ನೀನು ಮುಗಿಲು., ನಾನು ನೆಲ.

ಕೃತಿಗೆ ಅಂದು ಅದೇನೋ ಅವ್ಯಕ್ತ ಸಂತಸ., ಮೊಗವು ಕಮಲದಂತೆ ಅರಳಿತ್ತು..!! ಅವಳ ಮದುವೆಯ ತಯಾರಿ ಮನೆಯಲ್ಲಿ ನಡೆಯುತ್ತಿತ್ತು., ಅಣ್ಣ ವಸಂತನ ನಿಧನದ ನಂತರ ಮನೆಯಲ್ಲಿ ನಡೆಯುತ್ತಿರುವ ಮೊದಲನೆಯ ಶುಭ ಕಾರ್ಯ.., ಎಲ್ಲರೂ ದುಖಃದ ಕಡಲನ್ನು ದಾಟಿ ಸಂತಸದ ತೀರದಲ್ಲಿ ತಮ್ಮಡಿಗಳನ್ನು ಚಾಚಿದ್ದರು..!! ಆದರೆ ಋತು ಮಾತ್ರ ಅವನ ನೆನಪಲ್ಲೇ ಬದುಕು ಕಳೆಯುತ್ತಿದ್ದಳು..!! ಅವಳಿಗೆ ಅವನೇ ಬದುಕಾಗಿದ್ದ..!! ಆದರೆ ಪೋಲೀಸರು ಅವರನ್ನು ನಕ್ಸಲ್ ಎಂಬ ಅಣೆಪಟ್ಟಿ ಕಟ್ಟಿ ಕೊಂದಿದ್ದರು.., ನಕ್ಸಲರ ನೆಲೆಯಾದ ಮೆಣಸಿನ ಹಾಡ್ಯದಂತಹ ಕಡಿದಾದ ಕಾಡಿನ ಪ್ರದೇಶಗಳಲ್ಲಿ., ಸಿಕ್ಕ ಸಿಕ್ಕವರನ್ನು ನಕ್ಸಲ್ ಎಂಬ ಅಣೆಪಟ್ಟಿ ಕಟ್ಟಿ ಗುಂಡು ಹಾರಿಸಿ., ಸರ್ಕಾರಕ್ಕೆ ತಾವು ಸಕ್ರೀಯವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂಬ ಹುಸಿ ನೆವ ರವಾನಿಸಲು ಅಮಾಯಕರ ಮಾರಣ ಹೋಮ ನಡೆಸಲಾಗುತ್ತಿತ್ತು..!! ನ್ಯಾಯ ಕೇಳಿದರೆ ಅದು ಕಿವುಡನ ಮುಂದೆ ಹಾಡಿದ ಗಾನದಂತೆ..!! ಅಂತಹ ಕ್ರೂರ ಪರಿಸ್ಥಿತಿಯೊಂದು ಅವನ ಪ್ರಾಣವನ್ನು ಕಸಿದಿತ್ತು..!! ವಸಂತನಿಲ್ಲದ ಋತುವಿನ ಬದುಕಿನಲ್ಲಿ ವಸಂತ ಋತು ಬರಲೇ ಇಲ್ಲ.., ಆದರೆ ಅವನು ಬಿಟ್ಟು ಹೋದ ಕೆಲವೇ ಕೆಲವು ನೆನವುಗಳಲ್ಲಿ ಬದುಕನ್ನು ಜೀಕುತ್ತಿದ್ದಳು..!!

