Tag Archives: ಗುರುನಾಥ ಬೋರಗಿ

ಕರೆದರಿಲ್ಲಿ ಬರದೆ ಇರುವನೆ

ಸರಿಯಾಗಿ ೨೯ ವರ್ಷಗಳ ಹಿಂದೆ(೧೯೮೩) ನಾನು ಬರೆದ ಮೊದಲ ಭಕ್ತಿಗೀತೆ ಇದು.
ನನಗಾಗ ವಯಸ್ಸು ೧೩.ಓದುತ್ತಿದ್ದುದು ೭ನೆಯ ತರಗತಿ…..
**************************************************

ಕರೆದರಿಲ್ಲಿ ಬರದೆ ಇರುವನೆ ಉರಗಾಭಾರಣ /

ಕರುಣನೇತ್ರ ತೆರೆಯದಿರುವನೆ ಪಾರ್ವತಿರಮಣ /
ಹರಿವ ಚಿತ್ತ ನಿಲಿಸಿ ನಿತ್ಯ ಅವನ ಭಜಿಸಿ ಪಾಡುತಿರಲು /
ಧರೆಯ ಮಿಥ್ಯ ದಹಿಸಿದವನ ನಾಮಸ್ಮರಣೆ ಮಾಡುತಿರಲು // ಪ //ಕಡಲು ಮಥಿಸುವಾಗ ದೊರೆತ ಕಾರ್ಕೋಟಕ ವಿಷವನುಂಡು /
ಒಡನೆ ಸುಧೆಯ ಸುರರಿಗಂದು ಹಂಚಿದ ಹರನ /
ಗುಡಿಯೊಳಗಿನ ಮೂರ್ತಿ ನೆಚ್ಚಿ ಕಡುತಪಗೈದವರ ಮೆಚ್ಚಿ /
ಜಡಕಾಯದ ಭ್ರಾಂತಿ ಕಳೆದ ನಡುನೇತ್ರನ //೧//

ಲೋಕಕಂಟಕಧಮರನ್ನು ಚಾಕಚಕ್ಯತೆಯ ತೋರಿ /
ಏಕಚಣದಿ ಮದ ಮರ್ಧಿಸಿದ ಲೋಕಪಾಲನ /
ಸಕಳ ಜೀವಕುಸಿರು ನೀಡಿ ಭಕುತರಾತ್ಮದೊಳಗೆ ಕೂಡಿ Continue reading →

Advertisements

ಮೌನವಾಗಿದೆ ಕಡಲು

ಮೌನವಾಗಿದೆ ಕಡಲು
ಕಲ್ಲೆಸೆಯಬೇಡ /
ಧ್ಯಾನ ಕುಳಿತಿದೆ ಮನಸು
ಒಳ ಸುಳಿಯಬೇಡ //

ಮಾದ ಹೃದಯದ ಗಾಯ
ಮತ್ತೆ ಕೆದರುವುದೇಕೆ /
ನೆನಪಿನುಪ್ಪಿನ ಹರಳು
ಸುರಿದು ನೋಯಿಸಲೇಕೆ //ಹದ ತಪ್ಪಿದೆದೆ ನೆಲವ
ಅಗೆದು ಊಳುವುದೇಕೆ /
ಬೇರ ಕಳಚಿದ ಸಸಿಗೆ
ನೀರ ಸಿಂಚನವೇಕೆ //

ಎಟುಕದಾಗಸದೆಡೆಗೆ
ಕೈಯ ಚಾಚುವುದೇಕೆ /
ಒಲಿದ ಒಲುಮೆಯನೊದೆದು
ವ್ಯರ್ಥ ಮರುಗುವುದೇಕೆ //
ಗುರುನಾಥ ಬೋರಗಿ

ಹೊಸ ವ್ಯಾಕರಣ

‘ನಿದ್ರೆ’ಗೆ ವಿರುದ್ಧ ಪದ,
‘ಅವನಿದ್ರೆ’ ಅಂದರಂದು;
ರಾಯರು.

