Category Archives: ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ – 8-32

ಮಂಕುತಿಮ್ಮನ ಕಗ್ಗ – ೧೮

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು ? |
ಉದಕಬುದ್ಬುದವೆಲ್ಲ ! – ಮಂಕುತಿಮ್ಮ ||

ಈ ಜಗತ್ತಿನಲ್ಲಿರುವ ಜೀವಿಗಳು ನದಿಯ ತೆರೆಗಳಂತೆ ಉರುಳಿ ಹೊರಲಾಡುತ್ತಿವೆ. ಅದರಂತೆಯೇ ಇವಕ್ಕೆ ಮೊದಲೂ, ನಿಲುವು ಮತ್ತು ಕೊನೆ ಇಲ್ಲ, ಅಂತೆಯೇ Continue reading →

ಮಂಕುತಿಮ್ಮನ ಕಗ್ಗ – ೭

ಬದುಕಿಗಾರ್ ನಾಯಕರು, ಏಕನೊ ಅನೇಕರೋ |
ವಿಧಿಯೊ ಪೌರುಷವೋ ಧರುಮವೊ ಅಂಧಬಲವೋ ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? |
ಆದಿಗುದಿಯೆ  ಗತಿಯೇನೊ ? ಮಂಕುತಿಮ್ಮ  ||

ಈ ಬದುಕಿಗೆ ನಾಯಕರು ಯಾರು ? ಒಬ್ಬನೇ ಒಬ್ಬನೋ ಅಥವಾ ಬಹು ಮಂದಿ ಇದ್ದಾರೆಯೋ?
ವಿಧಿಯೋ, ಪುರುಷ ಪ್ರಯತ್ನವೋ ? ಧರ್ಮದ ಶಕ್ತಿಯೋ ಅಥವಾ ಒಂದು ಅಂಧ ಬಲವೋ ?
ಈ ಅವ್ಯವಸ್ಥೆಯ ಪಾಡು ಸರಿಯಾಗುವುದು (ಕುದುರುವುದು) ಹೇಗೆ ? ಇಲ್ಲ ? ಈ ತಳಮಳದಲ್ಲಿಯೇ
(ಆದಿಗುದಿ) ನಾವು ಯಾವಾಗಲೂ ಇರಬೇಕೆ ?

ಕುಮಾರ್  ರಾವ್

ಮಂಕುತಿಮ್ಮನ ಕಗ್ಗ – ೬

ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು !
ಬಗೆದು ಬಿಡಿಸುವಾರಾರು ಸೋಜಿಗವನಿದನು? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು? |
ಬಗೆ ಬಗೆಯ ಜೀವಗತಿ – ಮಂಕು ತಿಮ್ಮ ||

ಈ ಸೃಷ್ಟಿ ಎನ್ನುವುದು ಕಗ್ಗಂಟೋ ಏನು ? ಈ ಬಾಳಿಗೆ ಏನಾದರು ಅರ್ಥವಿದೆಯೇ? ಈ ಆಶ್ಚರ್ಯಕರವಾದ ಕಗ್ಗಂಟನ್ನು. ಯಾರು ಯೋಚಿಸಿ ಬಿಡಿಸಬಲ್ಲರು ? ಈ ಜಗತ್ತನ್ನು ಒಂದು ಕಾಣದ ಕೈ ನಿರ್ಮಿಸಿದೆ (ನಿರವಿಸಿದ) ಎಂದರೆ, ಈ ವಿಧ ವಿಧವಾದ ಜೀವಗತಿಗಳು ಏಕೆ ?

ಕುಮಾರ್  ರಾವ್

ಮಂಕುತಿಮ್ಮನ ಕಗ್ಗ – ೫

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? |
ನಾವರಿಯಲ್ಲಾದೆಲ್ಲದರೊಟ್ಟು ಹೆಸರೆ ? ||
ಕಾವನೊರವನಿರಲ್ಕೆ ಜಗದ ಕಥೆಯೇಕಿಂತು ? ||
ಸಾವು ಹುಟ್ಟುಗಳೇನು? – ಮಂಕುತಿಮ್ಮ ||

ದೇವರು ಎನ್ನುವುದು ಏನು ? ಅದು ಒಂದು ಕಗತ್ತಲೆಯಿಂದ ಕೂಡಿದ ಗುಹೆಯೋ ? ಅಥವಾ ನಮಗೆ ತಿಳಿಯದೆ ಇರುವ ಎಲ್ಲವನ್ನೂ ಕೂಡಿ, ಅದಕ್ಕೆ ನಾವು ಒಂದು ಹೆಸರಿಟ್ಟು, ‘ದೇವರು’ ಎಂದು ಕರೆಯುತ್ತಿದ್ದೇವೆಯೋ ? ಈ ಜಗತ್ತನ್ನು ಕಾಪಾಡುವನೊಬ್ಬನಿದ್ದರೂ ಈ ಜಗತ್ತಿನ ಕಥೆ ಹೀಗೇಕಿದೆ  ? ಈ ಹುಟ್ಟು ಮತ್ತು ಸಾವುಗಳ ಅರ್ಥವೇನು ? ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ಮನುಷ್ಯನನ್ನು ಒಂದಲ್ಲ ಒಂದು ಸಲ ಕಾಡಿರುವುವಂತಹವೇ.