ಕೃತಿಗೆ ತನ್ನ ಮದುವೆಯಾಗುತ್ತಿದೆ ಎನ್ನುವುದಕ್ಕಿಂತ., ಬಿಗುವಿನ ವಾತವರಣವಿದ್ದ ಮನೆಯಲ್ಲಿ ಈ ಮೂಲಕವಾದರೂ ಸಂತಸ ಮತ್ತೆ ಮೂಡತ್ತಿರುವುದು ಅವಳಿಗೆ ಎಲ್ಲಿಲ್ಲದ ಸಂತಸವನ್ನು ತಂದಿತ್ತು..!! ಆದರೆ ಋತುವಿಗೆ ಅದೆಷ್ಟು ಪ್ರಯತ್ನಿಸಿದರೂ ವಸಂತನ ಅಗಲಿಕೆಯನ್ನು ಮರೆಯಲು ಸಾಧ್ಯವಾಗುತ್ತಿರಲಿಲ್ಲ.., ಅವನು ನೆನಪಾದಾಗ., ಒಬ್ಬಳೇ ಎಸ್ಟೇಟ್ ಸುತ್ತಲು ಸುತ್ತಾಡಲು ಹೋಗುತ್ತಿದ್ದಳು., ಅರಳಿದ ಕುಸುಮದ ಗಂಧ ಹೀರುವುದು., ಹಾರಾಡುವ ಪತಂಗಗಳ ಹಿಂದೆ ಓಡುವುದು., ಹರಿಯುವ ಝರಿಗೆ ಮೈ ಚಾಚಿ ನಿಲ್ಲುವುದು ಎಂದರೆ ಋತುವುಗೆ ಚಿಕ್ಕಂದಿನಿಂದಲೂ ಪ್ರಿಯ.., ಅದನ್ನು ಮುಂದುವರೆಸುವ ಆಸೆ ಅವಳಲ್ಲಿ ಪದೇ ಪದೇ ಮೂಡುತ್ತಿತ್ತು., ಆದರೆ ವಿಧವೆಯರು ಎಲ್ಲೆಗಳ ಮೀರಬಾರದೆಂದು ವಾಸ್ತವದ ವಿಮರ್ಶೆ ಮಾಡುತ್ತಿದ್ದಳು., ಅದಕ್ಕೆ ಅದರ ಬದಲು ಎಲ್ಲವನ್ನು ಕಂಗಳೊಳಗೆ ತುಂಬಿಕೊಳ್ಳುತ್ತಿದ್ದಳು..!!

ಹಾಗೇ ಒಮ್ಮೆ ಅವಳು ಕಾನನದ ಹಸಿರು ಕೋಟೆಯನ್ನು ಭೇದಿಸಿ ಬರುತ್ತಿದ್ದ ನದಿಯ ನೀರನ್ನು ನೋಡುತ್ತಾ., ಮೆಲ್ಲಗೆ ಹೇಳಿದಳು., ” ಏ ನೀರೇ ಇಷ್ಟು ಅವಸರವೇಕೆ??., ಸಾಗರನ ಸೇರಲು ಅಷ್ಟು ಆಸೆಯೇ?”., ಇದ್ದಕ್ಕಿದ್ದ ಹಾಗೇ ಋತುವಿನ ಗಲ್ಲ ಕೆಂಪೇರಿತು., ಯಾವುದೋ ಹಳೆಯ ಭಾವಗೀತೆ ಅವಳ ಮನಸ್ಸಿನ ಪುಟದಲ್ಲಿ ಮೂಡಿತು., ಮೆಲ್ಲಗೆ ಹಾಡತೊಡಗಿದಳು., ” ನೀನು ಮುಗಿಲು ನಾನು ನೆಲ., ನಿನ್ನ ಒಲವೇ ನನ್ನ ಬಲ..!!”.., ಇಇದ್ದಕ್ಕಿದ್ದ ಹಾಗೇ ಯಾರೋ ಬಂದಂತೆ ಶಬ್ಧವಾಗುವುದು., ತಿರುಗಿ ನೋಡಲು ಕೃತಿಯ ಭಾವಿ ಪತಿ ಲೇಖನ್ ನಿಂತಿದ್ದಾನೆ., ನೋಡಿದ ತಕ್ಷಣ ಮುಖವನ್ನು ಸೆರಗಿನಲ್ಲಿ ಮುಚ್ಚಿ., ಅವನಿಂದ ದೂರ ಸರಿದಳು.,

“ಹಾಡು ಚೆನ್ನಾಗಿದೆ ಮುಂದುವರೆಸಿ” ಲೇಖನ್ನಿನ ಮೆಲು ದನಿ ಹೊರಡಿತು..!!