ಸಮಾನ ಪದದ ಶೋಧವೇಕೆ,
ನಾ’ನಿದ್ರೆ’? ಎಂದರಂತೆ;
ಗೌಡರು.
*******
ಅವನು,ನೆಮ್ಮದಿಯಿಂದಿದ್ದಾನೆ;
ವರ್ತಮಾನಕಾಲ.
ಮದುವೆಯಾಗಿ,ಹೆಂಡತಿ ಬಂದಳು;
ಭೂತ ಕಾಲ.
*******
ವರದಕ್ಷಿಣೆಯ ಹಣ,ಆಗಮ
ವಾಕ್ ಸ್ವಾತಂತ್ರ್ಯ,ಲೋಪ.
ಹೆಂಡತಿಯಾಜ್ಞೆ,ಆದೇಶ
*******
ಹುಣಸೆ ಬೀಜ
ಆಮ್ಲ ಜನಕ /
ಮೇಘರಾಜ
ಜಲ ಜನಕ /

‘ಹನಿ’ಸಿಕೆಗಳು

ಅವರು ಕೊಲೆ ಮಾಡಿದ 
ಸಂಖ್ಯೆ;ನೂರು.
ಇವರು ಕರೆ ಮಾಡಿದ 

ಸಂಖ್ಯೆ;ನೂರು.
*******
ಉಪ್ಪಿನುಗಮಕೆ ಬೇಕು 
ನೀಲತೊಯದುದಕ 
ಯಾವ ಉದಕವಾದರೂ ಸರಿ,
ಉಪ್ಪು ಸಾಯುವುದಕ 
******
ಎಷ್ಟು ಸೊಗಸಾಗಿ 
ಬರೆಯುತ್ತಾರಲ್ಲ,
ಕನ್ನಡ ಕವಿ;ನಿಸಾರ್.
ಅವರ ಕಾವ್ಯದ ಶಕ್ತಿ 
ನಮ್ಮ ಬರಹಕೆ ಇಲ್ಲ 
ನಮ್ಮದೋ..ಬರೀ ನಿಸ್ಸಾರ 
*******
ತಾತ,ಅಪ್ಪ,ಮಗ 
ಈ ಮೂವರಿಗೂ ವಿದ್ಯೆ 
ತಲೆಗೆ ಹತ್ತಲಿಲ್ಲ.
ಸಾಗಿ ಬಂದಿವೆ ಹೀಗೇ..
ಮೂರು ತಲೆಮಾರು.
ಇಂಥ ತಲೆಗಳನಿಟ್ಟುಕೊಂಡು 
ಏನು ಮಾಡುವುದು?
ಮೂರೂ..ತಲೆ ಮಾರು.

ಒಂದಿಷ್ಟು ಬಿಡಿಗವಿತೆಗಳು

ಹೀರಿದ ಸತ್ವ,ಏರಿದ ಎತ್ತರ
ಎಷ್ಟಾದರೇನಂತೆ /

ಮರೆಯದಿರು ನೆಲದ ನಂಟು
ಆಲದ ಬಿಳಲಿನಂತೆ /
******
ಅವರಿವರ ತೋರಿಸಿ,
ಅಣಕವಾಡುವ ಬುದ್ಧಿ;
ಪಾರದರ್ಶಕ ಗಾಜಿಗೆ /
ನಿನ್ನನೇ ತೋರಿಸಿ,
ತಿದ್ದಿ,ತೀಡುವ ಸಿದ್ಧಿ;
ಪಾದರಸದ ಸಲ್ಫೇಟಿಗೆ /
*******
ಅಷ್ಟೆತ್ತರ ಆಗಸಕ್ಕೆ
ಏಣಿ ಇಟ್ಟ ಮನುಜ,
ಆಯ ತಪ್ಪದಂತೆ ಹತ್ತಿ
ಇಳಿದು ಬಂದ ಗಟ್ಟಿಗ /
ಇಷ್ಟಗಲ ನೆಲವ ಮೆಟ್ಟಿ
ನಡೆಯುವಾಗ ಸಹಜ
ಜೋಲಿ ತಪ್ಪಿ ಎಡವಿ ಬಿದ್ದ
ಇದೇನಿಂಥ ಸೋಜಿಗ ?