ಕುಮಾರ್  ರಾವ್

ಮಂಕುತಿಮ್ಮನ ಕಗ್ಗ – ೪

ಏನು ಜೀವನದರ್ಥ ? ಏನು ಪ್ರಪಂಚಾರ್ಥ ? |
ಏನು ಜೀವಪ್ರಪಂಚಗಳ ಸಂಭಂದ ? ||
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? ||
ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ

ಈ ನಮ್ಮ ಜೀವನಕ್ಕೆ ಏನಾದರು ಅರ್ಥವಿದೆಯೇ ? ಈ ಪ್ರಪಂಚಕ್ಕೆ ಏನಾದರು ಅರ್ಥ ಇದೆಯೇ ? ಈ ಜೀವಿಗಳ ಮತ್ತು ಪ್ರಪಂಚಗಳ ಸಂಬಂಧವೇನು ? ನಮಗೆ ಗೋಚಾರವಾಗದೆ ಇರುವುದು ಇಲ್ಲಿ ಏನಾದರು ಇದೆಯೇ ? ಹಾಗಿದ್ದರೆ ಏನದು ? ಅದು ನಮ್ಮ ಜ್ಞಾನಶಕ್ತಿಗೆ ಮೀರಿದುದ್ದೋ? ಏನು ?

ಕುಮಾರ್  ರಾವ್

ಮಂಕುತಿಮ್ಮನ ಕಗ್ಗ – ೩

ಇಹುದೊ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ |
ಮಹಿಮೆಯಿಂ ಜಗವಾಗಿ ಜೀವವೇಷದಲಿ ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡ |
ಗಹನ ತತ್ವಕೆ ಶರಣೊ – ಮಂಕುತಿಮ್ಮ ||

ಇದೆಯೋ ಇಲ್ಲವೋ, ನಮಗೆ ತಿಳಿಯಗೊಡದ ಒಂದು ವಸ್ತು, ತನ್ನ ಸ್ವಂತ ಮಹಿಮೆಯಿಂದ ಜಗತ್ತು ಎಂದಾಗಿ, ಜೀವಿಗಳ ವೇಷದಲ್ಲಿ ವಿಹರಿಸುತ್ತಿದೆ (ವಿಹರಿಸುವುದು), ಅದು ಒಳ್ಳೆಯದು (ಅದು + ಒಳಿತು), ಎನ್ನುವುದು ನಿಶ್ಚಯ ಮತ್ತು ಸತ್ಯವಾದರೆ (ನಿಸದ), ಆ ರಹಸ್ಯತ್ವದ ತತ್ತ್ವಕ್ಕೆ ಶರಣಾಗು.

– ಕುಮಾರ್  ರಾವ್

ಮಂಕುತಿಮ್ಮನ ಕಗ್ಗ – ೨

ಜೀವ ಜಡರೂಪ ಪ್ರಪಂಚವನದಾವುದೋ |
ಆವರಿಸಿಕೊಂಡುಮೊಳೆನೆರೆದುಮಿಹುದಂತೆ ||
ಭಾವಕೊಳಪಡದಂತೆ ಅಳತೆಗಳವಡದಂತೆ |
ಆ ವಿಶೇಷಕೆ ಮಣಿಯೋ – ಮಂಕುತಿಮ್ಮ    ||

ಈ ಜೀವ ತುಂಬಿದ ಚೇತನವಿಲ್ಲದ (ಜಡ) ಪ್ರಪಂಚವನ್ನು, ಯಾವುದೋ ಒಂದು ಶಕ್ತಿ ಆವರಿಸಿಕೊಂಡು, ಒಳಗೆ ತುಂಬಿಕೊಂಡು (ಒಳನೆರೆ) ಇರುವಂತೆ, ಭಾವಕೆ ಒಳಪಡದಂತೆ, ಅಳತೆಗೆ ವಶವಾಗದಂತೆ (ಅಳವಡದಂತೆ), ಇರುವುದೋ, ಆ ವಿಶೇಷಕ್ಕೆ ನಮಸ್ಕರಿಸು (ಮಣಿ).

ಸಂಗ್ರಹ: ಕುಮಾರ್  ರಾವ್

ಮಂಕುತಿಮ್ಮನ ಕಗ್ಗ – ೧

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ |
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ ||

ಶ್ರೀ ವಿಷ್ಣು, ಪ್ರಪಂಚಕ್ಕೆ ಮೊದಲು ಮತ್ತು ಮೂಲನಾಗಿರುವವನು, ಮಾಯಲೋಲನಾಗಿರುವವನು, ದೇವರು, ಸರ್ವರಿಗೂ ಈಶನಾಗಿರುವವನು ಮತ್ತು ಪರಬ್ರಹ್ಮ ನೆಂದು ವಿಧವಿಧವಾದ ನಾಮವಳಿಗಳಿಂದ ಜನಗಳು ಯಾವುದನ್ನು ಕಾಣದಿದ್ದರೂ ಪ್ರೀತಿಯಿಂದ ನಂಬಿರುವವರೋ, ಆ ವಿಚಿತ್ರಕ್ಕೆ ನಮಿಸು ಮಂಕುತಿಮ್ಮ.

ಸಂಗ್ರಹ: ಕುಮಾರ್  ರಾವ್