಯಲ್ಲಿ

ನೀ ಬರುವ ಹಾದಿಯಲ್ಲಿ
ನಿನಗಾಗಿ ನಾ ಹಚ್ಚಿಟ್ಟ ಹಣತೆಗೆ
ನಿನ್ನ ಮೇಲೆ ಅದೆಷ್ಟು ಪ್ರೀತಿ ನಲ್ಲ…
ನೀ ಬಂದ ಒಡನೆ
ತಾವೇ ಆರಿಹೋಗಿ….
ನಿನ್ನ ತುಂಟತನಕ್ಕೆ ಅನುವು ಮಾಡಿ ಕೊಡುವುದಲ್ಲ
-ಸುನಿತಾ ಮಂಜುನಾಥ್

ಭಾಸ್ಕರ

ಕತ್ತಲೆಯ
ತತ್ತಿಯನೊಡೆದು
ಹೊರ ಬಂದ
ಬೆಳಕಿನ
ಪುಟ್ಟ ಮರಿಯೇ..
ಈ ಬಾನ ಭಾಸ್ಕರ
-ಗುರುಪ್ರಸಾದ್ ಆಚಾರ್ಯ

ಸವಾಲು

ಸದಾನಂದ ಗೌಡರ
ಒಂದೇ ಒಂದು ಸವಾಲು,
ಯಡ್ಡಿಯ ಬಾಯಿ ಮುಚ್ಚಿಸಲು;
ಕಿತ್ತೊಗೆದರೇನಂತೆ ನನ್ನ ಅಧಿಕಾರವ,
ತಾಕತ್ತಿದೆಯೇ..ನಿಮಗೆ
ನನ್ನ ನಗುವನಿಲ್ಲವಾಗಿಸಲು.

—ಕೆ.ಗುರುಪ್ರಸಾದ್

ಕವಿ ಡುಂಡಿರಾಜ್ ಅವರ ಹನಿಗವನಗಳು


ನಗದು :

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೇ ಇರಬೇಕು
ಹಾಕಿದ್ದಾರೆ ಬೋರ್ಡು
“ನಗದು”!!!

ಸುಸ್ತು :

ನಡೆಯಲಿಲ್ಲ
ಓಡಲಿಲ್ಲ
ಕಾರಲ್ಲಿ ಬಂದರೂ
ಇಷ್ಟೊಂದು ಸುಸ್ತೆ?
ಹೌದು ಮಾರಾಯ್ರೇ
ಹಾಗಿದೆ ನಮ್ಮ ರಸ್ತೆ.

ತರಬೇತಿ :

ಭರತ ನಾಟ್ಯ
ಡಿಸ್ಕೋ ನೃತ್ಯ
ಕಥಕ್ಕಳಿ
ಕಲಿ ಕಲಿ
ಅನ್ನುತ್ತದೆ
ರಸ್ತೆ ಕುಳಿ

ಹೋಲಿಕೆ :

ನಡು ವಯಸ್ಸಿನ
ಗೃಹಿಣಿಯಾದರೂ
ಈಕೆ
ಶಿಲಾಬಾಲಿಕೆ
ಬೇಕಿದ್ದರೆ ನೀವೇ ನೋಡಿ
ಸದಾಕೈಯಲ್ಲಿ ಕನ್ನಡಿ!

ಅಂತಿಮ :

ಸತ್ತ ಮೇಲೆ
ಸತ್ತವರನ್ನು ಮರೆಯುತ್ತಾರೆ ಜನ
ಆದ್ದರಿಂದಲೇ
ಸತ್ತ ತಕ್ಷಣ
ಅಂತಿಮ ನಮನ!

ಯಾಕೆ :

ವಿದ್ಯುತ್ತಿಗಾಗಿ
ನೀರಿಗಾಗಿ
ಯಾಕೆ ಸುಮ್ಮನೆ
ಆಣೆಕಟ್ಟು
ಹೆಂಗಸರ ಕಣ್ಣುಗಳಲ್ಲಿ
ಎರಡೂ ಇವೆಯಲ್ಲ
ಬೇಕಾದಷ್ಟು

ಉದಾರಿ :

ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
“ಉಂಗುರ ತೋಡಿಸಲು
ಬೆರಳು ಕೊಡು” ಎಂದಾಗ
ಕೈ ಕೊಟ್ಟಳು.

ಈಕೆ :

ನಕ್ಕರೆ ಈಕೆ
ದಂತದ ಗೊಂಬೆ
ಅತ್ತರೆ
ಅಯ್ಯೋ
ಆಗುಂಬೆ

ಏಕತಾನ :

ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚಕ್ ಬುಕ ಚಕ್ ಬುಕ್
ಚೆಕ್ ಬುಕ್

ಸತ್ಯ :

ಸುಳ್ಳಿಗೆ ಸುಳ್ಳು
ಸೇರಿದರೆ
ಸತ್ಯ.
ಉದಾಹರಣೆಗೆ
ನಮ್ಮ ದಾಂಪತ್ಯ!

ಕಷ್ಟ :

ಅಯ್ಯೋ ಪಾಪ!
ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು.
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು
ಬೈದು ಬೈದು

ಎದ್ದೇಳಿ ಬೆಳಗಾಯಿತು :

ಹೇಳುತ್ತಲೆ ಇದ್ದಳು ಕನ್ನಡಾಂಬೆ
ಎದ್ದೇಳಿ ಕನ್ನಡಿಗರೆ ಬೆಳಗಾಯಿತು, ಬೆಳಗಾಯಿತು
ಈಗಲೂ ಹೇಳುತ್ತಿದ್ದಾಳೆ
ಇನ್ನಾದರೂ ಏಳಿ ಬೆಳ್ಳಗಾಯಿತು
ಗಡ್ಡ ಬೆಳ್ಳಗಾಯಿತು

ಸತ್ಯಪ್ರಿಯತೆ :

ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ
ಅಚ್ಚಾಗಿರತ್ತೆ
ಸತ್ಯಮೇವ ಜಯತೆ !!!
– ರವಿಕುಮಾರ್ ಆರಾದ್ಯ