ಕ(ಸ)ಣ್ಣ ಹನಿಗಳು

ಅಮ್ಮನ ಶವವ ಅವಚಿಕೊಂಡು
ಕಂಬನಿಗರೆಯುತ್ತಿದ್ದಾಗ,
ಕಣ್ಣ ಹನಿ ನೆಲಕಿಳಿಯದಂತೆ

ಅಡ್ಡವಾಗಿದ್ದು; ಅವಳ ಅಂಗೈ
*******
ಬೆಟ್ಟದ ಕೆನ್ನೆಗೆ ಮೇಘ ಚುಂಬಿಸಲು
ಭೂಮಿ ತುಂಬಾ ಮಳೆಯೋ..ಮಳೆ.
ನನ್ನ ಪ್ರೇಮಿಸಿ ನೀ ಇನ್ನೊಬ್ಬನ ಚುಂಬಿಸೆ,
ಕಣ್ಣ ತುಂಬಾ ಹೊಳೆಯೋ..ಹೊಳೆ.
******
ಹೆತ್ತವರನ್ನು ಕಳೆದುಕೊಂಡ
ನಾನೀಗ, ಅಕ್ಷರಶಃ ತಬ್ಬಲಿ
ಅತ್ತು ಹಗುರಾಗುವುದಕೆ
ನಾನೀಗ,ಯಾರನು ತಬ್ಬಲಿ?
*******
‘ವಂಚನೆ ‘ ಪದಕೆ ಅರ್ಥ ಹುಡುಕಿ
ಸುಸ್ತಾಗಿದ್ದೆ ಅಂದು ನಾನು
‘ನಾನಿದ್ದೇನೆ’ ಅಂತ ಸಮಾಧಾನಿಸಿ
ಯಾಮಾರಿಸಿದೆ ನೀನು

ಕೆಂಡವಾಗುತ್ತದೆ ಮನಸು

ಉಂಡ ಬಾಳೆಲೆ ಮೇಲೆ
ಹಿಂಡು ದೇಹಗಳುರುಳಿಸಿ

ಅಘ ನೀಗಿತು ಎಂದು
ಬೊಗಳುವವರ ಕಂಡು…
ಕೆಂಡವಾಗುತ್ತದೆ ಮನಸು..//ಆವುದರಿಯದ ಕನ್ನೆ
ದೇಹ ಬೆತ್ತಲೆಗೊಳಿಸಿ
ಬೇವು ಸೊಪ್ಪನು ಬೀಸಿ
ಉಧೋ ಎನ್ನುವವರ ಕಂಡು..
ಕೆಂಡವಾಗುತ್ತದೆ ಮನಸು..//

ಆಡೋ ಹಸುಳೆಯ ತಂದು
ಸುಡುವ ಅನ್ನದಲದ್ದಿ
ಕೇಡು ಓಡಿತು ಎಂದು
ಜೈ ಎನ್ನುವವರ ಕಂಡು..
ಕೆಂಡವಾಗುತ್ತದೆ ಮನಸು..//
– ಗುರುನಾಥ ಬೋರಗಿ

ಉತ್ತರ ಸಿಕ್ಕಿತು

ಏನೂ ಬರೆಯದ 
ಖಾಲಿ ಪಾಟಿಯಂತಿದ್ದ
ನನ್ನ ಮನದ ಮೇಲೆ,
ಅಂದು ಮಾಸ್ತರರು ಗೀಚಿದ 
ಅಕ್ಷರಕ್ಕೆ,ಕುತೂಹಲಕ್ಕೆ 
ಈಗ ಉತ್ತರ ಸಿಗುತ್ತಿದೆ.

ಎಷ್ಟು ಚೆನ್ನಾಗಿತ್ತು ಆ ಬಾಲ್ಯ.
ಜಾತಿ,ಗೋತ್ರಗಳ ಸೂತ್ರಕಂಟದೆ
ಒಂದೇ ಮನೆಯ ಮಕ್ಕಳಂತೆ 
ಆಡುತ್ತಿದ್ದೆವು,ಹಾಡುತ್ತಿದ್ದೆವು;
ಮಸೀದಿ,ಮಂದಿರ,ಚರ್ಚುಗಳ 
ಪ್ರಾಂಗಣಗಳಲ್ಲಿ 

ಅಜ್ಞಾನವೋ..ಅಮಾಯಕತೆಯೋ 
ಒಮ್ಮೆ ಮಾಸ್ತರರನು ಕೇಳಿ ಬಿಟ್ಟೆ.
‘ಮುಸ್ಲಿಂ,ಕ್ರೈಸ್ತ ಎನ್ನುವುದು 
ಹಿಂದೂ ಧರ್ಮದ ಉಪ ಜಾತಿಯೇ?’
ಮಾಸ್ತರರು ಉತ್ತರಿಸಲಿಲ್ಲ. 
ಕಣ್ಣಾಗಿದ್ದವು ಥೇಟು ಕೆಂಡದುಂಡೆ 
ಅವರ ಬೆತ್ತದೇಟಿಗೆ ನನ್ನ ಬೆನ್ನ ತುಂಬ,
ಬಾಸುಂಡೆ. 