ಋತು ಮೌನ ತಳೆದಿದ್ದಳು.,

“ನೀವು ಋತು ಅಲ್ಲವೇ., ಕೃತಿ ಹೇಳಿದ್ದಳು., ಈ ವಯಸ್ಸಿನಲ್ಲಿ ನಿಮ್ಮ ಬದುಕನ್ನು ಗಳಿಯಲ್ಲಿ ತೇಲಲು ಬಿಟ್ಟ ಅ ವಿಧಿಗೆ ನನ್ನ ಧಿಕ್ಕಾರವಿರಲಿ., ಆದರೆ ಒಂದು ಏನೆಂದರೆ ಈ ಪ್ರಪಂಚದಲ್ಲಿ ನೀವಲ್ಲದೆ ಅದೆಷ್ಟೊ ಹೆಣ್ಣು ಮಕ್ಕಳು ವಿಧವೆಯ ವೇದನೆಯನ್ನು ಅನುಭವಿಸಿದ್ದಾರೆ., ಕಾಲವು ಅವರ ಬದುಕಿನಲ್ಲಿ ಬದಲಾವಣೆ ತಂದು., ಮತ್ತೆ ಅವರ ಬದುಕಿನಲ್ಲಿ ವಸಂತನಾಗಮನವಾಗಿದೆ., ಹಾಗೇ ನಿಮ್ಮ ಬದುಕಿನಲ್ಲೂ ವಸಂತ ಬರುತ್ತಾನೆ., ಅವನ ಬರುವಿಕೆಗೆ ನೀವು ಕಾಯಬೇಕು., ಅವನು ಯಾವ ರೂಪದಲ್ಲಾದರೂ ಬರಬಹುದು., ಅವನನ್ನು ಸ್ವಾಗತಿಸುವ ವಿಶಾಲ ಹೃದಯ ನಿಮ್ಮದಾಗಲಿ..” ಲೇಖನ್ ಬೆಣ್ಣೆ ತೆಗೆದಂತೆ ಮಾತನಾಡಿದ್ದ..,

ಮೌನದಾಸರೆಯಲ್ಲಿದ್ದ ಋತು., ಅವನ ಮುಖವನ್ನು ನೋಡಿ ಮಂದಸ್ಮಿತ ಬೀರಿದಳು.. ಅವನನ್ನು ನೋಡಿದೊಡನೆ., ಇವನು ನಮ್ಮವ ಎಂಬ ಅವಳಲ್ಲಿ ಮೂಡತೊಡಗಿತ್ತು.. ಅವನ ಸಾಂತ್ವನ ಇವಳಿಗೆ ಹಿತವೆನಿಸಿತ್ತು..!! ಇದ್ದಕ್ಕಿದ್ದ ಹಾಗೇ ಸೋನೆ ಮಳೆ ಜಿನುಗತೊಡಗಿತು.. “ಮಳೆಯಲ್ಲಿ ನೆನೆದರೆ., ಆರೋಗ್ಯ ಕೆಡುತ್ತದೆ., ಬನ್ನಿ ಮರದ ನೆರಳಿಗೆ ಹೋಗೋಣ” ಲೇಖನ್ ಅವಸರವಾಗಿ ನುಡಿದ., ಅವನು ಮರದ ನೆರಳಿಗೆ ನಡೆದನು., ಅವಳು ಅವನ ಹೆಜ್ಜೆಯನ್ನು ಅನುಸರಿಸಿದಳು…, ಆಗಸದತ್ತ ನೋಟ ನೆಟ್ಟು., ಮಾತಿಗೆ ಶಕ್ತಿ ಕೊಟ್ಟಳು.,

“ನಿಮಗೆ ಗೊತ್ತೇ? ನನಗೆ ಮಳೆಯಲ್ಲಿ ನೆನೆಯುವುದೆಂದರೆ ತುಂಬಾ ಇಷ್ಟ,,!! ಚಿಕ್ಕಂದಿನಿಂದಲೂ ಅಷ್ಟೇ.., ಈ ಮಳೆಗೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ., ನೋವಿನಿಂದ ಮುಕ್ತಿ ನೀಡಿ., ನಮ್ಮನ್ನು ಮಕ್ಕಳಾಗಿಸುತ್ತದೆ..!!” ಮಾತಿನಲ್ಲಿ ಗಂಭೀರತೆಯಿತ್ತು..

ಲೇಖನ್ ಅವಳ ಮುಖವನ್ನೊಮ್ಮೆ ನೋಡಿದ..,
“ಅಂದರೆ ನೀವು ಈಗ ಮಳೆಯಲ್ಲಿ ನಿಲ್ಲುತ್ತೀರಾ..??”
“ನಾನೀಗ ಸಂಪಿಗೆ ಎಸ್ಟೇಟ್ ಒಡೆಯರ ಸೊಸೆ., ನನಗೆ ನನ್ನದೆ ಆದ ಎಲ್ಲೆಗಳಿವೆ, ಜವಾಬ್ದಾರಿಗಳಿವೆ., ಅದನ್ನು ಮೀರಬಾರದಲ್ಲವೇ..!!”