ತಪ್ಪು ನನ್ನದೋ..ಮಾಸ್ತರರದೋ 
ತರ್ಕ ಮಾಡಿ ವಾದಿಸುವ ವಯಸು 
ಅಂದು ನನ್ನದಾಗಿರಲಿಲ್ಲ.
ಮನೆಗೆ ಬಂದು ಅಮ್ಮನನು ಕೇಳಿದೆ.
ಅಮ್ಮನೂ ಉತ್ತರಿಸಲಿಲ್ಲ.
ಅಂದಿನಿಂದ ನನ್ನ ಪ್ರಶ್ನೆ,ಕುತೂಹಲ 
ಹಾಗೆಯೇ ಉಳಿದಿತ್ತು.

ಮೊನ್ನೆ ಅದೇ ಮಾಸ್ತರರು 
ಮಾತಿಗೆ ಸಿಕ್ಕಿದ್ದರು.
ಹಳೆಯ ಸಿಟ್ಟಿತ್ತಲ್ಲ,ಕಲ್ಲಿನಿಂದ 
ತಲೆಗೆ ಹೊಡೆದು ಗಾಯಗೊಳಿಸಿದೆ.
ನನ್ನ ಹೆಬ್ಬೆರಳನ್ನೂ ಜೋರಾಗಿ ಕಚ್ಚಿ, 
ಮಾಸ್ತರರ ರಕ್ತದಲ್ಲಿ ನನ್ನ ರಕ್ತವನ್ನೂ
ಬೆರೆಸಿ, ಕೇಳಿಬಿಟ್ಟೆ. 

ಗುರುಗಳೇ,ಬೆರೆತ ಈ ರಕ್ತದಲ್ಲಿ 
ನನ್ನದ್ಯಾವದು,ನಿಮ್ಮದ್ಯಾವದು?
ಮಾಸ್ತರರು ಆಗಲೂ ಉತ್ತರಿಸಲಿಲ್ಲ.
ಅವರ ಕಣ್ಣುಗಳಲ್ಲಿ ಉತ್ತರಿಸಲಾಗದ 
ಪಶ್ಚಾತಾಪದ ಛಾಯೆ ಇತ್ತು.
ಗಟ್ಟಿಯಾಗಿ ನನ್ನ ತಬ್ಬಿಕೊಂಡು 
ಮಗುವಿನಂತೆ ಗಳ ಗಳ ಅತ್ತರು.
ನನ್ನ ಪ್ರಶ್ನೆಗೆ,ಕುತೂಹಲಕ್ಕೆಅವರ 
ಕಣ್ಣೀರೇ ಉತ್ತರ ನೀಡಿತ್ತು.
– ಗುರುನಾಥ ಬೋರಗಿ

ನೆನಪು

ನೆನಪೆ ಕಹಿ ನೆನಪೆ
ನೆನಪಾಗದಿರು ಸುಮ್ಮನೆ
ನೆನಪೇ ಇರದ ಅವಳ ನೆನಪಿಸಿ
ಕೆರಳಿಸದಿರು ನನ್ನ ಭಾವನೆಅನ್ನದಗುಳಿನ ಮೇಲೆ
ತಿನ್ನುವಾತನ ಹೆಸರು
ಬರೆದು ಕಳಿಸುವನಂತೆ ಆ ದೇವನು
ಅವಳ ಹೃದಯದ ಮೇಲೆ
ಬರೆಯದೆ ನನ್ಹೆಸರು
ಮರೆತನೇಕೋ ಕಾಣೆ ಆ ಬ್ರಹ್ಮನು