“ಅಷ್ಟು ಆಸೆ ಇದ್ದರೆ ಬನ್ನಿ ಮಳೆಯಲ್ಲಿ ನಿಲ್ಲುವ., ನಾನು ಯಾರಿಗೂ ಹೇಳುವುದಿಲ್ಲ., ನಾನೀಗ ನಿಮ್ಮ ಆತ್ಮೀಯ ಸ್ನೇಹಿತ., ಒ.ಕೆ..??” ಅವಳ ಕೈ ಹಿಡಿದು ಮಳೆಯೆಡೆಗೆ ನಡೆದ.,
ಅವಳು ಕೈ ಹಿಡಿದ ಅವನನ್ನೇ ನೋಡುತ್ತಿದ್ದಳು..,

ಗಲ್ಲ ಮತ್ತೇ ರಂಗೇರಿತ್ತು., ಮತ್ತೆ ವಾಸ್ತವದರಿವಾಗಿ., ನೋಟವ ಕೆಳಗೆ ನೆಟ್ಟಳು..!!
ಮಳೆಯ ಹನಿಗಳು ಮೈ ಸ್ಪರ್ಶಿಸುತ್ತಿದ್ದಂತೆ., ಇಳೆಯನ್ನು ಮರೆತಳು ಋತು., ಗಗನದತ್ತ ಮುಖ ಮಾಡಿ., ಕುಣಿದು ಕುಪ್ಪಳಿಸಿದಳು.. ಮಳೆ ನಿಂತಾಗಲೇ ಅವಳಿಗೆ ವಾಸ್ತವದ ಅರಿವಾಗಿದ್ದು..

ಮನೆಯೆಡೆಗೆ ನಡೆಯುತ್ತಾ ಲೇಖನ್ ಮಾತನ್ನಾಡಲು ಶುರು ಮಾಡಿದ.,
“ನನಗೆ ನೀವು ಮಗುವಿನಂತೆ ನಲಿದ ರೀತಿ ಹಿಡಿಸಿತು., ಹಾಗೇ ವಾಸ್ತವಕ್ಕೆ ಮರಳಿದಾಗ ಮೂಡುವ ಗಂಭೀರತೆಯೂ ಇಷ್ಟವಾಯಿತು., ಜೀವವಿರದ ಹೂ., ತೊರೆ., ಮಳೆಯನ್ನು ಇಷ್ಟು ಪ್ರೀತಿಸುವ ನಿಮಗೆ ನಿಮ್ಮ ವಸಂತ್ ರವರ ಬಗ್ಗೆ ಎಷ್ಟು ಪ್ರೀತಿ ಇರಬಹುದು ಎಂಬುದನ್ನು ಊಹಿಸಬಹುದು..!! ನನಗೆ ಕೃತಿಗಿಂತ ಮೊದಲು ನೀವು ಸಿಕ್ಕಿದ್ದರೆ ನಿಮ್ಮನ್ನು ಪ್ರೀತಿಸಿಬಿಡುತ್ತಿದ್ದೆನೇನೋ..!!”

ಅವನ ಮಾತುಗಳನ್ನು ಕೇಳಿ ಅವಳಿಗೆ ಏನು ಹೇಳಬೇಕೊ ತೋಚಲಿಲ್ಲ., ಹಾಗೇ ನೆಲ ನೋಡುತ್ತ ನಡೆಯುತ್ತಿದ್ದಳು..
ಲೇಖನ್ ಏನನ್ನೋ ಯೋಚಿಸುತ್ತಾ ಮತ್ತೆ ಮಾತನಾಡಿದ.,

“ಈಗಲೂ ಕಾಲ ಮಿಂಚಿಲ್ಲ., ಮದುವೆ ಇನ್ನೂ ಆಗಿಲ್ಲ., ನಾನಿಲ್ಲವೆಂದರೆ ಕೃತಿಗೆ ಮತ್ತೊಬ್ಬರು ಸಿಗುತ್ತಾರೆ., ನಿಮ್ಮ ಬಾಳಿನಲ್ಲಿ ಮತ್ತೆ ವಸಂತನಾಗಿ ನಾನು ಬರುವುದಕ್ಕೆ ಸಿದ್ಧನಾಗಿದ್ದೇನೆ., ನೀವು ಇದರ ಬಗ್ಗೆ ಯೋಚಿಸಿ”
ಋತುವಿನ ಕೋಪ ನೆತ್ತಿಗೇರಿತ್ತು., ಅವನನ್ನು ಬಿಟ್ಟು ಜೊರಾಗಿ ಹೆಜ್ಜೆ ಇಡುತ್ತಾ ಮುಂದೆ ಸಾಗಿದಳು., ಅವಳನ್ನೇ ಹಿಂಬಾಲಿಸಿದ ಲೇಖನ್.,

“ತಪ್ಪಾಗಿದ್ದರೆ ಕ್ಷಮಿಸಿ., ಅನ್ನಿಸಿದ್ದನ್ನು ಹೇಳಿದೆ., ಆದರೆ ಇದರ ಬಗ್ಗೆ ಒಮ್ಮೆ ಯೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ., ನಾಳೆ ಮತ್ತೆ ಇಲ್ಲೇ ಸಿಗುತ್ತೇನೆ.. ಮಿಸ್ ಮಾಡದೆ ಬನ್ನಿ..” ಎಂದವನೆ ಮನೆ ಬಂದ ತಕ್ಷಣ ದೂರ ಸಾಗಿದ..