ಯಾವ ತೋಟದ ಹೂವು
ಯಾರ ಹೆರಳಿಗೆ ಸ್ವಂತ
ಕಿತ್ತು ಮುಡಿಯುವ ಮುನ್ನ ಗೊತ್ತಾಗದು
ಯಾವ ಹೃದಯದ ಮಿಡಿತ
ಯಾರ ಪ್ರೀತಿಗೆ ಅಂತ
ಬಿಚ್ಚಿ ಹೇಳುವ ಮೊದಲು ಗುರುತಾಗದು
– ಗುರುನಾಥ ಬೋರಗಿ

ಮನವಿ

ಓ ಒಲವೆ ನಿನಗೊಂದು
ಮನವಿಯನು ಮಾಡುವೆನು
ಒಳ ಬರದೆ ಹೊರ ನಿಂದು
ಕೆಡಿಸದಿರು ಮನಸನ್ನು

ಈ ಹುಣ್ಣಿಮೆ ತಂಗಾಳಿಯು
ನೀನಿಲ್ಲದೆ ಬಿಸಿಯೆನಿಸಿದೆ
ಕರಿಮೋಡ ಕರ ಕರಗಿ
ಕಂಬನಿಯ ಸುರಿಸುತಿದೆ
ನನ್ ಪಡುವ ವೇದನೆಗೆ
ಪ್ರಕೃತಿಯೇ ಅಳುತಲಿದೆ

ಕಡುಬಡತನ ನನಗಿದ್ದರೂ
ಹಿಡಿಪ್ರೀತಿಯ ಕೊಡಬಲ್ಲೆ ನಾ
ರೆಪ್ಪೆಗಳ ಚಪ್ಪರದಿ
ಬಚ್ಚಿಡುವೆ ನಿನ್ನನು ನಾ
ಒಪ್ಪಿದ ಹೃದಯವನು
ತಪ್ಪದೆ ಕಾಯುವೆ ನಾ
– ಗುರುನಾಥ ಬೋರಗಿ

ಅಗ್ನಿಕನ್ಯೆ

ಅವಳೊಂದಿಗೆ ನಾನು
ಹಲವು ಬಾರಿ ಸುಖಿಸಿದ್ದೇನೆ.
ಯಾರೂ ಇಲ್ಲದ ಹೊತ್ತಿನಲ್ಲಿ
ಒಳ ಕೋಣೆಯ ಮಬ್ಬಿನಲಿ
ಒಮ್ಮೆ ಸಿಕ್ಕಿ ಬಿದ್ದೆ-
ಎಂದಿನಂತೆ ಕಾಸು ಬೀಸಿ
ಸಖಿಯ ಕರೆ ತಂದಿದ್ದೆ.
ಹಾಸಿಗೆಗೆಳೆದುಕೊಂಡವಳ
ಅಧರ ಚುಂಬಿಸುತ್ತಿದ್ದೆ.
ಯಾರೋ ಬಾಗಿಲ ಬಡಿದ ಸದ್ದು;
ಅವಸರವಸವಾಗಿ ಎದ್ದು ನಿಂತು
ಹಾಸಿಗೆಯಲವಳ ಸುತ್ತಿ ಬಚ್ಚಿಟ್ಟೆ;
ಏನೂ ಘಟಿಸಿಲ್ಲ ಎನ್ನುವಂತೆ
ಚಿಲಕ ತೆಗೆದು ನೋಡಿದರೆ,ಎದುರಿಗೆ
ಕೆಂಡದುಂಡೆ ಕಣ್ಣಿನ ಹೆಂಡತಿ.
ವಾಸನೆ ಗ್ರಹಿಸುತ್ತ ಒಳ ಬಂದವಳೇ
ಮನೆಯೆಲ್ಲ ಹುಡುಕಿದಳು.
ಅಯ್ಯೋ ಮನೆ ತುಂಬಾ ಬೆಂಕಿಜ್ವಾಲೆ.
ಸುಟ್ಟು ಕರಕಲಾಗಿತ್ತು
ಬೆಂಕಿ ಹೊತ್ತಿ ಹಾಸಿಗೆ
ತನ್ನೊಳಗೆ ಬಚ್ಚಿಟ್ಟುಕೊಂಡ
ಸಿಗರೇಟಿನೊಂದಿಗೆ.
-ಗುರುನಾಥ ಬೋರಗಿ