************************************************************

ಋತುವಿಗೆ ಅವನ ಮಾತುಗಳೇ ಪ್ರತಿಧ್ವನಿಸಿ., ನಿದ್ದೆಯನ್ನು ಹಾಳುಗೆಡವಿತ್ತು.., ನಿದ್ರೆ ಬಾರದೆ ಹೊರಳಾಡಿದ ಋತು., ಏನನ್ನೊ ಯೋಚಿಸುತ್ತಾ ಕುಳಿತಳು., ಅಲ್ಲೇ ಮೇಜಿನ ಮೇಲಿದ್ದ ಕಾಗದವನ್ನು ತೆಗೆದುಕೊಂಡು ಏನನ್ನೊ ಬರೆಯುವಲ್ಲಿ ಮಗ್ನಳಾದಳು..

ಮರುದಿನ ಸಂಜೆ ಅದೇ ತೊರೆಯ ಬಳಿ ಲೇಖನ್ ಕಾಯುತ್ತಾ ಕುಳಿತಿದ್ದ ಲೇಖನ್ ಬಳಿಗೆ ಬಂದ ಋತು ಆ ಕಾಗದವನ್ನು ಅವನ ಕೈಲಿತ್ತು., ಮರು ಮಾತನಾಡದೆ ವಾಪಸ್ಸಾದಳು..!! ಇದನ್ನು ದೂರದಿಂದಲೇ ನೋಡಿದ ಕೃತಿಗೆ ಅನುಮಾನದ ಘಮಲು ಮೂಗಿಗೆ ಬಡಿದಿತ್ತು.., ಪತ್ರವನ್ನು ಓದುವುದರಲ್ಲಿ ಮಗ್ನನಾಗಿದ್ದ ಲೇಖನ್ ಬಳಿ ಮೆಲ್ಲಗೆ ಸಾಗಿದಳು ಕೃತಿ.. ಗೆಜ್ಜೆಯ ಸಪ್ಪಳಕ್ಕೆ ಬೆಚ್ಚಿದ ಲೇಖನ್ ತಿರುಗಿ ನೋಡಿದ.,

“ಏನು ಮಾಡುತ್ತಿರುವಿರಿ.??” ಮೆಲ್ಲಗೆ ಉಸುರಿದಳು ಕೃತಿ.,
“ಏನಿಲ್ಲ ಹಾಗೇ ಕುಳಿತಿದ್ದೆ.” ಗಾಬರಿಯ ದನಿಯಿಂದ ಹೇಳಿದ ಲೇಖನ್.,
“ಕೈಯಲ್ಲಿ ಏನೋ ಪತ್ರ ಇರುವಂತೆ ತೋರುತ್ತದೆ.??” ಸಂದೇಹದಿಂದ ಹೇಳಿದಳು ಕೃತಿ..
“ಹಾ., ಗಾಳಿಗೆ ಯಾವುದೊ ಕಾಗದ ನನ್ನೆಡೆಗೆ ಹಾರಿ ಬಂದಿತು ., ಹಾಗೇ ಅದನ್ನು ಓದುತ್ತಿದ್ದೆ.!!” ಮತ್ತೆ ಗಾಬರಿಯ ಮಾತುಗಳು..
“ಹೌದಾ.? ಕೊಡಿ ನಾನೊಮ್ಮೆ ಓದುತ್ತೇನೆ”
“ಇಲ್ಲ., ಉಪಯೋಗಕಿಲ್ಲದ್ದು ಬಿಡಿ”
“ಇರಲಿ ಕೊಡಿ..” ಅವನ ಕೈಲಿದ್ದ ಪತ್ರವನ್ನು ಕಿತ್ತುಕೊಳ್ಳುತ್ತಾಳೆ.. ಕಿತ್ತುಕೊಂಡು ಓಡಿಹೋಗುತ್ತಾಳೆ., ಗಾಬರಿಯಾಗಿ ನಿಂತ ಲೇಖನ್ ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.., ಹಾಗೇ ನಿಂತಿದ್ದ..!!
-ಪ್ರಮೋದ್

ನಿಮ್ಮ ಅನಿಸಿಕೆ