ಗ್ರಾಹಕ

ಹರಯದಂಗಡಿಯಲಿ
ಕನಸು ಮಾರುವ ಹುಡುಗಿ
ಮನಸು ನೀಡಲು ಏಕೆ ಅನುಮಾನ
ಪುಕ್ಕಟೆ ಕೇಳುವ ಜಿಪುಣ ನಾನಲ್ಲ
ಪ್ರತಿಯಾಗಿ ಕೊಡುವೆ ನನ್ನ ಮನಸನ್ನತುಟಿ ತುದಿಯ ಮಧುಪಾಕ
ಕೆನ್ನೆ ಮೇಲಿನ ಸೇಬು
ನಾನರಿಯೆ ಯಾರಿದರ ಮಾಲಿಕ
ಬಾಯಿ ಬಟ್ಟಲಿನೊಳಗೆ
ಸಣ್ಣ ದಾಳಿಂಬೆ ಕಾಳು
ಆಗಲೇ ನಾನಿದರ ಗ್ರಾಹಕ ?

ಕಣ್ಣ ಕೊಳದ ಮೀನು
ಸಣ್ಣ ಚುಂಬನಕಷ್ಟೇ
ತಿನ್ನಲೊಪ್ಪದು ಮನಸು,ಬಲು ಮೋಹಕ
ಕೆಂಪು ಮೂಗಿನ ಮೇಲೆ
ಸಂಪಿಗೆಯ ಹೂ ಮಾಲೆ
ಗಂಧ ಹೀರಲು ಏಕೆ ಪ್ರತಿಬಂಧಕ ?
– ಗುರುನಾಥ ಬೋರಗಿ
 

ಮೋಡಿಗಾರ

ಆತ ಸಂತನಲ್ಲ, ವೇದಾಂತಿಯೂ ಅಲ್ಲ
ಅವನ ಒಂದು ಆಣತಿಗೆ,ವಿನಂತಿಗೆ
ಜಗತ್ತೇ ತಲೆ ಬಾಗುತ್ತದೆ.
ಆತ,ಸುಮ್ಮನೆ ನಮ್ಮ ಮುಂದಲೆ
ಸವರಿದರೂ ಸಾಕು; ನಮ್ಮೊಳಗೆ
ಅದೆಂಥದೋ ವಿನೀತಭಾವ ;ಪುಳಕ
ಕೆದರಿದ ಕೂದಲಿನ ಗೋಡ್ಸೆಯಂಥವನನ್ನೂ
ಗಾಂಧಿಯಾಗಿಸಬಲ್ಲ ಜಾದುಗಾರ
ಅಹಂ ತುಂಬಿದ ಅಧಮರನ್ನು
ಅರೆಕ್ಷಣವಾದರೂ ತಲೆ ತಗ್ಗಿಸುವಂತೆ
ಮಾಡಬಲ್ಲ ಮೋಡಿಗಾರ
ಆತ,ನಮ್ಮ ನಿಮ್ಮಂತೆ
ಸಾಮಾನ್ಯ ಯುವಕ;
ವೃತ್ತಿಯಲ್ಲಿ ಕ್ಷೌರಿಕ
– ಗುರುನಾಥ ಬೋರಗಿ

ಗುಣಾಂತರ

ನೋಡಿದರೆ ಗೊತ್ತಾಗುತ್ತದೆ;ಅವರು
ಪಕ್ಕಾ ಗಾಂಧಿ ತತ್ವಾರಾಧಕರು.
ಅವರೂರಿನ ಹೆಸರೂ..ಗಾಂಧಿಪುರ.
ಅದಕ್ಕೇ ಅಲ್ಲವೆ,ಅವರು ಗಾಂಧಿ ಪ್ರತಿಮೆ
ನಿರ್ಮಿಸಲು ಯೋಚಿಸಿದ್ದು;ಯೋಜಿಸಿದ್ದು?
ಆ ಶಿಲ್ಪಿಯಂತೂ ರೂಪದರ್ಶಿ ಇಲ್ಲದೇ
ಉಳಿ ಮುಟ್ಟುವುದೇ ಇಲ್ಲ.
ಬೇಕಂತೆ ಅವನಿಗೆ, ಗಾಂಧಿ ಗುಣ,ಹೋಲಿಕೆ
ಇರುವ ಯುವರೂಪದರ್ಶಿ.

ಹೇಗೋ ಹುಡುಕಿ ತಂದೊಪ್ಪಿಸಿದರು.
ಕೇಳಬೇಕೆ? ಸಾಕ್ಷಾತ್ ಗಾಂಧಿಯೇ
ಕುಳಿತಂಥ ಪ್ರತಿಮೆ ತಯಾರಾಯಿತು
ಹತ್ತಾರು ವರ್ಷ ಕಳೆದವು .
ಪಕ್ಕದಲ್ಲಿ ಇನ್ನೊಂದೂರು ಇತ್ತಲ್ಲ ..

ಹೆಸರು:ಗೋಡ್ಸೆಪುರ.
ಅಲ್ಲಿಯವರದು ಒಂದೇ ಹಠ.
‘ಅವರಿಗಿಂತ ನಾವೇನು ಕಡಿಮೆ.
ಕೆತ್ತಿಸುತ್ತೇವೆ ಗೋಡ್ಸೆಯದೂ ಪ್ರತಿಮೆ’
ಶಿಲ್ಪಿಯದು ಯಥಾರೀತಿಯ ಬೇಡಿಕೆ.

ಅವರ ಪುಣ್ಯಕ್ಕೆ, ಗೋಡ್ಸೆ ಗುಣ,ಹೋಲಿಕೆಯ
ರೂಪದರ್ಶಿ ಸಿಕ್ಕೇ ಬಿಟ್ಟ.
ಉಳಿ ಎತ್ತಿಕೊಂಡ ಶಿಲ್ಪಿಯ ಕೈ ಗಡಗಡ.
ಎಷ್ಟು ಕೆತ್ತಿದರೂ ಗೋಡ್ಸೆ ಮೂಡಲಿಲ್ಲ.
ಕೊನೆಗೆ ಶಿಲ್ಪಿಯೇ ಕೇಳಿದ.
ನಿಜ ಹೇಳು ನೀನಾರು?
ಗುರುತು ಸಿಗದೇ ಗುರೂಜಿ..ಈ ಹಿಂದೆ
ಗಾಂಧಿ ಪ್ರತಿಮೆಗೆ ರೂಪದರ್ಶಿಯಾಗಿ
ಬಂದವನೇ ನಾನು.
ನನ್ನನ್ನು ಗಾಂಧಿಯಂತೆ ಬದುಕಲು
ಇಲ್ಲಾರೂ ಬಿಡಲಿಲ್ಲ.
– ಗುರುನಾಥ ಬೋರಗಿ
 

ಕಿ(ಕ)ವಿ ಮಾತು

ನಗಬೇಡ ನನ್ನ ಗೆಳತಿ
ನಾನಿರದ ಹೊತ್ತು
ಮುತ್ತಿನ ರಾಶಿ ಸುರಿದೀತು
ಸುತ್ತ-ಮುತ್ತಲು ಇಲ್ಲಿ
ಮುತ್ತುಗಳ್ಳರ ದಂಡು
ಚಿತ್ತ ಬೇರೆಡೆ ಸೆಳೆದು ಮುತ್ತ ಕದ್ದಾರು

ನಡಿಬೇಡ ನನ್ನ ಗೆಳತಿ
ಕಾಂಕ್ರೀಟು ಕಾಡೊಳಗೆ
ನಡೆದಲ್ಲಿ ಬೆಳೆದೀತು ಬಿಳಿಮಲ್ಲಿಗೆ
ಹಿಂಡು ದುಂಬಿಗಳಲ್ಲಿ
ಮಕರಂದ ಹೀರೋಕೆ
ಕಂಡು ಅರಿಯದ ಸಂಚು ಹೂಡ್ಯಾವು

ಕುಣಿಬೇಡ ನನ್ನ ಗೆಳತಿ
ಕಣಿವೆಗಳ ದಾರಿಯಲಿ
ನಾಟ್ಯದ ನವಭಂಗಿ ಮೂಡೀತು
ಗಂಡು ನವಿಲಿನ ತಂಡ
ಕಂಡು ನಿನ್ನಯ ಕುಣಿತ
ನವಹೆಜ್ಜೆ ಹಾಕೋದು ಕಲಿತೀತು

ಅಳಬೇಡ ನನ್ನ ಗೆಳತಿ
ಗಳ ಗಳ ಯಾವತ್ತು
ಸ್ವಾತಿಯ ಮಳೆ ಇಲ್ಲಿ ಸುರಿದೀತು
ಬರಬಿದ್ದ ಊರುಗಳ
ಹಿರಿಯರು ನಿನ್ನ ಹುಡುಕಿ
ಸರಹೊತ್ತಿನಲ್ಲಿ ಹೊತ್ತು ಒಯ್ದಾರು

– ಗುರುನಾಥ ಬೋರಗಿ
 

ನಾನು ಮತ್ತು ಪ್ರೀತಿ

ಅಪ್ಪಣೆ ಇಲ್ಲದೆ ಒಳ ಬರಬೇಡಿ
ಮುಚ್ಚಿದೆ ನನ್ನೆದೆ ಬಾಗಿಲು
ಸಪ್ಪಳ ಮಾಡಿ ಬರುವುದೇ ಆದರೆ
ಸಡಿಲಿಸುವೆನಿನಿತು ಕಾವಲು

ಮುಚ್ಚಿದ ನನ್ನೆದೆ ಬಾಗಿಲ ಬಡಿಯದೇ
ಯಾರೋ ಬಂದರು ಮನೆಯೊಳಗೆ
ಅನುಭವವುಂಟು, ಆಕೃತಿ ಇಲ್ಲ
ಏನೋ ಪುಳಕ ನನ್ನೊಳಗೆ

ಗಾಬರಿಯಿಂದ ಕೂಗಿದೆ ನಾನು
ಯಾರದು ಕೇಳದೆ ಬಂದೋರು ?
ಒಪ್ಪಿಗೆ ಇಲ್ಲದೆ ಯಾತಕೆ ಬಂದೆ
ಯಾವುದು ನಿನ್ನದು ನಿಜ ಹೆಸರು ?

ನಮ್ರತೆ ತುಂಬಿದ ಉತ್ತರದಿಂದ
ತೊಲಗಿತು ದೂರ ಹುಸಿ ಭೀತಿ
“ಕುರುಡನು ನಾನು,ಕಾಣದು ಏನೂ
ಕರೆವರು ನನ್ನನು ‘ಸಂಪ್ರೀತಿ ‘ ”

– ಗುರುನಾಥ ಬೋರಗಿ
 

‎’ತೀರ ‘ ದ ರೋಧನ

ನೂರು ಅಲೆಗಳ /ಸೂರು ಕಟ್ಟಿದ
ನೀರ ಹನಿಗಳ /ಧಾರೆ ಸುರಿಸಿದ
ಒಡಲಬಂಧು ತೊರೆದು ಹೋದ ದೂರ
ಕಡಲಿಗಾಗಿ ಕಾದಿದೆ ಇಲ್ಲಿ ತೀರ
ತೆರೆ-ತೆರೆಗಳ ಮೊರೆತ ಘೋರ
ತೀರದ ಹೃದಯ ಭಾರ…ಭಾರ // ಪಲ್ಲವಿ//

ಹುಚ್ಚು ಹಿಡಿದ ಹಾಗೆ ಹಂಬಲಿಸಿದೆ ಕಡಲು
ಮುಚ್ಚಿ ಹೋಯಿತು ದನಿ ಅಲೆ ಅಪ್ಪಳಿಸಲು
ಕಡಲಿಗೂ ಬೇಕು ತೀರದ ನಂಟು
ಒಡಲಿನ ಬೇಗುದಿ ತಿಳಿಸುವುದೆಂತು //೧//

ಕಡಲು ತೀರದ ಪ್ರೇಮ ಕೃಷ್ಣ ರಾಧೆಯ ಹಾಗೆ
ಒಡೆಯನಗಲಿ ರಾಧೆ ಬದುಕುವಳು ಹೇಗೆ
ಶ್ಯಾಮನಿಗೆ ರಾಧೆ,ರಾಧೆಗೆ ಶ್ಯಾಮ
ಭೂಮಿಗೂ ಬಾನಿಗೂ ಇರುವಂತೆ ಪ್ರೇಮ //೨//
– ಗುರುನಾಥ ಬೋರಗಿ